ADVERTISEMENT

ಜನಪದ ಕಲೆಗಳ‘ಲಿಟ್ಲ್‌ ಮಾಸ್ಟರ್‌’

ಮೂರುತಿ ಚಿಕ್ಕದು, ಕೀರ್ತಿ ದೊಡ್ಡದು

ಎಂ.ಎನ್.ಯೋಗೇಶ್‌
Published 6 ನವೆಂಬರ್ 2019, 19:30 IST
Last Updated 6 ನವೆಂಬರ್ 2019, 19:30 IST
ಡೊಳ್ಳುಕುಣಿತದಲ್ಲಿ ಅನಿಲ್‌ಕುಮಾರ್‌– ಚಿತ್ರಗಳು: ಸಂತೋಷ್‌ ಚಂದ್ರಮೂರ್ತಿ
ಡೊಳ್ಳುಕುಣಿತದಲ್ಲಿ ಅನಿಲ್‌ಕುಮಾರ್‌– ಚಿತ್ರಗಳು: ಸಂತೋಷ್‌ ಚಂದ್ರಮೂರ್ತಿ   

ಮೂರು ಅಡಿ ಎತ್ತರವಿರುವ ಅವರು ಆರಡಿ ಎತ್ತರದ ಮರಗಾಲುಗಳ ಮೇಲೆ ನರ್ತಿಸುತ್ತಿದ್ದರೆ ಅಚ್ಚರಿ ಮೂಡುತ್ತದೆ. ತನ್ನ ದೇಹಕ್ಕಿಂತಲೂ ದಪ್ಪ ಗಾತ್ರದ ಡೊಳ್ಳು ಮೈಗೇರಿಸಿಕೊಂಡರೆ ನೋಡುಗರ ಕಾಲು ಕುಣಿಯುತ್ತವೆ. ತನಗಿಂತಲೂ ಎತ್ತರವಿರುವ ಪೂಜಾ ದೇವರನ್ನು ಹೊತ್ತು ನಿಂತು, ಮೇಲಕ್ಕೆ ಹಾರಿ ಕೆಳಗಿಳಿಯುತ್ತಾರೆ. ತಮಟೆ ಹೆಗಲೇರಿದರೆ ‘ಟಪ್ಪಾಂಗುಚಿ’ ಸೃಷ್ಟಿಯಾಗುತ್ತದೆ. ಒನಕೆ ಕುಣಿತಕ್ಕಿಳಿದರೆ ಲಯ, ತಾಳಗಳು ಮೇಳೈಸುತ್ತವೆ. ಹುಲಿ ವೇಷ ಧರಿಸಿ ನಿಂತರೆ ನೋಡುಗರ ಕಣ್ಣರಳುತ್ತವೆ.

ಕುಬ್ಜ ಎಂಬ ಕಾರಣಕ್ಕೆ ಎಲ್ಲರಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದ್ದ ಅನಿಲ್‌ಕುಮಾರ್‌ ಅವರನ್ನು ಸಲುಹಿದ್ದು ಇವೇ ಜನಪದ ಕಲೆಗಳು. ಮಂಡ್ಯ ತಾಲ್ಲೂಕು ಕಾರಸವಾಡಿ ಗ್ರಾಮದಲ್ಲಿ ಅಜ್ಜಿಯ ಜೊತೆ ಬೆಳೆಯುತ್ತಿದ್ದ ಅನಿಲ್‌ಕುಮಾರ್‌ ‘ತಾಳ’ ನುಡಿಸುವ ಮೂಲಕ ತಮ್ಮ ಜಾನಪದ ಬದುಕು ಆರಂಭಿಸಿದರು. ಒಂದಂಗುಲವಿದ್ದ ಕೈಗಳಲ್ಲಿ ತಾಳಗಳು ಮೊಳಗುತ್ತಿದ್ದರೆ ಮನಸ್ಸುಗಳು ಅರಳುತ್ತಿದ್ದವು. ಈ ಹುಡುಗನ ಪ್ರತಿಭೆ, ಗ್ರಾಮದಲ್ಲಿ ಕಲಾ ತಂಡ ಕಟ್ಟಿದ್ದ ಹಿರಿಯ ಕಲಾವಿದ ಕೆ.ಪಿ.ದೇವರಾಜು ಅವರಿಗೆ ತಿಳಿಯಿತು. ನಂತರ ಅನಿಲ್, ಆ ತಂಡದ ಅವಿಭಾಜ್ಯ ಅಂಗವಾದರು.

