ಧಾರ್ಮಿಕ ಹಿನ್ನೆಲೆಯಲ್ಲೇ ಶುರುವಾದ ಹುಲಿವೇಷ ಕಾಲಾಂತರದಲ್ಲಿ ರೂಪಾಂತರಗಳನ್ನು ಕಂಡಿದೆ. ಧರ್ಮಾತೀತವೂ ಆಗಿ ಈಗ ಆಚರಣೆಗೊಳ್ಳುತ್ತಿರುವ ಹುಲಿವೇಷಕ್ಕೆ ವಿದೇಶದ ನಂಟೂ ಇದೆಯೆನ್ನುವುದು ವಿಶೇಷ.
ಅಲಂಕರಿಸಿದ್ದ ರಥದ ಮೇಲೆ ಮಂಗಳಾದೇವಿಯ ಪ್ರತಿಷ್ಠಾಪನೆಯಾಗಿತ್ತು. ರಥೋತ್ಸವ ಇನ್ನೇನು ಆರಂಭವಾಗುವುದರಲ್ಲಿತ್ತು, ತನ್ನ ಅಂಗವಿಕಲ ಮಗುವಿನೊಂದಿಗೆ ಹಠಾತ್ತನೆ ರಥದ ಮುಂದೆ ಬಂದ ಮಹಿಳೆಯೊಬ್ಬಳು ಮೊಣಕಾಲೂರಿ, ‘ತಾಯಿ, ನನ್ನ ಮಗುವಿಗೆ ಕಾಲು ಸರಿ ಇಲ್ಲ, ಚರ್ಮರೋಗವಿದೆ. ನಡೆದಾಡಲು ಆಗುತ್ತಿಲ್ಲ, ಮಾತೂ ಬರುವುದಿಲ್ಲ, ಮಗುವನ್ನು ಆಶೀರ್ವದಿಸಿ ಆರೋಗ್ಯವಂತನನ್ನಾಗಿಸಿದರೆ, ಮುಂದಿನ ವರ್ಷ ರಥೋತ್ಸವದ ಸಂದರ್ಭದಲ್ಲಿ ನಿನ್ನ ರಥದ ಮುಂದೆ ಆತನನ್ನು ಕುಣಿಸುತ್ತೇನೆ’ ಎಂದು ಹರಕೆ ಹೊರುತ್ತಾಳೆ.
ಕೆಲವೇ ದಿನಗಳಲ್ಲಿ ಮಗು ಗುಣಮುಖವಾಗುತ್ತದೆ. ತಾನು ಹೊತ್ತ ಹರಕೆಯಂತೆ, ಮಹಿಳೆಯು ಮುಂದಿನ ವರ್ಷದ ರಥೋತ್ಸವದ ಸಂದರ್ಭದಲ್ಲಿ ಮಗುವಿಗೆ ಹುಲಿಯ ವೇಷ ಹಾಕಿಸಿ, ಮಂಗಳಾದೇವಿಯ ರಥದ ಮುಂದೆ ಕುಣಿಸುತ್ತಾಳೆ... ಅಲ್ಲಿಂದ ಮಂಗಳೂರಿನಲ್ಲಿ ‘ಪಿಲಿ ನಲಿಕೆ’ (ಹುಲಿ ಕುಣಿತ) ಆರಂಭವಾಯಿತು ಎಂಬುದು ಐತಿಹ್ಯ.
