ತೆಳ್ಮಡಿ (ನಾ). ಶುಭ್ರವಾದ ವಸ್ತ್ರ;
ಸ್ವಚ್ಛವಾದ ಬಟ್ಟೆ
(ತೆಳ್ + ಮಡಿ)
ಶ್ರೀ ರಾಮಚಂದ್ರನೆಂಬ ಪ್ರೀತಿಯ ಹೊರೆಹೊತ್ತ ತುಂಬು ಗರ್ಭಿಣಿಯಾದ ಕೌಸಲ್ಯೆಯನ್ನು ವರ್ಣಿಸುವಾಗ ಅವಳು ಉಟ್ಟಿದ್ದ ಬೆಳ್ಳನೆ ಮುಗಿಲ ಹತ್ತಿಯ ಶುಭ್ರ ವಸ್ತ್ರವನ್ನು ಕವಿ ‘ತೆಳ್ಮಡಿ’ ಎಂಬ ಪದದಿಂದ ಚಿತ್ರಿಸಿದ್ದಾರೆ. ಅದು ಹಗುರ ಮತ್ತು ಸ್ವಚ್ಛ ಬಟ್ಟೆಗೆ ಅನುರೂಪವಾದ ನುಡಿ.
ಪೆರೆ ತುಂಬುವಂದದಲಿ ನವಮಾಸ ತುಂಬಿ ಬರೆ,
ಶ್ರೀರಾಮಚಂದ್ರನೆಂಬಳ್ಕರೆಯ ಹೊರೆಹೊತ್ತು,
ಬೆಳ್ದೆರೆಯ ಮುಗಿಲ ಹತ್ತಿಯ ತೆಳ್ಮಡಿಯನುಟ್ಟ
ಪೂರ್ಣಿಮಾ ರಜನಿಯಂತೆಸೆದಳಾ ಕೌಸಲ್ಯೆ,
ಗಂಭೀರ ಸೌಂದರ್ಯದಿಂ.
‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಆಂಜನೇಯನು ಶಿಶಿರ ರಾತ್ರಿಯಲ್ಲಿ ಅಶೋಕವನವಿರುವ ಜಾಗವನ್ನು ಹುಡುಕುತ್ತಾ ಸೀತೆಯ ನೆಲೆ ಕಾಣದೆ ಪರಿತಪಿಸುತ್ತಾನೆ. ಮುಂದಿನದನ್ನು ಆಲೋಚಿಸುತ್ತ ನಿಂತಿರುತ್ತಾನೆ. ಆಗ ಕಿವಿಗೆ ಬೆಟ್ಟವನ್ನು ಏರಿ ಬರುತ್ತಿರುವ ಸೈನಿಕರ ಕ್ರಮ ನಡಿಗೆಯ ಲೋಹದ ಸದ್ದು ಕೇಳಿ ಬರುತ್ತದೆ. ಕುವೆಂಪು ಅದನ್ನು ‘ಲೋಹಘೋಷ’ ಪದ ರೂಪಿಸಿ ಚಿತ್ರಿಸಿದ್ದಾರೆ.
‘ಅಂತು ತನ್ನೊಳಗೆ ತಾನ್ ಮುಂದನ್
ಆಲೋಚಿಸುತೆ ನಿಶ್ಚಲಂ ನಿಂದ ಹನುಮನ ಕಿವಿಗೆ
ಭೋಂಕನೆಯೆರಗಿದತ್ತು ಜಗತಿ ಶೈಲವನಡರಿ
ಪುಡುಕಿ ಬರ್ಪಿರುಳ ಕಾವಲ್ಪಡೆಯ ನೈಶಚರ
ಸೈನಿಕರ ಸಕ್ರಮದ ಸಮುದಾಯ ಪದಹತಿಯ
ಲೌಹ ಘೋಷಂ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.