ಜೈಪುರ: ‘ಮನುಷ್ಯ ವಿಕಾಸ ಎಂಬುದು ಹಾವು ಏಣಿ ಆಟ ಇದ್ದಂತೆ’ – ನಾಗರಿಕ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಸಾಹಿತ್ಯದ ಪಾತ್ರವೇನು ಎಂಬ ಕುರಿತು ಹೀಗೆ ವಿಶಿಷ್ಟ ಇಮೇಜ್ ಮೂಲಕ ಮನಮುಟ್ಟುವಂತೆ ಹೇಳಿದರು ಡಿಎಸ್‌ಸಿ ಪ್ರಶಸ್ತಿ ಪುರಸ್ಕೃತ ಕಥೆಗಾರ ಜಯಂತ ಕಾಯ್ಕಿಣಿ.
ಜೈಪುರ ಸಾಹಿತ್ಯೋತ್ಸವದಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡ ಅವರ ‘ನೋ ಪ್ರಸೆಂಟ್ ಪ್ಲೀಸ್’ ಕೃತಿಯ ಕುರಿತು ಮಾತನಾಡುತ್ತಾ ಅವರು ತಮ್ಮನ್ನು ಇತ್ತೀಚೆಗೆ ಕಾಡುತ್ತಿರುವ ಹಾವು ಏಣಿ ಆಟದ ರೂಪಕದ ಕುರಿತು ಹೇಳಿಕೊಂಡರು.
‘ನಾವೆಲ್ಲರೂ ಹಾವು ಏಣಿ ಆಟ ಆಡುತ್ತಿರುವವರೇ. ಮನುಷ್ಯ ನಾಗರಿಕತೆಯ ವಿಕಾಸದ ಹಾದಿಯಲ್ಲಿ ಸಾಕಷ್ಟು ಏಣಿಗಳಿವೆ; ಹಾಗೆಯೇ ಹಾವುಗಳೂ ಇವೆ. ಸಾಹಿತ್ಯ, ಚಿಂತಕರು, ಚಿಂತನೆ, ಕಲೆ ಇವೆಲ್ಲವೂ ಏಣಿಗಳು. ಜಾತಿ, ಲಿಂಗತಾರತಮ್ಯ, ಪಕ್ಷಪಾತ, ಲೋಭ, ಅಸಮಾನತೆ ಇವೆಲ್ಲವೂ ಹಾವುಗಳು. ನಮ್ಮ ಎಲ್ಲ ಕೃತಿ–ಕಲೆಗಳು ಮನುಷ್ಯ ಸಮಾಜವನ್ನು ಇನ್ನಷ್ಟು ಎತ್ತರಕ್ಕೆ ಏರಿಸುತ್ತವೆ. ಆದರೆ ಈ ವಿಕಾಸದ ಉತ್ತುಂಗಕ್ಕೆ ಏರುವ ದಾರಿಯಲ್ಲಿ ಒಮ್ಮೆಲೇ ತಳಕ್ಕೆ ನೂಕಬಲ್ಲ ಹಾವೂ ಇದೆ ಎನ್ನುವುದನ್ನು ಮರೆಯಬಾರದು. ಆ ಹಾವು ನಮ್ಮೆಲ್ಲರನ್ನೂ ಕಾಡುತ್ತದೆ. ಕಲೆಯ ಏಣಿಯ ಮೂಲಕ ಆ ಹಾವಿನ ಬಾಯಿಯಿಂದ ತಪ್ಪಿಸಿಕೊಂಡು ಮೇಲಕ್ಕೆ ಏರಬೇಕಿದೆ’ ಎಂದು ಆಟದ ರೂಪಕದ ಅನ್ವಯವನ್ನು ಅವರು ವಿವರಿಸಿದರು.
ಕವಿಯ ಕೈಯಲ್ಲಿ ಭಾಷಾಂತರ ಸುರಕ್ಷಿತ:
ಭಾಷಾಂತರದ ಕುರಿತಾಗಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ‘ಕವಿಯ ಕೈಯಲ್ಲಿ ಭಾಷಾಂತರ ಸುರಕ್ಷಿತವಾಗಿರುತ್ತದೆ. ಯಾಕೆಂದರೆ ಕವಿ ಯಾವಾಗಲೂ ಅನಿರ್ವಚನೀಯಕ್ಕೆ ಅಂಟಿಕೊಂಡಿರುವವನು. ಅನುಭವವಾಗಿ ಗ್ರಹಿಸದೇ ಹೋದರೆ ಒಂದು ಭಾಷೆಯ ಕೃತಿಯಲ್ಲಿನ ಅನಿರ್ವಚನೀಯ ಸಂಗತಿಗಳನ್ನು ಇನ್ನೊಂದು ಭಾಷೆಗೆ ಭಾಷಾಂತರಿಸುವುದು ಸಾಧ್ಯವಿಲ್ಲ. ಈ ದೃಷ್ಟಿಯಿಂದ ನಮ್ಮ ಕೃತಿಗಳನ್ನು ಭಾಷಾಂತರಿಸುವವರು ಕವಿಯಾಗಿದ್ದರೆ ನಾವು ಅರ್ಧ ಯುದ್ಧ ಗೆದ್ದ ಹಾಗೆ’ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಕಥೆಗಳನ್ನು ಸಮರ್ಥವಾಗಿ ಭಾಷಾಂತರಿಸಿದ ತೇಜಸ್ವಿನಿ ನಿರಂಜನ ಅವರನ್ನೂ ಜಯಂತ ನೆನಪಿಸಿಕೊಂಡರು.
