ಹಸಿರು ಹೊತ್ತ ಬೆಟ್ಟಗಳು. ಅದರ ಮಧ್ಯ ಹರಡಿಕೊಂಡ ಆರ್ದ್ರತೆಯ ಬೆವರ ಹನಿ ಜಿನುಗುವ ಅಸ್ಸಾಂನ ಗುವಾಹಟಿ ಶಹರ. ಇಲ್ಲಿನ ಪ್ರತಿಷ್ಠಿತ ಶ್ರೀಮಂತ ಶಂಕರದೇವ ಕಲಾಕ್ಷೇತ್ರವೆಂಬ ಸ್ವಾಯತ್ತ ಸಂಸ್ಥೆಯಿದೆ. ಇದು ಲಲಿತಕಲೆಗಳ ಕೇಂದ್ರ. ಇದರ ಲಲಿತಕಲಾ ವಿಭಾಗದಲ್ಲಿ ಜುಲೈ 5 ಮತ್ತು 6 ರಂದು ಕಲಾಶಿಬಿರ ಜರುಗಿದೆ. ರೂಪವರ್ಣಂ ಫೈನ್ ಆರ್ಟ್ ಸೊಸೈಟಿ ಮತ್ತು ಶ್ರೀಮಂತ ಶಂಕರದೇವ ಕಲಾಕ್ಷೇತ್ರ ಸಂಯುಕ್ತವಾಗಿ ಆಯೋಜಿಸಿದ ಆಲ್ ಇಂಡಿಯಾ ಆರ್ಟಿಸ್ಟ್ ಪೇಂಟಿಂಗ್ ಕ್ಯಾಂಪ್-2024 ರ ‘ಸ್ಟ್ರೋರ್ಕ್ಸ್ ಅಂಡ್ ಹೋಪ್’ ಪರಿಕಲ್ಪನೆಯ ಕಲಾ ಶಿಬಿರ.
ಮಹಾರಾಷ್ಟ್ರದ ಜ್ಞಾನೇಶ್ವರ ಢವಳೆ (ಪುಣೆ), ಅನಂತ ಡೇರೆ (ಪುಣೆ), ಅಫ್ಸರ್ ಅನ್ಸಾರಿ (ಮುಂಬೈ), ಕರ್ನಾಟಕದ ಡಿ.ಎಸ್.ಚೌಗಲೆ (ಬೆಳಗಾವಿ), ತಮಿಳುನಾಡಿನ ಭಾಸ್ಕರ್ ಕಣ್ಣನ್ (ಚೆನ್ನೈ), ರತ್ನಾ ಶರ್ಮಾ (ದಿಲ್ಲಿ), ದಿಕ್ಷಾ ಕೇನ್ (ದಿಲ್ಲಿ), ಮಣಿಪುರದ ಸಾನಾಜಾವುಬಾ ತೇನಸುಬಾ, ಸತ್ಯಬ್ರತ ಹಜಂ, ಗೋಲುಮೈ ಗುಂಡುಂಪು, ಮೇಘಾಲಯದ ಟ್ರಿಬಿಟ್ ಹಜೊಂಗ್ ಸೇರಿ ಉಳಿದಂತೆ ಅಸ್ಸಾಂನ ಹಿರಿಕಿರಿಯ 25 ಕ್ಕೂ ಹೆಚ್ಚು ಕಲಾವಿದರು ಕಲಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಈ ಶಿಬಿರದಲ್ಲಿ ಗಮನಸೆಳೆದ ಕೃತಿಯೆಂದರೆ ಮಣಿಪುರ ಹಿಂಸಾತ್ಮಕ ಘಟನೆಯದ್ದು. ಅದು