ಪ್ರೇತವೃಕ್ಷ
ಕುವೆಂಪು ಅವರು ಒಂಟಿಯಾಗಿ ದೂರದಲ್ಲಿ ಕಳೆಗುಂದಿದ, ಶೂನ್ಯ, ದೀರ್ಘ, ನಗ್ನ, ಆಡಂಬರ ರಹಿತ, ಬರಿದಾದ ಗಗನಕ್ಕೆದುರು ಮಸಿಯ ಚಿತ್ತಿನ ರೀತಿ ನಿಂತಿರುವ ಮರವನ್ನು ‘ಪ್ರೇತವೃಕ್ಷ’ ಎಂಬ ಪದದಿಂದ ಬಣ್ಣಿಸಿದ್ದಾರೆ.
ಆಳ್ಗೇಡಿ
ಆಳ್ಗೇಡಿ (ಗು). ನಿರ್ಜನವಾದ; ನಿರ್ಮಾನುಷವಾದ
ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋದನಂತರ ಅವಳನ್ನು ನಿರ್ಜನವಾದ ಕಾಡಿನಲ್ಲಿ ರಾಮಲಕ್ಷ್ಮಣರು ಹುಡುಕಿದರು. ಆ ಸಂದರ್ಭದ ಆ ನಿರ್ಮಾನುಷ ಅರಣ್ಯದಲ್ಲಿಯ ಚಿತ್ರಣವನ್ನು ನೀಡುವಾಗ ಕುವೆಂಪು ಅವರು ‘ಆಳ್ಗೇಡಿ’ ಎಂಬ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ:
‘ಇಳಿವಗಲ್
ಸುಡುವಿಸಿಲ್; ಆಳ್ಗೇಡಿ ಕಾಡೊಳಲೆದಿರ್ವರುಂ
ಕರೆಕರೆದು ಹುಡುಕಿದರು ಸೀತೆಯಂ.’
ಮತಿಗೌರವ
ಮತಿ (ನಾ). 1. ತಿಳಿಯುವಶಕ್ತಿ; ಜ್ಞಾನ; ತಿಳುವಳಿಕೆ
2. ಅಭಿಪ್ರಾಯ : ಆಶಯ
ಗೌರವ (ಗು). ಪ್ರಾಮುಖ್ಯತೆ; ಶ್ರೇಷ್ಟತೆ; ಘನತೆ
ನಮ್ಮಲ್ಲಿರುವ ಮತಿಯನ್ನು ಕುವೆಂಪು ಅವರು ಹೀಗೆ ಸರಳವೂ ಸ್ಪಷ್ಟವೂ ಆಗಿ ತಿಳಿಸಿದ್ದಾರೆ:
‘ಈಶ್ವರನು ನಮ್ಮಲ್ಲಿಯೂ ಇದ್ದಾನೆ. ಆತನ ಮಹಾಜ್ಯೋತಿಯ ಕಿರಣಗಳು ನಮ್ಮ ಬುದ್ಧಿಯಲ್ಲಿಯೂ ಪ್ರಕಾಶಿಸುತ್ತವೆ. ಆ ಪ್ರಕಾಶವೇ ಮತಿ.’ (ಸ.ಗ.2.ಪು.67) ಅದರ ಘನತೆಯನ್ನು ‘ಗೌರವ’ ಪದದೊಡನೆ ಸಮೀಕರಿಸಿ ‘ಮತಿಗೌರವ’ ಎಂಬ ಪದ ಸೃಷ್ಟಿಸಿದ್ದಾರೆ. ಆ ‘ಮತಿಗೌರವ’ ವಿದ್ಯಾರ್ಥಿಗಳ ಅವಿಭಾಜ್ಯ ಅಂಗವಾಗಿರಬೇಕೆಂದು ಹೀಗೆ ಸ್ಪಷ್ಟಪಡಿಸಿದ್ದಾರೆ: ‘ಗುರಿಯ ಹಿರಿಮೆ, ಉದ್ದೇಶದ ಶ್ರೇಷ್ಠತೆ, ಪ್ರಯತ್ನದ ಪರಿಶುದ್ಧತೆ, ಸಾಧನದ ಸಾಹಸ, ಇಷ್ಟಸಿದ್ಧಿಗಾಗಿ ಮಾಡುವ ತ್ಯಾಗ ಮತ್ತು ಕೈಕೊಳ್ಳುವ ತಪಸ್ಸು, ಶ್ರೇಯಃಪೂರ್ಣವಾದ ಚಿರಕಾಲಿಕಕ್ಕಾಗಿ ರುಚಿಕರವಾದ ತಾತ್ಕಾಲಿಕವನ್ನು ವಿಸರ್ಜಿಸುವ ವಿಚಾರಶಕ್ತಿ ಮತ್ತು ವಜ್ರದೃಢತೆ ಇತ್ಯಾದಿ ಗುಣಗಳೆಲ್ಲ ಧ್ವನಿತವಾಗುವಂತೆ ‘ಮತಿಗೌರವ’ ಎಂಬ ಪದವನ್ನು ಪ್ರಯೋಗಿಸಿದ್ದೇನೆ.’ (ಸ.ಗ.2.ಪು.89)
‘ಉತ್ತಮ ಸಾಹಿತ್ಯ ನಮ್ಮನ್ನು ಎಷ್ಟು ಅಂತರ್ಮುಖಿಗಳನ್ನಾಗಿ ಮಾಡುತ್ತದೆಯೊ ಅಷ್ಟೆ ಬಹಿರ್ಮುಖಿಗಳನ್ನಾಗಿಯೂ ಮಾಡುತ್ತದೆ. ಅವುಗಳೆರಡರ ಸಮತೂಕ ಮತ್ತು ಸಮನ್ವಯದಿಂದಲೇ ‘ಮತಿಗೌರವ’ ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.