ಹಾವೇರಿ: ಶಿಲ್ಪಕಲಾ ವೈಭೋಗವನ್ನು ನೋಡಬೇಕೆಂದರೆ ಹಂಪಿ, ಬೇಲೂರು, ಹಳೇಬೀಡಿಗೇ ಹೋಗಬೇಕು ಎಂದೇನಿಲ್ಲ. ಹಾವೇರಿ ನಗರದಲ್ಲಿರುವ ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಿರುವ ಪುರಸಿದ್ಧೇಶ್ವರ ದೇವಾಲಯಕ್ಕೆ ಭೇಟಿ ನೀಡಿದರೆ ಸಾಕು. ಶಿಲ್ಪಕಲೆಯ ಐಸಿರಿಯನ್ನು ಕಣ್ತುಂಬಿಕೊಳ್ಳಬಹುದು.
ಹೌದು, ಹುಕ್ಕೇರಿ ಮಠದ ಮುಂಭಾಗದಲ್ಲಿರುವ ಈ ದೇವಾಲಯವುಉಸುಕು ಕಲ್ಲುಗಳಿಂದ ನಿರ್ಮಾಣವಾಗಿದ್ದು, ಸುಂದರ ಕೆತ್ತನೆಗಳಿಂದ ಮನಸ್ಸನ್ನು ಸೂರೆಗೊಳ್ಳುತ್ತದೆ. ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಕಾಲಾವಧಿಯಲ್ಲಿ ಸಿದ್ಧೇಶ್ವರ ದೇವಾಲಯ (ಗ್ರಾಮಾಧೀಶ) ರೂಪುತಳೆದಿದೆ. ‘ಸ್ವಯಂಭು ಸಿದ್ಧೇಶ್ವರ’, ‘ಸಿದ್ಧನಾಥ’, ‘ವಿಷಪ್ರಹರಿ’ ಎಂಬ ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತದೆ.
ಉಗ್ರನರಸಿಂಹನ ಶಿಲ್ಪ:
ಪುರಸಿದ್ಧೇಶ್ವರ ಗುಡಿಯ ಎಡಭಾಗದಲ್ಲಿ ನರಸಿಂಹ ದೇವಾಲಯವೂ ಇದೆ. ಇದನ್ನು ಶಾಸನಗಳಲ್ಲಿ ‘ಇಂದ್ರೇಶ್ವರ’ ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ದೇವಾಲಯದ ಮುಂಭಾಗವಿರುವ ಉದ್ಯಾನ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ತರಹೇವಾರಿ ಹೂಗಳು ಮತ್ತು ಗಿಡಗಳು ಮನಸ್ಸಿಗೆ ಮುದ ನೀಡುತ್ತವೆ.
ತಗ್ಗಾದ ಸ್ಥಳದಲ್ಲಿರುವ ಈ ದೇವಾಲಯವು ತಳವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ ಮತ್ತು ವಿಶಾಲವಾದ ಮುಖಮಂಟಪವನ್ನು ಹೊಂದಿದೆ. ದೇವಾಲಯವು ತನ್ನ ವಾಸ್ತು ವೈಶಿಷ್ಟ್ಯದಿಂದಾಗಿ ಕಲಾರಸಿಕರ ಮತ್ತು ಭಕ್ತರ ಗಮನಸೆಳೆಯುತ್ತದೆ. ಈ ಮಂಟಪವನ್ನು ಮೂರು ಕಡೆಗಳಿಂದ ಪ್ರವೇಶಿಸಬಹುದು. ದೇವಾಲಯವು ಪಶ್ಚಿಮಕ್ಕೆ ಮುಖಮಾಡಿರುವುದು ಗಮನೀಯವಾದ ಅಂಶ.