ಈ ಕತೆಗೆ ಹಲವು ರೂಪಾಂತರಗಳಿವೆ. ಇಂಥ ಇನ್ನೂ ಅನೇಕ ಐತಿಹ್ಯಗಳೂ ಇವೆ. ಆದರೆ, ಒಟ್ಟು ಸಾರ ಇದೇ. ‘ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿದರೆ ದೇವಿಯನ್ನೇ ಹೊತ್ತು ಮೆರೆದಷ್ಟು ಸಂತಸವಾಗುತ್ತದೆ, ದೇವಿಯೂ ಪ್ರಸನ್ನಳಾಗಿ ಹರಸುತ್ತಾಳೆ’ ಎಂಬ ನಂಬಿಕೆ ಕರಾವಳಿ ಜಿಲ್ಲೆಗಳಲ್ಲಿ ದಟ್ಟವಾಗಿದೆ. ಆ ಕಾರಣಕ್ಕಾಗಿಯೇ ಪ್ರತಿ ವರ್ಷ ನೂರಾರು ಮಂದಿ ಹರಕೆ ಹೊತ್ತು, ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿಯುತ್ತಾರೆ. ‘ಪಿಲಿ ನಲಿಕೆ’ ಎಂಬುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನವರಾತ್ರಿ ಸಂದರ್ಭದ ವಿಶೇಷಗಳಲ್ಲಿ ಒಂದಾಗಿದೆ.
ಧಾರ್ಮಿಕ ಹಿನ್ನೆಲೆಯಲ್ಲಿ ಆರಂಭವಾದ ಈ ಕುಣಿತವು ಕಾಲಾಂತರದಲ್ಲಿ ರೂಪಾಂತರಗೊಂಡಿದೆ. ಧಾರ್ಮಿಕತೆಯ ಸಣ್ಣ ಎಳೆಯನ್ನಷ್ಟೇ ಇಟ್ಟುಕೊಂಡು ಪ್ರದರ್ಶನ ಕಲೆಯಾಗಿ ಬದಲಾದ ಯಕ್ಷಗಾನ, ಭೂತಾರಾಧನೆ, ನಾಗಾರಾಧನೆಯಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಸ್ಮಿತೆಯಾಗಿದೆ ಹುಲಿವೇಷ. ಜಿಲ್ಲೆಗೆ ಹೊಂದಿಕೊಂಡಂತಿರುವ ಕೇರಳದ ಕಾಸರಗೋಡು ಜಿಲ್ಲೆಯ ಜೊತೆಗೂ ನಂಟು ಇಟ್ಟುಕೊಂಡಿದೆ.
ದಸರಾ ಹಬ್ಬದ ಮಾರ್ನಮಿಯಂದು (ಮಹಾನವಮಿ) ಮಂಗಳಾದೇವಿ ದೇವಸ್ಥಾನದ ಮುಂದೆ ತಾಸೆ ಪೆಟ್ಟುಗಳ ಗೌಜಿ, ಹುಲಿಗಳ ಕುಣಿತ ಜೋರಾಗಿರುತ್ತದೆ. ಮಹಾನವಮಿಯಿಂದ ಆರಂಭಿಸಿ, ಮೂರು ದಿನಗಳ ಕಾಲ ಹುಲಿವೇಷಕ್ಕೆ ಅವಕಾಶ ಎಂಬುದು ಹಿಂದಿನ ಸಂಪ್ರದಾಯ. ಆದರೆ, ಕಳೆದ ಕೆಲವು ದಶಕಗಳಿಂದ ‘ಪಿಲಿ ನಲಿಕೆ’ ಸೀಮೋಲ್ಲಂಘನ ಮಾಡಿದೆ. ವೇಷ–ಭೂಷಣ, ನಲಿಕೆಯ ಶೈಲಿಯ ಜೊತೆಗೆ, ಜಿಲ್ಲೆ– ರಾಜ್ಯದ ಗಡಿಯನ್ನೂ ಈ ಕಲೆಯು ಲಂಘಿಸಿದೆ.
ದಸರಾ ಸಮಯದಲ್ಲಿ ಮಾತ್ರ ಕಾಣಿಸುತ್ತಿದ್ದ ಹುಲಿಗಳು, ಕೃಷ್ಣ ಜನ್ಮಾಷ್ಟಮಿ, ಗಣೇಶ ಚೌತಿ ಸಂದರ್ಭಗಳಲ್ಲೂ ಕಾಣಸಿಗುತ್ತವೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ವ್ಯಾಪ್ತಿಯಲ್ಲೇ ಓಡಾಡಿಕೊಂಡಿದ್ದ ಹುಲಿಗಳೀಗ ದೇಶದ ವಿವಿಧ ಮೂಲೆಗಳಲ್ಲಿ ಮಾತ್ರವಲ್ಲ, ಫ್ರಾನ್ಸ್ ಮತ್ತು ಜರ್ಮನಿಯಲ್ಲೂ (2000ನೇ ಸಾಲಿನಲ್ಲಿ) ಕುಣಿದುಬಂದಿವೆ.
