ADVERTISEMENT

ಮಲಗಿದ್ದು ನೀವಷ್ಟೇ ಅಲ್ಲ ಮನೆಯ ಒಲೆಯಲ್ಲಿ ಬೆಕ್ಕೂ

ತಾಜುದ್ದೀನ್‌ ಆಜಾದ್‌
Published 30 ಮೇ 2021, 3:43 IST
Last Updated 30 ಮೇ 2021, 3:43 IST
ನಮ್ಮ ಬದುಕಿನ ಬಂಡಿ ಈಗ ಹೀಗೇ ಕಾಲುಚಾಚಿ ಮಲಗಿಬಿಟ್ಟಿದೆ ನೋಡ್ರಿ ಸಾಹೇಬ್ರ... -ಚಿತ್ರಗಳು: ತಾಜುದ್ದೀನ್‌ ಆಜಾದ್‌
ನಮ್ಮ ಬದುಕಿನ ಬಂಡಿ ಈಗ ಹೀಗೇ ಕಾಲುಚಾಚಿ ಮಲಗಿಬಿಟ್ಟಿದೆ ನೋಡ್ರಿ ಸಾಹೇಬ್ರ... -ಚಿತ್ರಗಳು: ತಾಜುದ್ದೀನ್‌ ಆಜಾದ್‌   

‘ಚರ್ಮ ಕುಟೀರ’ದ ಮಲ್ಲಣ್ಣ, ಸರಕಿನ ಗಾಡಿ ಎಳೆಯುವ ಪಕ್ಕಣ್ಣ, ಗುಜರಿ ಅಂಗಡಿಯ ಕಾಸಿಂ ಭಯ್ಯಾ, ಚಿಂದಿ ಆಯುವ ಸೀತಮ್ಮ...

ಎಲ್ಲಾ ಹೇಗಿದ್ದೀರಿ?

ಸಾಮಾನ್ಯ ದಿನಗಳಲ್ಲಾದರೆ ಏನು ಧಾವಂತ ನಿಮ್ಮದು. ನಸುಕಿನಲ್ಲಿ ಎದ್ದು ಸೂರ್ಯ ಮುಳುಗುವವರೆಗೆ ಬೆವರು ಹರಿಸಿದರೂ ಕೆಲಸವೇ ಮುಗಿಯಲೊಲ್ಲದು. ತುತ್ತಿನ ಚೀಲ ತುಂಬಬೇಕಿತ್ತಲ್ಲ? ಬೆಳಿಗ್ಗೆ ಬೇಗ ಬಂದು ಅಂಗಡಿ ತೆಗೆಯುತ್ತಿದ್ದೆಯಲ್ಲ ಮಲ್ಲಣ್ಣ? ಹೊಸ ಚಪ್ಪಲಿ ಹೊಲಿಯೋದು, ಹಳೆಯ ಚಪ್ಪಲಿ ರಿಪೇರಿ ಮಾಡಿಕೊಡುವುದು... ಬಂದ ಅಲ್ಪ ಆದಾಯದಲ್ಲಿಯೇ ನೆಮ್ಮದಿಯ ಜೀವನ ಸಾಗಿಸೋದು – ಸಂತೆಯೊಳಗಿನ ಸಂತನಂತೆ ಬದುಕಿದ್ದೆಯಲ್ಲವೇ ನೀನು? ಅಂಗಡಿಯಲ್ಲಿ ಕಾಲು ಚಾಚಿ ಮಲಗಿ ಬಿಟ್ಟಿರುವೆಯಲ್ಲ, ಈಗ ಹೊಟ್ಟೆ ಹೊರೆಯಲು ಏನು ಮಾಡುತ್ತಿ? ನಿನ್ನಂತೆ ಪಕ್ಕಣ್ಣನ ಬದುಕಿನ ಬಂಡಿಯೂ ನಿಂತುಬಿಟ್ಟಿದೆ. ನಿಂತ ಬಂಡಿಯ ಮೇಲೆ ಆತನೂ ಕಾಲುಚಾಚಿ ಮಲಗಿ ಬಿಟ್ಟಿದ್ದಾನೆ ನೋಡು. ಕಾಸಿಂ ಭಯ್ಯಾನಾದರೂ ಏನು ಮಾಡುತ್ತಾನೆ ಅಂದುಕೊಂಡಿದ್ದೀರಿ? ಗುಜರಿಯಲ್ಲಿ ಬಿದ್ದ ಸಾಮಾನುಗಳನ್ನು ಈ ರಾಶಿಯಿಂದ ಆ ರಾಶಿಗೆ, ಆ ರಾಶಿಯಿಂದ ಈ ರಾಶಿಗೆ ಹಾಕೋದಷ್ಟೇ ಈಗ ಅವನ ಕೆಲಸ. ‘ಯಾಕೆ’ ಅಂತ ಕೇಳಿದರೆ, ‘ಹೊತ್ತು ಹೋಗಬೇಕಲ್ಲ’ ಎಂದು ಮರುಪ್ರಶ್ನೆ ಹಾಕಿಬಿಡುತ್ತಾನೆ. ಹೊತ್ತೇನೋ ಹೋಗುತ್ತದೆ; ಊಟ ಎಂದು ಕೇಳಿದರೆ ಮುಗಿಲ ಕಡೆಗೆ ಮುಖ ಮಾಡುತ್ತಾನೆ.

