ಗಂಡು ಕ್ಷೇತ್ರ ಎನಿಸಿಕೊಂಡ ಶಿಲ್ಪಕಲೆಯ ಆವರಣದಲ್ಲಿ ಯಶಸ್ಸು ಮಾತ್ರವಲ್ಲ, ಖುಷಿಯನ್ನೂ ಪಡೆದುಕೊಂಡ ಕನಕಾಮೂರ್ತಿ, ಶಿಲೆಯ ಸ್ಪರ್ಶದಲ್ಲಿ, ಒಡನಾಟದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು. ಅವರು ಬಾಳಪಯಣ ಮುಗಿಸಿ ಹೋಗಿದ್ದರೂ ಕಲಾಕೃತಿಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ...
ಶಿಲ್ಪಕಲಾವಿದೆ ಕನಕಾಮೂರ್ತಿ ಈಗೊಂದು ಸುಂದರ ನೆನಪು. ಬಣ್ಣಬಣ್ಣದ ಸೀರೆ, ತೋಳಿಲ್ಲದ ರವಿಕೆ, ಎತ್ತಿಕಟ್ಟಿದ ತಲೆಕೂದಲ ಗಂಟು... ಹೊಳೆವ ನಗುವಿನ, ತುಂಬು ಮೊಗದ, ಆತ್ಮವಿಶ್ವಾಸ ತುಳುಕುವ, ನಸುಗಪ್ಪು ಬಣ್ಣದ ಲಕ್ಷಣವಂತೆ. ಇತ್ತೀಚೆಗೆ ಕೊಂಚ ಮೌನಗೊಂಡಿದ್ದಾರೆ, ಕೆತ್ತನೆಯಿಂದ ವಿಮುಖರಾಗಿದ್ದಾರೆ ಎಂದು ಗೆಳೆಯರಿಂದ ಕೇಳಿದ್ದೆ. ಇದೇ ಮೇ 13ರಂದು, 79ನೇ ವಯಸ್ಸಿನಲ್ಲಿ ತಮ್ಮ ಪಯಣ ಮುಗಿಸಿ ಕನಕಾ ಹೊರಟೇಬಿಟ್ಟರು. ಅವರ ಕಮ್ಮನಹಳ್ಳಿಯ ಮನೆಗೆ ಹೋಗಲಾಗಲಿಲ್ಲ ಎಂಬ ತಪ್ಪಿತಸ್ಥ ಭಾವನೆ ಮಾತ್ರ ನನ್ನಲ್ಲಿ ಉಳಿದಿದೆ.
ಕಲ್ಲಿನೊಂದಿಗೆ ಕನಕಾಗೆ ಸದಾ ಪ್ರೀತಿ. ಹೆಣ್ಣು ಮತ್ತು ಶಿಲ್ಪಕಲೆಯ ಸಂಬಂಧಕ್ಕೆ ಬಂದರೆ, ಹೆಣ್ಣಿನ ಆಕೃತಿ ಮತ್ತು ಸೌಂದರ್ಯವನ್ನು ನಿರ್ಭಿಡೆಯಿಂದ ಚಿತ್ರಿಸುತ್ತ, ಹೆಣ್ಣಿನ ಭಾವಸ್ವಭಾವಗಳನ್ನು ಸ್ಫೂರ್ತಿಯಾಗಿಸಿಕೊಂಡು ಸಂಭ್ರಮಿಸಿರುವ ಕಲಾಪ್ರಕಾರಗಳಲ್ಲಿ ಶಿಲ್ಪಕಲೆ ಮುಖ್ಯವಾದದ್ದು. ಹಾಗಿದ್ದರೂ ಮಹಿಳಾಶಿಲ್ಪಿಗಳು ಮಾತ್ರ ಬೆರಳೆಣಿಕೆಯಷ್ಟೇ. ಹೀಗಾಗಿ ಕನಕಾರವರ ಕಲಾಬದುಕು ವಿಶಿಷ್ಟ ಅನುಭವಗಳ ಬುತ್ತಿಯಾಗಿದೆ.