ಕೆಲವೇ ದಿನಗಳಲ್ಲಿ ಹಲವು ಜನಪದ ವಾದ್ಯಗಳಲ್ಲಿ ಪಾರಂಗತರಾದರು. ಜನಪದ ತಂಡದ ನಾಯಕನಾಗಿ ಕಲಾ ಪ್ರದರ್ಶನ ಮುನ್ನಡೆಸುವ ಹಂತಕ್ಕೆ ತಲುಪಿದರು. ರಾಜ್ಯ, ರಾಷ್ಟ್ರಮಟ್ಟದ ಹಲವು ಉತ್ಸವಗಳಲ್ಲಿ ಪ್ರದರ್ಶನ ನೀಡಿ ಮನ್ನಣೆ ಗಳಿಸಿದರು. ದೇಶದ ಯಾವುದೇ ಭಾಗದಲ್ಲಿ ಜಾನಪದ ಉತ್ಸವ ನಡೆದರೂ ಅನಿಲ್‌ಕುಮಾರ್‌ ತಂಡದ ಪ್ರದರ್ಶನ ಇದ್ದೇ ಇರುತ್ತಿತ್ತು. ದೆಹಲಿ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ರಾಜ್ಯಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಈಗ ಅವರ ಕಲೆ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಲಿಲ್ಲ. ಬದಲಿಗೆ ಕೀನ್ಯಾ, ಮಲೇಷ್ಯಾ ಕಲಾ ಉತ್ಸವಗಳವರೆಗೂ ತಲುಪಿದೆ.

ADVERTISEMENT

ಚಲನಚಿತ್ರಗಳಲ್ಲಿ ಪ್ರದರ್ಶನ

10 ಕಲಾವಿದರ ತಂಡವನ್ನು ಮುನ್ನಡೆಸುವ ಅನಿಲ್‌ ಕುಮಾರ್‌ ವೇದಿಕೆಯಲ್ಲಿ ಹಲವು ಸಾಹಸ ಪ್ರದರ್ಶಿಸಿ ಗಮನ ಸೆಳೆಯುತ್ತಾರೆ. ಅವರು ಕೇವಲ ಉತ್ಸವಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಕನ್ನಡ, ತಮಿಳು, ಹಿಂದಿ ಚಲನಚಿತ್ರಗಳಲ್ಲೂ ತಮ್ಮ ಪ್ರತಿಭೆ ತೋರಿಸಿದ್ದಾರೆ. ಜೋಗಿ, ಚಂದು, ಕೋಟಿಗೊಬ್ಬ, ಉಪ್ಪಿದಾದ ಎಂಬಿಬಿಎಸ್‌, ಪರೋಡಿ, ಸಂತ ಕನ್ನಡ ಚಿತ್ರಗಳು, ಮಜಾ ತಮಿಳು ಚಿತ್ರ, ಚಲ್‌ಚಲ್‌ ಹಿಂದಿ ಚಿತ್ರದಲ್ಲಿ ಅನಿಲ್‌ ಕುಮಾರ್‌ ಜನಪದ ಕಲಾ ಪ್ರದರ್ಶನ ನೀಡಿದ್ದಾರೆ.

ಲಿಟ್ಲ್‌ ಮಾಸ್ಟರ್‌

ಬಹಳ ಪ್ರಯೋಗಾತ್ಮಕವಾಗಿ ಜನಪದ ಕಲೆಗಳನ್ನು ವೇದಿಕೆಗೆ ತರುವಲ್ಲಿ ಅನಿಲ್‌ ಹೆಸರುವಾಸಿಯಾಗಿದ್ದಾರೆ. ಖಾಸಗಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೂಪರ್‌ ಸ್ಟಾರ್‌ ಆಫ್‌ ಕರ್ನಾಟಕ’ ರಿಯಾಲಿಟಿ ಡಾನ್ಸ್‌ ಶೋನಲ್ಲಿ ಭಾಗವಹಿಸಿದ್ದ ಅವರ ತಂಡ ಎಲ್ಲರ ಗಮನ ಸೆಳೆದಿತ್ತು. ಡೊಳ್ಳು ಕುಣಿತವನ್ನು ಬಹಳ ವಿಶೇಷವಾಗಿ ಪ್ರದರ್ಶನ ನೀಡಿದ್ದರು. ಸಾಹಸ ಪ್ರದರ್ಶನದ ನಿರ್ವಹಣೆಯನ್ನು ಕಂಡ ತೀರ್ಪುಗಾರ, ನಟ ದೇವರಾಜ್ ಅನಿಲ್‌ ಕುಮಾರ್‌ಗೆ ‘ಲಿಟ್ಲ್‌ ಮಾಸ್ಟರ್‌’ ಎಂಬ ಬಿರುದು ನೀಡಿ ಗೌರವಿಸಿದರು. ‘ಹಳ್ಳಿ ಹುಡುಗ ಪ್ಯಾಟೆಗೆ ಬಂದ’ ರಿಯಾಲಿಟಿ ಶೋನಲ್ಲೂ ಇವರ ತಂಡ ಪ್ರದರ್ಶನ ನೀಡಿದೆ.

