ADVERTISEMENT

ಯಕ್ಷಗಾನ, ಜೊತೆಗೆ ಗುರುವಂದನೆಯೂ ಆನ್‌ಲೈನ್!

ಬೆಂಗಳೂರಿನ ಟೀಂ ಉತ್ಸಾಹಿ ತಂಡದಿಂದ ಆನ್‌ಲೈನ್ ಯಕ್ಷಗಾನ ಸರಣಿ

ಅವಿನಾಶ್ ಬಿ.
Published 6 ಅಕ್ಟೋಬರ್ 2020, 11:36 IST
Last Updated 6 ಅಕ್ಟೋಬರ್ 2020, 11:36 IST
ಗದಾಯುದ್ಧ ಯಕ್ಷಗಾನ ಪ್ರದರ್ಶನದಲ್ಲಿ ಕೌರವನಾಗಿ ನಾಗಶ್ರೀ ಜಿ.ಎಸ್., ಕೃಷ್ಣನಾಗಿ ನಿಹಾರಿಕಾ ಭಟ್
ಗದಾಯುದ್ಧ ಯಕ್ಷಗಾನ ಪ್ರದರ್ಶನದಲ್ಲಿ ಕೌರವನಾಗಿ ನಾಗಶ್ರೀ ಜಿ.ಎಸ್., ಕೃಷ್ಣನಾಗಿ ನಿಹಾರಿಕಾ ಭಟ್   
"ಟೀಂ ಉತ್ಸಾಹಿ ತಂಡದಿಂದ ಹೇರಂಜಾಲು ಗೋಪಾಲ ಗಾಣಿಗರಿಗೆ ಗೌರವಾರ್ಪಣೆ"
"ಕೌರವನಾಗಿ ನಾಗಶ್ರೀ ಜಿ.ಎಸ್. ಹಾಗೂ ಭೀಮನಾಗಿ ಮಂಜು ಹವ್ಯಕ"

ಯಕ್ಷಗಾನವೆಂದರೆ ಮನಸ್ಸು ಹುಚ್ಚೆದ್ದು ಕುಣಿಯುವ ಯಕ್ಷಗಾನ ಪ್ರೇಮಿಗಳಿಗೆ ಕೋವಿಡ್ ದಿನಗಳು ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಆದರೂ, ಸುಮ್ಮನಿರಲಾರದೆ ರೆಕಾರ್ಡೆಡ್ ಹಾಡುಗಳಿಗೆ ಇದ್ದಲ್ಲಿಂದಲೇ ಹೆಜ್ಜೆ ಹಾಕಿದ ವಿಡಿಯೊಗಳು, ಬಳಿಕ ಸಾಲು ಸಾಲು ಯಕ್ಷಗಾನ ಕಾರ್ಯಕ್ರಮಗಳು ಆನ್‌ಲೈನ್‌ನಲ್ಲೇ 'ಲೈವ್' ಪ್ರದರ್ಶನ ಕಂಡವು. ಹೀಗೆ, ಕೋವಿಡ್‌ನಿಂದಾಗಿ ವೃತ್ತಿ ಮೇಳಗಳು ತಿರುಗಾಟ ನಿಲ್ಲಿಸಬೇಕಾಗಿ ಬಂದರೂ, ಆನ್‌ಲೈನ್ ಪ್ರೇಕ್ಷಕರಿಗೆ ಆಟ-ಕೂಟಗಳ ರಸದೌತಣವಾಗಿದ್ದು ಸುಳ್ಳಲ್ಲ.