ಮಂಗಳಾದೇವಿಯಲ್ಲಿ ಆರಂಭವಾದ ಈ ಆಚರಣೆ, ಧರ್ಮಾತೀತವೂ ಆಗಿದೆ. ಮುಸ್ಲಿಂ ಯುವಕರೇ ಹುಲಿವೇಷದ ತಂಡಗಳನ್ನು ಕಟ್ಟಿಕೊಂಡು ಮೊಹರಂ ಹಬ್ಬದ ಸಮಯದಲ್ಲಿ ಪ್ರದರ್ಶನ ನೀಡಿದ ಉದಾಹರಣೆಗಳು ಇವೆ. ಧಾರ್ಮಿಕ ಆಚರಣೆಯಲ್ಲದಿದ್ದರೂ, ಮನರಂಜನೆಗಾಗಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಥವಾ ಹಣ ಸಂಪಾದನೆಗಾಗಿ ಹಿಂದೂಗಳಂತೆ ಅನ್ಯ ಧರ್ಮೀಯ ಯುವಕರು ಸಹ ಹುಲಿವೇಷ ಹಾಕುವುದಿದೆ.
ಬೆರಳೆಣಿಕೆಯಷ್ಟಿದ್ದ ಹುಲಿವೇಷ ತಂಡಗಳ ಸಂಖ್ಯೆ ಈಗ ನೂರರ ಗಡಿ ದಾಟಿದೆ. ಗಣೇಶ ಚೌತಿಯ ಸಂದರ್ಭದಲ್ಲಿ ಮುಂಬೈ, ಬೆಂಗಳೂರು ಹಾಗೂ ಇತರ ನಗರಗಳಿಂದ ಈ ತಂಡಗಳಿಗೆ ಬೇಡಿಕೆ ಬರುತ್ತದೆ.
ಅಲಿಖಿತ ಶಾಸ್ತ್ರೀಯತೆ
ಭರತನಾಟ್ಯಕ್ಕೆ ಇರುವಂತೆ ಹುಲಿವೇಷ ಕುಣಿತಕ್ಕೆ ಇದಮಿತ್ಥಂ ಎಂಬ ಶಾಸ್ತ್ರೀಯತೆ ಇಲ್ಲ. ಆದರೆ, ಕಾಲಾಂತರದಲ್ಲಿ ಒಂದು ಸಂಪ್ರದಾಯ, ಶೈಲಿ ರೂಪುಗೊಂಡಿದೆ. ತಾಸೆಯ ಪೆಟ್ಟಿಗೆ ಸರಿಯಾಗಿ ಹಾಕುವ ಹೆಜ್ಜೆ, ಹುಲಿಗಳು ಕುಳಿತುಕೊಳ್ಳುವ ಶೈಲಿ, ಮೈಗೆ ಹಚ್ಚಿಕೊಳ್ಳುವ ಬಣ್ಣ, ಪ್ರೇಕ್ಷಕರು ಕೊಡುವ ಹಣವನ್ನು ಬಾಯಿಯಿಂದ ಮಾತ್ರ ಎತ್ತುವ ಸಂಪ್ರದಾಯ, ಅಕ್ಕಿಯ ಮುಡಿಯನ್ನು ಎತ್ತಿ ಎಸೆಯುವುದು... ಹೀಗೆ ಒಂದಿಷ್ಟು ರೀತಿ–ನೀತಿಗಳಿವೆ. ಹುಲಿವೇಷಕ್ಕೆ ಇದೇ ‘ಶಾಸ್ತ್ರೀಯತೆ’ ಎಂದು ಗುರುತಿಸಿ ಒಪ್ಪಲಾಗಿದೆ. ಈ ಸಂಪ್ರದಾಯಗಳು ಈಚಿನ ದಿನಗಳಲ್ಲಿ ತೆಳುಗೊಳ್ಳುತ್ತಿರುವ ಬಗ್ಗೆ ಹಿರಿಯ ಹುಲಿವೇಷಧಾರಿಗಳಿಗೆ ಬೇಸರವಿದೆ.
