ಕಲೆಗೆ ಗಡಿಯಿಲ್ಲ. ಕನ್ನಡವೇ ಬಾರದ ಕಲಾವಿದೆ ಸಮೀಕ್ಷಾ ಬೆಂಗಳೂರಿನಲ್ಲಿ ಕಂಡಿದ್ದ ಕಾಡುವ ದೃಶ್ಯಗಳನ್ನು ತಮ್ಮ ವರ್ಣಚಿತ್ರ ಸರಣಿಯ ಭಾಗವಾಗಿಸಿದ್ದಾರೆ. ಅದರಲ್ಲಿ ‘ಪ್ರಜಾವಾಣಿ’ ಪತ್ರಿಕೆಯೂ ಸೇರಿರುವುದು ವಿಶೇಷ.
ವಿಭೂತಿಧಾರಿ ವೃದ್ಧರೊಬ್ಬರು ‘ಪ್ರಜಾವಾಣಿ’ ಪತ್ರಿಕೆ ಹಿಡಿದು ನ್ಯೂಯಾರ್ಕ್ ನಗರದ ಸಬ್‌ವೇ ಒಂದರ ಬೆಂಚುಕಲ್ಲಿನ ಮೇಲೆ ಕುಳಿತಿದ್ದಾರೆ. ಹತ್ತಿಯ ಬಿಳಿ ಪಂಚೆ, ಅದಕ್ಕೆ ಕೆಂಪು ಅಂಚು. ಪತ್ರಿಕೆಯ ಓದಿನಲ್ಲಿ ಅವರೆಷ್ಟು ಮುಳುಗಿ ಹೋಗಿದ್ದಾರೆಂದರೆ, ಪಕ್ಕದಲ್ಲಿ ಕುಳಿತ ನ್ಯೂಯಾರ್ಕ್‌ನ ಮಾಸ್ಕ್‌ಧಾರಿಯ ಕಡೆಗೆ ನಿಗಾ ಇಲ್ಲ. ಆ ಮಾಸ್ಕ್‌ಧಾರಿ ತಮ್ಮಷ್ಟಕ್ಕೆ ತಾವು ಯಾವುದೋ ಯೋಚನೆಯಲ್ಲಿ ಮುಳುಗಿದ್ದಾರೆ. ಡಬಲ್ ಬ್ರೆಸ್ಟೆಡ್ ಕೋಟು, ಸುರುಳಿ ಕೂದಲಿನ ಸೈಡ್‌ಬರ್ನಿಂಗ್ಸ್, ತಲೆ ಮೇಲೊಂದು ಟೋಪಿ. ಎರಡು ಭಿನ್ನ ಧ್ರುವಗಳಂತೆ ಕಾಣುವ ಈ ಇಬ್ಬರನ್ನೂ ಹೀಗೆ ಒಂದೆಡೆ ಕುಳಿತುಕೊಳ್ಳುವಂತೆ ಮಾಡಿದ್ದು ಸಮೀಕ್ಷಾ ಅಡುಕಿಯಾ ಎಂಬ ಕಲಾವಿದೆ.
ಕರ್ಲಿ ಹೇರ್‌ಆರ್ಟಿಸ್ಟ್ ಎಂಬ ಹೆಸರಿನಲ್ಲಿ ಸರಣಿ ವರ್ಣಚಿತ್ರಗಳನ್ನು ಅವರು ‘ಗಡಿಗಳ ಬೆಸುಗೆ’ (ಬ್ಲೆಂಡಿಂಗ್ ಬಾರ್ಡರ್ಸ್) ಎಂಬ ಶೀರ್ಷಿಕೆಯಡಿ ರಚಿಸುತ್ತಿದ್ದಾರೆ. ಈ ಸರಣಿಯಲ್ಲಿ 25ಕ್ಕೂ ಹೆಚ್ಚು ವರ್ಣಚಿತ್ರಗಳು ಅದಾಗಲೇ ಸಿದ್ಧಗೊಂಡಿವೆ. ಅದರ ಅಡಿಯಲ್ಲಿಯೇ ‘ನಮ್ಮ ಬೆಂಗಳೂರು–ಯುಎಸ್‌ಎ ಎಡಿಟ್’ ಎನ್ನುವ ಉಪಶೀರ್ಷಿಕೆಯಡಿ ಬೆಂಗಳೂರು ಹಾಗೂ ಅಮೆರಿಕದ ನಗರಗಳನ್ನು ಬೆಸೆದು ವರ್ಣಚಿತ್ರಗಳನ್ನು ಅವರು ರಚಿಸಿದ್ದಾರೆ.