ಚಿತ್ತಾಕರ್ಷಕ ಬಾಗಿಲವಾಡ:
ಗರ್ಭಗೃಹದ ಬಾಗಿಲವಾಡ ಚಿತ್ತಾಕರ್ಷಕವಾಗಿದೆ. ಅಂತರಾಳದ ಬಾಗಿಲವಾಡವನ್ನು ಸುಂದರವಾದ ಮಕರತೋರಣ ಅಲಂಕರಿಸಿದೆ. ಅಂತರಾಳದ ದೇವಕೋಷ್ಠದಲ್ಲಿ ಪದ್ಮಾಸೀನ ಧ್ಯಾನಮುದ್ರಾಮೂರ್ತಿಯಿದೆ. ಅಂತರಾಳದಲ್ಲಿ ನಂದಿಯ ಶಿಲ್ಪವಿದ್ದು, ಕಾಳಮುಖ ಶೈವ ಪಂಥಕ್ಕೆ ಸಂಬಂಧಿಸಿದ ಸಿದ್ಧನಾಥ ದೇವರ ಕುಳಿತ ಭಂಗಿಯ ಶಿಲ್ಪವನ್ನು ಇಡಲಾಗಿದೆ. ನವರಂಗದಲ್ಲಿ ಸುಂದರ ಯೋಗವಿಷ್ಣು ಶಿಲ್ಪ ಗಣಪತಿ, ಆದಿಶಕ್ತಿ ಶಿಲ್ಪಗಳಿವೆ.
ದೇವಾಲಯದ ಮುಖಮಂಟಪದಲ್ಲಿಯ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರು ಬದಲು ಅಷ್ಟಮಾತೃಕೆಯರನ್ನು ಪ್ರತಿಷ್ಠಾಪಿಸಲಾಗಿದೆ. ಭುವನೇಶ್ವರಿಯನ್ನು ಒಂಬತ್ತು ಚೌಕಗಳನ್ನಾಗಿ ವಿಂಗಡಿಸಿ ಮಧ್ಯದ ಚೌಕದಲ್ಲಿ ಶಿವನನ್ನು ಉಳಿದವುಗಳಲ್ಲಿ ಮಾತೃಕೆಯನ್ನು ಕೊರೆದಿದ್ದಾರೆ. ಬ್ರಾಹ್ಮಿ, ವೈಷ್ಣವಿ, ಮಹೇಶ್ವರಿ, ಕೌಮಾರಿ, ಇಂದ್ರಾಣಿ, ವಾರಾಹಿ, ನರಸಿಂಹಿ ಮತ್ತು ಚಾಮುಂಡಾ ಇವರೇ ಆ ಅಷ್ಟಮಾತೃಕೆಯರು. ಇಂತಹ ಮಾತೃಕೆಯನ್ನೊಳಗೊಂಡ ಭುವನೇಶ್ವರಿ ಮತ್ತೆಲ್ಲಿಯೂ ಕಂಡು ಬಂದಿಲ್ಲ ಎಂಬುದು ಇತಿಹಾಸ ತಜ್ಞರ ಅಭಿಮತ.
ಮನಮೋಹಕ ಕಂಬಗಳು:
ಕಕ್ಷಾಸನ ವ್ಯವಸ್ಥೆ ಹೊಂದಿರುವ ನವರಂಗದಲ್ಲಿ ಸುಂದರ ಕೆತ್ತನೆಯ ಕಂಬಗಳಿವೆ. ನವರಂಗದಲ್ಲಿನ ಮೇಲ್ತೊಲೆಗಳು ಶಾಸನಗಳನ್ನು ಹೊಂದಿವೆ. ನವರಂಗದಲ್ಲಿ ಗಣಪತಿ, ವಿಷ್ಣು, ಉಮಾಮಹೇಶ್ವರ ಮತ್ತು ಯಜ್ಞೋಪವೀತ ಸೂರ್ಯ ದೇವರ ವಿಗ್ರಹಗಳನ್ನು ಕೋಷ್ಠಗಳಲ್ಲಿ ಇಡಲಾಗಿದೆ. ಗರ್ಭಗೃಹದ ಶಿಖರ ದ್ರಾವಿಡ ಶೈಲಿಯಿದ್ದು, ಸುಂದರವಾದ ಚಿಕಣಿ ಕೆತ್ತನೆಯನ್ನು ಹೊಂದಿದೆ. ಗರ್ಭಗೃಹದ ಹೊರಭಿತ್ತಿಯಲ್ಲಿ ಮೂರು ದೇವಕೋಷ್ಠಗಳಿವೆ. ಹೊರಭಿತ್ತಿಯ ಮೇಲಿರುವ ನಾಗ–ನಾಗಿನಿ, ಸೂರ್ಯ, ಮಹಿಷಾಸುರಮರ್ಧಿನಿ, ಶಿವಲಿಂಗವನ್ನು ಪೂಜಿಸುತ್ತಿರುವ ವಿಷ್ಣು ಮತ್ತು ಉಮಾಮಹೇಶ್ವರರ ಶಿಲ್ಪಗಳಿವೆ.