ಗಂಡು ಕ್ಷೇತ್ರ ಎನಿಸಿಕೊಂಡ ಶಿಲ್ಪಕಲೆಯ ಆವರಣದಲ್ಲಿ ಯಶಸ್ಸು ಮಾತ್ರವಲ್ಲ, ಖುಷಿಯನ್ನೂ ಪಡೆದುಕೊಂಡ ಕನಕಾ, ಶಿಲೆಯ ಸ್ಪರ್ಶದಲ್ಲಿ, ಒಡನಾಟದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು. ಕಲ್ಲು ಬರಡು ವಸ್ತುವಲ್ಲ, ಕರಗದ ಜಡಗುಂಡಲ್ಲ, ತಂಪಾದ, ಮೃದುವಾದ, ಜೀವರಸಭರಿತ ಚೈತನ್ಯದ ಸಾರ. ಉಳಿ ಪೆಟ್ಟುಗಳು ಆತ್ಮೀಯ ಸಂವಾದದಂತೆ ಭಾಸವಾಗಿ, ಜೀವಂತ ವಿನಿಮಯವೇರ್ಪಟ್ಟು, ಕಾವ್ಯಾತ್ಮಕ ನೆಲೆಯಲ್ಲಿ ಆಕೃತಿಯೊಂದು ಜೀವ ತಳೆಯುತ್ತದೆ ಎಂಬುದು ಅವರ ನಿಲುವಾಗಿತ್ತು.
ಸಂಪ್ರದಾಯವಂತರಾದ ತಂದೆ ಜಮೀನ್ದಾರ್ ಮುತ್ತತ್ತಿ ಸುಬ್ಬರಾಯರು ಮಗಳ ಶಿಲ್ಪಕಲೆಯ ಆಯ್ಕೆಯ ಬಗ್ಗೆ ಎಂದೂ ಉತ್ಸಾಹಗೊಂಡವರಲ್ಲ. ಬಿಸಿಲು-ದೂಳಿನಲ್ಲಿ ಶ್ರಮಿಸುತ್ತ, ಇನ್ನೂ ಕಪ್ಪಾಗಿ ಒರಟಾದರೆ, ಯಾರು ಮದುವೆಯಾಗುತ್ತಾರೆ ಎಂಬುದಷ್ಟೇ ಅವರ ಆತಂಕವಾಗಿತ್ತು. ತಾಯಿ ಸುಂದರಮ್ಮನವರು ಕನಕಾ ಸೇರಿದಂತೆ ತಮಗೆ ಹುಟ್ಟಿದ ಮತ್ತು ಪತಿಯ ಮೊದಲ ಹೆಂಡತಿಯ ಮಕ್ಕಳೆಲ್ಲರನ್ನೂ ಸಲಹಿದರು. ಒಟ್ಟು 19 ಮಕ್ಕಳ ಬೃಹತ್ ಕುಟುಂಬದಲ್ಲಿ, ಹಾಡುತ್ತ ಕುಣಿಯುತ್ತ ಬೆಳೆದ ಕನಕಾ, ವಿಜ್ಞಾನದಲ್ಲಿ ಪದವೀಧರೆಯಾಗಿ, ತಿರುಮಕೂಡಲು ನರಸಿಪುರದಿಂದ ಬೆಂಗಳೂರಿಗೆ ವಲಸೆ ಬಂದರು. ಬಸವನಗುಡಿಯ ಕಲಾಶಾಲೆ ‘ಕಲಾಮಂದಿರ’ದಲ್ಲಿ ಚಿತ್ರಕಲೆಯ ತರಬೇತಿಗಾಗಿ ಹೆಜ್ಜೆಯಿಟ್ಟವರು, ರೇಖಾಚಿತ್ರದಲ್ಲಿ ತಮಗಿದ್ದ ಕೌಶಲ ಕಂಡುಕೊಳ್ಳುತ್ತಲೇ, ಶ್ರೇಷ್ಠ ಪಾರಂಪರಿಕ ಶಿಲ್ಪಿ ವಾದಿರಾಜರ ಕಲಾಕೃತಿಗಳಿಂದ, ವಿಶೇಷವಾಗಿ ಮರದ ಏಸುಕ್ರಿಸ್ತ ಮತ್ತು ದಂತದ ಕೃಷ್ಣನ ಪ್ರತಿಮೆಗಳಿಂದ ಆಕರ್ಷಣೆಗೊಂಡು ಶಿಲ್ಪಲೋಕಕ್ಕೆ ಕಾಲಿರಿಸಿದರು.