ಅಚ್ಚರಿ ಎಂದರೆ ಸಮೀಕ್ಷಾ ಅವರಿಗೆ ಕನ್ನಡ ಬರುವುದಿಲ್ಲ. ಅವರ ಪತಿ ಕಾರ್ತಿಕ್ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿತವರು. ಕೆಲವು ವರ್ಷ ನಗರದಲ್ಲಿ ಕೆಲಸವನ್ನೂ ಮಾಡಿದ್ದರು. ಅವರ ಸಹಪಾಠಿ ಸಿಂಧೂರ ಆಮೇಲೆ ಕುಟುಂಬದ ಸ್ನೇಹಿತೆಯಾದರು. ಅವರ ಮನೆಗೆ ಒಮ್ಮೆ ಹೋದಾಗ ಸಮೀಕ್ಷಾ ಅವರನ್ನು ಎದುರುಗೊಂಡಿದ್ದು ಪತ್ರಿಕೆ ಓದುತ್ತಾ ಮನೆಯ ಮುಂದಿನ ಕುರ್ಚಿಯಲ್ಲಿ ಕುಳಿತಿದ್ದ ನೇಮಿರಾಜ ಕಂಠಿ. ಬಿಎಂಎಸ್ ಕಾಲೇಜಿನಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಅವರು ಪತ್ರಿಕೆಯಲ್ಲಿ ಮುಳುಗಿಹೋಗಿದ್ದರು. ಅದನ್ನು ಕಂಡ ಸಮೀಕ್ಷಾ ಸಹಜ ಕುತೂಹಲದಿಂದ ಪತ್ರಿಕೆ ಯಾವುದು ಎಂದು ಕೇಳಿ ತಿಳಿದರು.
ನೇಮರಾಜ ಕಂಠಿ ಹಾಗೂ ಅವರ ಪತ್ನಿ ಇಬ್ಬರೂ ಊಟಕ್ಕೆ ಮೊದಲು ಪದಬಂಧ ತುಂಬುತ್ತಾ, ಪರಸ್ಪರ ಪದಜ್ಞಾನದ ಜುಗಲ್‌ಬಂದಿಯಲ್ಲಿ ನಿರತರಾಗುವುದನ್ನು ಸಿಂಧೂರ ಹೇಳಿದಾಗ ಅಚ್ಚರಿ. ಬೆಳಿಗ್ಗೆ ಅಡುಗೆಮನೆಯಲ್ಲಿ ಚಟ್ನಿ ರುಬ್ಬುವ ಮಿಕ್ಸಿ ಸದ್ದು. ಹೊರಗೆ ಕಂಠಿ ಸಾಹೇಬರ ಪತ್ರಿಕಾ ಅಧ್ಯಯನ. ಹಬೆಯಾಡುವ ಕಾಫಿ ಅವರಿಗೆ ಅಷ್ಟು ಸರಿಹೋಗೊಲ್ಲ. ತುಸು ತಣ್ಣಗಾದ ಮೇಲೆಯೇ ಕಾಫಿ ಕುಡಿಯುವುದು ಅವರಿಗೆ ಅಭ್ಯಾಸ. ಕಾಫಿ ಆರುವ ಹೊತ್ತಿಗಾಗಲೇ ಪತ್ರಿಕೆಯ ಸಾಕಷ್ಟು ಸುದ್ದಿಯನ್ನು ಅವರು ತಲೆಗೆ ಇಳಿಸಿಕೊಂಡಿರುತ್ತಾರೆ.