ಪ್ರಜಾವಾಣಿಯ ಲೈವ್ ಮೂಲಕ ತನ್ನ ಯಕ್ಷಗಾನ ಆನ್‌ಲೈನ್ ಅಭಿಯಾನವನ್ನು ಆರಂಭಿಸಿದ್ದಬೆಂಗಳೂರಿನ 'ಟೀಂ ಉತ್ಸಾಹಿ', ಕೋವಿಡ್ ನಿರ್ಬಂಧದ ನಡುವೆ ಆನ್‌ಲೈನ್ ಪ್ರೇಕ್ಷಕರೆದುರುಗುರುಗಳನ್ನೂಗೌರವಿಸುವ ಮೂಲಕ ಯಕ್ಷಗಾನದ ಬಗೆಗಿನ ತನ್ನ ಗೌರವವನ್ನು ಪ್ರಚುರಪಡಿಸಿದೆ.ಬಡಗು ತಿಟ್ಟಿನಲ್ಲಿನೇರ ಪ್ರಸಾರಕ್ಕಾಗಿಯೇ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದ ಮೊದಲ ತಂಡವೆಂಬ ಹೆಗ್ಗಳಿಕೆ ಬೆಂಗಳೂರಿನ 'ಟೀಂ ಉತ್ಸಾಹಿ'ಯದು. ನೇರ ಪ್ರೇಕ್ಷಕರಿಲ್ಲದಿದ್ದರೂ, ಆನ್‌ಲೈನ್ ಪ್ರೇಕ್ಷಕರೆದುರುಈ ಸನ್ಮಾನ ಕಾರ್ಯಕ್ರಮವನ್ನೂ ಏರ್ಪಡಿಸಿ ಅದನ್ನುಪ್ರಸಾರ ಮಾಡಿದೆ.

ನಟಿ, ಯಕ್ಷಗಾನ ಕಲಾವಿದೆ, ಪ್ರಜಾವಾಣಿ ಯುವ ಸಾಧಕರು-2020 ಗೌರವ ಪುರಸ್ಕೃತೆ ನಾಗಶ್ರೀ ಜಿ.ಎಸ್. ನೇತೃತ್ವದ ಟೀಂ ಉತ್ಸಾಹಿ ತಂಡದ ಸದಸ್ಯರೆಲ್ಲ ಸೇರಿಕೊಂಡು ಯಕ್ಷ ಗುರುಗಳಾದ ಹೇರಂಜಾಲು ಗೋಪಾಲ ಗಾಣಿಗ ಅವರನ್ನು ಬೆಂಗಳೂರಿನಲ್ಲಿ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಿದ್ದಾರೆ. ಬೆಂಗಳೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಬಿಜೂರು ಅಧ್ಯಕ್ಷತೆ ವಹಿಸಿದ್ದು, ಉದ್ಯಮಿಗಳಾದ ರಾಘವೇಂದ್ರ ಹತ್ವಾರ್, ರಮೇಶ್ ಶೆಟ್ಟಿ, ಯು.ವಿ.ಚಂದ್ರಶೇಖರ್, ರಾಘವೇಂದ್ರ ರಾವ್, ಪಿ.ವಿ.ಕೃಷ್ಣ ಭಟ್, ಮದ್ದಲೆಗಾರ ಎ.ಪಿ.ಪಾಠಕ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಬಳಿಕ ಊರುಭಂಗ (ಗದಾಯುದ್ಧ) ಎಂಬ ಯಕ್ಷಗಾನ ಪ್ರದರ್ಶನವೂ ಆನ್‌ಲೈನ್ ಪ್ರೇಕ್ಷಕರನ್ನು ರಂಜಿಸಿತು.

