‘ಚಿತ್ರಸಂತೆ’ ಎಂದರೆ ಕಲಾಪ್ರೇಮಿಗಳಿಗೆ ಹಬ್ಬ. ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸುವ ಈ ‘ಮೇಳ’ ಕೇವಲ ಒಂದು ದಿನದ್ದು. ಆದರೆ ಇದಕ್ಕಾಗಿ ತಿಂಗಳುಗಳ ಕಾಲ ಸಿದ್ಧತೆ ನಡೆಸುವ ಕಲಾವಿದರು ಇರುತ್ತಾರೆ. ಆ ದಿನಕ್ಕೆ ಕಾತರದಿಂದ ಕಾಯುವ ಕಲಾಪ್ರೇಮಿಗಳ ಸಂಖ್ಯೆಯೂ ಬಹಳ ದೊಡ್ಡದು. ಕುಮಾರಪಾರ್ಕ್ ರಸ್ತೆಯಲ್ಲಿರುವ ಪರಿಷತ್ ಪರಿಸರದಲ್ಲಿ ಅಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಜನಜಾತ್ರೆ ಸಾಮಾನ್ಯ.
18 ವರ್ಷಗಳಿಂದ ನಡೆಯುತ್ತ ಬಂದಿರುವ ಚಿತ್ರಸಂತೆ, ಕೋವಿಡ್ ಪಿಡುಗಿನ ಕಾರಣ ಇದೇ ಮೊದಲ ಬಾರಿ ಜನವರಿ 3ರಿಂದ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಇತರ ಕ್ಷೇತ್ರಗಳ ಪ್ರಮುಖ ಕಾರ್ಯಕ್ರಮಗಳು ವರ್ಚುವಲ್ ಆಗುತ್ತಿದ್ದು, ಚಿತ್ರ ಸಂತೆ ಕೂಡ ಅದೇ ಹಾದಿ ಹಿಡಿದಿದೆ. ವರ್ಷವಿಡೀ ಸಿದ್ಧತೆ ನಡೆಸುವ ಕಲಾವಿದರಿಗೆ ನಿರಾಶೆಯಾಗದಿರಲು ಪರಿಷತ್ ಈ ನಿರ್ಧಾರಕ್ಕೆ ಬಂದಿದೆ. ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಕಾರಣ ಒಂದು ದಿನದ ಬದಲು ಒಂದು ತಿಂಗಳ ಕಾಲ ನಡೆಸಲು ನಿರ್ಧರಿಸಲಾಗಿದೆ. ಅಂದರೆ ಫೆಬ್ರುವರಿ 3ರವರೆಗೆ ಕಲಾಕೃತಿಗಳನ್ನು ಆನ್‌ಲೈನ್‌ನಲ್ಲಿ ಕೊಳ್ಳಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್
ಇದಕ್ಕಾಗಿ ಚಿತ್ರಕಲಾ ಪರಿಷತ್‌ನ ವೆಬ್‌ಸೈಟ್‌ನಲ್ಲಿ ಪ್ರತ್ಯೇಕ ಪುಟ ತೆರೆಯಲಾಗುತ್ತಿದೆ. ಇದರಲ್ಲಿ ಕಲಾಕೃತಿಗಳ ಡಿಸ್ಪ್ಲೆ, ಅದರ ಕೆಳಗೆ ಕಲಾವಿದರ ಹೆಸರು, ಸಂಪರ್ಕ ಸಂಖ್ಯೆ ಮತ್ತಿತರ ವಿವರಗಳನ್ನು ನೀಡಲಾಗುತ್ತಿದೆ. ಪ್ರತಿ ಕಲಾವಿದರ 10 ಕಲಾಕೃತಿಗಳನ್ನು ಈ ಪುಟದಲ್ಲಿ ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಆಸಕ್ತರು ಕಲಾವಿದರನ್ನು ಮೊಬೈಲ್ ಮೂಲಕ ನೇರವಾಗಿಯೇ ಸಂಪರ್ಕಿಸಿ ತಮಗೆ ಬೇಕಾದ ಕಲಾಕೃತಿಗಳನ್ನು ಖರೀದಿಸಲು ಅವಕಾಶವಿದೆ.
ಅಂತರರಾಷ್ಟ್ರೀಯ ಸ್ವರೂಪ:
‘ಆನ್‌ಲೈನ್ ಆಗಿರುವುದರಿಂದ ಈ ಬಾರಿ 1,500 ಮಂದಿ ಕಲಾವಿದರಿಗೆ ಮಾತ್ರ ಅವಕಾಶ ಮಾಡಿಕೊಡಲು ಉದ್ದೇಶಿಸಿದ್ದೇವೆ. ಆದರೆ ಆನ್‌ಲೈನ್ ಎಂದ ಮಾತ್ರಕ್ಕೆ ಕಲಾಕೃತಿಗಳ ಗುಣಮಟ್ಟದ ಜೊತೆಗೆ ಪರಿಷತ್ ರಾಜಿ ಮಾಡಿಕೊಳ್ಳುವುದಿಲ್ಲ’ ಎನ್ನುತ್ತಾರೆ ಪರಿಷತ್‌ನ ಆ್ಯನಿಮೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಪ್ರೀತ್ ಅಡಿಗ.