ಗುರು ವಾದಿರಾಜರಲ್ಲಿ ನಾಲ್ಕು ದಶಕಗಳ ಕಾಲ ಕಲಿತು ಸ್ವತಂತ್ರ ಶಿಲ್ಪ ರಚಿಸುವಂತಾದಾಗ, ಬಗೆಬಗೆಯ ಕಲ್ಲು, ಸಿಮೆಂಟು, ಟೆರ್‍ರಾಕೋಟ, ಮರ ಬಳಸಿ, ಸಾಂಪ್ರದಾಯಿಕ, ಅಸಾಂಪ್ರದಾಯಿಕ, ಜನಪದ, ಪರಿಸರಪರ, ಹೀಗೆ ಎಲ್ಲ ಬಗೆಯ ಶಿಲ್ಪರಚನೆಯಲ್ಲಿ ತೊಡಗಿದರು. ಇಂಥ ವೈವಿಧ್ಯದ ಅನುಭವದಿಂದ ಗಳಿಸಿಕೊಂಡ ಕಾವ್ಯಾತ್ಮಕತೆ ಮತ್ತು ಮೊನಚು, ಕನಕಾ ಅವರಿಗೆ ಸಾಂಪ್ರದಾಯಿಕ ಶಿಲ್ಪಪ್ರಕಾರದ ಅತ್ಯುತ್ತಮ ಪ್ರತಿನಿಧಿಯಾಗಿ ಬೆಳೆಯುವಲ್ಲಿ ನೆರವಾದವು.
ಗುರುಶಿಷ್ಯರ ಕೃತಿಗಳನ್ನು ಒಟ್ಟಾರೆಯಾಗಿ ಗಮನಿಸಿದಾಗ, ವಾದಿರಾಜರ ‘ಹಾರಾಡುತ್ತಿರುವ ಗಂಧರ್ವರು’ ಕೃತಿಯಿಂದ ಕನಕಾರ ‘ಯಕ್ಷಿ’ ಹುಟ್ಟಿಬಂದಂತೆ ತೋರುತ್ತದೆ. ವಾದಿರಾಜರ ಶ್ರೇಷ್ಠ ಕೃತಿಗಳಾದ ಯಶೋಧರಾ, ಶಿವಪಾರ್ವತಿ, ಅವಲೋಕಿತೇಶ್ವರ ಮತ್ತು ಕನಕಾರ ಸರಸ್ವತಿ, ಕಾಳೀಯಮರ್ದನ ಕೃಷ್ಣ, ಸಪ್ತಋಷಿಗಳು, ರಾಣಿಯ ಶಿರ, ಎಲ್ಲವನ್ನೂ ಒಟ್ಟಾಗಿ ನೋಡುವಾಗ, ಅವರಿಬ್ಬರ ಮನೋಧರ್ಮಗಳು ಥಟ್ಟನೆ ಹೋಲಿಕೆಗೆ ನಿಲುಕುತ್ತವೆ. ಗುರುಗಳಂತೆಯೇ ಶಿಲ್ಪಕಲೆಯ ವಿಷಯದಲ್ಲಿ ಧಾರ್ಮಿಕ ಮಡಿವಂತಿಕೆಯನ್ನು ಕನಕಾ ಮೀರಿದ್ದರು ಎಂಬುದು ನಿಜ.
