ಶತ ಶತಮಾನಗಳ ಹಿಂದೆ ಈ ನಾಡಿನಲ್ಲಿ ಆಳ್ವಿಕೆ ನಡೆಸಿದ ಕಲ್ಯಾಣ ಚಾಲುಕ್ಯರು, ವಿವಿಧೆಡೆ ಶಿಲ್ಪಕಲಾ ವೈಭವದ ದೇಗುಲ ನಿರ್ಮಿಸಿದ್ದು, ತಾಂಬಾ ಗ್ರಾಮಕ್ಕೆ ಸಮೀಪದ ಚಟ್ಟರಕಿಯಲ್ಲಿ ನಿರ್ಮಿಸಿರುವ ದತ್ತಾತ್ರೇಯನ ದೇಗುಲವೂ ಸಹ ಕಲಾ ವೈಭವದಿಂದ ಕೂಡಿದೆ.
11ನೇ ಶತಮಾನದಲ್ಲಿ ಈ ದೇಗುಲ ನಿರ್ಮಾಣಗೊಂಡಿದೆ. ದೇಗುಲದಿಂದಲೇ ಚಟ್ಟರಕಿ ಖ್ಯಾತಿಯಾಗಿದೆ. ಇಲ್ಲಿನ ಶಿಲ್ಪಕಲೆ ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ.
ಶಾಸನಗಳಲ್ಲಿ ಅಗ್ರಹಾರ ಚಟ್ಟರಕಿ ಎಂಬ ಉಲ್ಲೇಖವಿದೆ. ಗ್ರಾಮದ ದಕ್ಷಿಣ ಭಾಗಕ್ಕಿರುವ ಈ ದೇಗುಲ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ನಕ್ಷತ್ರಾಕಾರದ ತೆಳು ವಿನ್ಯಾಸ ಹೊಂದಿದ ಎತ್ತರವಾದ ಜಗುಲಿ ಮೇಲೆ ವಿಶಾಲವಾದ ನವರಂಗ ಗರ್ಭಗೃಹವನ್ನು ಹೊಂದಿದೆ. ದಕ್ಷಿಣಕ್ಕೆ ಮತ್ತು ಉತ್ತರಕ್ಕೆ ಪ್ರವೇಶ ದ್ವಾರಗಳಿದ್ದು ಅರ್ಧ ತೆರೆದ ಮಂಟಪದಲ್ಲಿರುವ ನಾಲ್ಕು ಕಂಬಗಳು ಚಾಲುಕ್ಯರ ವಾಸ್ತುಶಿಲ್ಪವನ್ನು ಬಿಂಬಿಸುತ್ತಿವೆ.
ನವರಂಗದ ನಾಲ್ಕು ಸ್ತಂಭಗಳ ಮಧ್ಯೆ ಛತ್ತಿನ ನಡುವೆ ಕೆಳಮುಖವಾಗಿ ಅರಳಿದ ಕಮಲದ ಕೆತ್ತನೆ ನೋಡುಗರ ಕಣ್ಮನ ಸೆಳೆಯುವಂತಿದೆ. ಗೋಡೆಗಳ ಮೇಲೆ ಮಾತೃಕೆಗಳ ಶಿಲ್ಪ ಕೆತ್ತನೆಗಳಿವೆ. ಅವುಗಳ ಅಕ್ಕಪಕ್ಕದಲ್ಲಿ ಸರಸ್ವತಿ, ಗಣೇಶನ ಮೂರ್ತಿಗಳಿವೆ.
ಗರ್ಭದ್ವಾರದ ಪ್ರವೇಶದ್ವಾರಕ್ಕೆ ಅಷ್ಟದ್ವಾರ ಶಾಖೆಗಳಿವೆ. ಅವುಗಳಲ್ಲಿ ಬಳ್ಳಿಯಾಕಾರದ ಕೆತ್ತನೆ, ನೃತ್ಯ ಶಿಲ್ಪಗಳು ಹಾಗೂ ಕಂಬಗಳು ಹೂವಿನಂತೆ ಕೆತ್ತಲ್ಪಟ್ಟಿವೆ. ಹೊರ ಗೋಡೆಗಳು ನಕ್ಷತ್ರಾಕಾರದಲ್ಲಿ ನಿರ್ಮಾಣಗೊಂಡಿದ್ದು, ಕಲ್ಯಾಣ ಚಾಲುಕ್ಯರ ಶಿಲ್ಪ ಕಲಾ ವೈಭವಕ್ಕೆ ಹಿಡಿದ ಕನ್ನಡಿಯಾಗಿದೆ.
ಅಲಂಕೃತವಾಗಿರುವ ಸ್ತಂಭಗಳ ನಡುವೆ ಶಿಲಾಬಾಲಿಕೆಯರಿಂದ ಚಾಮರ ಬೀಸಿಕೊಳ್ಳುತ್ತಿರುವ ಗಣಪನ ದೇಗುಲ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿದೆ. ನಿಧಿ ಆಸೆಗಾಗಿ ಬೃಹದಾಕಾರದ ಗಣಪತಿಯನ್ನು ಒಡೆದು ಹಾಕಲಾಗಿದೆ. ದೇವಾಲಯದ ಎದುರಿಗೆ ನಂದಿ ಮಂಟಪವಿದ್ದು, ಶಿವನ ದೇಗುಲ ಕೂಡ ಜೀರ್ಣೋದ್ಧಾರಕ್ಕಾಗಿ ಕಾಯುತ್ತಿದೆ.
2002ರಲ್ಲಿ ಇಲ್ಲಿನ ದೇವಾಲಯದಲ್ಲಿನ ಮೂರ್ತಿ ಭಗ್ನಗೊಂಡಾಗ ಅಧಿಕಾರಿಗಳು ಭೇಟಿ ನೀಡಿ, ಸಂರಕ್ಷಣೆಗೆ ಹೆಚ್ಚಿನ ಸಿಬ್ಬಂದಿ ಒದಗಿಸುವ ಭರವಸೆ ನೀಡಿದ್ದರು. ಆದರೆ ಇದೂವರೆಗೂ ಆ ಭರವಸೆ ಈಡೇರದೆ ಇರುವುದು ವಿಪರ್ಯಾಸ ಎನ್ನುತ್ತಾರೆ ಚಟ್ಟರಕಿಯ ಶ್ರೀಧರ ಜೋಶಿ.
ದತ್ತಾತ್ರೇಯನ ದೇಗುಲವಿದು. ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಆದರೆ ಈವರೆಗೂ ದೇವಾಲಯದ ಸುರಕ್ಷತೆಗೆ ಇಲಾಖೆ ಮುಂದಾಗಿಲ್ಲ. ಗ್ರಾಮದವರಿಗೂ ದೇವರ ಪೂಜೆ ಮಾಡಲು ಅವಕಾಶ ನೀಡದೆ, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂಬ ಅಪಸ್ವರ ಸ್ಥಳೀಯರದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.