ADVERTISEMENT

ಸಂಗೀತ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ.. 

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 23:30 IST
Last Updated 15 ಅಕ್ಟೋಬರ್ 2024, 23:30 IST
<div class="paragraphs"><p>ಅರಮನೆ ಎದುರು ಕಳೆದ ದಸರೆಯಲ್ಲಿ ಸರೋದ್‌ ನುಡಿಸಿದ್ದ ರಾಜೀವ ತಾರಾನಾಥ.</p></div>

ಅರಮನೆ ಎದುರು ಕಳೆದ ದಸರೆಯಲ್ಲಿ ಸರೋದ್‌ ನುಡಿಸಿದ್ದ ರಾಜೀವ ತಾರಾನಾಥ.

   

ರಾಜೀವ ತಾರಾನಾಥರು ಓದುವ ಅಭ್ಯಾಸ ಮತ್ತು ಸಂಗೀತದ ಬಳುವಳಿಯನ್ನು ತನ್ನ ಮನೆಯಿಂದಲೇ ಎರವಲು ಪಡೆದವರು. ತಂದೆತಾಯಿಯಿಂದ ಹಲವು ಭಾಷೆ , ಹಲವು ಕಲೆಗಳು ಅವರಿಗೆ ಬಂದಿದ್ದವು. ಆಲೋಚನಾಕ್ರಮ ಕೂಡ ಅವರ ಮಾತಿನಲ್ಲೇ ಹೇಳುವುದಾದರೆ ಔತ್ತಮ್ಯ. ಮನೆಯಲ್ಲಿಯೇ ಹತ್ತಾರು ಜನಸಂಪರ್ಕ ಪಡೆದ ಅವರು ಹಲವು ಭಾಷೆಯಂತೆಯೇ ಹತ್ತಾರು ವಿಚಾರಗಳನ್ನು ಮೈಗೂಡಿಸಿಕೊಂಡರು. ಓದು ಮುಗಿದ ನಂತರ ರಾಜೀವರು ಇಂಗ್ಲೀಷ್ ಭೋಧನೆಗೆ ಹೊರಳಿಕೊಳ್ಳುತ್ತಾರೆ. ಸಿವಿಲ್ ಪರೀಕ್ಷೆ ತೆಗೆದುಕೊಳ್ಳಬೇಕೆನ್ನುವ ಮನೆಯವರ ಮನೋಭಿಲಾಷೆಗೆ ತೆರೆದುಕೊಳ್ಳದೆ, ಭೋಧನೆಗೂ ರಾಜೀನಾಮೆ ಕೊಟ್ಟು ಸಂಗೀತದಲ್ಲಿ ತಮ್ಮನ್ನು  ತೊಡಗಿಸಿಕೊಳ್ಳುತ್ತಾರೆ. 


ಅದುವರೆಗೂ ಸಂಗೀತವನ್ನು ಹಾಡುತ್ತಿದ್ದವರು, ಅವರು ಕೇಳಿದ ಒಂದೇ ಒಂದು ಕಛೇರಿಯ ದೆಸೆಯಿಂದ  ಅವರನ್ನು ಸರೋದ್ ವಾದ್ಯ ಸಂಗೀತಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ. ಪಂಡಿತ ರವಿಶಂಕರ್ ಇವರ ಹಿರಿಯ ಸ್ನೇಹಿತರಾಗಿದ್ದರು. ಅಂದು ಬೆಂಗಳೂರಿನ ಪುರಭವನದಲ್ಲಿ ಗುರು ಆಲಿ ಅಕ್ಬರ್ ಖಾನ್ ಹಾಗೂ ಪಂಡಿತ್ ರವಿಶಂಕರ್ ಅವರ ಕಛೇರಿ. ಇವರು ಸಿತಾರ್ ಅತ್ತುತ್ತಮ ವಾದ್ಯ ಎಂದು ಪರಿಭಾವಿಸಿದ್ದ ಕಾಲವದು. ತಲೆ ತುಂಬ ಕೂದಲು ಚೆಲ್ಲಾಡಿದ ಸುಂದರ ತರುಣ ರವಿಶಂಕರ್ ಅವರ ಪಕ್ಕದಲ್ಲಿ ಕೂದಲು ಉದುರಿದ ತಲೆಯ ಗಂಭೀರ ವದನದ ಆಲಿ ಅಕ್ಬರ್ ಖಾನ್. 

ADVERTISEMENT


ಅವರಿಬ್ಬರ ಜುಗಲ್ಬಂದಿಯ ನಾದದಲ್ಲಿ ಮುಳುಗಿದ ರಾಜೀವರು ಆ ಕ್ಷಣದಲ್ಲಿ ತನ್ನ ಗುರು ಇವರೇ ಎಂದು ತೀರ್ಮಾನಿಸಿದ್ದರು. ಶಿಷ್ಯರೂ ಆದರು. ಕೊನೆಗೆ ಅವರನ್ನು ತಂದೆ ಎಂದೇ ಪರಿಭಾವಿಸುತ್ತಿದ್ದರು. ಹಾಗೂ ಕಷ್ಟಕಾಲದಲ್ಲಿ ಕಾಪಾಡಿದ ಅವರ ಸೋದರಿ ಅನ್ನಪೂರ್ಣದೇವಿಯವರನ್ನು ಅಕ್ಕ ಎಂದು ನೆನೆಯುತ್ತಿದ್ದರು. ಗುರುವಿನ ಸರೋದ್ ನಾದವನ್ನು ಆಲಿಸಿದ ಅವರ ಕಿವಿಗಳು ಮತ್ತೆಂದೂ ಯಾವ ಕರೆಗೂ ಓಗೊಡದೆ ಸರೋದ್ ಹಿಡಿಯುವಂತೆ ಮಾಡುತ್ತದೆ. 


