ADVERTISEMENT

‘ದ್ರೋಪತಿ ಹೇಳ್ತವ್ಳೆ’ ನಾಟಕ: ಪುರಾಣ-ಜನಪದದ ಮುಖಾಮುಖಿ

ಎಂ.ರಾಘವೇಂದ್ರ
Published 9 ಸೆಪ್ಟೆಂಬರ್ 2023, 23:30 IST
Last Updated 9 ಸೆಪ್ಟೆಂಬರ್ 2023, 23:30 IST
‘ದ್ರೋಪತಿ ಹೇಳ್ತವ್ಳೆ’ ನಾಟಕದ ಒಂದು ದೃಶ್ಯ.
‘ದ್ರೋಪತಿ ಹೇಳ್ತವ್ಳೆ’ ನಾಟಕದ ಒಂದು ದೃಶ್ಯ.   

ರಾಮಾಯಣ, ಮಹಾಭಾರತದ ಕಥನಗಳನ್ನು ‘ಹೆಣ್ಣು’ ನೋಟದ ಮೂಲಕ ಚಿತ್ರಿಸುತ್ತಲೆ ಕಥನಕ್ಕೊಂದು ಹೊಸ ಆಯಾಮ ಹುಡುಕುವ, ಅರ್ಥೈಸುವ ಪ್ರಯೋಗಗಳು ಈಚಿನ ವರ್ಷಗಳಲ್ಲಿ ರಂಗಭೂಮಿಯಲ್ಲಿ ಜೋರಾಗಿಯೇ ನಡೆಯುತ್ತಿವೆ. ಏಕವ್ಯಕ್ತಿ ರಂಗ ಪ್ರಯೋಗಗಳು ಪುರಾಣದಲ್ಲಿ ಬರುವ ಅಂಚಿನಲ್ಲಿರುವ ಪಾತ್ರಗಳಿಗೆ ಪ್ರಾತಿನಿಧ್ಯ ನೀಡಿದರೆ ಇತರ ಪ್ರಕಾರದ ಪ್ರಯೋಗಗಳು ಮುಖ್ಯ ಪಾತ್ರಗಳತ್ತಲೆ ಗಮನಹರಿಸುತ್ತಿವೆ.‌

ಕೆಲವು ಪ್ರಯೋಗಗಳು ಸ್ತ್ರೀವಾದಿ ನೆಲೆಗಟ್ಟಿನ ‘ಹೆಣ್ಣು’ ನೋಟವನ್ನು ಮೀರಿದ ಕಥನಗಳಾಗಿ ಹೊಸದೊಂದು ಕಾಣ್ಕೆ ಕಟ್ಟುವುದರಲ್ಲಿ ಯಶಸ್ವಿಯಾಗುತ್ತಿವೆ. ಬೆಂಗಳೂರಿನ ರಂಗಾಸ್ಥೆ ಸಂಸ್ಥೆಯ ‘ದ್ರೋಪತಿ ಹೇಳ್ತವ್ಳೆ’ ನಾಟಕ (ರಚನೆ, ವಿನ್ಯಾಸ, ಸಂಗೀತ, ನಿರ್ದೇಶನ: ಗಣೇಶ ಮಂದಾರ್ತಿ) ಅಂತಹ ಪ್ರಯೋಗಕ್ಕೆ ಸಾಲಿಗೆ ಸೇರುತ್ತದೆ.

ಇತ್ತೀಚೆಗಷ್ಟೇ ಹೆಗ್ಗೋಡಿನ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ಸಂಸ್ಥೆಯು ಈ ನಾಟಕದ ಪ್ರದರ್ಶನವನ್ನು ಆಯೋಜಿಸಿತ್ತು. ನಾಟಕದ ಮೊದಲರ್ಧ ಕುಮಾರವ್ಯಾಸ ಭಾರತದ ಅಭಿಜಾತ ಶೈಲಿಯಲ್ಲಿ ಪ್ರಸ್ತುತಗೊಂಡರೆ, ಎರಡನೇ ಭಾಗ ಜನಪದರು ಕಟ್ಟಿಕೊಂಡ ಮಹಾಭಾರತಕ್ಕೆ ಹೊರಳುತ್ತದೆ.

