ADVERTISEMENT

‘ಮುರಿಯದ ಪ್ರಾಸ’ದಲ್ಲಿ ಅರಳಿದ ಕಲಾಕೃತಿಗಳು: ಕೃಷ್ಣರೆಡ್ಡಿಯವರ ಚಿತ್ರಕಲಾ ಪ್ರದರ್ಶನ

ಚಿತ್ರಕಲಾವಿದ ಕೃಷ್ಣರೆಡ್ಡಿಯವರ ಚಿತ್ರಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 22:18 IST
Last Updated 30 ಆಗಸ್ಟ್ 2024, 22:18 IST
ಕೃಷ್ಣಾ ರೆಡ್ಡಿ ಚಿತ್ರಕಲಾ ಪ್ರದರ್ಶನ
ಕೃಷ್ಣಾ ರೆಡ್ಡಿ ಚಿತ್ರಕಲಾ ಪ್ರದರ್ಶನ   

‘ಇಂಟಾಗ್ಲಿಯೊ ಪ್ರಿಂಟ್ ಮೇಕಿಂಗ್’ ಎಂಬ ವಿಭಿನ್ನ ಕಲಾಪ್ರಕಾರದ ಪ್ರವರ್ತಕರಾದ ಪ್ರಖ್ಯಾತ ಚಿತ್ರ ಕಲಾವಿದ ಕೃಷ್ಣಾ ರೆಡ್ಡಿಯವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ. ಕಬ್ಬನ್ ಪಾರ್ಕ್ ಬಳಿಯ ‘ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಾಫಿ’(ಎಂ.ಎ.ಪಿ)ಯಲ್ಲಿ ಜನವರಿಯವರೆಗೆ ‘ಮುರಿಯದ ಪ್ರಾಸ’ ಹೆಸರಿನಲ್ಲಿ ಅವರ ಚಿತ್ರಕಲೆಗಳನ್ನು ಪ್ರದರ್ಶನಗೊಳಿಸಲಾಗುತ್ತಿದೆ. 

ಒಂದೇ ಚಿತ್ರದೊಳಗೆ ಹಲವು ಭಾವನೆಗಳು, ಮನುಷ್ಯನ ಸಂಕೀರ್ಣ ಮನಸ್ಥಿತಿಯನ್ನು ಸರಳವಾದ ರೇಖೆಗಳಲ್ಲಿ ಅಭಿವ್ಯಕ್ತಿಗೊಳಿಸುವ ಚಿತ್ರಕಲಾವಿದನ ಜಾಣ್ಮೆ, ನೋಡಿದವರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಕಲಾಕೃತಿಗಳು ‘ಮುರಿಯದ ಪ್ರಾಸ’ ಚಿತ್ರಕಲಾ ಪ್ರದರ್ಶನದಲ್ಲಿವೆ. ಕಲಾಕೃತಿಗಳ ಮೂಲಕ ತಮ್ಮ ಜೀವನದ ವಿಭಿನ್ನ ಅನುಭವಗಳನ್ನು ಕೃಷ್ಣಾ ರೆಡ್ಡಿಯವರು ಹೊರಹೊಮ್ಮಿಸಿದ್ದಾರೆ. 

ಪಾಶ್ಚಾತ್ಯ ದೇಶಗಳಲ್ಲಿ ಪ್ರಚಾರದಲ್ಲಿದ್ದ ಸರಳ ರೇಖೆಗಳಲ್ಲಿ ವಿಭಿನ್ನವಾಗಿ ಕಲಾಚಿತ್ರಗಳನ್ನು ರಚಿಸುವ ‘ಇಂಟಾಗ್ಲಿಯೊ ಪ್ರಿಂಟ್ ಮೇಕಿಂಗ್’ ಎಂಬ ವಿಶೇಷ ಶೈಲಿಯ ಮುದ್ರಣದಿಂದ ರಚಿಸಲಾಗುವ ಕಲಾಪ್ರಕಾರವನ್ನು ಯುರೋಪ್‌ನಲ್ಲಿ ಅಭ್ಯಾಸ ಮಾಡಿದ ಕೃಷ್ಣಾ ರೆಡ್ಡಿಯವರು, ತಮ್ಮ ಕಲಾತ್ಮಕ ಕಲಾಕೃತಿಗಳಿಂದ ಅಂತರರಾಷ್ಟೀಯ ಮಟ್ಟದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

