ADVERTISEMENT

ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರಕ್ಕೆ ಸಾಟಿಯಿಲ್ಲ

ಗುಡಿಹಳ್ಳಿ ನಾಗರಾಜ
Published 23 ಮೇ 2020, 19:30 IST
Last Updated 23 ಮೇ 2020, 19:30 IST
‘ಕುರುಕ್ಷೇತ್ರ’ ನಾಟಕದ ದೃಶ್ಯ
‘ಕುರುಕ್ಷೇತ್ರ’ ನಾಟಕದ ದೃಶ್ಯ   

‘ಲತಾ ಮಂಗೇಶ್ಕರ್ ಹಾಡುಗಳನ್ನು ಕೇಳದ ಭಾರತೀಯ ಯಾರು? ಹಾಗೆಯೇ ‘ಕುರುಕ್ಷೇತ್ರ’ ನಾಟಕವಾಡದ ಹಳ್ಳಿ ಯಾವುದಿದೆ?’ ಎಂದು ದೇವರಾಜ ಅರಸು ಆಗಾಗ ಹೇಳುತ್ತಿದ್ದರು ಎಂದು ಬಿ. ಪುಟ್ಟಸ್ವಾಮಯ್ಯನವರ ಅಳಿಯ ಸದಾಶಿವ ನೆನಪಿಸಿಕೊಳ್ಳುತ್ತಾರೆ. ಕಳೆದ ಒಂದು ಶತಮಾನದಲ್ಲಿ ವೃತ್ತಿರಂಗಭೂಮಿ ಹಾಗೂ ಹಳ್ಳಿಗಾಡಿನಲ್ಲಿ ಲಕ್ಷಾಂತರ ಪ್ರಯೋಗಗಳನ್ನು ಕಂಡ ಕನ್ನಡದ 10–15 ಜನಪ್ರಿಯ ನಾಟಕಗಳ ಪೈಕಿ ಪುಟ್ಟಸ್ವಾಮಯ್ಯನವರ ‘ಕುರುಕ್ಷೇತ್ರ’ವೂ ಒಂದು. 86 ವರ್ಷಗಳಲ್ಲಿ ಈ ನಾಟಕ ಅದೆಷ್ಟು ಪ್ರಯೋಗ ಕಂಡಿದೆಯೋ... ಲೆಕ್ಕವಿಟ್ಟವರಿಲ್ಲ.

1934ರಲ್ಲಿ ಜರುಗಿದ ಗುಬ್ಬಿ ವೀರಣ್ಣನವರ ನಾಟಕ ಕಂಪೆನಿಯ ಸುವರ್ಣ ಮಹೋತ್ಸವದಲ್ಲಿ ಪ್ರಥಮ ಪ್ರಯೋಗ ಕಂಡ ಈ ನಾಟಕದ ಪ್ರದರ್ಶನ ಈಗಲೂ ನಡೆಯುತ್ತಿದೆ. ಕಳೆದ ವರ್ಷ ರೆಪರ್ಟರಿಯೊಂದು ಈ ನಾಟಕವನ್ನು ರಾಜ್ಯದ ನೂರು ಕಡೆ ಪ್ರದರ್ಶಿಸಿದೆ.

ಬೆಂಗಳೂರಿನ ಪ್ರಖ್ಯಾತ ಪೆಟಿಗಿ ಮಾಸ್ತರ ವಜ್ರಪ್ಪ ಅವರು ಸಹಸ್ರಾರು ಬಾರಿ ಈ ನಾಟಕವನ್ನು ನಿರ್ದೇಶಿಸಿದ್ದರೆ- ಹತ್ತಾರು ಬಾರಿ, ನೂರಾರು ಸಲ ಈ ನಾಟಕ ಕಲಿಸಿದ ಮಾಸ್ತರಗಳ (ಮೇಷ್ಟ್ರು) ಸಂಖ್ಯೆ ರಾಜ್ಯದಲ್ಲಿ ಸಾಕಷ್ಟಿದೆ. ಈ ನಾಟಕ ರಚನೆಗೆ ವೀರಣ್ಣನವರೇ ಪ್ರೇರಣೆ. ಹಾಗಾಗಿ, ಇದಕ್ಕೆ ‘ಗುಬ್ಬಿ ಕುರುಕ್ಷೇತ್ರ’ ಎಂದೂ ಕರೆಯಲಾಗುತ್ತದೆ.

ADVERTISEMENT

ಕುರುಕ್ಷೇತ್ರ ಬರೆದವರಾರು? ಗೊತ್ತಿಲ್ಲ. ಮಹಾಭಾರತದ ಕಥೆಯನ್ನು ಇಷ್ಟು ಸರಳವಾಗಿ, ಸಾಂದ್ರವಾಗಿ ಹೇಳಿದ ಮತ್ತೊಂದು ನಾಟಕವಿಲ್ಲ. ನಂತರ ಹಲವು ‘ಕುರುಕ್ಷೇತ್ರ’ಗಳು ಬಂದಿವೆ. ಆದರೆ, ಇಷ್ಟು ಪ್ರಸಿದ್ಧಿಯನ್ನು ಮತ್ಯಾವ ನಾಟಕವೂ ಪಡೆಯಲಿಲ್ಲ. ಈ ನಾಟಕದ ಕೆಲವು ಸನ್ನಿವೇಶಗಳನ್ನು ಕೈಬಿಟ್ಟು, ಕೆಲವನ್ನು ಸೇರಿಸಿಕೊಂಡು ಪ್ರದರ್ಶನ ಮಾಡಿದ್ದಕ್ಕೂ ಲೆಕ್ಕವಿಟ್ಟವರಿಲ್ಲ. ‘ಕುರುಕ್ಷೇತ್ರ’ ನಾಟಕವನ್ನು ಎಲ್ಲಾ ಊರುಗಳಲ್ಲೂ ಆಡುತ್ತಾರೆ. ಆದರೆ, ಇದನ್ನು ಬರೆದವರಾರು? ಲೇಖಕನ ಹೆಸರೇ ನೆನಪಿರುವುದಿಲ್ಲ. ಇದೊಂದು ಜಾನಪದ ಮೌಖಿಕ ಪರಂಪರೆಯಂತಾಗಿಬಿಟ್ಟಿದೆ.

ಪೌರಾಣಿಕ ನಾಟಕಗಳ ರಚನೆಯಲ್ಲಿ ಅಗ್ರಮಾನ್ಯರಾದ ಕಂದಗಲ್ಲ ಹಣಮಂತರಾಯರೂ ಒಂದು ‘ಕುರುಕ್ಷೇತ್ರ’ ರಚಿಸಿದ್ದಾರೆ. ‘ರಕ್ತರಾತ್ರಿ’ ಸೇರಿದಂತೆ ಅವರ ಇತರ ಪೌರಾಣಿಕ ನಾಟಕಗಳಷ್ಟು ಪ್ರಸಿದ್ಧಿಯನ್ನು ಆ ‘ಕುರುಕ್ಷೇತ್ರ’ ಪಡೆಯಲಿಲ್ಲ. ಹಾಗಾಗಿ, ‘ಕುರುಕ್ಷೇತ್ರ’ ನಾಟಕ ರಚನೆಯಲ್ಲಿ ಪುಟ್ಟಸ್ವಾಮಯ್ಯನವರೇ ‘ನಂಬರ್ ಒನ್’. ತುಂಬಾ ಸರಳ ಭಾಷೆಯಲ್ಲಿ ಪೌರಾಣಿಕ ನಾಟಕಗಳನ್ನು ರಚಿಸಿದ ಕೀರ್ತಿ ನಲವಡಿ ಶ್ರೀಕಂಠಶಾಸ್ತ್ರಿಗಳಂತೆ, ಪುಟ್ಟಸ್ವಾಮಯ್ಯನವರಿಗೂ ಸಲ್ಲುತ್ತದೆ.