ಪ್ರಸ್ತುತ ಮಣಿಪುರ ವಿದ್ಯಮಾನಗಳ ಅನುಭವ ನೀಡುವ ಸತ್ಯಬ್ರತ ಹಿಜಂ ಅವರ ‘ಪೇನ್ ಆಫ್ ಮಣಿಪುರ’ ಕೃತಿ. ಈ ಕೃತಿ ಮಣಿಪುರದ ಯಾತನಾಮಯ ಪ್ರಪಂಚವನ್ನು ತೆರೆದಿಡುತ್ತದೆ. ಮೈವಳಿಕೆಯ ಮೇಲೆ ಹಳದಿ ತೆಳು ಕೇಸರಿ ಬಣ್ಣಗಳು, ಗೆರೆಗಳು. ಗಾಢ ಕಪ್ಪು ಮತ್ತು ತೆಳು ವರ್ಣಗಳ ಹೊಡೆತಗಳು. ಅವುಗಳಲ್ಲಿ ಮಿಂದೆದ್ದ ಮಣಿಪುರದ ಮಹಿಳೆಯೊಬ್ಬಳ ವಿಷಾದ ಮೊಗವು ಅಸಂಖ್ಯೆ ಅವಳಂಥವರ ಗಾಥೆಯನ್ನು ಅಭಿವ್ಯಕ್ತಿಸುವ ಕೃತಿಯಾಗಿದೆ. ಅದು ನೋಡುಗನ ಎದೆಯೊಳಗೆ ವಿಷಾದಗಳ ಮಡುವನ್ನು ಸೃಷ್ಟಿಸುತ್ತದೆ. ಅವಳ ಬಲಬದಿಯಲ್ಲಿ ಚಂಗನೆ ಬೆಳಕಿನ ವೇಗದಲ್ಲಿ ಚಿಮ್ಮಿದ ಬುಲೆಟ್ ಹಿಂಸೆಯ ರೂಪಕವಾಗಿದೆ. ಕುಕಿ ಮೈತೇಯಿ ಜನಾಂಗಗಳ ಸಂಘರ್ಷವು ಥಟ್ಟನೆ ಜ್ಞಾಪಕಕ್ಕೆ ಬರುತ್ತದೆ.
ದಾದುಲ್ ಚಾಲಿಹಾ (ಅಸ್ಸಾಂ) ಅವರ ‘ಇಕೋ ಆಫ್ ಮಿಥ್’ ಕೃತಿಯು ಅಂತರಿಕ್ಷದ ಸೂಕ್ಷ್ಮ ಚಲನಗಳತ್ತ ಬೊಟ್ಟು ಮಾಡುತ್ತದೆ. ಆ ವಲಯಗಳ ವಿಸ್ಮಯ ಆಗುಹೋಗುಗಳ ರೂಪಗಳನ್ನು ಬಹು ಸೂಕ್ಷ್ಮವಾಗಿ ದಾದುಲ್ ಬಣ್ಣಿಸಿದ್ದಾರೆ. ಗಾಢ, ತೆಳು ಕಪ್ಪು ಬಿಳಿ ವರ್ಣಗಳೇ ಪ್ರಧಾನವಾದ ಈ ರಚನೆ ಬಹು ಆಯಾಮಗಳ ಅಭಿವ್ಯಕ್ತಿ. ಹಲವು ಮಿಥ್‌ಗಳನ್ನು ಒಡೆದು ಕಟ್ಟುವ ಸೂಕ್ಷ್ಮಜ್ಞತೆಯ ಅಣುವಿನಂತೆ ಮೈವಳಿಕೆಯಲ್ಲಿ ಕಾಣುವ ರೂಪಗಳು ಇವು. ಮೈವಳಿಕೆ ಹಿನ್ನೆಲೆಯಲ್ಲಿ ಅನೇಕ ಉಬ್ಬು ತಗ್ಗಿನ ಕುಂಚದ ಹೊಡೆತಗಳು, ವಿನ್ಯಾಸಗಳು ಅಂತರಿಕ್ಷ ಅನುಭವವನ್ನು ನೀಡುತ್ತವೆ. ಅತುಲಚಂದ್ರ ಬರುವಾ (ಅಸ್ಸಾಂ) ಅವರ ವಿಲಕ್ಷಣ ರಚನೆ ‘ಮಿಸ್ಟರಿಯಸ್ ವರ್ಲ್ಡ್’ ಸ್ಥಾನೀಯ ಆಚರಣೆಗಳ ಪರಂಪರೆಯನ್ನು ಶೈಲಿಕೃತ ರೂಪದಲ್ಲಿ ಅಭಿವ್ಯಕ್ತಿಸಿರುವರು. ನಿಸರ್ಗ ಮತ್ತು ಅದರ ಅಗೋಚರ ಶಕ್ತಿಯ ಬದುಕಿಗೆ ಅದರದ್ದೇ ಆದ ಒಂದು ಅನನ್ಯತೆಯಿದೆ. ಜಲಚರ, ಪ್ರಾಣಿ, ಕಾಡು, ಬೆಟ್ಟಗಳು ಮಾನವ ಕೇಂದ್ರಿತವು. ಆ ಸರ್ವ ಜೀವ ಚೇತನಗಳಲ್ಲೊಂದು ಪರಸ್ಪರ ಆಂತರಿಕ ಸಂಬಂಧವಿದೆ. ಏಕಸಂಧತೆಯಿದೆ. ಆ ಅಂತಃಸಂಬಂಧಗಳನ್ನು ಅಲ್ಲಿಯ ಕಾಮಾಖ್ಯಾ ದೇವಿಯ ತಂತ್ರ ವಿದ್ಯಾ ಫಲವತ್ತತೆಯ ಪ್ರತೀಕವೆನಿಸುವ, ಯೋನಿ ಅರ್ಚನೆಯಂತೆ ಕಾಣುವ ಪುಟ್ಟ ಪುಟ್ಟ ಚಿತ್ತಾರಗಳು ಇವೆ. ಅವು ಮನುಷ್ಯ, ಪ್ರಾಣಿ, ಡ್ರ್ಯಾಗಾನ್, ಆಮೆ ಮತ್ತು ಮೀನುಗಳ ಅಸಂಖ್ಯೆ ಆಕೃತಿಗಳಲ್ಲಿ ಬಿಂಬಗೊಂಡಿವೆ. ಈ ಚಿತ್ರ ಅತ್ಯಂತ ದಟ್ಟವಾಗಿ ಪ್ರಭಾವಿಸುತ್ತದೆ. ಮನದೊಳಗೆ ಆ ಚಿಕ್ಕ ಪುಟ್ಟ ಬಿಂಬಗಳು ಇಂಗುತ್ತವೆ.
ಭಾಸ್ಕರ್ ಕಣ್ಣನ್ (ಚೆನ್ನೈ) ಅವರು ಅಕ್ರಿಲಿಕ್ ಮಾಧ್ಯಮದ ಮೇಲೆ ಗಟ್ಟಿ ಹಿಡಿತವಿರುವವರು. ಕೆಲವೇ ಬಣ್ಣಗಳಲ್ಲಿ ಕ್ಯಾನ್ವಾಸ್‌ನ ಮೈವಳಿಕೆಯ ಮೇಲೆ ನೀರನ್ನು ತೇಲಿ ಬಿಟ್ಟು ನಿಸರ್ಗ ಆತ್ಮವನ್ನು ಕೆಣಕುವ ಛಾತಿವುಳ್ಳ ಕಲಾವಿದರು. ಇಲ್ಲಿ ನಿಸರ್ಗದ ನಿಗೂಢತೆಯ ಕೃತಿಯೊಂದು ಮೈದಳೆದಿದೆ.