ಅದೇ ಧ್ಯಾನ! ಅವರು ಸರೋದನ್ನು ಕೈಲಿ ಹಿಡಿದಾಗೆಲ್ಲ ಅವರನ್ನು ದುಡಿಯುವಂತೆ ಮಾಡುತ್ತದೆ. ಅವರು ೨೬ ನೇ ವಯಸ್ಸಿನಲ್ಲಿ ಹಿಡಿದ ಆ ವಾದ್ಯ ೫೦ ನೇ ವಯಸ್ಸಿನಲ್ಲಿ ಅವರನ್ನು ಸಂಪೂರ್ಣವಾಗಿ ತನ್ನ ನುಡಿತಕ್ಕೆ ತೊಡಗಿಸಿಕೊಳ್ಳುತ್ತದೆ. ರಾಜೀವರು ಅದಕ್ಕಾಗಿ ಪಡಬಾರದ ಕಷ್ಟಗಳನ್ನೆಲ್ಲ ದಾಟುತ್ತ ಹೋಗುತ್ತಾರೆ. 


ನನಗೆ ರಾಜೀವ ತಾರಾನಾಥರು ಸರೋದ್ ನುಡಿಸುವ ಪರಿಣಿತ ವಾದಕರೆಂದು ಗೊತ್ತಿತ್ತು. ಅವರ ಕಛೇರಿಯನ್ನೂ ಕಂಡಿದ್ದೆ. ಆಜಾನುಬಾಹು ದೇಹಿ. ತಲೆ ತುಂಬಾ ಕೂದಲು. ಒರಟಾದರೂ ತೇಜಸ್ಸಿನ ನೀಟಾದ ಚಹರೆ. ಸರೋದನ್ನು  ದುಡಿಸುವಾಗ ಬಾಗಿದ ಕತ್ತು, ಮುಳುಗುವ ಧ್ಯಾನ, ಈ ನೋಟ ಅವರ ಕಛೇರಿಯಲ್ಲಿ ಕಂಡದ್ದು. 

ಆದರೆ ಅವರ ಪುಸ್ತಕವೊಂದನ್ನೋದುವಾಗ ತಟ್ಟನೆ ಅದರಲ್ಲಿ ಸಿಕ್ಕಿದ ಅವರ ಕೆಲವು ಅಂತರಾಳದ ಮಾತುಗಳು ನನ್ನಲ್ಲಿ ಉಳಿದು ಹೋದವು. ಸಂಗೀತದಲ್ಲಿ ನಮ್ಮದು ಅನ್ನೋದು ಇಲ್ವೆ ಇಲ್ಲ. ಎಲ್ಲ ಬುರುಡೆ. ಅದು ಆಗ್ಲೇ ಇಲ್ಲಿದೆ. ಅದನ್ನು ಗುರುಗಳ ಮುಖೇನ ನಾವು ಕಲಿತು ಮತ್ತೊಬ್ಬರ ಕಿವಿಗೆ ದಾಟಿಸುವುದು ಅಷ್ಟೇ! 


ಕಿವಿಯಲ್ಲಿ ಕೇಳಿದ ಸಂಗೀತ, ಮೆದುಳಿಗೆ ದಾಟಬೇಕು. ಮೆದುಳಿಗೆ ದಾಟಿದ್ದು ಕೈಯ್ಯಲ್ಲಿ ನುಡಿಯಬೇಕು. ಕೈಯ್ಯಲ್ಲಿ ನುಡಿದದ್ದು ಬೆರಳಿಗೆ ತಾಗಿ ಬೆರಳುಗಳೇ ಸಂಗೀತದ ವಿಸ್ತರಣೆಯಾಗಬೇಕು. ಆಗ ನಾದ ಮತ್ತೊಂದು ಜೀವದ ಕಿವಿ ತುಂಬಿ, ಮನ ತುಂಬುವುದು, ರಾಗಗಳು ಒಂದೊಮ್ಮೆ ಉಜ್ವಲ ಕಾಂತಿ ಎನ್ನಿಸುವಂತೆ ಯಾತನೆಯೂ ಆಗಿರುತ್ತವೆ. ಅದು ಮತ್ತೊಬ್ಬರ ಕಿವಿಗೆ ದಾಟಿ ಪೂರ್ಣ ವೃತ್ತ ರಚನೆಯಾಗುತ್ತದೆ. ಇದನ್ನು ಓದಿ ಹುಬ್ಬು ಮೇಲೇರಿದವು. ಹೌದಲ್ಲ! ವಾದ್ಯವೊಂದು ಬೆರಳಿನ ಮಿಡಿತವಾಗಬೇಕಾದ್ದು ಹೀಗಲ್ಲವೇ? ಮನಸ್ಸು ತುಂಬಿ ಬಂತು. ಹೀಗೆ ಹೇಳಿದ ಅವರನ್ನೊಮ್ಮೆ ಮಾತನಾಡಿಸಬೇಕೆನ್ನಿಸಿತು. ಓದು ಮುಂದುವರೆಸಿದೆ. 