ಒಂದು ನಾಟಕ ಮೌಲಿಕವಾಗಿ ಇರಬೇಕು. ಜನಪ್ರಿಯವೂ ಆಗಬೇಕು. ಜನಪ್ರಿಯತೆ ಎಂದೂ ದೋಷವಲ್ಲ. ನಾಟಕದಲ್ಲಂತೂ ಅದೇ ದೊಡ್ಡ ಮನ್ನಣೆ. ವೃತ್ತಿ ರಂಗಭೂಮಿಯ ಮತ್ತೊಬ್ಬ ದಿಗ್ಗಜ ಪೀರ್ ಮಹಮದ್‌ ಅವರಿಗಾಗಿ ‘ಗೌತಮ ಬುದ್ಧ’ ಸೇರಿದಂತೆ ‘ಷಾಜಹಾನ್’, ‘ಶಾಂತಿದೂತ,’ ‘ಬಾಹುಬಲಿ’, ‘ಅಕ್ಕಮಹಾದೇವಿ’, ‘ದಶಾವತಾರ’, ‘ಸಂಪೂರ್ಣ ರಾಮಾಯಣ’, ‘ಪ್ರಭುದೇವ’, ‘ಸತಿತುಲಸಿ’ ಮುಂತಾದ ನಾಟಕಗಳನ್ನು ಪುಟ್ಟಸ್ವಾಮಯ್ಯ ರಚಿಸಿದರು. ಎಲ್ಲವೂ ಜನಪ್ರಿಯ ಹಾಗೂ ಕಲಾತ್ಮಕ. ಹಾಗೆ ನೋಡಿದರೆ ಇವೆರಡನ್ನು ಮೇಳೈಸುವುದೇ ನಾಟಕಕಾರನ ಸವಾಲು. ಅದರಲ್ಲಿ ಪುಟ್ಟಸ್ವಾಮಯ್ಯ ಗೆದ್ದಿದ್ದಾರೆ.

ಅನಕೃ, ಶಂಕರ ಮೊಕಾಶಿ ಪುಣೇಕರ, ಕೆ. ಮರುಳಸಿದ್ಧಪ್ಪ, ಹರಿಹರಪ್ರಿಯ, ಎಂ.ಎಸ್‌. ವೇದಾ ಮುಂತಾಗಿ ಎಲ್ಲಾ ತಲೆಮಾರಿನ ಸಾಹಿತಿಗಳೂ ಪುಟ್ಟಸ್ವಾಮಯ್ಯ ಅವರ ನಾಟಕಗಳನ್ನು ಮನಸಾರೆ ಮೆಚ್ಚಿ ವಿಮರ್ಶೆ ಬರೆದಿದ್ದಾರೆ. ‘...ಪುಟ್ಟಸ್ವಾಮಯ್ಯನವರ ನಾಟಕಗಳು ಜನರಿಗೆ ಬೇಕಾದ ಮೌಲ್ಯಗಳನ್ನು ಪುರಾಣದ ಹಿನ್ನೆಲೆಯಲ್ಲಿ ಹೇಳುತ್ತಿದ್ದವಾದ್ದರಿಂದ, ಕೈಲಾಸಂ, ಶ್ರೀರಂಗ ಅವರಿಗಿಂತ ಪುಟ್ಟಸ್ವಾಮಯ್ಯನವರು ಒಂದು ಹೆಜ್ಜೆ ಮುಂದೆಯೇ ಹೋಗಿ ತುಂಬ ಜನಪ್ರಿಯ ನಾಟಕಕಾರರಾದರು’ ಎಂದು ಕೃಷ್ಣಮೂರ್ತಿ ಹನೂರು ಗುರುತಿಸಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ 1978ರಲ್ಲಿ ದೊರೆತದ್ದು ಈ ನಾಟಕಕ್ಕೆ ಮತ್ತೊಂದು ಗರಿ. ನಂತರ ಇದು ಹಿಂದಿ ಭಾಷೆಗೂ ಅನುವಾದಗೊಂಡಿತು.

ಈ ನಾಟಕದ ಪಾತ್ರಧಾರಿಗಳೂ ದಂತಕಥೆಗಳಾದರು.ಗಂಗಾಧರರಾಯರು ಭೀಮನ ಪಾತ್ರದಲ್ಲಿ, ಸುಬ್ಬರಾಯರು ಅರ್ಜುನ, ಬಸವರಾಜಪ್ಪರ ಶಕುನಿ, ಕೃಷ್ಣಮೂರ್ತಿಯವರ ದುರ್ಯೋಧನ; ಬಿ. ಜಯಮ್ಮ ಅವರ ದ್ರೌಪದಿ, ರಾಘವೇಂದ್ರರಾಯರ ಕರ್ಣ ಹಾಗೂ ಮಳವಳ್ಳಿ ಸುಂದರಮ್ಮ ಉತ್ತರೆಯ ಪಾತ್ರಗಳಲ್ಲಿ ದಂತಕಥೆಯೇ ಆದರು. ಇವರೆಲ್ಲ ಗುಬ್ಬಿ ಕಂಪೆನಿಯ ಮೊದಲ ಪ್ರಯೋಗಗಳಲ್ಲಿ ಅಭಿನಯಿಸಿದವರು. ನಂತರದ ಒಂದು ಶತಮಾನದಲ್ಲಿ ನೂರಾರು ಕಲಾವಿದರು ಈ ನಾಟಕದ ಪಾತ್ರಧಾರಿಗಳಾಗಿ ಜನಪ್ರಿಯತೆಯ ತುಟ್ಟತುದಿ ತಲುಪಿದ್ದಾರೆ.