ADVERTISEMENT

‘ಇಂಟಾಗ್ಲಿಯೊ ಪ್ರಿಂಟ್ ಮೇಕಿಂಗ್’ನಲ್ಲಿ ಮರ, ಕಲ್ಲು ಅಥವಾ ಲೋಹದ ಫಲಕಗಳನ್ನು ಚಿತ್ರಗಳನ್ನು ರಚಿಸುವ ಕ್ಯಾನ್‌ವಾಸ್‌ನಂತೆ ತಯಾರಿಸಲಾಗುತ್ತದೆ. ಉಕ್ಕಿನ ಉಪಕರಣಗಳನ್ನು ಬಳಸಿಕೊಂಡು ಅದರಲ್ಲಿ ಕಚ್ಚು ಮಾಡಿದ ಫಲಕದ ನೆಗ್ಗುಗಳಿಗೆ ಕೈಯಿಂದ ಬಣ್ಣಗಳನ್ನು ಹಚ್ಚಲಾಗುತ್ತದೆ. ನಂತರ ರೋಲರ್‌ಗಳೊಂದಿಗೆ ಮುದ್ರಣವನ್ನು ಕಾಗದ ಮೇಲೆ ಮೂಡಿಸಲಾಗುತ್ತದೆ. ಏಕವರ್ಣದಿಂದ ಕೂಡಿದ್ದ ಈ ಕಲಾಪ್ರಕಾರದಲ್ಲಿ ಬದಲಾವಣೆ ತಂದ ಕೃಷ್ಣಾ ರೆಡ್ಡಿ, ವಿವಿಧ ಬಣ್ಣಗಳನ್ನು ಸಂಯೋಜಿಸುವ ಮುದ್ರಣ ತಂತ್ರವನ್ನು ಪ್ರಾರಂಭಿಸಿದರು. ಈ ರೀತಿಯ ಪ್ರಯೋಗ ಮಾಡಿದ ಭಾರತೀಯ ಕಲಾವಿದರಲ್ಲಿ ಮೊದಲಿಗ ಎನ್ನುವ ಹಿರಿಮೆ ಇವರಿಗಿದೆ. 

ಮೂಲತಃ ಆಂಧ್ರಪ್ರದೇಶದ ಕೃಷ್ಣಾ ರೆಡ್ಡಿಯವರು, ನ್ಯೂಯಾರ್ಕ್‌ ಹಾಗೂ ಪ್ಯಾರೀಸ್‌ನಲ್ಲೇ ಜೀವನದ ಬಹುಪಾಲು ಸಮಯ ಕಳೆದರೂ ಅವರ ಕಲಾಕೃತಿಗಳಲ್ಲಿ ಭಾರತೀಯ ಸಂಸ್ಕೃತಿಯ ಛಾಯೆಯನ್ನು ಗಮನಿಸಬಹುದು. 

ಹರ್ಷ ಹಾಗೂ ಶ್ರೀಲತಾ ರೆಡ್ಡಿಯವರು ಸಂಗ್ರಹಿಸಿದ್ದ ಕೃಷ್ಣಾ ರೆಡ್ಡಿಯವರ ಕಲಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಚಿತ್ರಕಲಾ ಪ್ರದರ್ಶನಕ್ಕೆ ವಯಸ್ಕರಿಗೆ ₹150 ಪ್ರವೇಶ ದರವಿದೆ. ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. 