ADVERTISEMENT

ನಾಟಕದ ಆರಂಭದಲ್ಲಿ ಭಾಗವತರು ಮತ್ತು ಮೇಳದವರು ಯಾವ ವಸ್ತುವನ್ನು ಆಧರಿಸಿ ನಾಟಕ ಆಡಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ಗಂಡು ಪಾತ್ರಗಳ ಹೆಸರೇ ಪ್ರಸ್ತಾಪವಾಗುತ್ತದೆ. ಆಗ ತೆರೆಯ ಮರೆಯಲಿದ್ದ ಹೆಣ್ಣು ಪಾತ್ರಗಳು ಭಾಗವತರು ಮತ್ತು ಮೇಳದವರನ್ನು ‘ಯಾಕೆ ನಿಮಗೆ ಹೆಣ್ಣು ಪಾತ್ರಗಳು ಕಾಣುವುದೆ ಇಲ್ಲವೆ’ ಎಂದು ಪೊರಕೆ ಸೇವೆಯ ಮೂಲಕ ಜಾಡಿಸುವಲ್ಲಿ ನಾಟಕ ಸಾಗುವ ದೃಷ್ಟಿಕೋನದ ಸುಳಿವು ಸಿಗುತ್ತದೆ.

ದ್ರುಪದ ತಪಸ್ಸು ಮಾಡಿ ದ್ರೋಣಾಚಾರ್ಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಪಡೆದ ಮಗಳಾದ ದ್ರೋಪತಿ ಅರ್ಜುನನ್ನು ಮೆಚ್ಚಿ ವರಿಸಿದಾಗ, ಉಳಿದ ನಾಲ್ವರು ಪಾಂಡವರನ್ನು ಮದುವೆಯಾಗಬೇಕಾದ ಸಂದಿಗ್ಧತೆಯ ಪ್ರಸಂಗದೊಂದಿಗೆ ದ್ರೋಪತಿಯ ಕಥನ ಬಿಚ್ಚಿಕೊಳ್ಳುತ್ತದೆ.

ತನ್ನ ಪೂರ್ವಜನ್ಮದಲ್ಲಿ ದ್ರೋಪತಿ ಸನ್ಯಾಸಿಯೊಂದಿಗೆ ಪತಿವ್ರತೆಯಾಗಿ ನಡೆಸಿದ ಬಾಳ್ವೆ, ಮುಂದಿನ ಜನ್ಮದಲ್ಲಿ ಆಕೆ ಐವರು ಗಂಡಂದಿರ ಪತ್ನಿಯಾಗಬೇಕೆಂಬ ವಿಧಿಲಿಖಿತವಾದ ಕತೆಯೂ ರಂಗದಲ್ಲಿ ಅನಾವರಣಗೊಳ್ಳುತ್ತದೆ.

‘ಯಾವುದೆ ಹುಟ್ಟು ಸಂಭವಿಸಿದಾಗ ಸಂಭ್ರಮವಿರುತ್ತದೆ. ಆದರೆ ನನ್ನ ಹುಟ್ಟಿನ ಹಿಂದೆ ಸೇಡಿನ ಕತೆ ಇದೆಯಲ್ಲ’ ಎಂಬ ಪ್ರಶ್ನೆಯೊಂದಿಗೆ ದ್ರೋಪತಿ ಹಲವು ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುತ್ತಲೆ ಹೆಣ್ಣಿನ ಅಸಹಾಯಕತೆಗೆ ಕನ್ನಡಿ ಹಿಡಿಯುತ್ತಾಳೆ.

ದ್ರೋಪತಿಯ ಇಂತಹ ಸ್ವಗತದಲ್ಲಿ ಮಡುಗಟ್ಟಿದ ನೋವಿನ ಜೊತೆಗೆ ಆಗಾಗ ರೋಷವೂ ಸ್ಫೋಟಿಸುತ್ತದೆ. ಸ್ವತಃ ಭಗವಂತನೆಂಬ ನಂಬುಗೆಗೆ ಪಾತ್ರನಾಗಿರುವ ಕೃಷ್ಣನನ್ನೂ ಪ್ರಶ್ನಿಸಲು ಆಕೆ ಹಿಂಜರಿಯುವುದಿಲ್ಲ.

ವಸ್ತ್ರಾಪಹರಣದ ದೃಶ್ಯದಲ್ಲಿ ‘ಹೆಣ್ಣಿನ ಮಾನಕ್ಕೆ ಸುರಕ್ಷೆ ಇಲ್ಲದ ನಾಡು ಹೇಗೆ ತಾನೆ ಸುಭಿಕ್ಷವಾಗಿಬಲ್ಲದು’ ಎಂಬ ಅವಳ ಆರ್ತನಾದ ಮಣಿಪುರದ ಈಚಿನ ವಿದ್ಯಮಾನಗಳನ್ನು ಕಣ್ಣೆದುರು ನಿಲ್ಲಿಸುತ್ತದೆ. ಈ ದೃಶ್ಯವನ್ನು ಕಟ್ಟುವಲ್ಲಿ ನಿರ್ದೇಶಕರ ರಂಗಕುಶಲತೆ ಎದ್ದು ಕಾಣುತ್ತದೆ.