ADVERTISEMENT
ಗುಜರಿಯ ಕಾರ್ಮಿಕನನ್ನೂ ಲಾಕ್‌ಡೌನ್‌ ಕಟ್ಟಿಹಾಕಿದೆ. ಗುಜರಿಯ ರಾಶಿ ಬದಲಿಸುವುದಷ್ಟೇ ಈಗ ಆತನ ಕೆಲಸ

ಪಾಪ, ಚಿಂದಿ ಆಯುವ ನಮ್ಮ ಸೀತಮ್ಮ ಲಾಕ್‌ಡೌನ್‌ ಕಾಲದಲ್ಲೂ ರಜೆ ತೆಗೆದುಕೊಳ್ಳಲು ಸಿದ್ಧವಿಲ್ಲ. ಹೆಗಲಿಗೆ ಚೀಲ ಏರಿಸಿಕೊಂಡು ಹೊರಟೇಬಿಟ್ಟಿದ್ದಾಳೆ. ಖಾಲಿ, ಖಾಲಿಯಾಗಿರುವ ಮಾರುಕಟ್ಟೆಗಳಲ್ಲಿ, ರಸ್ತೆಗಳಲ್ಲಿ ಜನರಿಲ್ಲದಿದ್ದರೂ ಗುಜರಿ ಸಿಕ್ಕೇ ಸಿಕ್ಕುತ್ತದೆ ಎನ್ನುವ ನಂಬಿಕೆ ಅವಳಿಗೆ. ವಾಸ್ತವವಾಗಿ, ಸಾಂಕ್ರಾಮಿಕದ ಈ ಅಟ್ಟಹಾಸದಲ್ಲೂ ಅವಳೇ ಹೆಚ್ಚು ಆಶಾವಾದಿ. ಅಂದಹಾಗೆ, ನಿಮ್ಮೆಲ್ಲರ ಮುಖಗಳಲ್ಲಿ ಈಗ ಸಿಟ್ಟು ಎದ್ದು ಕಾಣಬೇಕಿತ್ತು. ಆದರೆ, ಅಲ್ಲಿ ಕಾಣುತ್ತಿರುವುದು ನೋವು ನುಂಗಿದ ವಿಷಣ್ಣವದನ ಮಾತ್ರ. ಕಾಸು ಖಾಲಿಯಾದ ಬಳಿಕ, ಬೀದಿಯಲ್ಲಿ ಹಂಚುತ್ತಿದ್ದ ಆಹಾರ ಪೊಟ್ಟಣಗಳಿಗೂ ಕೈಯೊಡ್ಡಬೇಕಾಯಿತಲ್ಲ? ನೀವು ಕಂಡಿದ್ದ ಕನಸುಗಳು ತುಂಬಾ ಸರಳ. ಆದರೆ, ನನಸಾಗಿಸುವುದು ಅಷ್ಟೇ ಕಠಿಣ ಬಿಡಿ. ‘ಕೈತುಂಬಾ ಕೆಲಸ ಮಾಡಬೇಕು, ಹೊಟ್ಟೆ ತುಂಬಾ ಉಂಡು ನೆಮ್ಮದಿಯಿಂದ ಜೀವನ ಸಾಗಿಸಬೇಕು.’ ಇದೇ ಅಲ್ಲವೇ, ನಿಮ್ಮ ಕನಸು. ಹಬ್ಬಗಳಿರಲಿ, ಮನೆಯ ಸಂಪ್ರದಾಯಗಳಿರಲಿ, ಜ್ವರದಿಂದ ಬಳಲುತ್ತಿರಲಿ ನೀವು ಕೆಲಸ ಮಾಡದೆ ಬಿಟ್ಟವರಲ್ಲ. ಆದರೆ, ಯಾರಿಗೋ ಹಿಡಿದ ಜ್ವರ ನಿಮ್ಮನ್ನು ಮನೆಯಲ್ಲೇ ಬಂದಿಯಾಗುವಂತೆ ಮಾಡಿಬಿಟ್ಟಿದೆ.

ಚಿಂದಿ ಆಯುವ ನಮ್ಮ ಕೆಲಸಕ್ಕೆ ಯಾವ ಲಾಕ್‌ಡೌನ್?

ಆರ್ಥಿಕ ಮುಗ್ಗಟ್ಟಿನ ಈ ಸನ್ನಿವೇಶದಲ್ಲಿ ನಿಮ್ಮ ಕಠಿಣಶ್ರಮ ಮತ್ತು ಕಾಣಿಕೆಯನ್ನು ಯಾರು ತಾನೇ ನೆನಪು ಮಾಡಿಕೊಂಡಾರು? ಹೌದು, ಕೆಲಸದ ಸ್ಥಳದಲ್ಲಿ ನೀವಷ್ಟೇ ಮಲಗಿಲ್ಲ, ನಿಮ್ಮ ಮನೆಯೊಳಗಿನ ಒಲೆಯಲ್ಲೂ ಬೆಕ್ಕು ಮಲಗಿಬಿಟ್ಟಿದೆ...

ಬರಹ: ಪಿನಾಕ

ಬಾಗಿಲು ಅರ್ಧ ತೆರೆದಿದೆ. ಒಳಗೆ ಇನ್ನೂ ಕತ್ತಲು ಆವರಿಸಿದೆ. ಸಲಕರಣೆಗಳನ್ನು ಇಟ್ಟುಕೊಂಡು ಕಾದರೂ ಗ್ರಾಹಕರಿಲ್ಲ. ಮಲಗುವುದೊಂದೇ ಉಳಿದಿರುವ ಕಾಯಕ...
ಇಚಲ ಹಣ್ಣು ಸರ್‌ ಇಚಲ ಹಣ್ಣು... ಲಾಕ್‌ಡೌನ್‌ ಖರೆ, ಹೊಟ್ಟೆ ಕೇಳುತ್ತಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.