‘ಧಾರ್ಮಿಕ ಆಚರಣೆಯೊಂದು ಮನರಂಜನಾ ಮಾಧ್ಯಮವಾಗಿ ರೂಪಾಂತರವಾದಾಗ ಸಂಪ್ರದಾಯ, ಆಚರಣೆ ತಿಳಿಗೊಳ್ಳುವುದು ಸಹಜ. ಹುಲಿವೇಷ ಧಾರ್ಮಿಕ ಆಚರಣೆಯ ಗಡಿ ದಾಟಿದ್ದರಿಂದ ವೇಷ ಹಾಕುವ ತಂಡಗಳ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ಮಂದಿ ಈಗ ಹುಲಿವೇಷ ಹಾಕುತ್ತಾರೆ. ಇದೆಲ್ಲ ಬೇಡವೆಂದಲ್ಲ ಆದರೆ, ಸಂಪ್ರದಾಯ, ವೇಷಭೂಷಣ ತಿಳಿಗೊಳ್ಳುತ್ತಿರುವುದು ಸರಿಯಲ್ಲ’ ಎಂಬುದು 55 ವರ್ಷಗಳಿಂದ ‘ಮಂಗಳಾದೇವಿ ಹುಲಿವೇಷ ತಂಡ’ ನಡೆಸುತ್ತಿರುವ ದಿನೇಶ್ ಕುಂಪಲ ಅವರ ನೋವು.
‘ಹುಲಿವೇಷ ಹಾಕಿ ಚಲನಚಿತ್ರ ಶೈಲಿಯಂತೆ ಡಾನ್ಸ್ ಮಾಡುವುದು ಸರಿಯಲ್ಲ. ಸಾಂಪ್ರದಾಯಿಕ ಬಣ್ಣಗಳ ಬದಲಿಗೆ ಪೇಂಟ್ ಬಳಿದುಕೊಳ್ಳುತ್ತಾರೆ, ಕೆಲವು ತಂಡಗಳವರು ಬಿಗಿಯಾದ ಬಟ್ಟೆ ಧರಿಸಿ ಅದರ ಮೇಲೆ ಪೇಂಟ್ ಮಾಡುತ್ತಾರೆ ಇವೆಲ್ಲವೂ ದೂರವಾಗಬೇಕು. ಕಾಲಕ್ಕೆ ತಕ್ಕಂತೆ ಸಣ್ಣಪುಟ್ಟ ಬದಲಾವಣೆಗಳಾಗುತ್ತವೆ. ಆದರೆ, ಸಂಪ್ರದಾಯವನ್ನು ಸಾರಾಸಗಟಾಗಿ ದೂರ ಸರಿಸಿದರೆ ಕಲೆಯು ಮಹತ್ವ ಕಳೆದು
ಕೊಳ್ಳುತ್ತದೆ’ ಎನ್ನುತ್ತಾರೆ ಅವರು. ‘ಪಿಲಿ ನಲಿಕೆ’ ಕಲಿಯಲು ಬಯಸುವ ಯುವಕರಿಗೆ ಸಾಂಪ್ರದಾಯಿಕ ಶೈಲಿ, ಬಣ್ಣಗಾರಿಕೆಯನ್ನು ಕಲಿಸುವ ವ್ಯವಸ್ಥೆಯಾಗಬೇಕು. ಅದಕ್ಕೆ ಎಲ್ಲಾ ಸಂಘಟನೆಗಳು ಒಂದಾಗಬೇಕು. ತುಳು ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು’ ಎಂಬುದು ಅವರ ನಿರೀಕ್ಷೆ.
