ADVERTISEMENT

ಗಾಲಿಗಳ ಮೇಲೆ ಕಲಾ ಪಯಣ

ನಾಮದೇವ ಕಾಗದಗಾರ
Published 2 ಡಿಸೆಂಬರ್ 2019, 19:30 IST
Last Updated 2 ಡಿಸೆಂಬರ್ 2019, 19:30 IST
ಶರದ್ ಕುಲಕರ್ಣಿ ರಚಿಸಿದ ಕಾರ್ಟೂನ್
ಶರದ್ ಕುಲಕರ್ಣಿ ರಚಿಸಿದ ಕಾರ್ಟೂನ್   

ಎರಡೂ ಕಾಲುಗಳಿಲ್ಲದ ಶರದ್‌ ಕುಲಕರ್ಣಿ, ಮೂರು ದಶಕಗಳಿಂದ ಗಾಲಿ ಕುರ್ಚಿಯಲ್ಲೇ ಕುಳಿತೇ ಕಾರ್ಟೂನ್ ಬರೆಯುತ್ತಾ ಜಗತ್ತು ನೋಡುತ್ತಿದ್ದಾರೆ. ಇಲ್ಲಿಯವರೆಗೂ ಅವರು ಬರೆದಿರುವ ಕಾರ್ಟೂನ್‌ಗಳ ಸಂಖ್ಯೆ ಐದುಸಾವಿರ ದಾಟಿದೆ.

ಬೀದರ್‌ನ ಶರದ್‌ ಕುಲಕರ್ಣಿಗೆ ಎದ್ದು ನಿಲ್ಲಲು, ಓಡಾಡಲು ಆಗುವುದಿಲ್ಲ. ಸದಾ ಗಾಲಿ ಕುರ್ಚಿ ಮೇಲೆ ಕುಳಿತಿರಬೇಕು. ಚಕ್ರಗಳನ್ನು ಉರುಳಿಸುತ್ತಲೇ ಸಂಚರಿಸಬೇಕು. ಹೀಗೆ ಕುರ್ಚಿ ಮೇಲೆ ಕುಳಿತೇ ಅವರು ಐದು ಸಾವಿರಕ್ಕೂ ಹೆಚ್ಚು ಕಾರ್ಟೂನುಗಳನ್ನು ಬರೆದಿದ್ದಾರೆ. ತಮ್ಮಲ್ಲಿರುವ ನೋವನ್ನು ನುಂಗಿಕೊಂಡು, ಚಿತ್ರಗಳ ಮೂಲಕ ಜನರ ಮೊಗದಲ್ಲಿ ನಗು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕುರ್ಚಿ ಮೇಲೆ ಕುಳಿತು, ಕಾರ್ಟೂನುಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದಾರೆ..!

ಶರದ್‌ ಬೀದರ್‌ನ ಕೈಲಾಶನಗರ ಬಡಾವಣೆ ನಿವಾಸಿ. ಮುರಳೀಧರರಾವ್‌ ಕುಲಕರ್ಣಿ ಹಾಗೂ ವಿಜಯಲಕ್ಷ್ಮಿ ದಂಪತಿ ಪುತ್ರ. ಹುಟ್ಟಿನಿಂದಲೇ ಪೋಲಿಯೊಗೆ ತುತ್ತಾಗಿ ಎರಡೂ ಕಾಲುಗಳನ್ನು ಕಳೆದುಕೊಂಡರು. ಆರಂಭದಲ್ಲಿ ಅಂಬೆಗಾಲು ಇಡುತ್ತಾ, ಹುಮನಾಬಾದ್‌ನ ಹುಡಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿತರು. ಶರದ್‌ ಅವರ ಪರಿಸ್ಥಿತಿ ನೋಡಿ, ಶಾಲೆಯಲ್ಲಿ ಹಾಜರಾತಿ ನೀಡಿದರು. ಅವರು ಮನೆಯಲ್ಲೇ ಕುಳಿತು ಏಳನೆಯ ತರಗತಿವರೆಗೆ ವಿದ್ಯಾಭ್ಯಾಸ ಪೂರೈಸಿದರು. ಮುಂದೆ ಶಾಲೆಗೆ ಹೋಗದೇ, ನೇರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.