ಹೊರಭಿತ್ತಿಯ ಆಕರ್ಷಣೆ:
ಸುಂದರ ದ್ರಾವಿಡ ಶೈಲಿಯ ಶಿಖರ ಹೊಂದಿರುವ ಗರ್ಭಗೃಹವು ಸುಖನಾಸಿ ಅಥವಾ ಸುಖನಾಸ ಹೊಂದಿದೆ. ಆಲಂಕಾರಿಕವಾದ ಹೊರಭಿತ್ತಿಯು ದೇವಾಲಯದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಲ್ಯಾಣ ಚಾಲುಕ್ಯರ ಕಾಲದ ಸಾಮಾನ್ಯ ಲಕ್ಷಣಗಳನ್ನು ಹೊಂದಿರುವ ಈ ದೇವಾಲಯವು ತಲವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ ಹಾಗೂ ನವರಂಗವನ್ನು ಹೊಂದಿದೆ. ಗರ್ಭಗೃಹದಲ್ಲಿ ಉಗ್ರನರಸಿಂಹನ ಮೂರ್ತಿಯಿದೆ. ಶಾಸನೋಕ್ತ ಇಂದ್ರೇಶ್ವರ ಗುಡಿ ಇದೇ ಆಗಿದ್ದಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಸಿದ್ಧೇಶ್ವರ ದೇವಾಲಯಕ್ಕಿಂತ ಎತ್ತರದ ಅಧಿಷ್ಠಾನ ಹೊಂದಿರುವ ನರಸಿಂಹ ದೇವಾಲಯ ನಿರಾಲಂಕರವಾಗಿದೆ.
ಸಂರಕ್ಷಿತ ಸ್ಮಾರಕ:
ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 1958ರ ಪ್ರಕಾರ ಈ ಸ್ಮಾರಕವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ದೇವಾಲಯವನ್ನು ನಾಶಮಾಡಿದರೆ, ಸ್ಥಳಾಂತರಗೊಳಿಸಿದರೆ, ವಿಕೃತಗೊಳಿಸಿದರೆ ಅಥವಾ ಜಾಗವನ್ನು ದುರುಪಯೋಗಪಡಿಸಿಕೊಂಡರೆ ಅಂಥವರ ವಿರುದ್ಧ ಎರಡು ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಪಡಿಸಬಹುದು ಅಥವಾ ಒಂದು ಲಕ್ಷ ದಂಡ ವಿಧಿಸಬಹುದು ಎಂದು ಭಾರತೀಯ ಪುರಾತತ್ವ ಸರ್ವೆಕ್ಷಣ ಸಂಸ್ಥೆ ಎಚ್ಚರಿಕೆಯ ನಾಮಫಲಕ ಹಾಕಿದೆ.
ದೇವಸ್ಥಾನಕ್ಕೆ ಸುತ್ತಲೂ ಕಾಂಪೌಂಡ್ ಇದ್ದು, ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಾರೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದೇವಾಲಯಕ್ಕೆ ಪ್ರವೇಶ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.