‘ಕಲಾವಿದರ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಮಾಡಲು ಸಮಿತಿ ರಚಿಸಲಾಗಿದೆ. ಆನ್‌ಲೈನ್‌ನಲ್ಲಿ ಮಾರಾಟ ಮತ್ತು ಪ್ರದರ್ಶನ ನಡೆಯುವ ಕಾರಣ ಚಿತ್ರಗಳನ್ನು ಯಾವ ರೀತಿ ನಮಗೆ ಕಳುಹಿಸಬೇಕು ಎಂಬುದು ಎಲ್ಲರಿಗೂ ಗೊತ್ತಿರುವುದಿಲ್ಲ. ಇದಕ್ಕೆ ಕೆಲಸ ಹಿಡಿಯುತ್ತದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 30ರವರೆಗೆ ಅವಕಾಶ ನೀಡಲಾಗಿದೆ’ ಎನ್ನುತ್ತಾರೆ
‘ಆನ್‌ಲೈನ್ ಚಿತ್ರಸಂತೆಯಲ್ಲಿ ಹೊರದೇಶಗಳ ಕಲಾವಿದರು ರಚಿಸಿರುವ ಚಿತ್ರಗಳೂ ಇರಲಿವೆ. ಈ ಹಿಂದೆ ಅಪರೂಪಕ್ಕೆ ಅಲ್ಲೊಬ್ಬರು–ಇಲ್ಲೊಬ್ಬರು ಎಂಬಂತೆ ಕಾಣಿಸಿಕೊಳ್ಳುತ್ತಿದ್ದರು. ಒಂದೇ ದಿನ ಚಿತ್ರಸಂತೆ ನಡೆಯುವ ಕಾರಣ ಭಾಗವಹಿಸುವುದು ಅವರಿಗೆ ದುಬಾರಿ ಬಾಬ್ತು ಆಗುತ್ತಿತ್ತು. ಈ ಬಾರಿ ಆನ್‌ಲೈನ್ ಆಗುತ್ತಿರುವ ಕಾರಣ ಈ ಬಗ್ಗೆ ವಿಚಾರಿಸಿ ಅರ್ಜಿಗಳು ಬರುತ್ತಿವೆ. ಅಮೆರಿಕ, ಇಂಗ್ಲೆಂಡ್, ಮಾರಿಷಸ್, ಸಿಂಗಪುರ ಮೊದಲಾದ ದೇಶಗಳ ಕಲಾವಿದರು ವಿವರಗಳನ್ನು ಕೇಳಿದ್ದಾರೆ. ಅವರು ಭಾಗವಹಿಸುತ್ತಿರುವುದರಿಂದ ಅಂತರರಾಷ್ಟ್ರೀಯ ಮೆರುಗು ಪಡೆದುಕೊಳ್ಳಲಿದೆ’ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ಚಿತ್ರಸಂತೆಯಲ್ಲೇ ಕರಕುಶಲ ವಸ್ತುಗಳೂ ಪ್ರದರ್ಶನದಲ್ಲಿರುತ್ತಿದ್ದವು. ಇದರಲ್ಲಿ ದೂರದ ಅಸ್ಸಾಂ, ಪಶ್ಚಿಮ ಬಂಗಾಳದ ಕಲಾವಿದರೂ ಪಾಲ್ಗೊಳ್ಳುತ್ತಿದ್ದರು. ಅವರಿಗೂ ನಿರಾಶೆಯಾಗದ ರೀತಿ ಅವರ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಖರೀದಿಗೆ ಆನ್‌ಲೈನ್‌ನಲ್ಲಿ ಪ್ರತ್ಯೇಕ ವಿಭಾಗ ಇರಲಿದೆ.
ಈ ಚಿತ್ರಸಂತೆಯನ್ನು ಕೊರೊನಾ ಯೋಧರಿಗಾಗಿ ಸಮರ್ಪಿಸಲಾಗಿದೆ.
ಎಂದಿನಂತೆ ಉದ್ಘಾಟನೆಯ ದಿನವಾದ ಜನವರಿ 3ರಂದು ಚಿತ್ರಕಲಾ ಪರಿಷತ್‌ನ ಗ್ಯಾಲರಿಯಲ್ಲಿ ಹಿರಿಯ ಕಲಾವಿದರ ಚಿತ್ರಗಳ ಪ್ರದರ್ಶನ ಇರಲಿದೆ. ಪ್ರೊ.ಎಂ.ಎಸ್.ನಂಜುಂಡರಾವ್ ಪ್ರಶಸ್ತಿ, ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನವೂ ಇರುತ್ತದೆ. ಆದರೆ ‘ಸಂತೆ’ ಮಾತ್ರ ಆನ್‌ಲೈನ್‌ಗೆ ಸೀಮಿತಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.