ಇಂತಹ ಆಪ್ತ ಸಂಗತಿಗಳನ್ನು ವರ್ಷಗಳ ಹಿಂದೆ ನೋಡಿ, ಕೇಳಿದ್ದ ಸಮೀಕ್ಷಾ ಅಮೆರಿಕದ ನ್ಯೂಯಾರ್ಕ್‌ಗೆ ಹೋಗಿ ನೆಲೆಸಿ 12 ವರ್ಷಗಳಾಗಿವೆ. ಅದಕ್ಕೂ ಮೊದಲು ಮುಂಬೈನಲ್ಲೂ ಕೆಲವು ವರ್ಷ ಅವರು ಕಾಲ ಕಳೆದಿದ್ದರು. ಅವರ ಪತಿ ಕಾರ್ತಿಕ್ ಲುಂಕಡ್ ಹುಟ್ಟಿದ್ದು ರಾಜಸ್ಥಾನದಲ್ಲಿ. ಬೆಳೆದದ್ದು ಬಾಂಬೆ ಹಾಗೂ ಕುವೈಟ್‌ನಲ್ಲಿ. ಬೆಂಗಳೂರಿಗೆ ಬಂದದ್ದೇ ಎಂಜಿನಿಯರಿಂಗ್ ಓದಿನ ಸಲುವಾಗಿ. ಅವರಿಗೂ ಕನ್ನಡದ ಗಂಧಗಾಳಿ ಇಲ್ಲ.
ಸಮೀಕ್ಷಾ ಆಗೀಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಮುಂಬೈನಲ್ಲಿ ನೆಲೆಸಿದ್ದಾಗ ಅಲ್ಲಿನ ಗಣೇಶಮೂರ್ತಿ ವಿಸರ್ಜನೆಯ ಸಂದರ್ಭವನ್ನು ಕಣ್ತುಂಬಿಕೊಂಡಿದ್ದರು. ಬೆಂಗಳೂರಿನ ಭೇಟಿಯಲ್ಲಿ ಬ್ಲಾಸಂ ಬುಕ್‌ಹೌಸ್, ಕೆ.ಆರ್. ಮಾರ್ಕೆಟ್, ಎಂಟಿಆರ್, ವಿದ್ಯಾರ್ಥಿ ಭವನ, ಕಾರ್ನರ್ ಐಸ್‌ಕ್ರೀಮ್ ಅಂಗಡಿ... ಇವೆಲ್ಲವೂ ಅವರ ಬದುಕಿನ ಭಾಗಗಳಾದವು.
ವೃತ್ತಿಯಲ್ಲಿ ಸಮೀಕ್ಷಾ ತೆರಿಗೆ ಸಲಹೆಗಾರ್ತಿ. ಹೈಸ್ಕೂಲಿನ ದಿನಗಳಲ್ಲೇ ವರ್ಣಚಿತ್ರ ಬಿಡಿಸುವುದು, ಗ್ಲಾಸ್‌ಪೇಂಟಿಂಗ್, ಕ್ಯಾಲಿಗ್ರಫಿ ಇವೆಲ್ಲದರಲ್ಲಿ ಆಸಕ್ತಿ ಇದ್ದ ಅವರು, ನ್ಯೂಯಾರ್ಕ್‌ನಲ್ಲಿ ನೆಲೆಸಿದ ಮೇಲೆ ಅದಕ್ಕೆ ಗಂಭೀರ ಚೌಕಟ್ಟು ದಕ್ಕಿಸಿಕೊಡಲು ನಿರ್ಧರಿಸಿದರು. ಅಲ್ಲಿ ಚಿತ್ರಕಲೆಗೆ ಸಂಬಂಧಿಸಿದ ಸೂಕ್ಷ್ಮಗಳನ್ನು ಔಪಚಾರಿಕವಾಗಿ ಸಂಸ್ಥೆಯೊಂದಕ್ಕೆ ಸೇರಿ ಕಲಿತರು.