ADVERTISEMENT

ಮಗ ಕಾಲೇಜಿಗೆ ಹೋಗುವಂತಾದಾಗ ಅಪ್ಪ ತ್ರಿಚಕ್ರ ವಾಹನ ಕೊಡಿಸಿದರು. ಅದರ ಮೇಲೆ ಕುಳಿತು ಹುಮನಬಾದ್‌ನ ಚಿತ್ರಕಲಾ ಶಾಲೆಯಲ್ಲಿ ಡ್ರಾಯಿಂಗ್‌ ಡಿಪ್ಲೊಮಾ ಮತ್ತು ಆರ್ಟ್‌ ಮಾಸ್ಟರ್‌ ಕೋರ್ಸ್ ಪೂರೈಸಿದರು. ಹೊರಗಡೆ ತ್ರಿಚಕ್ರವಾಹನ, ಮನೆಯಲ್ಲಿ ಗಾಲಿ ಕುರ್ಚಿ. ಹೀಗೆ ಜೀವನ ‘ಚಕ್ರ’ಗಳ ಮೇಲೆ ಮುಂದುವರಿಯಿತು.

ಇಷ್ಟೆಲ್ಲ ಆಗಿದ್ದರೂ ತನಗೆ ಕಾಲುಗಳಿಲ್ಲವೆಂದು ಅವರು ಕೊರಗಿ ಸುಮ್ಮನಿರಲಿಲ್ಲ. ‘ನನ್ನ ಪಾಲಿಗೆ ಬಂದಿದ್ದೇ ಇಷ್ಟು’ ಎಂದುಕೊಂಡು ಇರುವ ಜೀವನವನ್ನೇ ಅನುಭವಿಸಲು ಸಿದ್ಧರಾದರು. ಗಾಲಿ ಕುರ್ಚಿಯ ಚಕ್ರಗಳನ್ನು ಉರುಳಿಸುತ್ತಾ, ಕ್ಯಾನ್ವಾಸ್‌ ಮೇಲೆ ಚಿತ್ರ ರಚನೆ ಆರಂಭಿಸಿದರು. ಕಾರ್ಟೂನ್‌ ರಚಿಸಿದರು. ಅವುಗಳಲ್ಲಿ ಸಮಾಜದೊಳಗಿನ ಸಮಸ್ಯೆಗಳನ್ನು ತೆರೆದಿಟ್ಟರು. ಕಂಪ್ಯೂಟರ್ ಕಲಿತರು. ಸಕಾಲಿಕ ವಿಷಯಗಳನ್ನು ಚಿತ್ರಗಳ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಹೀಗೆ, ‘ಕಲಾ ಜೀವನ’ದ ಚಕ್ರ ಉರುಳಿಸುತ್ತಾ ಈಗ ರಾಜ್ಯ ವ್ಯಂಗಚಿತ್ರಕಾರರ ಸಾಲಿನಲ್ಲಿ ನಿಂತಿದ್ದಾರೆ. ಬದುಕಿನ ಜೊತೆ ಹೋರಾಟ

ಶರದ್‌ ಕಾಲುಗಳ ಶಸ್ತ್ರಚಿಕಿತ್ಸೆಗಾಗಿ ಸುಮಾರು ದಿನಗಳ ಕಾಲ ವಿಶಾಖಪಟ್ಟಣಕ್ಕೆ ಓಡಾಡಿದರು. ಈ ವೇಳೆಯಲ್ಲಿ ವ್ಯಂಗಚಿತ್ರ ಬರೆಯುವುದನ್ನು ನಿಲ್ಲಿಸಿದರು. ಆ ಕಡೆ ಶಸ್ತ್ರಚಿಕಿತ್ಸೆಯೂ ಫಲಕಾರಿಯಾಗಲಿಲ್ಲ. ಚಿತ್ರಕಲಾ ಪದವಿ ಮುಗಿಸಿದರೂ ಯಾವುದೇ ಕೆಲಸ ಸಿಗಲಿಲ್ಲ. ಬದುಕಿಗಾಗಿ ಹೈದರಾಬಾದಿನ ಸಣ್ಣ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಸೇರಿದರು. ಆದರೆ ಕಂಪನಿ ಮುಚ್ಚಿತು. ಬೀದರ್‌ಗೆ ಮರಳಿದರು. ಪತ್ರಿಕೆಗಳಿಗೆ ವ್ಯಂಗಚಿತ್ರ ಬರೆಯಲು ಪ್ರಾರಂಭಿಸಿದರು. ಇಲ್ಲಿಯವರೆಗೆ ಶರದ್ ಅವರ ಐದು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಸಮಕಾಲೀನ ವಿಚಾರಗಳು..