ವಿದೇಶಿ ನಂಟು
ಹುಲಿವೇಷ ಕಲಾವಿದರು ಧರಿಸುವ ಟೊಪ್ಪಿಯನ್ನು ಕುರಿಯ ಚರ್ಮದಿಂದ ತಯಾರಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಉತ್ತಮ ಗುಣಮಟ್ಟದ ಕುರಿ ಚರ್ಮವನ್ನು ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಲಾಗುತ್ತದೆ. ಮಂಗಳೂರು ಮೂಲದವರೇ ಆದ ಮೊಹಮ್ಮದ್ ಆಸಿಫ್ ಅವರು 13 ವರ್ಷಗಳಿಂದ ಇಂಥ ಚರ್ಮದ ಹಾಳೆಗಳನ್ನು ತರಿಸಿಕೊಡುತ್ತಿದ್ದಾರೆ.
‘ಪಿಲಿ ನಲಿಕೆ’ಯ ಅಭಿಮಾನಿಯೂ ಆಗಿರುವ ಆಸಿಫ್, ಪ್ರತಿ ವರ್ಷ ಸ್ವಂತ ಖರ್ಚಿನಲ್ಲಿ ದುಬೈಗೆ ಹೋಗಿ ಅಲ್ಲಿಂದ 250 ಚರ್ಮದ ಹಾಳೆಗಳನ್ನು ಕಳುಹಿಸುತ್ತಾರೆ. ಪ್ರತಿ ಶೀಟ್ ಬೆಲೆ ಸುಮಾರು ₹6,250ರಷ್ಟಿದೆ. ಒಂದು ಶೀಟ್‌ನಿಂದ 12 ಟೊಪ್ಪಿ ತಯಾರಿಸಬಹುದು.
ಜಿಲ್ಲೆಯ ಸುಮಾರು 30 ತಂಡಗಳಿಗೆ ತಲಾ ಒಂದು ಚರ್ಮದ ಶೀಟ್ ಅನ್ನು ಆಸಿಫ್ ಅವರು ಉಚಿತವಾಗಿ ಕೊಡುತ್ತಾರೆ. ತಮ್ಮ ಮನೆಗೂ ಹುಲಿವೇಷ ತಂಡಗಳನ್ನು ಆಹ್ವಾನಿಸಿ ಪ್ರದರ್ಶನ ಏರ್ಪಡಿಸುತ್ತಾರೆ. ‘ಹುಲಿವೇಷ ಎಂಬುದು ತುಳುನಾಡ ಮಣ್ಣಿನ ಶಕ್ತಿ. ಸೌಹಾರ್ದ ಮತ್ತು ಭ್ರಾತೃತ್ವ ಈ ಜಿಲ್ಲೆಯ ಭದ್ರ ತಳಪಾಯವಾಗಿದೆ’ ಎಂದು ಆಸಿಫ್ ಹೆಮ್ಮೆಯಿಂದ ಹೇಳುತ್ತಾರೆ.
ದುಬಾರಿ ಕಲೆ:
ಹರಕೆ ತೀರಿಸಲು ಒಬ್ಬ ವ್ಯಕ್ತಿ ಹುಲಿವೇಷ ಹಾಕುವುದು ಒಂದು ಭಾಗ. ಆದರೆ, ತಂಡ ಕಟ್ಟಿಕೊಂಡು ಸೇವೆ ಸಲ್ಲಿಸಿ, ಅದರ ಪ್ರದರ್ಶನ ಏರ್ಪಡಿಸುವುದು ದುಬಾರಿಯಾಗುತ್ತದೆ. 10ರಿಂದ 15 ಮಂದಿಯ ತಂಡಕ್ಕೆ ವೇಷಭೂಷಣ, ವೇಷಧಾರಿಗಳ ಸಂಭಾವನೆ, ಓಡಾಟ ವೆಚ್ಚ ಎಲ್ಲಾ ಸೇರಿದರೆ ದಿನವೊಂದಕ್ಕೆ ಕನಿಷ್ಠ ಒಂದು ಲಕ್ಷ ರೂಪಾಯಿ ವೆಚ್ಚ ಬರುತ್ತದೆ.