ADVERTISEMENT

ಗೋಪಾಲ ಗಾಣಿಗರದು ಗುರು ಪರಂಪರೆ. 1968ರಲ್ಲಿ ಬ್ರಹ್ಮಾವರದಲ್ಲಿ ಡಾ.ಶಿವರಾಮ ಕಾರಂತರು ಯಕ್ಷಗಾನ ಕೇಂದ್ರ ಸ್ಥಾಪಿಸಿದಾಗ ಅದರಲ್ಲಿ ನಾಟ್ಯಕ್ಕೆ ಗೋಪಾಲ ಗಾಣಿಗರ ತಂದೆ ವೆಂಕಟ್ರಮಣ ಗಾಣಿಗರು ಗುರುವಾಗಿದ್ದರು. ಗೋಪಾಲ ಗಾಣಿಗರೂ ಇದೇ ಕೇಂದ್ರದಲ್ಲಿ ಕಲಿತು ಭಾಗವತರಾಗಿ ಬೆಳೆದವರು. ಗುರುಗಳಾದ ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತರು ಮತ್ತು ವೆಂಕಟ್ರಮಣ ಗಾಣಿಗರು ಸೇರಿ ಮಾಡಿದ ಪಠ್ಯಕ್ರಮವೇ ಇಂದು ಎಲ್ಲೆಡೆ ಪ್ರಚಲಿತವಾಗಿದೆ ಎಂದು ವಿವರಿಸಿದ್ದಾರೆ ಮದ್ದಲೆಗಾರ ಎ.ಪಿ.ಪಾಠಕ್.

ಗುರು ಹೇರಂಜಾಲು ಗೋಪಾಲ ಗಾಣಿಗರು ತಂದೆಯ ಕನಸಿನಂತೆ ನಾಗೂರಿನಲ್ಲಿ 2006ರಿಂದಲೂ ಗುರುಕುಲ ಪದ್ಧತಿಯಲ್ಲಿ ಹೇರಂಜಾಲು ಯಕ್ಷ ಪ್ರತಿಷ್ಠಾನದ ಮೂಲಕ ಯಕ್ಷಗಾನ ಶಿಕ್ಷಣ ನೀಡುತ್ತಿದ್ದಾರೆ. ಪುತ್ರ ಪಲ್ಲವ ಗಾಣಿಗ ಅವರೂ ತಂದೆಯ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡುತ್ತಿದ್ದು,ತಮ್ಮ ಕಂಚಿನ ಕಂಠದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಟೀಂ ಉತ್ಸಾಹಿ ತಂಡದಿಂದ ಹೇರಂಜಾಲು ಗೋಪಾಲ ಗಾಣಿಗರಿಗೆ ಗೌರವಾರ್ಪಣೆ

ಲಾಕ್‌ಡೌನ್‌ನಿಂದಾಗಿ ಕುಳಿತಲ್ಲೇ ಕಾಲು ಆಡಿಸುತ್ತಾ, ಯಕ್ಷಗಾನದ ಹಾಡುಗಳನ್ನು ಗುನುಗುತ್ತಿದ್ದವರ ಕನಸುಗಳು ಚಿಗುರೊಡೆದ ಫಲಿತವಾಗಿ ಹುಟ್ಟಿಕೊಂಡಿದ್ದೇ ಟೀಂ ಉತ್ಸಾಹಿ. ಜೂ.27ರಿಂದ ಆರಂಭವಾಗಿ ಪ್ರತೀ ತಿಂಗಳು ಕನಿಷ್ಠ ಎರಡು ಯಕ್ಷಗಾನ ಪ್ರದರ್ಶನಗಳನ್ನು ಆನ್‌ಲೈನ್‌ನಲ್ಲೇ ಈ ತಂಡವು ಪ್ರದರ್ಶಿಸುತ್ತಾ, ಯಕ್ಷಗಾನ ಪ್ರದರ್ಶನಗಳಿಲ್ಲದ ನೋವನ್ನು ನಿವಾರಿಸಿದೆ.ಪಂಚವಟಿ, ಮಾರುತಿ ಪ್ರತಾಪ; ಕಾಳಿದಾಸ, ಸುದರ್ಶನ ವಿಜಯ; ಕನಕಾಂಗಿ ಕಲ್ಯಾಣ, ಬಭ್ರುವಾಹನ, ಬ್ರಹ್ಮ ಕಪಾಲ ಮುಂತಾದ ಯಕ್ಷಗಾನ ಪ್ರಸಂಗಗಳು ಈ ತಂಡದ ಮೂಲಕ ಕಳೆದ ಮೂರು ತಿಂಗಳಲ್ಲಿ ಆನ್‌ಲೈನ್‌ನಲ್ಲಿ ಪ್ರದರ್ಶನಗೊಂಡಿವೆ.

