ADVERTISEMENT

ಲೇಖನ: ವಜ್ರದ ನೆಪ ಕಲಾಕೃತಿಗಳ ಜಪ

ಸುಮಾ ಬಿ.
Published 29 ಸೆಪ್ಟೆಂಬರ್ 2024, 0:32 IST
Last Updated 29 ಸೆಪ್ಟೆಂಬರ್ 2024, 0:32 IST
<div class="paragraphs"><p>ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ‘ವಜ್ರ ಮಹೋತ್ಸವ’ದ ಅಂಗವಾಗಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನದ ನೋಟ </p></div>

ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ‘ವಜ್ರ ಮಹೋತ್ಸವ’ದ ಅಂಗವಾಗಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನದ ನೋಟ

   

ಪ್ರಜಾವಾಣಿ ಚಿತ್ರ : ಸತೀಶ ಬಡಿಗೇರ್‌

ಅಲ್ಲಿ ವಯಸ್ಸು–ಅನುಭಾವದ ಅಂತರ ಅರಿವಿಗೆ ಬಾರದೆ ಆ ಮೊಗಸಾಲೆಯಲ್ಲಿದ್ದ ಅಷ್ಟೂ ಕಲಾಕೃತಿಗಳು ಚಿಂತನೆಗೆ ಹಚ್ಚುತ್ತಿದ್ದವು. ಭಾವವನ್ನು ಉದ್ದೀಪಿಸುತ್ತಿದ್ದವು. ಒಂದೊಂದು ಕಲಾಕೃತಿಯೂ ಭಿನ್ನ, ವಿಭಿನ್ನ ಅನುಭಾವ ನೀಡುತ್ತ ಕಲಾಸಕ್ತರನ್ನು ಬೇರೆಯೇ ಲೋಕಕ್ಕೆ ಕರೆದ್ಯೊಯುತ್ತಿದ್ದವು. ಬ್ರಶ್ ಹಿಡಿದು ಕಾನ್ವಾಸ್‌ ಮೇಲೆ ಚಿತ್ರ ಮೂಡಿಸುವುದು ಹೇಳಿಕೊಟ್ಟ ಪಾಠಶಾಲೆಯಲ್ಲಿ ಇಂತಹ ಕಲಾಕೃತಿಗಳು ಪ್ರದರ್ಶನಗೊಂಡಾಗ ಆಗುವ ಸಾರ್ಥಕತೆಯೇ ಬೇರೆ. ಅಲ್ಲಿ ಪ್ರದರ್ಶನಗೊಂಡ ಕಲಾಕೃತಿಗಳ ರೂವಾರಿಗಳು ಆ ಸಾರ್ಥಕತೆಗೆ ಪಾತ್ರರಾದರು.

ADVERTISEMENT

ಇದಕ್ಕೆ ವೇದಿಕೆ ಒದಗಿಸಿದ್ದು ದಾವಣಗೆರೆಯ ದೃಶ್ಯಕಲಾ ಕಾಲೇಜು. ‘ವಜ್ರ ಮಹೋತ್ಸವ’ದ ಸಂಭ್ರಮದಲ್ಲಿರುವ ಈ ಕಾಲೇಜು, ತನ್ನದೇ ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳನ್ನು ಅಲಂಕರಿಸಿಕೊಂಡು, ಆಲಂಗಿಸಿಕೊಂಡು ಖುಷಿಪಟ್ಟಿತು. ಹಿರಿ–ಕಿರಿಯ ವಿದ್ಯಾರ್ಥಿಗಳ ಸಮಾಗಮ, ಅವರು ರಚಿಸಿದ ಕಲಾಕೃತಿಗಳು ಮಹೋತ್ಸವದ ಸಂಭ್ರಮವನ್ನು ಹೆಚ್ಚಿಸಿದವು.

ದಾವಣಗೆರೆ ಕಲಾಶಾಲೆ ಹಳೆ ವಿದ್ಯಾರ್ಥಿಗಳ ಸಂಘವು (ದಾಕಹವಿಸ) ಕಾಲೇಜಿನ ವಜ್ರ ಮಹೋತ್ಸವವನ್ನು ಸ್ಮರಣೀಯಗೊಳಿಸಲು ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮ ಕಲಾಸಕ್ತರ, ಕಲಾವಿದರ ಹೃನ್ಮನ ತಣಿಸಿತು. ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಕಲಾಕೃತಿಗಳು ಕಲಾಸಿಕರ ಮನಗೆದ್ದವು.