ಡಿ.ಎಸ್.ಚೌಗಲೆಯವರ ‘ಐ ಲಾಸ್ಟ್ ಮೈ ಹೋಮ್’ ಕೃತಿಯು ವಿಷಾದಗಳ ನೆಲೆಯಲ್ಲಿ ಬಿಂಬಿತಗೊಂಡಿದೆ. ಮುಚ್ಚಿದ ಬಾಗಿಲು ಒಂದು ರೂಪಕ. ಅನೇಕ ಕತೆಗಳಿಗೆ ಸಾಕ್ಷಿ. ಹಳೆ ಮನೆಯ ಮುಚ್ಚಿದ ಬಾಗಿಲು ಪಿಸುಮಾತುಗಳನ್ನಾಡುತ್ತದೆ. ಹಿರಿಯರಿಲ್ಲದ ಮನೆ ಗುರುವಿಲ್ಲದ ಮಠ–ಇದು ನಿಶ್ಚಲತೆಯ ಪ್ರತಿಮೆ. ಸುತ್ತ ಮೈವಳಿಕೆಯಲ್ಲಿ ಕುಂಚದ ಹೊಡೆತಗಳಲ್ಲಿ ಕಳೆದುಕೊಂಡ ಮನೆಯ ವಿಷಾದದ ನೆರಳಿದೆ. ಬಲದ ಬೆಳಕಿನ ಕಿಂಡಿ ಭರವಸೆಯ ಬೆಳಗು.
ಜ್ಞಾನೇಶ್ವರ ಢವಳೆ (ಪುಣೆ) ಅವರು ನಿಸರ್ಗದ ಸತ್ಯವನ್ನು ಶೋಧಿಸುವ ಶೋಧಕ. ವಿಶೇಷವಾಗಿ ಅಕ್ರಿಲಿಕ್ ಮಾಧ್ಯಮದಲ್ಲಿ ತನ್ನ ಕುಂಚ, ವಿಶಿಷ್ಟ ಹೊಡೆತಗಳಿಂದ ವಿಭಿನ್ನ ರೂಪಗಳನ್ನು ಸೃಜಿಸುವಲ್ಲಿ ಮಾಹೀರ್! ಹೆಸರಾಂತ ಶಿಲ್ಪಕಲಾವಿದ ಅಫ್ಸರ್ ಅನ್ಸಾರಿ (ಮುಂಬೈ) ಅವರ ಸಂಜೆಯ ರವಿಯ ಬಾನಾಟಗಳನ್ನು ಕೆಲವೇ ಬಣ್ಣಗಳಲ್ಲಿ ಸೃಷ್ಟಿಸಿ ತಣ್ಣಗಿನ ಸೊಗವನ್ನು ಸೃಷ್ಟಿಸುವರು. ಅನಂತ ಡೇರೆ (ಪುಣೆ) ಮಹಿಳಾ ಸಂವೇದಿ ಕಲಾವಿದ. ಮಹಿಳೆಯ ಮೊಗವು ಮತ್ತು ಕಣ್ಣುಗಳಲ್ಲಿ ವ್ಯಕ್ತಗೊಳ್ಳುವ ಅಭಿವ್ಯಕ್ತಿಯ ವೈವಿಧ್ಯತೆಯನ್ನು ಕೃತಿಗಳಲ್ಲಿ ತರುವ ಯತ್ನ ಮಾಡಿರುವರು.
ಅನುಪಕುಮಾರ ಶರ್ಮಾ (ಅಸ್ಸಾಂ) ಅವರ ಅಮೂರ್ತ ಶೀರ್ಷಿಕೆ ರಹಿತ ಕೃತಿ ಅದರ ರಚನೆಯ ತಂತ್ರವು ಗಮನ ಸೆಳೆಯುತ್ತದೆ. ಹಿನ್ನೆಲೆಯಲ್ಲಿ ಗ್ರೇ, ಕಪ್ಪು, ಬಿಳಿ ಮತ್ತು ಕೆಂಬಣ್ಣಗಳನ್ನು ಪ್ರಧಾನವಾಗಿ ಬಳಸಿ ತೆಳು ಬಿಳಿ ಗೆರೆಗಳ ಒತ್ತುವಿಕೆಯಲ್ಲಿ ವಿಶಿಷ್ಟ ರೂಪಗಳು ಮನಕ್ಕೆ ವಿಲಕ್ಷಣ ಅನುಭವ ಕೊಡುತ್ತವೆ. ಸಾನಾಜಾವುಬಾ ತೇನಸುಬಾ (ಮಣಿಪುರ) ಅವರ ಅಮೂರ್ತ ನಿಸರ್ಗ ರಚನೆ ಪೂರ್ವದ ಥೈಯ್ಲೆಂಡ್, ಮಾನ್ಮಾರ್‌ಗಳ ಕಲಾವಿದರ ಪರಂಪರೆಯನ್ನು ಜ್ಞಾಪಿಸುತ್ತದೆ. ಸಾನಾ ಅವರ ಗ್ರಹಿಕೆ ಮತ್ತು ಅಭಿವ್ಯಕ್ತಿ ಅಸಾಮಾನ್ಯ. ಸೂಕ್ಷ್ಮ ಚಿತ್ರಿಸುವ ಹೊಡೆತಗಳು ಸಹ ಗಮನಾರ್ಹ.