ಇಂಥವೇ ಮಾತು ಮತ್ತೊಮ್ಮೆ ಮನ ಕಲಕಿದವು. ರಾಜೀವರು ಅವರ ತಂದೆ ತಾರಾನಾಥರ ಬಗ್ಗೆ ಹಲವು ಮಾತನ್ನಾಡಿದ್ದರು. ತಂದೆ ಬಹಳ ದೊಡ್ಡ ಮನುಷ್ಯರು. ದೊಡ್ಡವರು ಹೇಗಾಗುತ್ತಾರೆ ಅನ್ನಲು ತಾರಾನಾಥರು ಮತ್ತೊಬ್ಬರಿಗೆ ತೋರಿದ ಕಾಳಜಿ ಹಾಗೂ ಪ್ರೀತಿಯ ಮಾತುಗಳಿಂದ. ಪ್ರೇಮಾಯತನ ಅವರ ತಂದೆ ಸ್ಥಾಪಿಸಿದ ಒಂದು ಆಶ್ರಮ. ಅಲ್ಲಿ ತಾರಾನಾಥರು ಹಲವು ಸಾಮಾಜಿಕ ಸುಧಾರಣೆಯ ಕಾರ್ಯಗಳನ್ನು ನಿಭಾಯಿಸುತ್ತಿದ್ದರು. ಒಮ್ಮೆ ಒಂದು ಹೆಣ್ಣಿನ ಭೇಟಿಯಾಗುತ್ತದೆ. ಆಗ, ಆಕೆ ಆತ್ಮಹತ್ಯೆಯೊಂದೇ ಪರಿಹಾರ ಎಂಬ ದುಃಖದಲ್ಲಿರುತ್ತಾಳೆ. ಇವರು ಕಾರಣ ಕೇಳುತ್ತಾರೆ. ಆಕೆ ನಾನು ಮದುವೆಯಾಗದೆ ಗರ್ಭಿಣಿಯಾಗಿರುವೆ. ಗರ್ಭ ತೆಗೆಯಲು ಔಷಧಿ ಕೊಡಿ ಎನ್ನುತ್ತಾಳೆ. ವೈದ್ಯರಾದ ಇವರು ಪ್ರೇಮಾಯತನಲ್ಲಿ ವಾಸ್ತವ್ಯ ಕಲ್ಪಿಸುತ್ತಾರೆ. ಆದರೂ ಚಿಂತೆ ಬಿಡದ ಆಕೆಯೊಡನೆ ಸಮಾಲೋಚಿಸಿದಾಗ ಆಕೆ ತನ್ನ ಚಿಂತೆಯ ಕಾರಣವನ್ನು ತಿಳಿಸುತ್ತಾಳೆ. 


ಅತಂತ್ರ ಬದುಕಿಗೆ ನಿಮ್ಮ ಆಶ್ರಯ ನೆಲೆ ನೀಡಬಲ್ಲುದು. ಆದರೆ ಮಗು ಬೆಳೆದ ಮೇಲೆ ಈ ಮಗುವಿನ ತಂದೆ ಯಾರು ಎಂದು ಕೇಳಿದರೆ ಈ ಸಮಾಜಕ್ಕೆ ಏನೆಂದು ಉತ್ತರ ನೀಡಲಿ? ಎನ್ನುತ್ತಾಳೆ. ಆಗ ಅವರಾಡಿದ ಆ ಮಾತುಗಳು, ಬಹುಶಃ ಗಂಡಸೊಬ್ಬ ಎಂದಿಗೂ ತನ್ನದಲ್ಲದ ಮಗುವಿಗೆ ಹೀಗೆಂದು ಹೇಳಲಾರದ ಮಾತುಗಳು. 'ತಂದೆ ಯಾರು ಎಂದು ಕೇಳಿದಾಗ ಅಂಥ ಸಮಯದಲ್ಲಿ ನನ್ನ ಹೆಸರು ಹೇಳು. ಅದಕ್ಕಾಗಿ ಆ ಮಗುವಿನ ಪ್ರಾಣ ತೆಗೆದುಕೊಳ್ಳುವುದು ಬೇಡ' ಎಂದು ಅವಳ ಚಿಂತೆಯನ್ನು ದೂರ ಮಾಡುತ್ತಾರೆ. ತಾರಾನಾಥರ ಆ ಮಾತುಗಳು ನನ್ನ ಮನದಲ್ಲಿ ಇಂದಿಗೂ ಮನೆ ಮಾಡಿವೆ. 