ಮ್ಯಾನ್‌ಹಟನ್‌ನಲ್ಲಿ ವರ್ಷಗಳ ಹಿಂದೆ ಅವರ ವರ್ಣಚಿತ್ರಗಳ ಪ್ರದರ್ಶನವನ್ನೂ ನಡೆಸಿದರು. ಬೆಂಗಳೂರು, ಮುಂಬೈನಲ್ಲಿ ತಾವು ಕಂಡ ಕಾಡುವ ದೃಶ್ಯಗಳನ್ನು ಅಮೆರಿಕದ ವಾತಾವರಣಕ್ಕೆ ಬೆಸೆದು ವರ್ಣಚಿತ್ರಕಲೆಗಳನ್ನು ಮೂಡಿಸುವ ಮಹತ್ವಾಕಾಂಕ್ಷೆ 2018ರಲ್ಲಿ ಅವರಿಗೆ ಹುಟ್ಟಿತು. ಮುಂಬೈ ಹಾಗೂ ಬೆಂಗಳೂರಿನ ತಮ್ಮ ಸ್ನೇಹಿತ–ಸ್ನೇಹಿತೆಯರ ಬಳಗದಿಂದ ಫೋಟೊಗಳನ್ನು ತರಿಸಿಕೊಂಡರು. ಅಮೆರಿಕದಲ್ಲಿ ಅದಕ್ಕೆ ಪೂರಕವಾದ ವಾತಾವರಣವನ್ನು ಹುಡುಕಿದರು. ಎರಡನ್ನೂ ವರ್ಣಚಿತ್ರಗಳಲ್ಲಿ ಬೆಸೆದರು. ಎಂಟಿಆರ್ ಹಾಗೂ ಮ್ಯಾಕ್‌ಡೌಗಲ್ ಒಂದೇ ಚೌಕಟ್ಟಿಗೆ ಬಂದವು. ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನ ಬ್ಲಾಸಮ್ ಬುಕ್‌ಹೌಸ್ ಅಮೆರಿಕದ ಬೇ ಏರಿಯಾದ ಬೀದಿಗೂ ಬೆಸೆದುಕೊಂಡಿತು. ಹಾಗೆಯೇ ‘ಪ್ರಜಾವಾಣಿಪ್ರಿಯ ಕಂಠಿ’ ಅವರು ಸಬ್‌ವೇ ರೈಲು ನಿಲ್ದಾಣದಲ್ಲಿ ಪಾಶ್ಚಾತ್ಯ ದಿರುಸು ತೊಟ್ಟವರ ಪಕ್ಕ ಹೋಗಿ ಕುಳಿತರು. ಮುಂಬೈನ ಸಮುದ್ರದಲ್ಲಿನ ಗಣೇಶ ವಿಸರ್ಜನೆಯ ಮುನ್ನೆಲೆಯಲ್ಲಿ ನ್ಯೂಯಾರ್ಕ್ ನಗರವನ್ನು ಮೂಡಿಸಿದರು. ಹಿಮಾಚ್ಛಾದಿತ ಅಮೆರಿಕದ ರಸ್ತೆಯ ಮೇಲೆ ಬೇರೆ ವಾಹನಗಳ ನಡುವೆ ಒಂದು ಆಟೊ ಸಾಗಿದರೆ ಹೇಗಿದ್ದೀತು ಎನ್ನುವ ಪ್ರಯೋಗವೂ ಈ ವರ್ಣಚಿತ್ರ ಸರಣಿಯಲ್ಲಿ ಇದೆ.