ಶಿಲ್ಪವಿದ್ಯೆ ಜನಾಂಗ ಮತ್ತು ಲಿಂಗಭೇದವನ್ನು ಮೀರಿದ ಕಲಾಪ್ರಕಾರ; ಕಲ್ಲು ಕಡೆಯುವಾಗ ತಾನು ಹೆಣ್ಣೂ ಅಲ್ಲ ಗಂಡೂ ಅಲ್ಲ, ಶಿಲ್ಪಿ ಮಾತ್ರ ಎನ್ನುವುದು ಈಕೆಯ ನೆಲೆ. ಸಾಂಪ್ರದಾಯಿಕ ಶಿಲ್ಪರಚನೆಯ ಹಾದಿಯಲ್ಲಿ ಒಬ್ಬ ಆಲೋಚನಾಶೀಲ ಹೆಣ್ಣಿನ ನೂತನ ಪ್ರಯೋಗಗಳಿಂದ ತೆರೆದುಕೊಂಡ ಆವರಣ ಕನಕಾರವರ ಭಾವಶಿಲ್ಪಲೋಕ. ತಮ್ಮ ಲಹರಿಯನ್ನೇ ಅನುಸರಿಸಿ ಕೆತ್ತಿದ ರಾಗ್ ಕೇದಾರ್, ರಾಗ್ ಮಲ್ಹಾರ್ ಭಾವಪ್ರತಿಮೆಗಳು ಉತ್ತಮ ಉದಾಹರಣೆಗಳು. ಈಕೆಯ ಸಂಗೀತಾಸಕ್ತಿ ಆಳವಾದುದು. ಕೇಳ್ಮೆಯ ಸಂಗದಲ್ಲೇ ಈಕೆಯ ಶಿಲ್ಪವೂ ಅರಳಿತು ಎಂದರೆ ತಪ್ಪಲ್ಲ. ಟ್ರಾಕ್ ಪ್ಯಾಂಟ್, ಟೀ ಶರ್ಟ್ ಧರಿಸಿ, ತಲೆಕೂದಲ ಗಂಟಲ್ಲಿ ಒಂದು ಚೂರು ಮಲ್ಲಿಗೆ ಮುಡಿದು, ಮೈಕೈಯೆಲ್ಲ ಮಣ್ಣುದೂಳು ಮೆತ್ತಿಸಿಕೊಂಡು, ಕಲ್ಲು ಕಡೆಯುವುದೋ, ಅಚ್ಚು ತೆಗೆಯುವುದೋ, ಜೋಡಿಸುವುದೋ ಎಂಥದೋ ಕೆಲಸದಲ್ಲಿ ಮಗ್ನರಾದ ಕನಕಾರನ್ನು ಅವರ ಬಸವನಗುಡಿ ಮನೆಯಲ್ಲಿ ಭೇಟಿಯಾದಾಗಲೆಲ್ಲ, ಕ್ಯಾಸೆಟ್ ಸಂಗೀತದ ಸಾಥ್ ಇರುತ್ತಿತ್ತು. ವಿಶಾಲ ಅಂಗಳದ ಸುತ್ತಮುತ್ತೆಲ್ಲ ನಿಂತೋ, ಮಲಗಿಯೋ, ಉಳಿಏಟು ತಿನ್ನುತ್ತಲೋ, ಪೂರ್ಣಗೊಂಡು ನಗುತ್ತಲೋ, ನೀರಿನ ಟ್ಯಾಂಕಲ್ಲಿ ನೆನೆಯುತ್ತಲೋ ತಮ್ಮ ಇರವನ್ನು ಸಾರುತ್ತಿದ್ದ ಕನಕಾರವರ ಶಿಲ್ಪಗಳು ಒಂದು ಸೆಟ್ಟಿಂಗಿನ ಭಾಗದಂತೆ ಕಾಣುತ್ತಿದ್ದವು.