ಇದೇ ನೆನಪಿನಲ್ಲಿ ಅವರ ಮನೆಗೆ ಹೋದೆ. ಪರಿಚಯವೂ ಆಯ್ತು. ಆಗ ತಮ್ಮ ಬಗ್ಗೆ ಒಂದು ಡಾಕ್ಯುಮೆಂಟರಿ  ಮಾಡಬೇಕು ಎಂದು ಕೇಳಿಕೊಂಡೆ. ಅದಾಗಲೇ, ಕ್ರುಷಿ ಪರಿಣಿತರಾದ ನಾರಾಯಣರೆಡ್ಡಿಯವರ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಿದ ಅನುಭವ ಇತ್ತು. ಅದಕ್ಕೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತ್ತು. ಆದರೆ ಅದನ್ನು ಅವರ ಮುಂದೆ ಹೇಳಲಿಲ್ಲ. ಎವರೆಸ್ಟಿನ ಮುಂದೆ ಒಂದು ಮಣ್ಣುಗುಡ್ಡೆ ಮಾತಾಡಲಾಗುವುದೇ? ಅವರು ಒಪ್ಪಿಗೆ ಕೊಟ್ಟರು. ಬರುವಾಗ ನಾನು ಹಿರಿತನದ ಅವರ ಎರಡು ಹಸ್ತ ಹಿಡಿದು ಹಣೆ ತಾಗಿಸಿದೆ. ಡಾಕ್ಯುಮೆಂಟರಿಯ ನೆವದಲ್ಲಿ ಹತ್ತಾರು ಬಾರಿ ಅವರ ಭೇಟಿ, ಮಾತುಕತೆ, ಅವರ ಮೂಡ್ ಇದ್ದ ಹಾಗೆ ಅವರ ಮಾತುಗಳು ಎಲ್ಲವೂ ದಕ್ಕಿದವು. 


ಆ ಒಂದೆರಡು ವರುಷ ಅವರಿಗೆ ಆರೋಗ್ಯ ತೊಂದರೆ ಕೊಡುತಿತ್ತು. ಆದರೂ ಅವರ ಗುರು ಆಲಿ ಅಕ್ಬರ ಖಾನರ, ಅನ್ನಪೂರ್ಣದೇವಿಯವರ ಅಂತಃಕರಣವನ್ನು ನೆನೆದಾಗೆಲ್ಲ ಅವರ ಸುಖದಲ್ಲಿ ನಾವೂ ಪಾಲುದಾರರಾಗುತ್ತಿದ್ದೆವು. ನಮ್ಮ ಬಳಿ ಗುರುಪರಂಪರೆಯ ಎಷ್ಟೊಂದು ಹೊಳವನ್ನು ಕೊಡುತ್ತಿದ್ದರು. 'ನನ್ನ ಗುರು ನನ್ನ ಬೆರಳಲ್ಲಿ ನುಡಿಸುತ್ತಾರೆ. ಅವರನ್ನು ನೆನೆದು ಕಣ್ಮುಚ್ಚಿದರೆ, ಗಾಳಿಯಲ್ಲಿರುವ ಎಲ್ಲಾ ರಾಗದ ತಂತುಗಳು, ನನ್ನ ಬೆರಳುಗಳ ಮೂಲಕ ಸರೋದಿಗೆ ಹರಿಯುತ್ತವೆ' ಹೀಗೆ.  


ಭಾರತದ, ಹೊರದೇಶದ ಶಿಷ್ಯವೃಂದದ ಜೊತೆಗಿನ ಅವರ ಆತ್ಮೀಯತೆಯನ್ನು ಕಂಡಾಗ ಅವರ ಮುಖ ಹೊಳೆಯುತ್ತಿರುತ್ತಿತ್ತು. ನಾವು ತೆಗೆದುಕೊಂಡು ಹೋದ ಸುಟ್ಟ ಒಣಹಣ್ಣುಗಳ ರುಚಿ ನೋಡುತ್ತ ಇವೆಲ್ಲಿ ಸಿಗುತ್ತವೆ? ಎಂದು ಕೇಳಿ ಆನಂದದಿಂದ ತಿನ್ನುತ್ತಿದ್ದರು. ಆಗ ನಮಗೂ ಖುಷಿ ಆಗುತಿತ್ತು. ಆಗಾಗ ಅವರ ಮನೆಯ ಕೈರುಚಿ ನೋಡುವಾಗ, ಅವರ ಅನುಭವದ ಹಲವು ಮಾಹಿತಿಗಳು ದಕ್ಕುತ್ತಿದ್ದವು. ಆ ಸಿಹಿ ಎಲ್ಲಿ ಸಿಗುತ್ತದೆ? ಯಾವ ಹೋಟೆಲ್ಲಿನ ಚಿಕನ್ ರುಚಿಯಾಗಿರುತ್ತದೆ. ಹೀಗೆ. 

