ADVERTISEMENT

ಬಂಗಾರದ ಬೆಳಕಿನಲ್ಲಿ ಮೀನಿನ ಶಿಕಾರಿ

ಕೆ.ಎಸ್‌.ರಾಜರಾಮ್‌
Published 4 ನವೆಂಬರ್ 2018, 20:00 IST
Last Updated 4 ನವೆಂಬರ್ 2018, 20:00 IST
ಶ್ರೀನಿವಾಸ ಶಾಮಾಚಾರ್‌ ತೆಗೆದ ಚಿತ್ರ
ಶ್ರೀನಿವಾಸ ಶಾಮಾಚಾರ್‌ ತೆಗೆದ ಚಿತ್ರ   

ಲಾಲ್‌ಬಾಗ್‌ನ ಆಕರ್ಷಣೆಗಳಲ್ಲಿ ಅಲ್ಲಿನ ಹೂತೋಟ, ಬೃಹತ್‌ ಮರಗಳಷ್ಟೇ ಅಲ್ಲ. ವಿಶಾಲವಾದ ಸರೋವರವೂ ಪ್ರವಾಸಿಗಳನ್ನು ಸೆಳೆಯುತ್ತದೆ. ಇಳಿಸಂಜೆಯಲ್ಲಿ ಸೂರ್ಯನ ಹೊಂಗಿರಣಗಳು ನೀರಿನಲ್ಲಿ ಪ್ರತಿಫಲಿಸಿ ಇಡೀ ಕೆರೆಯನ್ನೇ ಬಂಗಾರಮಯವಾಗಿಸುವ ಅಪರೂಪದ ನೋಟವಂತೂ ಅವಿಸ್ಮರಣೀಯ.

ಅಂದಾಜು 30 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಈ ಸರೋವರ ಹಬ್ಬಿಕೊಂಡಿದ್ದು, ಜಲಚರಗಳು, ಹಾವು ಸ್ವಚ್ಛಂದವಾಗಿ ವಿಹರಿಸುತ್ತವೆ. ಅನೇಕ ಬಗೆಯ ಪಕ್ಷಿಗಳಿಗೂ ಈ ನೀರಿನ ತಾಣ ಅಚ್ಚುಮೆಚ್ಚು. ನೀರಿನ ಸ್ವಚ್ಛತೆಯನ್ನು ಕಾಪಾಡಲು ತೋಟಗಾರಿಕೆ ಇಲಾಖೆ ಅಪಾರ ಶ್ರಮ ಪಡುತ್ತದೆ. ಸಿಹಿನೀರಿನಲ್ಲಿ ಬೆಳೆಯುವ ವಿವಿಧ ಬಗೆಯ ಮೀನುಗಳ ಕೃಷಿಗೆ ಈ ಕೆರೆ ಉತ್ತಮ ಅವಕಾಶ ಕಲ್ಪಿಸಿದೆ. ಆಗಾಗ ಟೆಂಡರ್ ಮೂಲಕ ಗುತ್ತಿಗೆದಾರರನ್ನು ನಿಯೋಜಿಸಿ, ಮೀನು ಹಿಡಿಯುವುದು ಇಲ್ಲಿನ ನಿರಂತರ ಪ್ರಕ್ರಿಯೆ. ತೆಪ್ಪದ ಮೂಲಕ ಸಾಗಿ ಬಲೆ ಬೀಸಿ ಮೀನು ಹಿಡಿಯುವ ನುರಿತ ಮೀನುಗಾರ ಕುಟುಂಬಗಳನ್ನು ಗುತ್ತಿಗೆದಾರರು ಇಲ್ಲಿ ನಿಯೋಜಿಸಿದ್ದಾರೆ.

ಅಂತಹುದೊಂದು ಮೀನುಗಾರ ಜೋಡಿ ದಿನದ ಕಾಯಕ ಮುಗಿಸಿ ತೆಪ್ಪದಲ್ಲಿ ವಾಪಸಾಗುತ್ತಿರುವ ದೃಶ್ಯವನ್ನು ಶ್ರೀನಿವಾಸ ಶಾಮಾಚಾರ್‌ ಎಂಬವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.ಸಂಜೆ ಸೂರ್ಯನ ಹೊಂಗಿರಣಗಳಲ್ಲಿ ಮಿಂದು, ಸಂಗ್ರಹಿಸಿದ ಮೀನುಗಳೊಂದಿಗೆ ತೆಪ್ಪದಲ್ಲಿ ಸಾಗಿಬರುತ್ತಿರುವ ದೃಶ್ಯವಿದು.

