ADVERTISEMENT

ಮಹಿಳೆಯರ 20 ವರ್ಷಗಳ ಮಧುಬನಿ ಕಲಾಕೃತಿ: 100 ಕ್ಯಾನ್ವಾಸ್‌ಗಳ ಮೇಲೆ ಅರಳಿದ ರಾಮಾಯಣ

ಪಿಟಿಐ
Published 12 ಏಪ್ರಿಲ್ 2024, 12:20 IST
Last Updated 12 ಏಪ್ರಿಲ್ 2024, 12:20 IST
<div class="paragraphs"><p>ನವದೆಹಲಿಯ ಲಲಿತ ಕಲಾ ಅಕಾಡೆಮಿಯಲ್ಲಿ ಮಿಥಿಲಾ ರಾಮಾಯಣ ಕಲಾಕೃತಿ ಪ್ರದರ್ಶಿಸಿದ ಕಲಾವಿದೆಯರು</p></div>

ನವದೆಹಲಿಯ ಲಲಿತ ಕಲಾ ಅಕಾಡೆಮಿಯಲ್ಲಿ ಮಿಥಿಲಾ ರಾಮಾಯಣ ಕಲಾಕೃತಿ ಪ್ರದರ್ಶಿಸಿದ ಕಲಾವಿದೆಯರು

   

ಪಿಟಿಐ ಚಿತ್ರ

ನವದೆಹಲಿ: ‘ಶ್ರೀರಾಮನಿಗೆ ತನ್ನ ಮಗಳು ಸೀತೆಯನ್ನು ವಿವಾಹ ಮಾಡಿಕೊಡುವ ಸಂದರ್ಭವನ್ನು ಕಲೆಗಳ ಮೂಲಕ ರಚಿಸಿ ಸಾರ್ವಜನಿಕರಿಗೆ ವಿಷಯ ತಲುಪಿಸುವಂತೆ ಬಿಹಾರದ ಮಿಥಿಲಾ ಪ್ರಾಂತ್ಯದ ಮಹಾರಾಜ ಜನಕ ಹೇಳಿದರು ಎಂಬ ನಂಬಿಕೆ ಇದೆ. ಇದರಲ್ಲಿ ವಧು ಹಾಗೂ ವರ ಗಾಢವಾದ ಬಣ್ಣದಲ್ಲಿ ಕಂಗೊಳಿಸುತ್ತಿದ್ದರೆ, ಸುತ್ತಲಿನ ಚಿತ್ರಣ ಅದಕ್ಕೆ ವಿರುದ್ಧವಾದ ಬಣ್ಣದಲ್ಲಿರುವುದು ಈ ಮಿಥಿಲಾ ಅಥವಾ ಮಧುಬನಿ ಕಲೆಯ ವಿಶೇಷ’ ಎಂದು ಮಧುಬನಿ ಕಲಾ ಕೇಂದ್ರದ ಸಂಸ್ಥಾಪಕಿಯೂ ಆಗಿರುವ ಕಲಾವಿದೆ ಮನಿಶಾ ಜಾ ತಿಳಿಸಿದರು.

ADVERTISEMENT

ಹಿಂದೂ ಪುರಾಣದ ಮಹಾಕಾವ್ಯ ರಾಮಾಯಣದ ಇಂಥ ನೂರು ಕಲಾಕೃತಿಗಳು ಲಲಿತ ಕಲಾ ಅಕಾಡೆಮಿಯಲ್ಲಿ ಪ್ರದರ್ಶನಗೊಳ್ಳುತ್ತಿವೆ.

‘ಬಿಹಾರದ ಯುವ ಮಹಿಳಾ ಕಲಾವಿದರು 20 ವರ್ಷಗಳ ಪರಿಶ್ರಮದಿಂದ ಮಿಥಿಲಾ ರಾಮಾಯಣ ಕಲಾಕೃತಿಗಳನ್ನು ರಚಿಸಿದ್ದಾರೆ. ಬಿಹಾರದಲ್ಲಿ ಪ್ರತಿ ವಧುವೂ ಸೀತೆ. ಹಾಗೆಯೇ ಪ್ರತಿ ವರನೂ ರಾಮ. ಈ ನೆಲದ ಮದುವೆ ಹಾಡುಗಳಲ್ಲೂ, ನಮ್ಮ ಮಗಳನ್ನು ಸೀತೆ ಎಂದೇ ಕರೆಯುತ್ತೇವೆ. ಹಾಗೆಯೇ ಈ ಪ್ರದರ್ಶನದಲ್ಲಿ ಇಡಲಾಗಿರುವ ಕಲಾಕೃತಿಯಲ್ಲೂ ಜನಮಾನಸದಲ್ಲಿರುವ ಸೀತೆ ಮತ್ತು ರಾಮನ ಪರಿಕಲ್ಪನೆಯನ್ನೇ ಕಾಣಬಹುದಾಗಿದೆ. ಜತೆಗೆ ರಾಮಾಯಣವು ನಮ್ಮ ಸಂಸ್ಕೃತಿಯಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂಬುದರ ಆಳವಾದ ದಾಖಲಾತಿಯೂ ಹೌದು’ ಎಂದು ಜಾ ಹೇಳಿದ್ದಾರೆ.

‘ರಾಮಾಯಣದ ಸಾಮಾನ್ಯ ಕಥೆಗಳಂತೆಯೇ, ರಾಮ–ಸೀತೆಯ ಕಲ್ಯಾಣ, ರಾಮ ಹಾಗೂ ಸೀತಾ ಅವರ ವನವಾಸ, ರಾವಣನಿಂದ ಸೀತೆಯ ಅಪಹರಣ, ಸೆರೆಯಲ್ಲಿ ಸೀತೆ ಸೇರಿದಂತೆ ಹಲವು ಚಿತ್ರಗಳನ್ನು ಮಿಥಿಲೆಯ ಕಲಾಕೃತಿಯಲ್ಲಿ ಕಾಣಬಹುದಾಗಿದೆ. ಇದರಲ್ಲಿ ಒಟ್ಟು 37 ಮಹಿಳೆಯರು ಪಾಲ್ಗೊಂಡಿದ್ದಾರೆ. ಇದರಲ್ಲಿ ಹಿರಿಯರಾದ ಜಗದಾಂಬಾ ದೇವಿ, ಸೀತಾ ದೇವಿ, ಗೋದಾವರಿ ದತ್ತಾ, ದುಲಾರಿ ದೇವಿ, ಬವಾ ದೇವಿ ಹಾಗೂ ಬಿಮಲಾ ದತ್ತ. ಕಿರಿಯ ಕಲಾವಿದರಲ್ಲಿ ನೂತನ್ ಬಾಲಾ, ಅರ್ಚನಾ ಕುಮಾರಿ, ಅಂಜು ದೇವಿ ಹಾಗೂ ಸಿಮ್ಮಿ ರಿಶಿ ಪ್ರಮುಖರಾಗಿದ್ದಾರೆ’ ಎಂದು ವಿವರಿಸಿದ್ದಾರೆ.

‘ಮಹಿಳಾ ಕಲಾವಿದರ ಕಲಾ ಜೀವನ, ಕಲೆಯ ಪೋಷಣೆ ಮತ್ತು ಅವುಗಳ ಅಭ್ಯಾಸವನ್ನು ತಿಳಿಸುವಂತಿವೆ. ಜತೆಗೆ ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಉಳಿಸಿ ಬೆಳೆಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದಾಗಿದೆ’ ಎಂದು ಜಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.