ಲಾಲ್‌ಬಾಗ್ ಪಶ್ಚಿಮದ್ವಾರದಲ್ಲಿರುವ ಕುವೆಂಪು ಆದಿಯಾಗಿ ಕನ್ನಡದ ಸಾಹಿತಿಗಳು, ಕನಕಾರ ಮೆಚ್ಚಿನ ಸಂಗೀತಗಾರರು, ನಾನಾ ಕ್ಷೇತ್ರದ ದಿಗ್ಗಜರು ಎಲ್ಲರೂ ಇವರ ಕೈಯಲ್ಲಿ ರೂಪ ತಳೆದರು. ಸಾರ್ವಜನಿಕ ಸಂಘಸಂಸ್ಥೆಗಳೂ ಸೇರಿದಂತೆ ನಾಡಿನೆಲ್ಲೆಡೆ ಈ ಕನ್ನಡತಿಯ ಕಲಾಕೃತಿಗಳು ನೆಲೆಸಿವೆ. ಮೊತ್ತಮೊದಲ ಬಾರಿಗೆ ಮಹಿಳೆಯೊಬ್ಬರ ಕಲಾಕೃತಿಗಳು ದೇವಾಲಯಗಳ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡ ಹಿರಿಮೆ ಕನಕಾರವರಿಗೆ ಸಲ್ಲಬೇಕು. ಮಲ್ಲೇಶ್ವರದ ಗುಡಿಯಲ್ಲಿನ ಗಣೇಶಮೂರ್ತಿ ಮತ್ತು ಚಿಕ್ಕಗುಬ್ಬಿಯ ಆಂಜನೇಯ ವಿಗ್ರಹ ಪ್ರಖ್ಯಾತವಾದವು. ವಿಶ್ವಕರ್ಮ ಜನಾಂಗದ ಪುರುಷರೇ ಪ್ರಧಾನವಾಗಿದ್ದ ಶಿಲ್ಪಕಲೆಯ ನಿರ್ಬಂಧಿತ ವಲಯ ಪ್ರವೇಶಿಸಿ ಇಂಥ ಸಾಧನೆಗೈದದ್ದು ಸಾಮಾನ್ಯ ಸಂಗತಿಯಲ್ಲ. ದೇವನಹಳ್ಳಿಯ ಸರೋಜಾ ಆಚಾರ್ಯ, ಬೆಂಗಳೂರಿನ ರತ್ನಾಭಟ್ ಮುಂತಾದ ಕಲಾವಿದೆಯರ ಹೆಸರುಗಳು ಕೇಳಿಬಂದರೂ ಅವರ ಸಾಂಪ್ರದಾಯಿಕ ಚಟುವಟಿಕೆಗೂ ಕನಕಾ ಅವರ ಕಾರ್ಯವ್ಯಾಪ್ತಿಗೂ ಅಜಗಜಾಂತರ. ಅಲ್ಲದೆ, ಕನಕಾ ಅವರದು ಸ್ವತಂತ್ರ ನಿಲುವು, ತೆರೆದ ಮನಸ್ಸು. ವಾದಿರಾಜರೂ ಸೇರಿದಂತೆ ಕಲಾವಿದರೆಲ್ಲ ರಚಿಸುತ್ತಿದ್ದ ಶಿಲ್ಪಲೋಕದ ಸುಮಕೋಮಲ ಸುಂದರಿಯರನ್ನು ಮೆಚ್ಚಿಕೊಳ್ಳುವ ಹೊತ್ತಿನಲ್ಲೇ, ವಾಸ್ತವವಾಗಿ ಕನಕಾಗೆ ಆಪ್ತವೆನಿಸಿದ್ದು ಕೊಂಚ ಒರಟಾದ, ಸದೃಢವಾದ, ಅತಿಯಾದ ಸಂತುಷ್ಟತೆಯ ಭಾವಕ್ಕೆ ಹೊರತಾದ, ಗಟ್ಟಿ ಮೈಮನಸ್ಸಿನ ಹೆಣ್ಣು ಪ್ರತಿಮೆಗಳೇ. ಕನಕಾ ಕಲ್ಲಿನಲ್ಲಿ ಅರಳಿಸಿದ ಪುರಾಣದ ಋಷಿಮುನಿಗಳು, ಆಡುವ ಮಕ್ಕಳು, ಶ್ರಮಜೀವಿಗಳು ಎಲ್ಲರೂ ಮಾನವಸಹಜ ವಿನಿಮಯದಲ್ಲಿ ತಲ್ಲೀನರು. ಕುಸುರಿ ಚೆಂದದ ಹೊಯ್ಸಳ ಶೈಲಿಗಿಂತ, ಭಾವಪ್ರಧಾನ ಚಾಲುಕ್ಯ ಶೈಲಿಯನ್ನು ಕನಕಾ ತಮ್ಮದಾಗಿಸಿಕೊಂಡರು.
