ADVERTISEMENT

ಕಸೂತಿ ಕಾರ್ಯಾಗಾರ: ಕಾಲೇಜು ಮಕ್ಕಳ ಕೈಗಳಲ್ಲಿ ಕುಸುರಿ ಕಲೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಆಯೋಜಿಸಿದ ಕಸೂತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು
ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಆಯೋಜಿಸಿದ ಕಸೂತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು   

ಕವಡೆ.. ಕವಡೆ ಕೊಡಿ.. ಚೂರು ಫೆವಿಕ್ವಿಕ್‌.. ಇದು ಸರಿ ಇದೆಯಾ... ಕನ್ನಡಿ ಅಂಟಿಸೋದು ಮರತ್ನಲ್ಲಪ್ಪಾ... ಈ ಪಟ್ಟಿಯಲ್ಲಿ ಕವಡೆ ಚಂದ ಕಾಣ್ತವೆ ಅಲ್ವೇನೆ.. 

ಸರ್ಕಾರಿ ಕಲಾ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ಕನ್ನಡಿಯ ಚಮಕು, ಕವಡೆಯ ಗಿಲಕು. ಬಂಜಾರಾ ಅಕಾಡೆಮಿ ಏರ್ಪಡಿಸಿದ್ದ ಕಸೂತಿ ಕಾರ್ಯಾಗಾರದಲ್ಲಿ ಕೇಳಿಬಂದ ಮಾತುಗಳಿವು.

ಲಂಬಾಣಿಗರ ಶಾಲು ಮತ್ತು ಕಮ್ಮರ್‌ ಬಂಧ್‌ ಎಂದು ಕರೆಯಲಾಗುವ ಸೊಂಟದಪಟ್ಟಿಯ ಮೇಲಿನ ಕಸೂತಿ ಮಾಡುವುದನ್ನು ಕಲಿಸಲಾಯಿತು.

ADVERTISEMENT

ನೂರು ವಿದ್ಯಾರ್ಥಿಗಳು, ಎಲ್ಲ ಸಮುದಾಯದವರೂ ಅತ್ಯುತ್ಸಾಹದಿಂದ ಬಂದು ಈ ಕಲೆಯನ್ನು ಕಲಿತುಕೊಂಡರು. ಬಂಜಾರಾ ಅಕಾಡೆಮಿ ಆಯೋಜಿಸಿದ್ದ ಈ ಉಚಿತ ಕಾರ್ಯಾಗಾರದಲ್ಲಿ ಬಂಜಾರಾ ಸಮುದಾಯದ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಲಾಯಿತು.

ಕಸೂತಿ ಕಾರ್ಯಾಗಾರವೆಂದರೆ ಕೇವಲ ಟಿಕಳಿ, ಕನ್ನಡಿ, ಕವಡೆ ಮತ್ತು ಸೂಜಿದಾರಗಳ ದರ್ಬಾರು ಇರಲಿಲ್ಲ. ಜೊತೆಗೆ ಬಂಜಾರಾ ಜನಾಂಗದ ಕುರಿತೂ ಬೆಳಕು ಚೆಲ್ಲಲಾಯಿತು.

ಅಲೆಮಾರಿ ಜನಾಂಗದವರಾದ ಇವರು ಈ ಹಿಂದೆ ಯುದ್ಧಭೂಮಿಗೂ, ತಾಯಿನಾಡಿಗೂ ಸಂದೇಶವಾಹಕರಂತೆ, ಸಾಮಾಗ್ರಿಗಳ ಸರಬರಾಜು ಮಾಡುವವರಂತೆ ವರ್ತಿಸುತ್ತಿದ್ದರು. ಕಾಡುಮೇಡುಗಳಲ್ಲಿ ಅಲೆಯುವಾಗ ದುಷ್ಟಪ್ರಾಣಿಗಳ ದಾಳಿಯಿಂದ ಬಚಾವಾಗಲು, ಆ ಪ್ರಾಣಿಗಳನ್ನು ಹಿಮ್ಮೆಟ್ಟಿಸಲು ಕನ್ನಡಿ ಇರುವ ವಸ್ತ್ರಗಳನ್ನು ಧರಿಸುತ್ತಿದ್ದರು.

ಸೂರ್ಯನ ಬೆಳಕು ಮತ್ತು ಬೆಂಕಿ ಅದರಲ್ಲಿ ಪ್ರತಿಫಲನವಾಗಿ ಪ್ರಾಣಿಗಳು ಹೆದರಲಿ ಎಂಬ ಕಾರಣಕ್ಕೆ ಅವರ ವಸ್ತ್ರಗಳನ್ನು ಹೀಗೆ ವಿನ್ಯಾಸ ಮಾಡುತ್ತಿದ್ದರು. 

