ಧನದಸಿ ಮೊನೆ
ಶ್ರೀ ರಾಮಕೃಷ್ಣ ಪರಮಹಂಸರು ಹುಟ್ಟಿ ನೂರು ವರ್ಷವಾದ ಸಂದರ್ಭದಲ್ಲಿ ಕುವೆಂಪು ಅವರು ‘ಶತಾಮನ ಸಂಧ್ಯೆ’ಕವನ ರಚಿಸಿದ್ದಾರೆ. ಅದರಲ್ಲಿ ಮೌಢ್ಯಭಾವದಿಂದ ಮತಿ ಹೀನತೆ ಮತ ಕಲಹ ನಾಶವಾಗುವುದಿಲ್ಲ. ನರಹೃದಯದ ಬಿಸಿ ರಕ್ತದ ಬಾಯಾರಿಕೆ ಆರಿಲ್ಲ. ದಾರಿದ್ರ್ಯದ ಕರುಳನ್ನು ಇರಿಯುವ ಸಿರಿವಂತರ ಹಣದ ಕತ್ತಿಯ ಹರಿತವಾದ ತೀಕ್ಷ್ಣತೆ ಕುಗ್ಗಿ ಮಸುಕಾಗಿಲ್ಲ ಎಂದು ಧನದಾಹಿಗಳ ದೌರ್ಜನ್ಯ ಚಿತ್ರಿಸಿದ್ದಾರೆ. ದೀನ ದಲಿತರ ಮೇಲಿನ ನಿರಂತರ ದೌರ್ಜನ್ಯ ಕ್ರೌರ್ಯ ಹಿಂಸೆಯು ಇಲ್ಲಿ ಕಾವ್ಯವಾಗಿ ಹರಿದಿದೆ. ‘ಧನದಸಿಮೊನೆ’ ಪದ ರೂಪಕವಾಗಿಯೂ ಪ್ರಯೋಗವಾಗಿದೆ.
‘ದಾರಿದ್ರ್ಯದ ಕರುಳಿರಿಯುವ
ಧನದಸಿಮೊನೆ ಮಾಸಿಲ್ಲ’ (ಶತಮಾನ ಸಂಧ್ಯೆ – ಅಗ್ನಿಹಂಸ)
ಅಂಚೆದಿಪ್ಪುಳ್
ಅಂಚೆದಿಪ್ಪುಳ್ (ನಾ). ಹಂಸಪಕ್ಷಿಯ ಗರಿಯ ನವಿರು
‘ನನ್ನ ಮಗ ಹಂಸಪಕ್ಷಿಯ ಗರಿಯ ನವಿರಿನ ಹಾಸಿಗೆಯಲ್ಲಿ ಮಲಗುತ್ತಿದ್ದಾನೆ. ಆ ಮೃದು ಶರೀರದವನು ಕಲ್ಲು ಮುಳ್ಳುಗಳಲ್ಲಿ ನಡೆಯುವಂತೆ ಕಾಡಿಗೆ ಓಡಿಸಲು ನೀನು ಹೇಗೆ ಯೋಚಿಸಿದೆ.’ ಎಂದು ದಶರಥನು ತನ್ನ ಪ್ರೀತಿಪಾತ್ರ ಮಗನನ್ನು ಕಾಡಿಗೆ ಕಳುಹಿಸೆಂದು ಕೈಕೆ ಕೇಳಿದಾಗ ನೊಂದು ನುಡಿಯುತ್ತಾನೆ.
ರಾಮನ ಎಲ್ಲ ಮೃದು ಭಾವಗಳಿಗೆ ಸೂಕ್ತವಾಗಿ ಕುವೆಂಪು ‘ಅಂಚೆದಿಪ್ಪುಳ್’ ಪದ ಪ್ರಯೋಗಿಸಿದ್ದಾರೆ.
ಅಂಚೆದಿಪ್ಪುಳ್ ಸಜ್ಜೆಯೊಳ್ ಪವಡಿಪಾತನಂ
ಕಲ್‍ಮುಳ್ಳಿಗಟ್ಟಲ್ಕದೆಂತು ಬಗೆದಂದೆ ನೀಂ
ಅಗಂಗೊಳ್
ಅಗಂಗೊಳ್ (ಕ್ರಿ). ಒಳಕೊಳ್ಳು; ಸ್ವಾಧೀನಪಡಿಸಿಕೊ (ಅಗ + ಕೊಳ್)
ಬೆದರುಗಣ್ಣಾಗುತ್ತೆ ನಿಟ್ಟಿಸಿದಳೇನನೊ ಸುದೂರವನಗಂಗೊಳ್ವವೋಲ್
ಅಗ (ನಾ). ಒಳಗು, ಒಳಗಡೆ ಎಂಬ ಅರ್ಥವುಳ್ಳ ಶಬ್ದ.
(ಈ ಶಬ್ದಕ್ಕೆ ಕನ್ನಡದಲ್ಲಿ ಸ್ವತಂತ್ರ ಪ್ರಯೋಗವಿಲ್ಲ. ಇದು ‘ಅಂಗಗೊಳ್’. ‘ಅಗಪಡು’ ಮೊದಲಾದ ಸಮಾಸಗಳಲ್ಲಿ ‘ಅಗ-:’, ‘ಅಗಂ-’ ಈ ರೂಪಗಳಲ್ಲಿ ದೊರೆಯುತ್ತದೆ.)
ಸೀತೆಯು ಯುದ್ಧ ಸಮಯದಲ್ಲಿ ಅಂತರ್ಮುಖಿಯಾಗಿ ಅದನ್ನು ಪರಿಭಾವಿಸುತ್ತ, ಬೆದರುಗಣ್ಣಿನಿಂದ ದೂರದಲ್ಲಿರುವುದನ್ನು ಒಳಕೊಳ್ಳುವಂತ- ಪ್ರಜ್ಞೆಗೆ ಒಳಗಾಗುತ್ತಾಳೆ. ಆಗ ಕುವೆಂಪು ಅವರು ಆ ಮನೋಸ್ಥಿತಿಯನ್ನು ಪದಗಳಲ್ಲಿ ಅಭಿವ್ಯಕ್ತಿಸಲು ಸಮಾಸ ಪದ ‘ಅಗಂಗೊಳ್’ ಸೃಷ್ಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.