ಕೌಟುಂಬಿಕ ಸಮತೋಲನ ಕಾಯ್ದುಕೊಂಡೇ ಕಲಾಯಾನ ಕೈಗೊಂಡವರು ಕನಕಾ. ಮಗಳೊಂದಿಗೆ ಬದುಕನ್ನು ಸಂಭ್ರಮಿಸಬೇಕೆನ್ನುವ ತಾಯಿಯೊಬ್ಬಳಿಗೆ, ವ್ಯಕ್ತಿ ಮಗನಾಗಿ ರೂಪಾಂತರಗೊಂಡಾಗ, ಅದೇನೂ ಸುಲಭವಾದ ಸವಾಲಲ್ಲ. ವೈಯಕ್ತಿಕ ಆಯ್ಕೆಯ, ಸಾಂಸ್ಕೃತಿಕ ರಾಜಕಾರಣದ ಆಯಾಮವನ್ನು ಪರಿಗಣಿಸುತ್ತಲೇ, ಕನಕಾ ಕೂಡ ಈ ಸನ್ನಿವೇಶವನ್ನು ಎದುರಾಗಿದ್ದಾರೆ ಎಂದು ನನ್ನ ನಂಬಿಕೆ. ಒಂದು ಕುಟುಂಬದ, ಸಮುದಾಯದ ಮಾಮೂಲು ಸಂಗತಿಯಲ್ಲದ, ವಿಶಿಷ್ಟ ಸಂಘರ್ಷಗಳು ಎದುರಾದಾಗ, ನುಂಗಲೂ ಆಗದ, ಕಕ್ಕಲೂ ಆಗದ ಇಕ್ಕಟ್ಟಿನಲ್ಲಿ ವ್ಯಕ್ತಿಯೊಬ್ಬರು ಅನುಭವಿಸುವ ಏಕಾಂಗಿತನ, ಅಸಹಾಯಕತೆ, ಆ ದೋಣಿಯಲ್ಲಿ ಪಯಣಿಸಿದವರಿಗೆ ಮಾತ್ರ ಗೊತ್ತು. ತನ್ನ ಸಮಸ್ಯೆಗಿದ್ದ ಸಾಮಾಜಿಕ ಆಯಾಮವನ್ನು ಅಸಾಧಾರಣವಾಗಿ ನಿಭಾಯಿಸಿ, ಹೆತ್ತ ಕುಡಿಗೆ ಒತ್ತಾಸೆಯಾಗಿ ನಿಲ್ಲುತ್ತಲೇ, ಸಮಾಜಕ್ಕೊಂದು ಮಾದರಿಯಾಗಿ ಬೆಳೆದರು. ಶಿಲೆಗಳನ್ನು ಕೆತ್ತುತ್ತಲೇ ತಾನೂ ಸಾವಿರ ಉಳಿಪೆಟ್ಟು ತಿಂದು ಮಾಗಿದ ಹಿರಿಯ ಜೀವವೊಂದು ಕಣ್ಮರೆಯಾಗಿದೆ. ನಿರಂತರವಾಗಿ ಕನಕಾರವರ ಬೆನ್ನಿಗಿದ್ದ ಒಡನಾಡಿ, ಪತಿ ನಾರಾಯಣಮೂರ್ತಿ, ತಾಯಿಯನ್ನು ಕಳೆದುಕೊಂಡ ರೂಮಿ ಹರೀಶ್, ಅಪಾರ ಬಂಧುಮಿತ್ರರು ಇನ್ನು ಅವರ ಕಲಾಕೃತಿಗಳಲ್ಲೇ ಅವರನ್ನು ಅರಸಬೇಕಿದೆ. ನನ್ನಮಟ್ಟಿಗೆ, ಕನಕಾ ‘ಯಕ್ಷಿ’ಯ ರೂಪದಲ್ಲಿ, ನಟರಾಜನ ಸುಂದರ ನಾಟ್ಯಮೂರ್ತಿಯ ರೂಪದಲ್ಲಿ, ನಮ್ಮ ಮನೆಯಲ್ಲೇ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.