ಹಾಗೆಯೇ ಭಾರತದಲ್ಲಿ ಉಳಿದಿರುವುದು ಎರಡೇ.... ಒಂದು ಸಂಗೀತ ವೈವಿಧ್ಯ. ಮತ್ತೊಂದು ಅಡುಗೆಯ ವೈವಿಧ್ಯ. ಇಷ್ಟೊಂದು ವೈವಿಧ್ಯ ಭಾರತದಲ್ಲಿ ಇರುವುದು ಇವೆರಡರಲ್ಲಿ ಮಾತ್ರ. ಇದೆರಡನ್ನು ಬಿಟ್ಟು ಇನ್ನೆಲ್ಲವೂ ಕಲಬೆರಕೆಯಾಗಿದೆ. ಸಾಹಿತ್ಯ ಕೂಡ, ಎಂದು ತಮ್ಮ ಸ್ನೇಹಿತರ ಕ್ರುತಿಚೌರ್ಯವನ್ನು ಬಿಚ್ಚಿಡುತ್ತಿದ್ದರು. ಎಲ್ಲವನ್ನೂ ಎಲ್ಲರನ್ನೂ ನೇರವಾಗಿ ಠೀಕಿಸುತ್ತಿದ್ದರು. ಮುಸ್ಲಿಮರ, ಹೆಂಗಸರು ಹಾಗೂ ಕೆಳವರ್ಗದವರ ಶೋಷಣೆಯ ಬಗ್ಗೆ ಸಿಡಿಯುತ್ತಿದ್ದರು. 

ಆ ಮಾತುಗಳು, ಅವರ ಅಪಾರ ಓದು, ಹಾಗೂ ಬೆಳೆದ ಪರಿಸರ ಅವರಿಗೆ ಅದನ್ನು ಕಲಿಸಿತ್ತು ಎಂದು ನನ್ನ ಭಾವನೆ. ಸ್ವತಂತ್ರ್ಯ ಪೂರ್ವ ದಿನಗಳಲ್ಲಿ ಅಪ್ಪ ಅಮ್ಮ ಇಬ್ಬರದು ಅಂತರ್ಜಾತೀಯ ಮದುವೆ, ದಾಂಪತ್ಯವನ್ನು ಕಂಡವರು. ತಂದೆ ಕೊಂಕಣಿ, ತಾಯಿ ತಮಿಳುನಾಡಿನ ಬೆಸ್ತರು. ೧೯೨೦ರಲ್ಲೇ ಇಂಗ್ಲೀಷ್‌ನಲ್ಲಿ ಹೆಣ್ಣಿನ ಪರವಾಗಿ ಖಡಕ್ಕಾಗಿ ಬರೆಯಬಲ್ಲ ತಾಯಿ ಸುಮತೀಬಾಯಿಯವರ ಬಗ್ಗೆ ಅವರ ಮಗ ರಾಜೀವರಿಗೆ ಹೆಮ್ಮೆಯಿತ್ತು. 

ತಂದೆತಾಯಿ ಇಬ್ಬರೂ ಹಲವು ಭಾಷೆಯನ್ನು ದುಡಿಸಿಕೊಂಡವರು. ವಿದ್ಯಾವಂತರು. ಹಲವು ಸಮಾಜದ ಅಂಕುಡೊಂಕುಗಳನ್ನು ಎಚ್ಚರಿಸುವ ಕ್ರಾಂತಿಕಾರಿ ನಡವಳಿಕೆ ಹಾಗೂ ಲೇಖನಗಳೊಂದಿಗೆ ಪತ್ರಿಕೋದ್ಯಮ, ವೈದ್ಯಕೀಯ, ನಾಟಕ, ಸಂಗೀತ, ಆಶ್ರಮ, ಸ್ಕೂಲು, ಸೇವಾ ಮನೋಭಾವನೆ ಹೀಗೆ ಹತ್ತಾರು ಜನರೊಂದಿಗೆ ಬೆರೆತು ಹೋದವರು. ರಾಜೀವರು ದ್ರಾವಿಡ ಸಂಸ್ಕೃತಿಯನ್ನು ಗೌರವಿಸುತ್ತಿದ್ದರು. 

ಇಂಥ ಜನಬಳಕೆಯು ರಾಜೀವರಿಗೆ ಸಮಾಜದ ಹತ್ತಾರು ಒಳಿತು, ಕೆಡಕಿನ ಮುಖಗಳನ್ನು ತೆರೆಸಿತ್ತು. ಅವರ ಆತ್ಮೀಯರೊಬ್ಬರು ಅಂದಿನ ಅವರ ಸ್ನೇಹಮಯದ ದಿನಗಳನ್ನು ತುಂಬು ಮನಸ್ಸಿನಿಂದ ಅವರ ಮುಂದೆಯೇ ನೆನೆದದ್ದು ಹೀಗೆ: ರಾಜೀವರು ತಿರುಚ್ಚಿಯಿಂದ ಬೆಂಗಳೂರಿಗೆ ಬರುತ್ತಿದ್ದರು. ನನ್ನ ಪುಟ್ಟ ಮನೆಗೆ ಆಗಾಗ ಭೇಟಿಕೊಟ್ಟು ಅತ್ಯಂತ ಆತ್ಮೀಯವಾಗಿ ಒಂಟಿ ಹೆಣ್ಣಾಗಿದ್ದ ನನ್ನ ಸಂಕಷ್ಟಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಆಗ ನೋವಿನಿಂದ ನನ್ನ ಬಗ್ಗೆ ಹೇಳಿಕೊಂಡರೆ, ಸಮಾಜದ ವಾರೆನೋಟಗಳನ್ನು, ಆಗ ಇದ್ದ ಕಟ್ಟುಪಾಡಿನ ಕುಹಕಗಳನ್ನು ಬಿಚ್ಚಿಟ್ಟರೆ ಅವರು ಹೇಳುತ್ತಿದ್ದ ಮಾತುಗಳು ನನ್ನ ತಲ್ಲಣವನ್ನು ಶಾಂತವಾಗಿಡುತ್ತಿದ್ದವು. 

