ಭಾವ ಪ್ರಪಂಚದ ಬವಣೆಯಲ್ಲಿ ಬಣ್ಣಗಳು ನೂರಾರು. ಈ ನೂರಾರು ಭಾವಯುಕ್ತ ಬಣ್ಣಗಳನ್ನು ಸಕಾರಾತ್ಮಕವಾಗಿ ದೇಶ ಕಾಲಗಳಿಗೆ ತಕ್ಕಂತೆ ಹದವಾಗಿಸಿಕೊಂಡು, ಸರಳವಾಗಿ ಅಭಿವ್ಯಕ್ತಿಗೊಳಿಸಿದಾಗ ಮಾತ್ರ ‘ಸೌಂದರ್ಯ’ ಎಂಬುದು ದಕ್ಕುತ್ತದೆ. ಇಂತಹ ಅಭಿವ್ಯಕ್ತಿಯ ನೆಲೆಗಳನ್ನು ಹಲವು ಪ್ರಯೋಗಗಳ ಮುಖೇನ ತಮ್ಮದಾಗಿಸಿಕೊಂಡು ಚಿತ್ರ ರಚಿಸುವ ರಾಮಗಿರಿ ಪೊಲೀಸ್ ಪಾಟೀಲರು ಸಮಕಾಲೀನ, ಸಂವೇದನಾಶೀಲ ಕಲಾವಿದ.
ಸ್ನೇಹ, ಪ್ರೇಮ, ಸೌಹಾರ್ದಗಳನ್ನಲ್ಲದೆ; ವೈವಿಧ್ಯ - ಏಕತೆಗಳ ನಡುವಿನ ತಾಕಲಾಟಗಳನ್ನು ತಮ್ಮದೇ ದೃಶ್ಯಭಾಷೆಯಲ್ಲಿ ವ್ಯಾಖ್ಯಾನಿಸುವ ಅವರ ಕಲಾಕೃತಿಗಳು ನೋಡುಗನ ನೋಟಕ್ಕೆ ಹಲವು ದಾರಿಗಳನ್ನು ಮುಕ್ತವಾಗಿ ತೆರೆದಿಡುತ್ತವೆ. ಶೂನ್ಯದಿಂದ ಹೊರಟು, ಆಕಾರ ಪಡೆವ ಡಿಂಭನಾಳದ ಜೀವ ಬಿಂಬದಂತೆ ರೂಪತಳೆದ ಅವರ ಗೊಂಬೆಯಾಕೃತಿಗಳಲ್ಲಿ ಮಾದಕತೆಯ ಸೆಳೆತವಿದೆ.
ಕಲ್ಪನೆ- ವಾಸ್ತವಗಳ ನಡುವಿನ ಸಂಘರ್ಷಗಳ ಫಲವಾಗಿ ಕಂಡುಕೊಂಡ ಸೂತ್ರದಲ್ಲಿ ಪ್ರಾಯೋಗಿಕದಷ್ಟೇ ತಾತ್ವಿಕತೆಯನ್ನು ಹೆಣೆದಿರುವುದು ಪೊಲೀಸ್ ಪಾಟೀಲರ ವೈಶಿಷ್ಟ್ಯ. ಅವರ ಅವಾಸ್ತವವಾದ ಮನುಷ್ಯಾಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿ ಸಾತ್ವಿಕ ಅನುಭಾವದಿಂದ ಕೂಡಿವೆ. ಕೆಲವು ಚಿತ್ರಗಳು ದೇಸಿ ನೆಲೆಯಲ್ಲಿ ಸಹಜತೆಯಿಂದ ಲಕ್ಷಣಮುಕ್ತವಾಗಿ ಮೂಡಿಬಂದರೆ, ಇನ್ನು ಕೆಲವು ಕೃತಿಗಳು ಸಾಂಪ್ರದಾಯಿಕ ಶೈಲಿಯ ಸೂಕ್ಷ್ಮ ಪ್ರಭಾವ ಇದ್ದಾಗ್ಯೂ ಸಮಕಾಲೀನ ಕಲೆಯ ಸ್ಪರ್ಶದಿಂದ ಮೆರುಗನ್ನು ಪಡೆದಿವೆ. ಒಂದು ಕ್ಯಾನ್ವಾಸ್ ಪರದೆಯ ಮೇಲೆ ಸುಮಾರು ಐದಕ್ಕಿಂತಲೂ ಹೆಚ್ಚು ಚೌಕದಲ್ಲಿ ಸಂಯೋಜಿಸಲ್ಪಟ್ಟ ಮನುಷ್ಯಾಕೃತಿಗಳಲ್ಲಿ ಮುಗ್ದಭಾವವೇ ಹೆಚ್ಚು.