ವಸ್ತ್ರಗಳಲ್ಲಿ ಕವಡೆಗಳನ್ನು ಪೋಣಿಸುವುದು ಕೇವಲ ಅಲಂಕಾರಕ್ಕಾಗಿ ಅಲ್ಲ, ಲೆಕ್ಕಾಚಾರಕ್ಕಾಗಿಯೂ. ಯಾರಿಗೆ ಎಷ್ಟು ದವಸ ಕೊಡಬೇಕು, ಹಣಕಾಸಿನ ವ್ಯವಹಾರ, ಕೊಡುವುದೆಷ್ಟು, ಪಡೆಯುವುದೆಷ್ಟು ಎಂಬುದು ಈ ಕವಡೆಗಳ ಲೆಕ್ಕಾಚಾರದಿಂದ ನೆನಪಿನಲ್ಲಿಡುತ್ತಿದ್ದರು.

ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಆಯೋಜಿಸಿದ ಕಸೂತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು

ಸೌಂದರ್ಯದ ಪ್ರತೀಕವೆನಿಸುವ ಟ್ಯಾಟುಗಳನ್ನು ಈ ಹಿಂದೆ ಅವಲಕ್ಷಣವಾಗಿ ಕಾಣಲಿ ಎಂದು ಬಳಸುತ್ತಿದ್ದರು ಎಂದಾಗ ವಿದ್ಯಾರ್ಥಿಗಳು ಸೋಜಿಗ ಪಟ್ಟರು. ತಮ್ಮ ಸೌಂದರ್ಯದಿಂದ ಯಾರನ್ನೂ ಸೆಳೆಯಬಾರದು, ಅದನ್ನು ಮುಚ್ಚಿಡಬೇಕೆಂದೇ ಮುಖದ ಮೇಲೆ, ಕೈಗಳ ಮೇಲೆ ಹಚ್ಚೆ ಹಾಕಲಾಗುತ್ತಿತ್ತು.

ಹಚ್ಚೆ ಹಾಕುವುದು ಕೇವಲ ಈ ಕಾರಣಕ್ಕಾಗಿ ಅಲ್ಲ, ಕೆಲವೊಂದು ನಿರ್ದಿಷ್ಟ ಸ್ಥಳದಲ್ಲಿ ಹಾಕಿದಾಗ ಅದು ಚಿಕಿತ್ಸಕ ಕಾರ್ಯವನ್ನೂ ಮಾಡುತ್ತಿತ್ತು. ಈ ಕಾರಣಕ್ಕಾಗಿ ಹಚ್ಚೆ ಹಾಕಲಾಗುತ್ತಿತ್ತು ಎಂದಾಗ ಸಾಂಪ್ರದಾಯಿಕ ಹಾಡುಗಳನ್ನು ಕೇಳುತ್ತ ಯುವತಿಯರು ತಮ್ಮ ಮುಂಗೈ ಮೇಲೆ ಹಚ್ಚೆ ಹಾಕಿಸಿಕೊಂಡರು.

ಯುವಜನರಿಗೆ ಬಂಜಾರಾ ಸಂಸ್ಕೃತಿಯ ಪರಿಚಯವಾಗಲಿ ಮತ್ತು ಕಸೂತಿ ಕಲೆ ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಯುವಜನರ ಉತ್ಸಾಹ ನೋಡಿದಾಗ, ಈ ಪ್ರಯತ್ನ ಸಾರ್ಥಕ್ಯ ಕಂಡಿದೆ ಎಂದೆನಿಸಿತು ಎಂದು ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ.ಎ.ಆರ್‌. ಗೋವಿಂದಸ್ವಾಮಿ ತಿಳಿಸಿದರು.

ಕಾಲೇಜು ಮಕ್ಕಳಿಗೆ ಕಸೂತಿ ಹೇಳಿಕೊಡಲು ಹೊಸಪೇಟೆಯ ಸಾವಿತ್ರಿಬಾಯಿ ಮತ್ತು ಚಾವಳಿಬಾಯಿ, ಚಾಮರಾಜನಗರದಿಂದ ಪ್ರಶಾಂತ್‌ ಹೆಬ್ಬಸೂರು ಆಗಮಿಸಿದ್ದರು. ಬಟ್ಟೆಯ ಆಯ್ಕೆ, ಆಯತಾಕಾರದಲ್ಲಿ ಶಾಲು, ಮೇಲ್ಹೊದಿಕೆಗಳನ್ನು ವಿನ್ಯಾಸಗೊಳಿಸುವುದನ್ನು ಹೇಳಿಕೊಟ್ಟರು.

ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಆಯೋಜಿಸಿದ ಕಸೂತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.