ADVERTISEMENT

ನಾಗಯ್ಯನಪಾಳ್ಯದ ಶ್ರೀನಿವಾಸ್‌, ಚಿಕ್ಕಂದಿನಿಂದಲೂ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡವರು. ಎಂಟು ವರ್ಷಗಳಿಂದ ಅದುವೇ ವೃತ್ತಿಯಾಗಿದೆ. ಮದುವೆ, ಸಮಾರಂಭಗಳು, ಕ್ಯಾಂಡಿಡ್, ಮಕ್ಕಳು, ವನ್ಯಜೀವಿ... ಹೀಗೆ ವಿವಿಧ ವಿಭಾಗಗಳಲ್ಲಿ ಅವರು ಆಸಕ್ತರು. ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿರುವ ಸಹಸ್ರಾರು ಛಾಯಾಗ್ರಾಹಕರ ಬಳಗವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

ಶ್ರೀನಿವಾಸ ಶಾಮಾಚಾರ್‌ ಇಲ್ಲಿ ಬಳಸಿರುವ ಕ್ಯಾಮೆರಾ, ಕೆನಾನ್ 600ಡಿ, ಜೊತೆಗೆ 55–250 ಎಂ.ಎಂ. ಜೂಂ ಲೆನ್ಸ್. ಅವರ ಎಕ್ಸ್‌ಪೋಷರ್‌ ವಿವರ ಇಂತಿವೆ: 250 ಎಂ.ಎಂ. ಫೋಕಲ್ಲೆಂಗತ್‌ನಲ್ಲಿ, ಅಪರ್ಚರ್‌ ಎಫ್‌ 7.1, ಶಟರ್ ವೇಗ 1/400 ಸೆಕೆಂಡ್ ಮತ್ತು ಐ.ಎಸ್.ಒ 100; ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದಲ್ಲಿನ ಕೆಲವು ತಾಂತ್ರಿಕ ಮತ್ತು ಕಲಾತ್ಮಕ ಅಂಶಗಳ ಅನುಸಂಧಾನವನ್ನು ನಾನು ಗಮನಿಸಿರುವುದು ಹೀಗೆ–

ವಸ್ತು ಚಲನಶೀಲವಾಗಿರುವುದರಿಂದ ಹೆಚ್ಚಿನ ಶಟರ್ ವೇಗ, ಸೂರ್ಯನ ಎದುರು ಬೆಳಕು ಪ್ರಖರವಾಗಿರುವುದರಿಂದ ಕಡಿಮೆ ಸೆನ್ಸಿಟಿವಿಟಿಯ ಐ.ಎಸ್.ಒ ಮತ್ತು ಅವುಗಳಿಗೆ ಪೂರಕವಾಗುವ ಅಪರ್ಚರ್‌ ಅಳವಡಿಸಿರುವುದು ಚಿತ್ರ ಸಮರ್ಪಕವಾಗಿ ಮೂಡಿಬರಲು ಸಹಕಾರಿಯಾಗಿದೆ.

ಬಂಗಾರದ ಎರಕವನ್ನೇ ಹೊಯ್ದಂತೆ ಭಾಸವಾಗುವ ಎದುರಿನಿಂದ ಬೀಳುತ್ತಿರುವ ಇಳಿಸಂಜೆಯಸೂರ್ಯ ಕಿರಣದ ಪ್ರಭೆಯು ನೀರಿನ ಮೇಲ್ಮೈಯ ತೆಳುವಾದ ಅಲೆಗಳನ್ನು ಬೆಳಗಿ ನೆರಳು ಬೆಳಕಿನ ಮೋಹಕ ಮಾಟವನ್ನೇ ಸೃಷ್ಟಿಸಿದೆ. ಇದರಿಂದ ಮೀನುಗಾರ ಮತ್ತು ಆತನ ಸಂಗಾತಿಯ ಸಿಲ್ಹೋಯೆಟ್ (ಎದುರು ಬೆಳಕಿಗೆ ವಸ್ತು ಕಪ್ಪಾಗಿ ಕಾಣಿಸುವುದು) ನಿಲುವುಗಳು ದೃಶ್ಯಕ್ಕೆ ಮತ್ತಷ್ಟು ಮೆರುಗು ನೀಡಿದಂತಾಗಿದೆ. ಇದು, ಒಟ್ಟಾರೆ ಚಿತ್ರದ ಪ್ರಭಾವವನ್ನು ಇಮ್ಮಡಿ ಮಾಡಿದೆ.