ಬೆಂಗಳೂರಿನ ಪ್ರಖ್ಯಾತ ಹವ್ಯಾಸಿ/ವೃತ್ತಿ ಕಲಾವಿದರಾದ ಎ.ಪಿ.ಪಾಠಕ್, ಸುಬ್ರಾಯ ಹೆಬ್ಬಾರ್, ಪಲ್ಲವ ಗಾಣಿಗ ಹೇರಂಜಾಲು, ನಾರಾಯಣ ಹೆಬ್ಬಾರ್, ಶ್ರೀನಿವಾಸ ಪ್ರಭು, ಮನೋಜ್ ಆಚಾರ್, ವಿನಯ ಶೆಟ್ಟಿ, ಪ್ರಶಾಂತ ವರ್ಧನ, ಮಂಜು ಹವ್ಯಕ, ನಾಗೇಶ್ ಜಿ.ಎಸ್., ವಿನಯ ಹೊಸ್ತೋಟ, ಶಿಥಿಲ್ ಶೆಟ್ಟಿ, ಮಾನಸ ಉಪಾಧ್ಯ, ನಿಹಾರಿಕಾ ಭಟ್, ಭರತ್‌ರಾಜ್ ಪರ್ಕಳ ಮುಂತಾದ ಉತ್ಸಾಹಿಗಳು 'ಟೀಂ ಉತ್ಸಾಹಿ' ತಂಡದಲ್ಲಿದ್ದಾರೆ.

ಕೌರವನಾಗಿ ನಾಗಶ್ರೀ ಜಿ.ಎಸ್. ಹಾಗೂ ಭೀಮನಾಗಿ ಮಂಜು ಹವ್ಯಕ

"ಹೆಜ್ಜೆ ಕಲಿಸಿ ಗೆಜ್ಜೆ ಕಟ್ಟಲು ನೆರವಾದ ಗುರುಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಇಂಥ ಕಾರ್ಯಕ್ರಮಗಳಿಗೆ ಕೋವಿಡ್ ಮಹಾಮಾರಿ ಎಂದಿಗೂ ತಡೆಯಾಗದು ಎಂಬ ನಂಬಿಕೆ ನಮ್ಮ ತಂಡದ್ದು. ಇದು ಅನುಸರಣೀಯ ಸಾಧ್ಯತೆಯೂ ಹೌದು. ನಾಗೂರಿನಲ್ಲಿ ಗುರುಕುಲ ಪದ್ಧತಿಯಲ್ಲೇ ಶಿಕ್ಷಣ ನೀಡುತ್ತಿರುವ ಭಾಗವತರಾದ ಹೇರಂಜಾಲು ಗೋಪಾಲ ಗಾಣಿಗರನ್ನು ಕರೆಸಿ ಅವರನ್ನು ಗೌರವಿಸಿದ ಧನ್ಯತಾ ಭಾವ ನಮಗಿದೆ. ಇದಕ್ಕೆ ದಾನಿಗಳೂ ಕೈಜೋಡಿಸಿದ್ದಾರೆ" ಎಂದಿದ್ದಾರೆ ಟೀಂ ಉತ್ಸಾಹಿ ತಂಡದ ಸ್ಥಾಪಕರಲ್ಲೊಬ್ಬರಾದ ನಾಗಶ್ರೀ ಜಿ.ಎಸ್.

ಹಯಗ್ರೀವ ಧಾರ್ಮಿಕ ಮಂದಿರ, ದೀಕ್ಷಾ ಕ್ರಿಯೇಶನ್ಸ್, ನಿಸದ ರೆಕಾರ್ಡ್ಸ್ -ಇವರೆಲ್ಲರೂ ಟೀಂ ಉತ್ಸಾಹಿ ತಂಡದ ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದರು.

ಯಕ್ಷಗಾನ ಇಲ್ಲಿ ನೋಡಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.