ರಾಜಕೀಯ ಒಳಸುಳಿಗಳನ್ನು ವಿಡಂಬಿಸುವ, ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಹೆಣ್ಣು ಭ್ರೂಣಹತ್ಯೆ, ಆರೋಗ್ಯದ ಅರಿವು ಇರದ ಜನ... ಹೀಗೆ ಪ್ರಸಕ್ತ ವಿದ್ಯಮಾನಗಳು ಕ್ಯಾನ್ವಾಸ್‌ ಮೇಲೆ ಜೀವತಳೆದಿದ್ದವು. ನೋಡಿದಾಕ್ಷಣ ಗ್ರಹಿಕೆಗೆ ನಿಲುಕದ, ಮನಸ್ಸನ್ನು ತರ್ಕಕ್ಕೆ ಹಚ್ಚಿ ಭಾವಾರ್ಥ ಶೋಧಿಸುವಂತೆ ಮಾಡುವ ಕಲಾಕೃತಿಗಳೂ ಬೆರಗು ಮೂಡಿಸುತ್ತಿದ್ದವು.

ಬಹುಮಾಧ್ಯಮದಲ್ಲಿ ರಚನೆಗೊಂಡ ಕಲಾಕೃತಿಗಳು ಅಲ್ಲಿ ಪ್ರದರ್ಶನಕ್ಕಿವೆ. ಕ್ಯಾನ್ವಾಸ್‌ ಮೇಲೆ ಮೂಡಿದ ಚಿತ್ರಗಳಲ್ಲದೇ, ಶಿಲ್ಪಕಲೆ, ಕಂಚು, ಕಬ್ಬಿಣ, ತಾಮ್ರ, ಲೋಹ, ಫೈಬರ್‌ನಿಂದ ರಚನೆಗೊಂಡ ಕಲಾಕೃತಿಗಳು ಬರಸೆಳೆಯುತ್ತವೆ. 1964–65ನೇ ಸಾಲಿನ ವಿದ್ಯಾರ್ಥಿಗಳಿಂದ ಹಿಡಿದು 2022–23ನೇ ಸಾಲಿನ ವಿದ್ಯಾರ್ಥಿಗಳ ಆಯ್ದ 40 ಕಲಾಕೃತಿಗಳು ಪ್ರದರ್ಶನಗೊಂಡಿದ್ದು ವಿಶೇಷ.

ರಾಜಕೀಯದಲ್ಲಿ ಒಬ್ಬರನ್ನೊಬ್ಬರು ತುಳಿಯುತ್ತ ಅದೇ ಸುಳಿಯಲ್ಲಿ ಸಿಲುಕಿಕೊಳ್ಳುವ ಪರಿಯನ್ನು  ವಿನೋದ್‌ ಕುಮಾರ್‌ ‘ಡೆಮಾಕ್ರಟ್ಸ್‌ ಇನ್‌ ಪಾಲಿಟಿಕ್ಸ್‌’ ಕೃತಿಯಲ್ಲಿ ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ಅದಕ್ಕೆ ಅವರು ಬಳಸಿರುವ ಮಾಧ್ಯಮ ‘ಬರ್ನಿಂಗ್‌ ಆನ್‌ ವುಡ್‌’, ಅಕ್ರೆಲಿಕ್‌ ಮಾಧ್ಯಮದಲ್ಲಿ ರಚನೆಗೊಂಡಿರುವ ನಾಗಪತಿ ಭಟ್‌ ಅವರ ‘ಒನ್‌ ಇಂಚ್‌ ಗ್ಯಾಪ್‌’ ಕೃತಿ ತರ್ಕಕ್ಕೆ ಹಚ್ಚುತ್ತದೆ. ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ಜನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಎಷ್ಟೇ ವರ್ಕ್‌ಔಟ್‌ ಮಾಡಿದರೂ ಕೈಯಿಂದ ಪಾದದ ಬೆರಳುಗಳನ್ನು ಮುಟ್ಟಲು ಒಂದು ಇಂಚು ಗ್ಯಾಪ್‌ ಉಳಿಯುತ್ತದೆ ಎಂದು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ. ಸುಲೋಚನಾ ವೇಣುಗೋಪಾಲ್‌ ಅವರು ಪೇಪರ್‌ ಕೊಲಾಜ್‌ನಲ್ಲಿ ಚಿತ್ರಿಸಿರುವ ‘ಧ್ಯಾನಸ್ಥ ಬುದ್ಧ’ ಕಲಾಪ್ರೇಮಿಗಳನ್ನು ಹಿಡಿದಿಡುತ್ತದೆ. ಬಿಡಿಬಿಡಿ ಕಾಗದಗಳನ್ನು ಕಲೆಹಾಕಿ ಬುದ್ಧನ ಧ್ಯಾನದ ಭಂಗಿಯನ್ನು ಕಟ್ಟಿಕೊಟ್ಟ ಪರಿ ಸಮ್ಮೋಹನಗೊಳಿಸುತ್ತದೆ.

ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಿರುವ ಚಿತ್ರಕಲಾ ಪ್ರದರ್ಶನದ ನೋಟ

ಸಂಗೀತದ ಸಾರ ತಿಳಿಸುವ ಚಿ.ಸು.ಕೃಷ್ಣಸೆಟ್ಟಿ ಅವರ ಅಬ್‌ಸ್ಟ್ರಾಕ್ಟ್‌ ಕಲಾಕೃತಿ, ಫೈಬರ್‌ ಮಾಧ್ಯಮದಲ್ಲಿ ಪ್ರವೀಣಾಚಾರ್‌ ರಚಿಸಿದ ಸೀಡ್ಸ್‌ ಕೃತಿ, ರಂಗಸ್ವಾಮಿ ಡಿ. ಅವರ ಕೈಯಲ್ಲಿ ಅರಳಿದ ‘ಚೈಲ್ಡ್‌ ವುಡ್‌’ ಕೃತಿ, ಲಕ್ಷ್ಮಿ ಮೈಸೂರು ಅವರ ಕುಂಚದಲ್ಲಿ ಅರಳಿರುವ ‘ಕನಸು ಕಾಣುವ ಹುಡುಗಿ’, ಗಣಪತಿ ಎಸ್‌. ಹೆಗಡೆ ಅವರ ‘ಫ್ಲೋ ಆಫ್‌ ಎನರ್ಜಿ’, ಓಂಕಾರ್‌ ಮೂರ್ತಿ ಅವರು ಕಲ್ಲು ಹಾಗೂ ಕಂಚಿನಲ್ಲಿ ರಚಿಸಿದ ‘ಫ್ಯೂಚರ್ ಲೈಫ್‌’... ಹೀಗೆ ಅಲ್ಲಿರುವ ಎಲ್ಲ ಕೃತಿಗಳೂ ಕಲೆಯನ್ನು ಆಸ್ವಾದಿಸುವವರ ಸುಪ್ತ ಭಾವಕೋಶವನ್ನು ಬಡಿದೆಬ್ಬಿಸಿ ಮಂತ್ರಮುಗ್ದಗೊಳಿಸುವಂತಿವೆ.

ಕಲಾವಿದೆ ಸುಲೋಚನಾ ವೇಣುಗೋಪಾಲ್‌ ಅವರ ಪೇಪರ್‌ ಕೊಲಾಜ್‌ ಕಲಾಕೃತಿ
ರಂಗಸ್ವಾಮಿ ಡಿ. ಅವರ ಕೈ ಚಳಕದಲ್ಲಿ ಅರಳಿದ ‘ಚೈಲ್ಡ್‌ ವುಡ್‌’ ಕಲಾಕೃತಿ

ಎರಡು ದಿನ ನಡೆದ ‘ವಜ್ರ ಮಹೋತ್ಸವ’ದಲ್ಲಿ ಕಾಲೇಜು ಆವರಣ ಅಕ್ಷರಶಃ ಕಲಾಶಾಲೆಯಾಗಿ ರೂಪುಗೊಂಡಿತ್ತು. ಆವರಣದಲ್ಲಿರುವ ಮರಗಳ ಕೆಳಗೆ ಕುಂಚ ಹಿಡಿದು ಕುಳಿತ ಕಲಾವಿದ ತನ್ನ ಭಾವಕ್ಕೆ ತಕ್ಕಂತೆ ಕ್ಯಾನ್ವಾಸ್‌ ಮೇಲೆ ಅರಳಿಸುವ ಚಿತ್ರಪಟ ಕಲಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು.

ಕಾಲೇಜಿನಲ್ಲಿ ಓದಿ ದೇಶ, ವಿದೇಶಗಳಲ್ಲಿ ನೆಲೆಕಂಡುಕೊಂಡ ಕಲಾವಿದರು ತಮ್ಮ ಕಾಲೇಜು ದಿನಗಳನ್ನು ನೆನೆಯುತ್ತ, ಬಹುವರ್ಷಗಳ ಬಳಿಕ ಸಹಪಾಠಿಗಳನ್ನು ಕಂಡ ಖುಷಿಯಲ್ಲಿ ತೇಲುತ್ತ, ಆ ಸಂಭ್ರಮ ನೋಡಲು ಬಂದವರ ಚಿತ್ರ ರಚಿಸುತ್ತ, ಬಣ್ಣಗಳೊಂದಿಗೆ ಸಮ್ಮಿಳಿತಗೊಂಡರು. ಸ್ಥಳದಲ್ಲೇ ರಚಿಸಿದ ಕಲಾಕೃತಿಗಳನ್ನು ಕಲಿತ ಕಾಲೇಜಿಗೆ ಕೊಡುಗೆಯಾಗಿ ನೀಡಿದರು. ಯುವ ತಲೆಮಾರಿಗೆ ಕಲಾಲೋಕದ ಒಳಹೊರಗಿನ ಅರಿವು ಮೂಡಿಸಿದರು. ಕಾಲೇಜಿನ ತಮ್ಮ ನೆನಪುಗಳನ್ನು ಹಸಿರಾಗಿಸಲು 60 ಬ್ಯಾಚ್‌ನ ವಿದ್ಯಾರ್ಥಿಗಳೂ 60 ಸಸಿಗಳನ್ನು ಆವರಣದಲ್ಲಿ ನೆಟ್ಟರು. ಈ ಮೂಲಕ ಕಾಲೇಜಿನೊಂದಿಗಿನ ನಂಟು ಗಟ್ಟಿಗೊಳಿಸಿಕೊಳ್ಳುವ ಇರಾದೆ ಅವರದ್ದು.