ಪೌರಾಣಿಕ ನಾಟಕಗಳಲ್ಲಿ ಅದುವರೆಗೂ ಪ್ರತಿ ಮಾತಿಗೂ ಒಂದು ಹಾಡು ಎನ್ನುವಂತಿತ್ತು. ವೃತ್ತಿ ರಂಗಭೂಮಿಯ ಪೌರಾಣಿಕ ನಾಟಕ ಪ್ರಯೋಗ ಎಂದರೆ ಅದು ಸಂಗೀತಗೋಷ್ಠಿಯೇ ಆಗಿರುತ್ತಿತ್ತು.

ಹಾಡುಗಳ ಸಂಖ್ಯೆ ಕಡಿಮೆ ಮಾಡಿ, ಸರಳ ಸಾಹಿತ್ಯಾತ್ಮಕ ಸಂಭಾಷಣೆ ಮೂಲಕ ಒಂದು ನಾಟಕಕ್ಕೆ ಔಚಿತ್ಯಪೂರ್ಣತೆ ತಂದವರಲ್ಲಿ ಪುಟ್ಟಸ್ವಾಮಯ್ಯ ಅಗ್ರಗಣ್ಯರು.

ಸಾಧ್ಯತೆ ಹಾಗೂ ಮಿತಿಗಳನ್ನು ಗಮನದಲ್ಲಿ ಇಟ್ಟುಕೊಂಡೇ ನಾಟಕಗಳನ್ನು ರಚಿಸಿದ ಪುಟ್ಟಸ್ವಾಮಯ್ಯ ಆ ಕಾರಣಕ್ಕೆ ಕನ್ನಡದ ಅತ್ಯಂತ ಜನಪ್ರಿಯ ಲೇಖಕರೂ ಆಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕನ್ನಡಕ್ಕೆ ಮೊದಲು ತಂದವರು ಪುಟ್ಟಸ್ವಾಮಯ್ಯ. ಅವರ ‘ಕ್ರಾಂತಿ ಕಲ್ಯಾಣ’ ಕಾದಂಬರಿಗೆ ಆ ಪ್ರಶಸ್ತಿ ಬಂದಿತ್ತು. ಆ ಕೃತಿಯನ್ನು ಓದದವರೇ ಇಲ್ಲ ಎಂದು ಹೇಳಲಾಗುತ್ತದೆ. ಆ ಮಾತುಗಳಲ್ಲಿ ಸ್ವಲ್ಪ ಅತಿಶಯೋಕ್ತಿ ಇರಬಹುದು. ಆದರೆ, ‘ಕುರುಕ್ಷೇತ್ರ’ ನಾಟಕವಂತೂ ಪ್ರದರ್ಶನಗಳ ಸಂಖ್ಯೆಯಲ್ಲಿ ಕ್ರಾಂತಿ ಉಂಟು ಮಾಡಿರುವುದು ಸುಳ್ಳಲ್ಲ. ‘ಪ್ರಜಾವಾಣಿ’ಯ ಮೊದಲ ಸಂಪಾದಕರಾಗಿ ಕೆಲಸ ಮಾಡಿದ್ದ ಪುಟ್ಟಸ್ವಾಮಯ್ಯ ಪತ್ರಕರ್ತರಾಗುವುದಕ್ಕೂ ಮುನ್ನವೇ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಪಡೆದವರು. ಬದುಕಿದ್ದಿದ್ದರೆ ಅವರಿಗೆ 123ನೇ ಹುಟ್ಟುಹಬ್ಬದ (ಮೇ 27, 1897) ಶುಭಾಶಯ ಹೇಳಬಹುದಿತ್ತು. ಆದರೆ, ಎಂಟೂವರೆ ದಶಕಗಳ ಬಳಿಕವೂ ಅವರು ಬರೆದ ನಾಟಕ ಅಸಂಖ್ಯ ಪ್ರದರ್ಶನಗಳನ್ನು ಕಾಣುತ್ತಿದೆಯೆಂದರೆ ಅದಕ್ಕಿಂತ ದೊಡ್ಡ ಶುಭಾಶಯ ಇನ್ನೊಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.