ಕೃಷ್ಣಾ ರೆಡ್ಡಿ ಕಲಾಕೃತಿಗಳು 
‘ಮುರಿಯದ ಪ್ರಾಸ’ದಲ್ಲಿ ಅರಳಿದ ಕಲಾಕೃತಿಗಳು

ಕುಂಚ ಹಿಡಿದ ಕೈಗಳು ನಡೆದು ಬಂದ ದಾರಿ

ಆಂಧ್ರಪ್ರದೇಶದ ನಂದಕೂರಿನ ಕೃಷ್ಣಾ ರೆಡ್ಡಿಯವರಿಗೆ ಬಾಲ್ಯದಲ್ಲೇ ಕಲೆಯ ಕಡೆಗೆ ಆಸಕ್ತಿಯಿತ್ತು. ಚಿತ್ತೂರಿನ ಥಿಯೋಸಾಫಿಕಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದರು. ಜಿಡ್ಡು ಕೃಷ್ಣಮೂರ್ತಿಯವರ ಬೋಧನೆಗಳಿಂದ ಪ್ರಭಾವಿತರಾಗಿದ್ದರು. ರವೀಂದ್ರನಾಥ ಟ್ಯಾಗೋರ್ ಸ್ಥಾಪಿಸಿದ್ದ ಶಾಂತಿನಿಕೇತನ ವಸತಿ ಶಾಲೆಯಲ್ಲಿದ್ದಾಗ ಕ್ವಿಟ್‌ ಇಂಡಿಯಾ ಚಳುವಳಿಯ ಭಿತ್ತಿಪತ್ರ ಹಾಗೂ ಬಂಗಾಳದ ಬರಗಾಲದ ಭೀಕರ ಕಷ್ಟಗಳನ್ನು ರೇಖಾಚಿತ್ರಗಳ ಮೂಲಕ ಚಿತ್ರಿಸಿದ್ದರು. ಲಲಿತ ಕಲೆಯಲ್ಲಿ ಪದವಿ ಪಡೆದಿದ್ದ ಇವರು ಮದ್ರಾಸ್‌ನ ಕಲಾಕ್ಷೇತ್ರದಲ್ಲಿ ದೃಶ್ಯಕಲಾ ವಿಭಾಗ ನಿರ್ಮಿಸಲು ಸಹಾಯ ಮಾಡಿದರು. ವಿದ್ಯಾರ್ಥಿವೇತನದ ಸಹಾಯದಿಂದ ಲಂಡನ್‌ನ ಸ್ಲೇಡ್‌ ಸ್ಕೂಲ್‌ ಆಫ್ ಫೈನ್ ಆರ್ಟ್‌ನಲ್ಲಿ ಅಧ್ಯಯನ ನಡೆಸಿದರು. ನಂತರ ಪ್ಯಾರಿಸ್‌ನಲ್ಲಿ ಕಾನ್‌ಸ್ಟಾಂಟಿನ್ ಬ್ರಾಂಕುಲಿಯಂತಹ ಕಲಾವಿದರು ಹಾಗೂ ಕ್ರಾಂತಿಕಾರಿ ಮುದ್ರಣ ತಯಾರಕರಾದ ಸ್ಟಾನ್ಲಿ ವಿಲಿಯಂ ಹೈಟರ್‌ಗಳ ಒಡನಾಡಿಯಾಗಿದ್ದರು. ಅಲ್ಲಿಯೇ ‘ಇಂಟಾಗ್ಲಿಯೊ ಪ್ರಿಂಟ್ ಮೇಕಿಂಗ್’ ತಂತ್ರಜ್ಞಾನದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿದರು. ನ್ಯೂಯಾರ್ಕ್‌ ವಿಶ್ವವಿದ್ಯಾಲಯದಲ್ಲಿ ಗ್ರಾಫಿಕ್ಸ್‌ ಮತ್ತು ಪ್ರಿಂಟ್‌ ಮೇಕಿಂಗ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ತತ್ವಕಲೆ ಚಿತ್ರಕಲೆ ಶಿಲ್ಪಕಲೆ ಮತ್ತು ಮುದ್ರಣ ತಯಾರಿಕೆಯಲ್ಲಿ ಅಸಕ್ತಿಯಿದ್ದ ಕೃಷ್ಣಾ ರೆಡ್ಡಿಯವರು ತಮ್ಮ ಕಲಾಕೃತಿಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.