ಫೈಬರ್‌ ಮಾಧ್ಯಮದಲ್ಲಿ ಪ್ರವೀಣಾಚಾರ್‌ ರಚಿಸಿದ ‘ಪಪ್ಪಾಯ ಹೆಣ್ಣಿನಲ್ಲಿ ಭ್ರೂಣ’ ಕಲಾಕೃತಿ
ಶೀಲವಂತ ಯಾದಗಿರಿ ಅವರು ರಚಿಸಿದ ಕಲಾಕೃತಿ
ಚಿ.ಸು.ಕೃಷ್ಣಸೆಟ್ಟಿ ಅವರ ಅಬ್‌ಸ್ಟ್ರಾಕ್ಟ್‌ ಕಲಾಕೃತಿ
ಕಲಾವಿದ ವಿನೋದ್‌ ಕುಮಾರ್‌ ಅವರ ‘ಡೆಮಾಕ್ರಟ್ಸ್‌ ಇನ್‌ ಪಾಲಿಟಿಕ್ಸ್‌’ ಕೃತಿ
ನಾಗಪತಿ ಭಟ್‌ ಅವರ ‘ಒನ್‌ ಇಂಚ್‌ ಗ್ಯಾಪ್‌’ ಕೃತಿ
ಚಿ.ಸು.ಕೃಷ್ಣಸೆಟ್ಟಿ

ವರ್ಷಪೂರ್ತಿ ಕಾರ್ಯಕ್ರಮ

ವಜ್ರ ಮಹೋತ್ಸವದ ಅಂಗವಾಗಿ ‘ದಾಕಹವಿಸ’ ವತಿಯಿಂದ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗಿದೆ. ಈಗ ಮಿಶ್ರ ಮಾಧ್ಯಮದ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆಧುನಿಕ ಸಾಂಪ್ರದಾಯಿಕ ಸಮಕಾಲೀನ–ಹೀಗೆ ಪ್ರತ್ಯೇಕ ವಿಭಾಗಗಳಲ್ಲಿ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗುವುದು. ಚಿ.ಸು.ಕೃಷ್ಣ ಸೆಟ್ಟಿ ದಾಕಹವಿಸ ಅಧ್ಯಕ್ಷ

ಸುಲೋಚನಾ ವೇಣುಗೋಪಾಲ್
ವಿಸ್ಮಯಕಾರಿ ಅನುಭವ
44 ವರ್ಷಗಳ ಬಳಿಕ ಸಹಪಾಠಿಗಳನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ವಿಸ್ಮಯ ಎಂದೆನಿಸಿತ್ತು. ಹೆಣ್ಣುಮಕ್ಕಳು ಶಿಕ್ಷಣ ಕಲಿಯುವುದೇ ಕಷ್ಟ ಎನ್ನುವ ಕಾಲದಲ್ಲಿ ಕಲಾ ಶಿಕ್ಷಣ ನೀಡಿದ ಕಾಲೇಜು ಎಂದಿಗೂ ತವರುಮನೆ ಇದ್ದಂತೆ. ಇಲ್ಲಿ ನನ್ನ ಕಲಾಕೃತಿ ಪ್ರದರ್ಶನಗೊಂಡಿದ್ದು ನನ್ನ ಖುಷಿಯನ್ನು ಇಮ್ಮಡಿಗೊಳಿಸಿತ್ತು. – ಸುಲೋಚನಾ ವೇಣುಗೋಪಾಲ್‌ ದಾವಣಗೆರೆ ದೃಶ್ಯಕಲಾ ಕಾಲೇಜಿನ (ಲಲಿತಕಲಾ ವಿಭಾಗ) ಮೊದಲ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.