'ನೀನು ಧೈರ್ಯವಂತೆ. ಬೇರೆಯವರ ಬಗ್ಗೆ ಯೋಚಿಸುವುದನ್ನು ಬಿಟ್ಟರೆ ನೀನು ನೀನಾಗಿ ಉಳಿಯುತ್ತೀಯಾ. ಮುಂಜಾನೆ ಕಣ್ಮುಚ್ಚಿ  ಧ್ಯಾನಿಸು. ಎಲ್ಲರನ್ನೂ ಎಲ್ಲವನ್ನೂ ಮರೆತುಬಿಡು. ಮನದಾಳಕ್ಕಿಳಿ, ಕಣ್ಮುಚ್ಚು, ಇದರಿಂದಾಚೆಗಿನ ಹಕ್ಕಿಗಳ ಇಂಚರ ಕಿವಿ ತುಂಬುತ್ತದೆ. ಗಾಳಿಯ ಸ್ಪರ್ಶವೂ ತಿಳಿಯುತ್ತದೆ. ಪರಿಶುದ್ಧ ಜಗತ್ತು ನಿನ್ನದಾಗುತ್ತದೆ.' ನನ್ನ ಸಣ್ಣ ಸೂರಿನ ಮನೆಯಲ್ಲಿ ಅಷ್ಟೆತ್ತರದ ರಾಜೀವರು ನಮ್ಮ ಸ್ನೇಹದ ಘನತೆಯನ್ನು ಉಳಿಸಿದ್ದು ಹೀಗೆ. ಕಡುಕಷ್ಟ ಕಾಲದಲ್ಲಿ ಇಂಥ ಮಾತುಗಳಿಂದ ಕೆಲಸಗಳು ಎಷ್ಟು ಲಗುಬಗೆಯಲ್ಲಿ ಸಾಗುತ್ತಿದ್ದವು. ಇಂಥ ಸ್ನೇಹವನ್ನು ನೆನೆದರೆ ಮನಸ್ಸು ತುಂಬಿ ಬರುತ್ತದೆ. 

ಇಂಥದ್ದೇ ಘನತೆಯನ್ನು ಅವರು ತಮ್ಮ ಹೆಂಡತಿಯ ವಿಚಾರದಲ್ಲೂ ಸಹ ಅವರು ಉಳಿಸಿದ್ದು ಹೀಗೆಯೇ... ಇವರ ಮದುವೆ ಮಾಧವಿ ಎಂಬುವರ ಜೊತೆ ಸರಳವಾಗಿ ಯಾವುದೇ ತೋರ್ಗಾಣಿಕೆಯಿಲ್ಲದೆ ಆಗುತ್ತದೆ. ಮಗ ಹುಟ್ಟುತ್ತಾನೆ. ಆ ನಂತರದ ಸಮಯದಲ್ಲಿ, ಹೆಂಡತಿ ಇವರು ಬೇರೆಯಾಗುವ ಸನ್ನಿವೇಶ ಎಡತಾಕುತ್ತದೆ. ಅಂದಿನ ಕಾಲಕ್ಕೆ ವಿಚ್ಛೇದನ ಎಂಬುದು ಸುಲಭದ್ದಾಗಿರಲಿಲ್ಲ. ಈ ಬಿಕ್ಕಟ್ಟನ್ನು ಸುಧಾರಿಸಲೆಂದೇ ಅವರು ತಮ್ಮ ಮೇಲೆ ತಪ್ಪನ್ನು ಹೊರಿಸಿಕೊಂಡು ವಿಚ್ಛೇದನಕ್ಕೆ ಅರ್ಜಿ  ಬರೆದು ಕೊಡುತ್ತಾರೆ. ಇಬ್ಬರೂ ಬೇರೆಯಾಗುತ್ತಾರೆ. 

ಆದರೆ, ಕೆಲಕಾಲದ ನಂತರ ಯಾಕೋ ಏನೋ ಎಲ್ಲೂ ನೆಲೆಯಾಗದ ಮಾಧವಿ ಇವರ ಮನೆಯಲ್ಲೆ ಬಂದು ಕೆಲಕಾಲ ಇರಬಹುದೇ ಎಂದು ಕೇಳುತ್ತಾರೆ. ಇವರೂ ಒಪ್ಪುತ್ತಾರೆ. ಆಗ ರಾಜೀವರು ಇನಿತಾದರೂ ಅವರಿಗೆ ಇರುಸು ಮುರುಸು ಆಗದಂತೆ ನಡೆದುಕೊಳ್ಳುತ್ತಾರೆ. ಆ ನಂತರ ಸಮಾಜದಲ್ಲಿ ತೋರುಗಾಣಿಕೆಯಾಗಿ ನಿಮ್ಮ ಹೆಸರನ್ನು ಸೇರಿಸಿಕೊಳ್ಳಲೇ? ಎಂದು ಮಾಧವಿಯವರು ಕೇಳುತ್ತಾರೆ. ಇವರೂ ಒಪ್ಪುತ್ತಾರೆ. ಮಾಧವಿಯವರು ತಮ್ಮ ಹೆಸರಿನ ಮುಂದೆ ರಾಜೀವರ ಹೆಸರನ್ನು ಇಟ್ಟುಕೊಂಡು ಮುಂದೆ ಸಾಗುತ್ತಾರೆ. 