ನಾಟಕದ ಎರಡನೇ ಭಾಗ ಪಾಂಡವರು 14 ವರ್ಷ ವನವಾಸ ಮುಗಿಸಿ ಒಂದು ವರ್ಷದ ಅಜ್ಞಾತವಾಸ ಅನುಭವಿಸುವ ಪ್ರಸಂಗಕ್ಕೆ ಜಿಗಿಯುತ್ತದೆ. ಆಗ ಜನಪದ ಶೈಲಿಗೆ ನಾಟಕ ಹೊರಳುತ್ತದೆ.

ದ್ರೋಪತಿ ಸೈರೇಂದ್ರಿಯ ವೇಷ ಧರಿಸಿ ವೈಷ್ಣೋದೇವಿಯ ಆಸ್ಥಾನದಲ್ಲಿ ಸೇವಕಿಯಾಗಿ ಸೇರಿಕೊಂಡಾಗ ಕೀಚಕನ ಕಾಮದ ಕಣ್ಣಿಗೆ ಬಿದ್ದು, ನಂತರ ಆತ ಭೀಮನಿಂದ ಸಂಹಾರಕ್ಕೆ ಒಳಗಾಗುವ ದೃಶ್ಯದೊಂದಿಗೆ ನಾಟಕ ಓಘ ಪಡೆಯುತ್ತದೆ.

ಮುಂದಕ್ಕೆ ದ್ರೋಪತಿ ತನ್ನ ಮಕ್ಕಳನ್ನು ಯುದ್ಧದಲ್ಲಿ ಕಳೆದುಕೊಂಡು ಪರಿತಪಿಸಿ ಅವರನ್ನು ಕೊಂದ ಅಶ್ವತ್ಥಾಮನಿಗೆ ಶಾಪ ನೀಡುವ ದೃಶ್ಯ ಎದುರಾಗುತ್ತದೆ.

ಮುಂದೆ ಪಾಂಡವರು ಪ್ರಸ್ಥಾನಕ್ಕೆ ಹೊರಡುವ ಸನ್ನಿವೇಶದಲ್ಲಿ ದ್ರೋಪತಿ ಹಾಗೂ ಪಾಂಡವರ ನಡುವೆ ನಡೆಯುವ ವಾಗ್ವಾದ ಮಾರ್ಮಿಕವಾಗಿದೆ. ಪ್ರಸ್ಥಾನಕ್ಕೆ ತೆರಳದಂತೆ ದ್ರೋಪತಿ ಭೀಮನನ್ನು ತಡೆದಾಗ, ‘ಅವಳು ಇಷ್ಟಪಟ್ಟಿದ್ದು ಅರ್ಜುನನ್ನು ಮಾತ್ರ. ಅನಿವಾರ್ಯವಾಗಿ ಐವರನ್ನು ವರಿಸಿದ್ದಾಳೆ. ಹೀಗಾಗಿ ನೀನು ಯಾವ ಮೋಹಕ್ಕೂ ಸಿಲುಕಬೇಡ’ ಎಂದು ಧರ್ಮರಾಯ ಭೀಮನಿಗೆ ಹೇಳುತ್ತಾನೆ.

‘ನಾನು ನಿಜಕ್ಕೂ ಇಷ್ಟಪಟ್ಟಿದ್ದು ನಿನ್ನೊಬ್ಬನನ್ನೆ’ ಎಂದು ದ್ರೋಪತಿ ಭೀಮನನ್ನು ಉದ್ದೇಶಿಸಿ ಹೇಳುವ ಮಾತು, ಒಂದು ಹಂತದಲ್ಲಿ ಕೃಷ್ಣ ಕೂಡ ದ್ರೋಪತಿಯನ್ನು ಮದುವೆಯಾಗಲು ಬಯಸಿ ನಂತರ ಸಹೋದರಿಯಂತೆ ಕಂಡ ಎಂಬ ಜನಪದರ ನೋಟ ಹೀಗೆ ಹಲವು ಕೌತುಕಗಳನ್ನು ನಾಟಕ ಉಣಬಡಿಸುತ್ತದೆ.

ಕರ್ಣ ಮತ್ತು ದ್ರೋಪತಿಯರ ನಡುವೆ ಇರುವ ಐತಿಹ್ಯಗಳ ಪ್ರಸ್ತಾಪ ನಾಟಕದಲ್ಲಿ ಕಾಣದೆ ಇರುವುದು ಕೊರತೆ ಅನಿಸುತ್ತದೆ.