2018ರಲ್ಲಿ ಮೊಳೆತ ಯೋಚನೆಯನ್ನು ಕಾರ್ಯರೂಪಕ್ಕೆ ಇಳಿಸಲು ಸಮೀಕ್ಷಾ 2023ರ ಜನವರಿವರೆಗೆ ಸಮಯ ತೆಗೆದುಕೊಂಡರು. ಕನ್ನಡ ಬಾರದೇ ಇದ್ದರೂ ಕನ್ನಡದ ಅಕ್ಷರಗಳು ಚಿತ್ರಗಳಲ್ಲಿ ಮೂಡುವಂತೆ ನೋಡಿಕೊಂಡರು.
‘ಸಿಂಧೂರ ಮನೆಗೆ ಹೋದಾಗ ಪ್ರಜಾವಾಣಿ ಪತ್ರಿಕೆಯು ಅವರ ಮನೆಯ ಭಾವನಾತ್ಮಕ ಭಾಗವೇ ಆಗಿತ್ತು. ಅದು ಎಷ್ಟು ಸತ್ವಯುತ ಎಂದು ನನಗೆ ತಿಳಿಸಿದ್ದೇ ಅವರು. ಹೀಗಾಗಿ ನಾನು ವರ್ಣಚಿತ್ರ ಸರಣಿಗೆ ಪತ್ರಿಕೆಯನ್ನೂ ಮುಖ್ಯವಾಗಿಸಿಕೊಂಡೆ. ಪ್ರಜಾವಾಣಿ ಈಗ ಎಪ್ಪತ್ತೈದನೇ ವರ್ಷದಲ್ಲಿದೆ ಎನ್ನುವುದನ್ನು ತಿಳಿದು ಮತ್ತಷ್ಟು ಖುಷಿಯಾಯಿತು’ ಎನ್ನುತ್ತಾರೆ ಸಮೀಕ್ಷಾ.
www.curlyhairartist.com ವೆಬ್‌ಸೈಟ್‌ನಲ್ಲಿ ಈ ಗುಂಗುರು ಕೂದಲಿನ ಆಸಕ್ತ ಕಲಾವಿದೆಯ ಕುರಿತ ಮಾಹಿತಿ ಇದೆ.
ಏನಿದು ಬ್ಲೆಂಡಿಂಗ್ ಬಾರ್ಡರ್ಸ್?
ಗಡಿಗಳ ಬೆಸುಗೆ ಅರ್ಥಾತ್ ಬ್ಲೆಂಡಿಂಗ್ ಬಾರ್ಡರ್ಸ್ ಎನ್ನುವ ವರ್ಣಛಾಯಾಚಿತ್ರ ಸರಣಿಯಲ್ಲಿ ಸಮೀಕ್ಷಾ ವರು ಭಾರತದ ರಿಕ್ಷಾ, ಕೋಲ್ಕತ್ತದ ಟ್ರಾಮ್, ಮುಂಬೈನ ಬಿಎಸ್‌ಟಿ ಬಸ್, ನ್ಯೂಯಾರ್ಕ್ ಸಬ್‌ವೇ ಇವನ್ನೆಲ್ಲ ಬೆಸೆದಿದ್ದಾರೆ. ಮುಂಬೈನ ಡಬ್ಬಾವಾಲಾಗಳು, ಪ್ರಜಾವಾಣಿ ಪತ್ರಿಕೆ ಓದುವ ಕನ್ನಡಿಗ, ದಸರಾ, ಗಣೇಶ ವಿಸರ್ಜನೆ ಇವು ಸಾಂಸ್ಕೃತಿಕ ಬಿಂಬಗಳಾಗಿ ಹಾಗೂ ಹಬ್ಬದ ಮೂಡ್ ಕಟ್ಟಿಕೊಡಲು ಬಳಕೆಯಾಗಿವೆ. ಕನ್ನಡ ಲಿಪಿ ಅಷ್ಟೇ ಅಲ್ಲದೆ ಚೀನಾ ಭಾಷೆಯನ್ನೂ ಇವರು ಈ ಸರಣಿಯ ಪೇಂಟಿಂಗ್‌ಗಳಲ್ಲಿ ಮೂಡಿಸಿರುವುದು ವಿಶೇಷ.