‘ಹಿಂದೆಲ್ಲ ತಂಡಗಳು ದೇವಿಯ ರಥದ ಮುಂದೆ ಪ್ರದರ್ಶನ ನೀಡಿದ ನಂತರ ಮನೆಮನೆಗೆ ಹೋಗಿ ಪ್ರದರ್ಶನ ನೀಡುತ್ತಿದ್ದವು. ಮನೆಯವರೇ ಆಹ್ವಾನಿಸುವ ಸಂಪ್ರದಾಯವೂ ಇತ್ತು. ಅವರು ಕೊಡುವ ಸಂಭಾವನೆಯನ್ನು ತಂಡದ ಒಬ್ಬ ಹುಲಿವೇಷಧಾರಿ ಹಿಮ್ಮುಖವಾಗಿ ಬಾಗಿ ಬಾಯಿಯಿಂದಲೇ ಎತ್ತಬೇಕು. ಈಗ ಮನೆಗೆ ಹುಲಿವೇಷಗಳನ್ನು ಆಹ್ವಾನಿಸುವವರ ಸಂಖ್ಯೆ ಕಡಿಮೆಯಾಗಿದೆ. ಐದುನೂರು–ಸಾವಿರ ರೂಪಾಯಿ ಕೊಡುವವರ ಮನೆಗೆ ಹೋಗಿ ಪ್ರದರ್ಶನ ಕೊಡಲು ಆಗುವುದೂ ಇಲ್ಲ. ಆದರೆ ಸಂಪ್ರದಾಯ ಬಿಡಬಾರದೆಂಬ ಉದ್ದೇಶದಿಂದ ನಾವು ಕೆಲವು ಮನೆಗಳಿಗೆ ಹೋಗುತ್ತೇವೆ. ಅನೇಕ ತಂಡಗಳು ಈ ಸಂಪ್ರದಾಯವನ್ನು ಬಿಟ್ಟಿವೆ’ ಎನ್ನುತ್ತಾರೆ ಕುಂಪಲ.
ಈಗ ಸಿರಿವಂತರು ತಮ್ಮ ಮನೆಗೆ ತಂಡವನ್ನು ಆಹ್ವಾನಿಸಿ ದೊಡ್ಡ ಮೊತ್ತ ಕೊಡುತ್ತಾರೆ ಅಥವಾ ಕೆಲವು ಉದ್ಯಮಿಗಳು ತಮ್ಮ ಸಂಸ್ಥೆಗೆ, ಕಚೇರಿ ಆವರಣಕ್ಕೆ ತಂಡಗಳನ್ನು ಆಹ್ವಾನಿಸಿ ಅರ್ಧ ಗಂಟೆ– ಒಂದು ಗಂಟೆ ಪ್ರದರ್ಶನ ಏರ್ಪಡಿಸುತ್ತಾರೆ. ಆದರೆ ತಂಡಗಳಿಗೆ ಬೇಡಿಕೆಯಂತೂ ಕುಗ್ಗಿಲ್ಲ.