ರತ್ನಾ ಶರ್ಮಾ (ದಿಲ್ಲಿ) ಅವರ ಚಿತ್ರದಲ್ಲಿ ಮಹಿಳೆಯ ಚಿಂತನೆಗಳನ್ನು ಭಕ್ತಿಯ ಇಮೇಜುಗಳ ಮೂಲಕ ಅಭಿವ್ಯಕ್ತಿಸಿರುವರು. ಗಡಿಯಾರಗಳ ವಿವಿಧ ಸಮಯಗಳ ಕಾಲವನ್ನು ಸೂಚಿಸುವ ಸೂರ್ಯ ಸೈಕಿಯಾ (ಅಸ್ಸಾಂ) ಅವರ ಪ್ರತಿಮಾತ್ಮಕ ಕೃತಿ. ಅಸ್ಸಾಂನ ಕುಕಿಮಾ ಕಾಕತಿ ಮತ್ತು ಪುರಬಿ ಸೈಕಿಯಾ ಅವರ ನಿಸರ್ಗ ಚಿತ್ರಗಳು ಹಿಮಾಲಯ ಬೆಟ್ಟ ತಪ್ಪಲುಗಳ ಚಿತ್ರಕೃತಿಗಳು. ಗೋಲಮೈ ಗಂಡಂಪು( ಮಣಿಪುರ) ಮಹಿಳೆಯರ ನೃತ್ಯಗಳ ಲಯಬದ್ಧ ಮೂರ್ತ ಶೈಲಿ ಚಿತ್ರ ವಿನ್ಯಾಸಗಳು. ಟ್ರಿಬಿಟ್ ಹಾಜೊಂಗ್ (ಮೇಘಾಲಯ) ಪಾರಂಪರಿಕ ಮರದ ವಿನ್ಯಾಸ ಹೊಂದಿದ ಕೃತಿ. ಹಾಗೆಯೆ ಅಸ್ಸಾಂ ರಾಜ್ಯದ ರೂಪಕೃಷ್ಣ ಪತರ, ಮೋಹನ ಭುಯಾನ, ಅಮಲೇಂದು ಕೌಶಿಕ್, ಪಲ್ಲಭಿನಾಥ, ಪರಿಶ್ಮಿತಾ ಬರ್ಮನ್, ಪ್ರೀತುಂಜಿತ್ ಸೆಂಗ್ಯುಂಗ್, ಜ್ಯೋತಿರೇಖಾ ಕಲಿತಾ, ನಾರಾಯಣ ನ್ಯೂಂಗ್- ಈ ಕಲಾವಿದರು ಕಲಾಶಿಬಿರದಲ್ಲಿ ತಮ್ಮದೇ ಶೈಲಿಯ ಅಭಿವ್ಯಕ್ತಿಗಳ ಮೂಲಕ ಕೊಡುಗೆ ನೀಡಿ ಕಲಾಶಿಬಿರ ಯಶಸ್ಸುಗೊಳಲು ಕಾರಣರಾದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.