ಕನ್ನಡ ರಿಯಾಲಿಟಿ ಶೋ ಮಾತ್ರವಲ್ಲದೇ ಬಂಗಾಳಿಯ ಈಟಿವಿ ಅದುರ್ಸ್‌ ಡಾನ್ಸ್‌ ಶೋ, ಆಂಧ್ರಪ್ರದೇಶದ ‘ಆರ್‌ ಯು ರೆಡಿ’ ರಿಯಾಲಿಟಿ ಶೋನಲ್ಲೂ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭದಲ್ಲೂ ಡೊಳ್ಳು, ಪೂಜಾ ಕುಣಿತ ಪ್ರದರ್ಶನ ನೀಡಿದ್ದಾರೆ.

ತರಬೇತುದಾರ

32 ವರ್ಷ ವಯಸ್ಸಿನ ಅನಿಲ್‌ಕುಮಾರ್‌ ಜನಪದ ಕಲೆಗಳ ತರಬೇತುದಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಆಸರೆ ಜಾನಪದ ಹಾಗೂ ಸಾಂಸ್ಕೃತಿಕ ಕಲಾ ಸಂಘ ಕಟ್ಟಿದ್ದು ಕಾರ್ಯಕ್ರಮ ನೀಡುವ ಜೊತೆಗೆ ಶಾಲಾ–ಕಾಲೇಜಿಗೆ ತೆರಳಿ ಕಲೆಗಳ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೂ ಡೊಳ್ಳು, ಪೂಜಾ ಕುಣಿಕ ಕಲಿಸಿದ ಕೀರ್ತಿ ಅವರ ಮೇಲಿದೆ. ಮೆಡಿಕಲ್‌ ವಿದ್ಯಾರ್ಥಿಗಳಿಗೂ ಜನಪ‍ದ ಕಲೆಗಳ ಪಾಠ ಹೇಳಿಕೊಟ್ಟಿದ್ದಾರೆ. ಅವರ ಕಲಾ ಸೇವೆಗೆ ಹಲವು ಪ್ರಶಸ್ತಿ, ಗೌರವಗಳು ಮುಡಿಗೇರಿವೆ.

‘ನನ್ನ ಗುರು ಕೆ.ಪಿ.ದೇವರಾಜ್‌ ಅವರ ಮಾರ್ಗದರ್ಶನದಿಂದಲೇ ಇಲ್ಲಿಯವರೆಗೂ ನಡೆದು ಬಂದಿದ್ದೇನೆ. ಎಲ್ಲರಿಗೂ ಬೇಡವಾಗಿದ್ದ ನನನ್ನು ಜನಪದ ಕಲೆ ಕೈ ಹಿಡಿದು ಮುಂದೆ ನಡೆಸುತ್ತಿದೆ. ಮುಂದೆಯೂ ಕಲೆಗಳ ಜೊತೆಯಲ್ಲೇ ಸಾಗುತ್ತೇನೆ’ ಎನ್ನುತ್ತಾರೆ ಅನಿಲ್‌ಕುಮಾರ್‌. ಅವರನ್ನು ಮೊ: 9844640979 ನಲ್ಲಿ ಸಂಪರ್ಕಿಸಬಹುದು.

ಜನಪದ ವಾದ್ಯ ತಯಾರಕ

ಜನಪ‍ದ ವಾದ್ಯಗಳ ನುಡಿಸಾಣಿಕೆ ಜೊತೆಗೆ ಅನಿಲ್‌ಕುಮಾರ್‌ ವಾದ್ಯಗಳ ತಯಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ತಮ್ಮ ತಂಡಕ್ಕೆ ಬೇಕಾದ ವಾದ್ಯಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಫೈಬರ್‌ನಿಂದ ತಮಟೆ ತಯಾರಿಸುತ್ತಾರೆ. ವಿವಿಧ ಗಾತ್ರದ ಡೊಳ್ಳು ತಯಾರಿಸುವಲ್ಲೂ ನಿಷ್ಣಾತರಾಗಿದ್ದಾರೆ. ಜೊತೆಗೆ ಪೂಜಾ ದೇವರ ತಯಾರಿಕೆಯಲ್ಲೂ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.