ಅಂತಿಮ ದೃಶ್ಯದಲ್ಲಿ ಬದುಕೆಂದರೇನು, ಬದುಕುವುದು ಹೇಗೆ, ಬದುಕಿನ ಘಟನೆಗಳಿಗೆ ಪ್ರತಿಕ್ರಿಯಿಸುವುದು ಹೇಗೆ ..... ಇಂತಹ ಹಲವು ಪ್ರಶ್ನೆಗಳಿಗೆ ದ್ರೋಪತಿ ಹಾಗೂ ಕೃಷ್ಣನ ನಡುವೆ ಅರ್ಥಪೂರ್ಣ ಸಂವಾದ ನಡೆಯುತ್ತದೆ. ಬದುಕಿನ ಅರ್ಥಗಳನ್ನು ಶೋಧಿಸುವ ಬಗೆಯನ್ನು ದ್ರೋಪತಿಗೆ ಮನವರಿಕೆ ಮಾಡಲು ಕೃಷ್ಣ ಪ್ರಯತ್ನಿಸುತ್ತಾನೆ.

‘ನೀನೇ ಸೃಷ್ಟಿಸಿದ ಲೋಕದಲ್ಲಿ ಇಷ್ಟೊಂದು ನೋವು, ಹಿಂಸೆ ಯಾಕೆ’ ಎಂದು ದ್ರೋಪತಿ ಕೇಳಿದಾಗ, ‘ ಇದು ನಾವಾಗಿಯೆ ತಂದುಕೊಳ್ಳುವ ನೋವು’ ಎಂದು ತಣ್ಣನೆಯ ದನಿಯಲ್ಲಿ ಕೃಷ್ಣ ಉತ್ತರಿಸುತ್ತಾನೆ. ಕೊನೆಗೆ ಎಲ್ಲವೂ ಪೂರ್ವ ನಿರ್ಧರಿತ ಎಂಬ ತಾತ್ವಿಕತೆಗೆ ಜಾರುವುದು ಪ್ರಯೋಗದ ಮಿತಿ ಅನಿಸುತ್ತದೆ.

ನಾಟಕದ ಆರಂಭದಲ್ಲಿ ಯಕ್ಷಗಾನದ ಹಿನ್ನಲೆಯ ಸಂಗೀತ, ಕುಣಿತದ ಹೆಜ್ಜೆಗಳು ಕಾಣುತ್ತವೆ. ಆದರೆ ಬಹುಬೇಗ ಅವುಗಳು ರಂಗ ಸಂಗೀತ, ರಂಗ ಚಲನೆಯ ರೂಪು ಪಡೆಯುವ ಮೂಲಕ ದೃಶ್ಯಗಳು ಕಳೆಕಟ್ಟುತ್ತವೆ. ಸಂಗೀತ, ವಿನ್ಯಾಸ ನಾಟಕದ ಪ್ರಮುಖ ಭಾಗವೇ ಆಗಿದೆ.

ರಂಗಾಸ್ಥೆಯ ಕಲಾವಿದರ ಅಭಿನಯದಲ್ಲಿ ಹದವಿದೆ. ಬೆಳಕು, ವಸ್ತ್ರ ವಿನ್ಯಾಸದಲ್ಲಿ ಹೊಸತನ, ಅಚ್ಚುಕಟ್ಟುತನ ಎದ್ದು ಕಾಣುತ್ತದೆ. ಕನ್ನಡ ರಂಗಭೂಮಿಯಲ್ಲಿ ಗಣೇಶ ಮಂದಾರ್ತಿ ಯುವ ತಲೆಮಾರಿನ ಪ್ರತಿಭಾವಂತ ನಿರ್ದೇಶಕ ಎಂಬುದನ್ನು ‘ದ್ರೋಪತಿ ಹೇಳ್ತವ್ಳೆ’ ಸಾಬೀತುಪಡಿಸುತ್ತದೆ.

ಹೆಗ್ಗೋಡು ಶಿವರಾಮ ಕಾರಂತ ರಂಗಮಂದಿರದಲ್ಲಿ ಬೆಂಗಳೂರಿನ ರಂಗಾಸ್ಥೆ ಟ್ರಸ್ಟ್‌ನ ಕಲಾವಿದರು ‘ದ್ರೋಪತಿ ಹೇಳ್ತವ್ಳೆ’ ನಾಟಕವನ್ನು ಪ್ರದರ್ಶಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.