ಶರದ್ ಅವರ ಪ್ರತಿ ವ್ಯಂಗ್ಯಚಿತ್ರದಲ್ಲೂ ಸಕಾಲಿಕ ವಿಚಾರಗಳಿರುತ್ತವೆ. ಬರ
ಗಾಲ, ನಿರುದ್ಯೋಗ, ಜನಸಂಖ್ಯಾ ಸ್ಫೋಟ, ಪರಿಸರ ಮಾಲಿನ್ಯ, ಗ್ರಾಮೀಣ ಬದುಕು, ಶಿಕ್ಷಣದಂತಹ ವಿಷಯಗಳಿರುತ್ತವೆ. ನಿತ್ಯದ ಬದು
ಕಿಗೆ ಕುಂಚ-ಬಣ್ಣ ಪೆನ್ಸಿಲ್‌ನೊಂದಿಗೆ ಜುಗಲ್‌ಬಂದಿಗೆ ಇಳಿಯುತ್ತಾರೆ.

‘ಅಂಗವೈಕಲ್ಯ ಎಂದು ಕೊರಗಬೇಡಿ. ಆ ಬಗ್ಗೆ ಕೀಳರಿಮೆಯೂ ಬೇಡ. ನಮ್ಮ ನಡುವೆ, ನಮ್ಮ ಹಾಗೇ ಅಂಗವಿಕಲರಾಗಿರುವವರು ವಿಶ್ವವೇ ಬೆರಗಾಗುವಂತೆ ಸಾಧನೆ ಮಾಡಿದ್ದಾರೆ. ಸಾಧಿಸುವ ಛಲವೊಂದಿದ್ದರೆ, ಸಾಧನೆಗೆ ಸುಲಭ ದಾರಿ ಸಿಗುತ್ತೆ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಶರದ್‌ ಕುಲಕರ್ಣಿ.

ಪರಿಶ್ರಮವಿದ್ದರೆ ಸಾಧನೆ ಖಚಿತ

ನಮ್ಮಲ್ಲಿರುವ ಆಸಕ್ತಿಯನ್ನು ಪ್ರದರ್ಶಿಸಬೇಕು. ಆಗ ಪ್ರೋತ್ಸಾಹಿಸುವವರು ಮುಂದೆ ಬರುತ್ತಾರೆ. ತೋರಿದ ದಾರಿಯಲ್ಲಿ ಸಾಧನೆಗಾಗಿ ಮುನ್ನುಗ್ಗಬೇಕು ಎನ್ನುವ ಅವರು ‘ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವ, ಪ್ರೋತ್ಸಾಹಿಸುವ ಕೆಲಸವಾಗಬೇಕು’ ಎಂದು ಅಭಿಪ್ರಾಯಪಡುತ್ತಾರೆ.

ಶರದ್ ಅವರ ವ್ಯಂಗ್ಯಚಿತ್ರಗಳು ನಾಡಿನ ಜನರನ್ನು ತಲುಪಿವೆ. ಆದರೆ, ಇವರ ಸಾಧನೆಯನ್ನು ಗುರುತಿಸುವ ಪ್ರಯತ್ನಗಳಾಗಿಲ್ಲ. ಸದ್ದಿಲ್ಲದೆ ತಮ್ಮ ಬದುಕನ್ನೇ ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡಿರುವ ಇಂಥ ಬಹುಮುಖ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಶರದ್ ಕುಲಕರ್ಣಿ ಜೊತೆ ಮಾತನಾಡಲು ಅವರಸಂಪರ್ಕ ಸಂಖ್ಯೆ: 6363701131.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.