ನಿಂತಿರುವ ಮೀನುಗಾರನು ಬಲೆಯಿಂದ ಒಂದೊಂದಾಗಿ ಮೀನುಗಳನ್ನು ಬಿಡಿಸಿ ಸಂಗ್ರಹಿಸುವ ಪರಿ ಕೂಡಾ ಆಕರ್ಷಕವಾಗಿದೆ. ಒಟ್ಟಾರೆ, ಅವರ ಬದುಕಿನ ಚಿತ್ರಣಕ್ಕೆ ಕನ್ನಡಿ ಹಿಡಿದಂತಿರುವ ಈ ಚಿತ್ರ ಒಂದು ಸುಂದರ ಕ್ಯಾನ್ವಾಸ್‌ನಂತೆಯೂ ಕಾಣುತ್ತಿರುವುದು ಪ್ರಶಂಸನೀಯ.

ಒಂದು ಬಗೆಯಲ್ಲಿ, ಈ ಚಿತ್ರ ಏಕ ವರ್ಣದ್ದಾಗಿದ್ದರೂ (ಮೋನೊಕ್ರೊಮ್ಯಟಿಕ್), ಛಾಯಾಗ್ರಹಣದ ಕೋನ (ಆ್ಯಂಗಲ್ ಆಫ್ ಶೂಟಿಂಗ್) ಅತ್ಯಂತ ಸಮರ್ಪಕವಾಗಿರುವುದು ಚಿತ್ರಣದ ಪ್ರಭಾವವನ್ನು ಪರಿಣಾಮಕಾರಿಯಾಗಿಸಿದೆ. ನೀರಿನ ಅಲೆಗಳ ಮೇಲಿನ ಟೆಕ್ಸ್‌ಚರ್ ಮತ್ತು ಸೂರ್ಯನ ಕಿರಣಗಳ ಬಂಗಾರದ ವರ್ಣ ಪ್ರಸರಣವನ್ನಷ್ಟೇ (ಟೋನಲ್ ಡಿಸ್ಟ್ರಿಬ್ಯೂಶನ್) ನೋಡುಗನ ಕಣ್ಣಿಗೆ ದಾಟಿಸುವಲ್ಲಿ ಹಾಗೂ ತೆಪ್ಪದ ಮೇಲಿನ ಇಬ್ಬರ ಚಲನೆಯನ್ನೂ ಸರಿಯಾಗಿ ಸೆರೆಹಿಡಿಯುವಲ್ಲಿ ಈ ಕೋನದ ಪಾತ್ರ ಮುಖ್ಯವಾಗಿದೆ.

ಸಂಯೋಜನೆಯ ಕಲಾತ್ಮಕ ಅಂಶಗಳೆಲ್ಲವೂ ಉತ್ತಮವಾಗಿವೆ. ನೋಡುಗನ ಕಣ್ಣು ಮೊದಲು ನಾಟಬಹುದಾದ ಮುಖ್ಯ ವಸ್ತು (ಮಹಿಳೆಯ ಕೈಯ ಭಾಗ) ‘ಗೋಲ್ಡನ್ ಕ್ರಾಸ್ ರೂಲ್‌’ಗೆ ಅನ್ವಯವಾಗುವ ಚೌಕಟ್ಟಿನ ಒಂದು ಮೂರಾಂಶದ ಬಿಂದುವಿನಲ್ಲಿ ಇರುವುದು ಗಮನಾರ್ಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.