ಮುಖಭಾವದಲ್ಲಿ ಪ್ರಧಾನವಾಗಿ ಮೌನವು ನಿರೂಪಿತ. ಇಂತಹ ಮೌನದಲ್ಲಿಯೂ ಒಂದು ಬಗೆಯ ಮಾತಿನ ಸಂವಹನ ಸಾಧಿಸಲಾಗಿದೆ. ಹೀಗೆ ಮಾತು ಮತ್ತು ಮೌನಗಳ ಅಭಿವ್ಯಕ್ತಿಯ ಆಂತರ್ಯದಲ್ಲಿ ಸ್ನೇಹ, ಪ್ರೀತಿ, ವಾತ್ಸಲ್ಯದ ಆಶಯ ನಿಶ್ಚಲವಾಗಿ ಇದೆ. ಅವರ ಈ ರೀತಿಯ ಪ್ರಯೋಗಗಳಲ್ಲಿ ಕಲೆ ಮತ್ತು ಬದುಕಿನ ಅನನ್ಯತೆಯಿದೆ.
ರಾಮಗಿರಿ ಪೊಲೀಸ್ ಪಾಟೀಲರ ಕಲಾಕೃತಿಗಳಲ್ಲಿ ಬಹುತ್ವದ ವೈವಿಧ್ಯಕ್ಕೆ ಅನೇಕ ಬಣ್ಣಗಳು ಸಂಕೇತವಾಗಿವೆ. ಅವುಗಳ ಔಚಿತ್ಯಪೂರ್ಣ ಸಂಯೋಜನೆಯಲ್ಲಿ ಏಕತೆಯ ಅದ್ವೈತವಿದೆ. ಅವರ ‘ದ ಭಜನ್’ (The Bhajan) ‘ಮೈ ಫ್ರೆಂಡ್ಸ್’ (My friends) ಸರಣಿಯ ಕಲಾಕೃತಿಗಳು ಇಂತಹ ತಾತ್ವಿಕ ವಿಚಾರಗಳಿಗೆ ಸಾಕ್ಷಿ. ಇವು ಅವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ತಂದುಕೊಟ್ಟಿವೆ.
ಸದಾ ಸ್ನೇಹಜೀವಿಯಾದ ರಾಮಗಿರಿಯವರು ತಮ್ಮ ಕಲಾಕೃತಿಗಳ ಮುಖೇನ ಸ್ನೇಹದ ಮಹತ್ವವನ್ನು ಸಾರಿದವರು. ಬಹುಭಾಷೆ-ಸಂಸ್ಕೃತಿಯ ನಾಡಾದ ಕಲಬುರ್ಗಿ ಪರಿಸರದ ದೇಸಿ ಸತ್ವವನ್ನು ತಮ್ಮ ಕೃತಿರಚನೆಯಲ್ಲಿ ತಮ್ಮದೇ ಆದ ಬಗೆಯಲ್ಲಿ ಸಮಕಾಲೀನವಾಗಿ ರೇಖಿಸಿದವರು. ಈ ರೀತಿಯ ರಚನೆಯಿಂದ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದವರು. ಅಂತೆಯೇ ಅವರಿಗೆ ಕ್ಯಾಮಲಿನ್ ಅವಾರ್ಡ್ (1999), ಆವಂತಿಕಾ ಅವಾರ್ಡ್ (ನವದೆಹಲಿ), ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ (2005) ಸೇರಿದಂತೆ 20ಕ್ಕೂ ಹೆಚ್ಚು ಪುರಸ್ಕಾರಗಳು ಸಂದಿವೆ. ಈ ಎಲ್ಲ ಪುರಸ್ಕಾರಗಳಿಗೆ ಅವರ ನಿರಂತರ ಪ್ರಯೋಗಶೀಲ ಹಾಗೂ ಸದಾ ಚಲನಶೀಲ ವ್ಯಕ್ತಿತ್ವವೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇತ್ತೀಚಿಗೆ ಮುಂಬೈಯಲ್ಲಿ ಆರ್ಟ್ ಈವೆಲ್ (ART IVEL) ಸಂಸ್ಥೆಯ ಗುಂಪು ಕಲಾ ಪ್ರದರ್ಶನದಲ್ಲಿ ರಾಮಗಿರಿಯವರ ‘ಮೈ ಫ್ರೆಂಡ್ಸ್’ (3×6 ಅಳತೆಯ) ಕಲಾಕೃತಿಯು ಅತ್ಯಂತ ಹೆಚ್ಚು ಮೌಲ್ಯ – ಅಂದರೆ ಮೂರು ಲಕ್ಷ ಐವತ್ತು ಸಾವಿರ (₹ 3.50 ಲಕ್ಷ) ರೂಪಾಯಿ ಮೊತ್ತಕ್ಕೆ ಮಾರಾಟವಾಗಿರುವುದು ಗಮನಾರ್ಹ ಸಂಗತಿಯಾದಷ್ಟೇ ನಮ್ಮ ನಾಡಿನ ಹೆಮ್ಮೆಯ ಸಂಗತಿಯೂ ಹೌದು. ಇಲ್ಲಿ ‘ಕಲೆ’ಯ ವಿರಾಟ್ ರೂಪ ಹಾಗೂ ಅನಂತ ಸ್ವರೂಪಕ್ಕೆ ಮೌಲ್ಯದ ಮೇರೆ ಎಂತು ಎಂಬ ಪ್ರಶ್ನೆ ನಿರುತ್ತರವಾಗಿ ನಿಲ್ಲುತ್ತದೆ. ಅಂತಃಕರಣದ ಹೃದಯಕ್ಕೆ ಆಪ್ಯಾಯಮಾನವಾದ ಆನಂದವನ್ನು ನೀಡುವ ‘ಕಲೆ’ ಮೌಲ್ಯಾತಿತವಾದುದು. ರೂಪಾಯಿಗಳಲ್ಲಿ ಅಳೆಯುವ ಮೌಲ್ಯ ಇಲ್ಲಿ ಭೌತಿಕ ಪರಿಗಣನೆಗೆ ಮಾತ್ರ.
ನಾಡಿನಲ್ಲಿ ಮಾತ್ರವೇ ಅಲ್ಲದೆ ದೇಶದ ಅನೇಕ ಕಡೆಗಳಲ್ಲಿ ಕಲಾಪ್ರದರ್ಶನ ಮಾಡಿದ ರಾಮಗಿರಿ ಪೊಲೀಸ್ ಪಾಟೀಲರು ದೃಶ್ಯಧಾತ್ರಿಯ ಚಲನೆಯ ಜೊತೆ-ಜೊತೆಗೆ ಹೆಜ್ಜೆ ಹಾಕಿದವರು. ಮುಂಬೈ, ಕೋಲ್ಕತ್ತಾ , ನಾಗ್ಪುರ, ಚೆನ್ನೈ, ಬೆಂಗಳೂರು, ಹೈದರಾಬಾದ್ - ಹೀಗೆ ದೇಶದ ಮಹಾನಗರಗಳಲ್ಲಿ ಹತ್ತಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನ, ನೂರು ಗುಂಪು ಪ್ರದರ್ಶನಗಳಲ್ಲದೆ ಮೂವತ್ತಕ್ಕೂ ಹೆಚ್ಚು ಕ್ಯಾಂಪ್‌ಗಳಲ್ಲಿ ಭಾಗವಹಿಸಿದ ಸಾತ್ವಿಕ ಹೆಮ್ಮೆ ಇವರದು.
ಕಲಾ ಬದುಕಿನ ದಾರಿಗಳಲ್ಲಿ ತಮ್ಮದೇ ಆದ ಅಸ್ತಿತ್ವ ಕಟ್ಟಿಕೊಂಡ ರಾಮಗಿರಿ ಪೊಲೀಸ್ ಪಾಟೀಲರು ನಗರಗಳಿಗೆ ಮಾತ್ರವೇ ಅಲ್ಲದೆ ಗ್ರಾಮಗಳಿಗೂ ತಮ್ಮ ಪ್ರತಿಭೆ ವಿಸ್ತರಿಸಿದವರು. ಅನೇಕ ಕಲಾ ಕ್ಯಾಂಪ್‌ಗಳನ್ನು ಹಳ್ಳಿಗಳಲ್ಲಿ ಹಮ್ಮಿಕೊಳ್ಳುವ ಮುಖೇನ ಗ್ರಾಮೀಣರಲ್ಲೂ ಕಲಾ ಪ್ರಜ್ಞೆ ಮೂಡಿಸುತ್ತಿರುವ ಇವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.