ಇಂಥ ಕಡುಎಚ್ಚರದ, ಕಠಿಣ ಮನುಷ್ಯ, ಎಂಥ ಮಾನವೀಯ ಗುಣವನ್ನು ಹೊಂದಿದ್ದರು ಎಂಬುದಕ್ಕೆ ಇವೆಲ್ಲ ಉದಾಹರಣೆ. ಅವರೇ ಹೇಳಿಕೊಳ್ಳುವ ಹಾಗೆ, ಸಣ್ಣದರಲ್ಲಿ ತಲೆ ದಪ್ಪ ಇದ್ದುದರಿಂದ ಹೆಚ್ಚುಹೆಚ್ಚು ಮುಗ್ಗರಿಸಿ ಬೀಳುತ್ತಿದ್ದರು. ಅವರು ಮಕ್ಕಳೊಂದಿಗೆ ಆಟವಾಡಿದ್ದಕ್ಕಿಂತ ಅಪ್ಪನನ್ನು ಯಾವಾಗಲೂ ಅಂಟಿಕೊಂಡೇ ಇರುತ್ತಿದ್ದರು. ಥೇಟ್ ಹಾಗೆ! ಕಡೆಗಾಲದಲ್ಲಿ ಗಳಿಗೆಗೊಮ್ಮೆ, 'ಪಾಪಾ' ಎಂದು ಕೂಗುತ್ತ, ತಾವೇ ತಿದ್ದಿತೀಡಿ ರೂಪಿಸಿದ ಕೃಷ್ಣಾ ಮನವಳ್ಳಿ ಎಂಬ ಮಗಳನ್ನು ತಾಯಿಯನ್ನು ಕರೆಯುವ ಮಗುವಿನಂತೆ ಕರೆಯುತ್ತಲೇ ಇರುತ್ತಿದ್ದರು. 

ಕೃಷ್ಣಾ ಕೂಡ ಕ್ಷಣವೂ ಬೇಸರಿಸದೆ ಓಗೊಡುತ್ತಿದ್ದರು. ಯಾವ ಜನ್ಮದ ಋಣವೋ ಅವರನ್ನು ಕಡೆತನಕ ಸಂಬಂಧ, ನಂಬಿಕೆಗಳು ಕಾಪಿಟ್ಟವು ಎಂದರೆ ತಪ್ಪಾಗಲಾರದು. ಅವರ ಮನೆಯಲ್ಲಿ ಕಂಡ ಮಕ್ಕಳಂತ ನಾಯಿಯ ಒಡನಾಟ, ಆತ್ಮೀಯರ ಮಾತುಕತೆ, ಕಿವಿಗೊಟ್ಟು ಕೇಳಿದ ಬೆಳಗಿನ ಜಾವದ ರಿಯಾಜ್ ಎಲ್ಲವೂ ನಮ್ಮ ಕಣ್ಣ ಮುಂದಿದೆ. 

ಅವರ ಪ್ರಕಾರ ವಾದ್ಯಸಂಗೀತವನ್ನು ದಣಿದು, ದುಡಿಸಿಕೊಳ್ಳಬೇಕು. ಗುರು ಆಗ ಬಂದು ಬೇಕಾದ್ದನ್ನು ಇವರ ಬೆರಳಿಗೆ ಹರಿಸುತ್ತಾರೆ. ಇದಕ್ಕೆ ದುಡಿಮೆಯೊಂದೇ ಮಾರ್ಗ. ಗುರುವಿನ ಅಕ್ಕರೆ, ಧ್ಯಾನ ಇವರ ಬೆರಳುಗಳಿಗೆ ಇಂಬುಕೊಡುತ್ತವೆ. ಗುರು ಗಾಳಿಯಲ್ಲಿ ಲೀನವಾಗಿರುತ್ತಾನೆ. ಇವರು ದಿನನಿತ್ಯ ದುಡಿಮೆ ಮಾಡಿ ಅದನ್ನು ಒಲಿಸಿಕೊಳ್ಳದೇ ವಿಧಿಯಿಲ್ಲ. ಬೇಸಾಯ ಮಾಡುವವರು ಉತ್ತಿದ್ದನ್ನೇ ಮತ್ತೆ ಮತ್ತೆ ಉತ್ತು ಬಿತ್ತುವಂತೆ ತಮ್ಮ ವಾದ್ಯವನ್ನು ದಣಿಸಿ ಮೀಟಿದಾಗ ಗುರು ಬೇಕಾದ್ದ ಫಸಲನ್ನು ನೀಡುತ್ತಾನೆ. 