ಸ್ಪರ್ಧೆಗಿಳಿದ ಹುಲಿಗಳು
ಕಳೆದ ಒಂದು ದಶಕದಲ್ಲಿ ದಕ್ಷಿಣ ಕನ್ನಡದಲ್ಲಿ ಸಾಂಪ್ರದಾಯಿಕ ‘ಪಿಲಿ ನಲಿಕೆಯ’ ಜೊತೆಗೆ ಹುಲಿವೇಷ ಸ್ಪರ್ಧೆಗಳೂ ಜನರನ್ನು ಸೆಳೆಯುತ್ತಿವೆ. 2014ರಿಂದ ‘ಪಿಲಿನಲಿಕೆ ಪ್ರತಿಷ್ಠಾನ’ವು ನಗರದಲ್ಲಿ ಹುಲಿವೇಷ ಸ್ಪರ್ಧೆಗಳನ್ನು ಆಯೋಜಿಸುತ್ತಾ, ತಂಡಗಳಿಗೆ ಬಹುಮಾನ ನೀಡುತ್ತಾ ಬಂದಿದೆ. ಕಳೆದ ವರ್ಷದಿಂದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವೂ ಹುಲಿವೇಷ ಸ್ಪರ್ಧೆ ಆಯೋಜಿಸುತ್ತಿದೆ. ಐದಾರು ಸಾವಿರ ಮಂದಿ ಕುಳಿತು ವೀಕ್ಷಿಸಲು ವ್ಯವಸ್ಥೆ, ಊಟ– ತಿಂಡಿ, ಡಿಜಿಟಲ್ ಪರದೆಗಳು, ಥರ್ಡ್ ಅಂಪೈರ್ ವ್ಯವಸ್ಥೆ (ಈ ವರ್ಷದಿಂದ ಜಾರಿಯಾಗಿದೆ), ತುಳುನಾಡಿನ ಚಿತ್ರ ನಟ–ನಟಿಯರು, ರಾಜಕಾರಣಿಗಳು, ಗಣ್ಯರ ಪಾಲ್ಗೊಳ್ಳುವಿಕೆಯು ಈ ಸ್ಪರ್ಧೆಗಳ ರಂಗು ಹೆಚ್ಚಿಸಿದೆ. ಜೊತೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬಹುಮಾನದ ಮೊತ್ತವೂ ಭರ್ಜರಿಯಾಗಿದೆ.
‘ಹುಲಿವೇಷ ಹಾಕಿ ಚಲನಚಿತ್ರ ಶೈಲಿಯಂತೆ ಡಾನ್ಸ್ ಮಾಡುವುದು ಸರಿಯಲ್ಲ. ಸಾಂಪ್ರದಾಯಿಕ ಬಣ್ಣಗಳ ಬದಲಿಗೆ ಪೇಂಟ್ ಬಳಿದುಕೊಳ್ಳುತ್ತಾರೆ, ಕೆಲವು ತಂಡಗಳು ಬಿಗಿಯಾದ ಬಟ್ಟೆ ಧರಿಸಿ ಅದರ ಮೇಲೆ ಪೇಂಟ್ ಮಾಡುತ್ತಾರೆ ಇವೆಲ್ಲವೂ ದೂರವಾಗಬೇಕು. ಕಾಲಕ್ಕೆ ತಕ್ಕಂತೆ ಸಣ್ಣಪುಟ್ಟ ಬದಲಾವಣೆಗಳಾಗುತ್ತವೆ. ಆದರೆ, ಸಂಪ್ರದಾಯವನ್ನು ಸಾರಾಸಗಟಾಗಿ ದೂರ ಸರಿಸಿದರೆ ಕಲೆಯು ಮಹತ್ವ ಕಳೆದುಕೊಳ್ಳುತ್ತದೆ’ ಎನ್ನುತ್ತಾರೆ ಅವರು. ‘ಪಿಲಿ ನಲಿಕೆ’ ಕಲಿಯಲು ಬಯಸುವ ಯುವಕರಿಗೆ ಸಾಂಪ್ರದಾಯಿಕ ಶೈಲಿ, ಬಣ್ಣಗಾರಿಕೆಯನ್ನು ಕಲಿಸುವ ವ್ಯವಸ್ಥೆಯಾಗಬೇಕು. ಅದಕ್ಕೆ ಎಲ್ಲಾ ಸಂಘಟನೆಗಳು ಒಂದಾಗಬೇಕು. ತುಳು ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು’ ಎಂಬುದು ಅವರ ನಿರೀಕ್ಷೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.