ಕ್ಯಾರಿಕೇಚರ್‌ಗಳನ್ನು ಮಾಡುವುದರಲ್ಲೂ ಸಮೀಕ್ಷಾ ಪಳಗಿದ್ದಾರೆ. ಅವರ ಪತಿ, ಸಹೋದರಿಯ ಕಾರು, ಸ್ನೇಹಿತೆಯ ತಂದೆ ಇವರೆಲ್ಲರೂ ಪೇಂಟಿಂಗ್‌ಗಳಿಗೆ ಜೀವತುಂಬಿದ್ದಾರೆ. ನ್ಯೂಯಾರ್ಕ್‌ನಲ್ಲಿ ಸುರಿಯುವ ಹಿಮ ಪರಿಸರವನ್ನು ಮೂಡಿಸಲು ಸಾಕಷ್ಟು ಸಮಯ ವ್ಯಯಿಸಿದ್ದಾರೆ. ಂತಹ ಪರಿಸರದ ಫೋಟೊಗಳನ್ನು ತೆಗೆದು, ಅವುಗಳ ಆಧಾರದ ಮೇಲೆ ವರ್ಣಚಿತ್ರಗಳನ್ನು ಸೃಷ್ಟಿಸಲು ಹೆಚ್ಚು ತಾಳ್ಮೆ, ಸಮಯ ಸಹಜವಾಗಿಯೇ ಬೇಕು ಎನ್ನುತ್ತಾರೆ. ಹಲವು ದೇಶಗಳನ್ನು ಕಲಾವಂತಿಕೆಯ ಒಂದು ಬಿಂದುವಿಗೆ ತರುವ ಅವರ ಯೋಜನೆ ಪೂರ್ಣಗೊಂಡಮೇಲೆ ಪ್ರದರ್ಶನ ಏರ್ಪಡಿಸುವುದು ಅವರ ಉದ್ದೇಶ.
ಕಲೆಯ ಭಾಗವಾಗಿದ್ದಕ್ಕೆ ಖುಷಿ
ಸಮೀಕ್ಷಾ ಆರೇಳು ವರ್ಷಗಳಿಂದ ಪರಿಚಿತರು. ಅವರು ಮನೆಗೆ ಬಂದಿದ್ದಾಗ ‘ಪ್ರಜಾವಾಣಿ’ಯ ಓದಿನಲ್ಲಿ ನನ್ನ ತಂದೆ ಮುಳುಗಿಹೋಗಿದ್ದನ್ನು ಕಂಡು ಅನೇಕ ಸೂಕ್ಷ್ಮ ಸಂಗತಿಗಳನ್ನು ಕೇಳಿದ್ದರು. ಅದೇ ರೀತಿಯ ಫೋಟೊ ಬೇಕು ಎಂದಾಗ ಕಳುಹಿಸಿಕೊಟ್ಟೆ. ಹಲವು ಭಂಗಿಗಳಲ್ಲಿ ಫೋಟೊ ಬೇಕು ಎಂದಿದ್ದರಿಂದ ಎರಡು ಮೂರು ದಿನ ಫೋಟೊ ಸೆಷನ್ ಮಾಡಿ, ಕಳುಹಿಸಿದ್ದೆವು. ‘ಪ್ರಜಾವಾಣಿ’ಯನ್ನು ಬಾಲ್ಯದಿಂದಲೂ ನಾನು ಮನೆಯಲ್ಲಿ ನೋಡುತ್ತಿದ್ದೇನೆ. ಅದು ಹೀಗೆ ಗಡಿ ಮೀರಿ ಕಲೆಯ ಭಾಗವಾಗಿರುವುದಕ್ಕೆ ಖುಷಿ ಇದೆ.
ಸಿಂಧೂರ, ಸಮೀಕ್ಷಾ ಸ್ನೇಹಿತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.