ಇಂಥ ಗುರುಶಿಷ್ಯ ಪರಂಪರೆಯ ಒಂದು ಕೊಂಡಿ ಅರ್ಥಪೂರ್ಣವಾದ ೯೨ ವರುಷದ ತುಂಬು ಬಾಳು ಮುಗಿಸಿ ತನ್ನ ಗುರುವಿನೆಡೆಗೆ ನಡೆದಿದೆ. ಅವರ 'ರಾಜೀವ್ ತಾರಾನಾಥ್ - ನೆನಪು' ಎಂಬ ನಮ್ಮದೊಂದು ಡಾಕ್ಯುಮೆಂಟರಿಯಲ್ಲಿ ಇದನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ. ಇದು ಮೈಸೂರು ರಂಗಾಯಣದ ಸಹಯೋಗದಲ್ಲಿ ಭೂಮಿಗೀತದಲ್ಲಿ ಬಿಡುಗಡೆಯಾಯಿತು. ಅಂದು ತುಂಬು ಮುಗಳ್ನಗೆಯಲ್ಲಿ ಅವರ ಬಗ್ಗೆ ಮಾತನ್ನಾಡುತ್ತಿದ್ದ ಸ್ನೇಹಿತರನ್ನು,  ನಮ್ಮನ್ನು, ಸಡಗರದಿಂದ ಓಡಾಡುತ್ತಿದ್ದ ರಂಗಾಯಣದ ಸ್ನೇಹಿತರನ್ನು, ಅವರಿಗಾಗಿ ಸರೋದ್ ನುಡಿಸುತ್ತಿದ್ದ ಅವರ ಶಿಷ್ಯ ಸೌಗತ್ ರಾಯ್ ರನ್ನು ತುಂಬು ಅಭಿಮಾನದಿಂದ ನೋಡುತ್ತಿದ್ದ ಆ ಕಣ್ಣುಗಳು ನಮ್ಮಲ್ಲಿ ಉಳಿದುಹೋಗಿವೆ. ಕೊನೆಗೆ ದೊಡ್ಡ ನಗೆಯೊಂದಿಗೆ ಕೈಬೀಸಿ ಕಾರು ಹತ್ತಿದ ಕ್ಷಣ ಮರುಕಳಿಸುತ್ತಿರುತ್ತದೆ.  

ಹೋದ ವರುಷ ಅವರ ಜನ್ಮ ದಿನಾಚರಣೆಗೆ ಬೆಂಗಳೂರಿನ ಕಲಾಕ್ಷೇತ್ರಕ್ಕೆ ಬಂದವರು ನಾಕು ತೂಕದ ಮಾತನ್ನಾಡಿ ಸರೋದ್‌ನನ್ನು ಅಷ್ಟೇ ಪ್ರಮಾಣದಲ್ಲಿ ನುಡಿಸಿ, ತೆರೆಯ ಹಿಂದೆ ಹೋದಾಗ, ನಾವು ಅವರನ್ನು ಮಾತನ್ನಾಡಿಸಲು ಹೋದೆವು. ಸ್ನೇಹಿತರು, ಪರಿಚಯದವರೊಂದಿಗೆ ವೀಲ್ ಚೇರಿನಲ್ಲಿ ಕೂತಿದ್ದವರ ಕೈಗಳನ್ನು ಹಿಡಿದು ತಲೆ ಬಾಗಿ ನಮಸ್ಕರಿಸಿದೆ. ತುಂಬು ನಗೆಯೊಂದಿಗೆ ತಲೆ ಸವರಿ ನಕ್ಕರು. ಮತ್ತೊಬ್ಬರಿಗೆ ಬಿಡುವು ಮಾಡಿಕೊಟ್ಟು ಮನೆಗೆ ಹೊರಟು ಬಂದೆವು. 

ಆ ನಂತರ ನನ್ನ ಪುಸ್ತಕ ಕೊಡಲು ಅವರ ಮೈಸೂರಿನ ಮನೆಗೆ ಹೋಗಿದ್ದೆ. ಪುಸ್ತಕ ಓದಿ 'ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದೀರಿ' ಎಂದು ಫೋನ್ನಲ್ಲಿ ಹೇಳಿದ್ದು ಕೊನೆಯ ಮಾತು. 

ಇದೇ ತಿಂಗಳು ಅಕ್ಟೊಬರ್ ೧೭ ಅವರು ಇಲ್ಲವಾದ ಮೆಲೆ ಮೊದಲನೇ ಜನ್ಮ ದಿನಾಚರಣೆ. ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಸಂಜೆ ನಡೆಯಲಿದೆ. ಪಂಡಿತ್ ವೆಂಕಟೇಶ್ ಕುಮಾರ್ ಇವರ ನೆನಪಿಗಾಗಿ ಹಿಂದುಸ್ಥಾನಿ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ. ಮರೆಯಾದ ಒಬ್ಬ ನುರಿತ ಕಲಾವಿದರಿಗಾಗಿ ಮತ್ತೊಬ್ಬ ಮೇರು ಗಾಯಕರು ಹಾಡುತ್ತಿರುವುದು ಮನ್ನಣೆಯ ವಿಚಾರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.