ಮನುಷ್ಯನೇ ನನ್ನ ಬರವಣಿಗೆಯ ಕೇಂದ್ರ:
ಮತ್ತೊಂದು ನಿದರ್ಶನವನ್ನು ಬಳಸಿಕೊಂಡೇ ಅವರು ತಮ್ಮ ಬರವಣಿಗೆಯ ಕೇಂದ್ರದ ಕುರಿತೂ ವಿವರಿಸಿದರು. ‘ತಾಜ್‌ಮಹಲ್‌ನ ಎದುರಿನ ದೃಶ್ಯ ಆಕರ್ಷಣೀಯ; ಜನಪ್ರಿಯ. ಆದರೆ ರಘು ರಾಯ್ ಅವರಂಥ ಶ್ರೇಷ್ಠ ಛಾಯಾಗ್ರಾಹಕರು ಯಮುನಾ ನದಿಯ ಮೂಲಕ ಹೋಗಿ ತಾಜ್‌ಮಹಲ್‌ನ ಹಿಂಬದಿಯ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ. ಅದೊಂದು ಭಿನ್ನ ದೃಷ್ಟಿಕೋನ. ಮನುಷ್ಯ ಜಗತ್ತನ್ನು ಹೀಗೆ ಭಿನ್ನ ದೃಷ್ಟಿಕೋನದಲ್ಲಿ ಗ್ರಹಿಸುವುದೇ ನನ್ನ ಬರವಣಿಗೆಯ ಉದ್ದೇಶ. ಮನುಷ್ಯನೇ ನನ್ನ ಬರವಣಿಗೆ ಕೇಂದ್ರ’ ಎನ್ನುವುದು ಅವರ ವಿವರಣೆ.
ತಮ್ಮನ್ನು ಅತಿಯಾಗಿ ಪ್ರಭಾವಿಸಿದ ಮುಂಬೈ ನಗರದ ಕುರಿತೂ ಮಾತನಾಡಿದ ಅವರು ‘ಮುಂಬೈ ನನ್ನ ಪಾಲಿಗೆ ಅನುಭಾವಿಕ ಜಾಗ. ಶೇಖರಣೆಗೆ, ಸಂಗ್ರಹಣೆಗೆ ಭೌತಿಕ ಜಾಗವೇ ಇಲ್ಲದ ಪುಟ್ಟ ಪುಟ್ಟ ಮನೆಗಳ ಆ ಮಹಾನಗರಕ್ಕೆ ಎಲ್ಲರನ್ನೂ ಬಿಡುಗಡೆ ಮಾಡುವ ಶಕ್ತಿ ಇದೆ. ‘ಹಮ್‌ಕೋ’, ‘ಆಪ್‌ಕೋ’ ಎಂಬೆಲ್ಲ ಮಾತುಗಳು ಅಲ್ಲಿ ‘ತೇರೆಕೋ’ ‘ಮೇರೆಕೋ’ ಎಂದು ಬದಲಾಗುತ್ತದೆ. ಇಡೀ ನಗರವೇ ಏಕವಚನದಲ್ಲಿ ಮಾತನಾಡುತ್ತದೆ. ಹಾಗೆಯೇ ಆ ಮಹಾನಗರ ನನ್ನನ್ನು ಅನಾಮಧೇಯನನ್ನಾಗಿಸಿತು. ಅನಾಮಧೇಯತೆಯೇ ಸೃಜನಶೀಲತೆಯ ಮೂಲದೃವ್ಯ. ಬರವಣಿಗೆಯ ಮೂಲಕ ನಾವು ಪ್ರಯತ್ನಿಸುವುದೂ ಅನಾಮಧೇಯತೆಯನ್ನೇ. ಈ ಜನಪ್ರಿಯತೆ, ಪ್ರಶಸ್ತಿಗಳಿಗೂ ಬರವಣಿಗೆಗೂ ಯಾವ ಸಂಬಂಧವೂ ಇಲ್ಲ. ಬರವಣಿಗೆಯ ಮೂಲ ಉದ್ದೇಶ ಅನಾಮಧೇಯನಾಗುವುದು’ ಎಂದು ಅವರು ಹೇಳಿದರು.
ಮೂಲತಃ ನಾನು ಕವಿ
ನಿಮ್ಮೊಳಗಿನ ಕವಿ ಮತ್ತು ಕತೆಗಾರ ಪರಸ್ಪರ ಪ್ರಭಾವಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಜಯಂತ್, ‘ನನ್ನೊಳಗಿನ ಕವಿತೆಯೇ ಕಥೆ, ಪ್ರಬಂಧ, ಗೀತೆಗಳ ರೂಪದಲ್ಲಿ ವ್ಯಕ್ತಗೊಳ್ಳುತ್ತದೆ ಎಂದು ಅಂದುಕೊಂಡಿದ್ದೇನೆ. ರೂಪಕಗಳು, ಪ್ರತಿಮೆಗಳು, ಚಿತ್ರಗಳು ನನ್ನನ್ನು ಕಾಡುತ್ತವೆ. ಯಾಕೆಂದರೆ ಮೂಲತಃ ನಾನೊಬ್ಬ ಕವಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.