ADVERTISEMENT

ವತ್ಸಲಾ ಚಿತ್ರಕಲೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 23:30 IST
Last Updated 12 ಜುಲೈ 2024, 23:30 IST
ವತ್ಸಲಾ
ವತ್ಸಲಾ   

ಕೈತುಂಬಾ ಸಂಬಳ ಕೊಡುವ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ಕಲೆಯಲ್ಲಿ ತೊಡಗಿಸಿಕೊಳ್ಳುವುದು ಸವಾಲಿನ ಕೆಲಸವೇ ಸೈ. ಅಂಥ ಸವಾಲಿಗೆ ಕೈ ಹಾಕಿ ಯಶ ಕಂಡವರು ಹಾಸನದ ವತ್ಸಲಾ. ಕುಶಾಗ್ರ ಉದ್ಯಮಿಯೂ, ಅಪ್ರತಿಮ ಯೋಗಪಟುವೂ ಹೌದು.

ಏಳು ವರ್ಷಗಳ ಕಾರ್ಪೊರೇಟ್ ಉದ್ಯಮಕ್ಕೆ ರಾಜೀನಾಮೆ ನೀಡಿ, ‘ಬೊನಿಟೊ ಡಿಸೈನ್ಸ್’ ಎನ್ನುವ ಇಂಟೀರಿಯರ್ ಡಿಸೈನ್ ಕಂಪನಿಯನ್ನು ಸ್ಥಾಪಿಸುತ್ತಾರೆ. ಈಗ ಅದು ದೇಶದ ಪ್ರಸಿದ್ಧ ಐದು ಒಳಾಂಗಣ ವಿನ್ಯಾಸ ಕಂಪನಿಗಳಲ್ಲಿ ಒಂದು. ಬಳಿಕ ಕ್ಯಾರವಾನ್ ಉದ್ಯಮಕ್ಕೂ ಕಾಲಿಟ್ಟು, ಅಲ್ಲಿಯೂ ಗೆಲುವನ್ನು ಕಂಡಿದ್ದಾರೆ. ‘ಟ್ರಿಪ್ಪಿ ವೀಲ್ಸ್’, ವತ್ಸಲಾ ಅವರ ಕ್ಯಾರವಾನ್‌ ಕಂಪನಿ. ಈ ತಲೆಮಾರಿನ ಮಹಿಳಾ ಉದ್ಯಮಿಗಳಿಗೆ ಮಾದರಿಯಾಗುವಂಥ ಸಾಧನೆ ಇವರದು.

ಇವೆಲ್ಲದರ ಜೊತೆಗೆ ಮನಸ್ಸು ಸೆಳೆದಿದ್ದು ಕಲೆಯ ಕಡೆಗೆ. ಚಿತ್ರಕಲೆಯನ್ನು ಅಭ್ಯಾಸ ಮಾಡಿ ಪರಿಣತಿ ಪಡೆದಿದ್ದಾರೆ. ಅವರ ಏಕಾಗ್ರತೆ ಹಾಗೂ ಆಸ್ಥೆಗೆ ಕಲಾ ಸರಸ್ವತಿಯು ಒಲಿದಿದ್ದಾಳೆ. ತಮ್ಮ ಭಾವ, ಭಾವನೆಗಳನ್ನು ಚಿತ್ರರೂಪದಲ್ಲಿ ಅಭಿವ್ಯಕ್ತಿಪಡಿಸುತ್ತಾರೆ.

ADVERTISEMENT

ವತ್ಸಲಾ ಅವರ ಅನುಭವದ ಮೂಸೆಯಿಂದ ಅರಳುವ ಚಿತ್ರದ ಹಿಂದೆ ಮಹಿಳಾ ಸಂವೇದನೆ ಇದೆ. ಪ್ರಕೃತಿಯ ಸೌಂದರ್ಯ ಇದೆ. ಮಾನವ ಜೀವನದ ವಿವಿಧ ಮುಖಗಳಿವೆ. ತುಳಿತಕ್ಕೊಳಗಾದವರ ಸಂಕಟವಿದೆ. ಸಂತೋಷದ ಚಹರೆ ಇದೆ. ಬಣ್ಣಗಳ ಹಿಂದೆ ನೋವಿನ ಮೋರೆ ಅಡಗಿದೆ. ಪ್ರತಿಯೊಂದು ಗೆರೆಗಳಿಗೆ ಹೇಳಲು ನೂರಾರು ಕತೆಗಳಿವೆ. ಕಲೆಯಲ್ಲಿನ ಅವರ ‌‌ಭಕ್ತಿಗೆ ಸರಸ್ವತಿ ಒಲಿದಿದ್ದಾಳೆ ಎನ್ನುವುದಕ್ಕೆ ಅವರು ಬಿಡಿಸಿರುವ ಚಿತ್ರಗಳೇ ಪ್ರತಿಬಿಂಬ.

‘ಕೆಲಸ ಬಿಟ್ಟು ಕಲೆಯಲ್ಲಿ ತೊಡಗಿಕೊಳ್ಳುವುದು ವೃತ್ತಿ ಬದಲಾವಣೆ ಮಾತ್ರವಲ್ಲ. ನನ್ನ ಪಾಲಿಗೆ ಒಂದು ರೂಪಾಂತರವಾಗಿತ್ತು’ ಎನ್ನುವುದು ವತ್ಸಲಾ ಅವರ ಮಾತು. ಕಲೆಯನ್ನು ತಬ್ಬಿಕೊಂಡ ವತ್ಸಲಾ ಅವರ ಚಿತ್ರಗಳ ಪ್ರದರ್ಶನಕ್ಕೆ ಬೆಂಗಳೂರಿನ ಚಿತ್ರಕಲಾ ಪರಿಷತ್ ವೇದಿಕೆಯಾಗಲಿದೆ.

ಪ್ರದರ್ಶನ

ಎಲ್ಲಿ: ಚಿತ್ರಕಲಾ ಪರಿಷತ್‌

ಯಾವಾಗ: ಜುಲೈ 18 ರಿಂದ 24

ಸಮಯ: ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ

ವತ್ಸಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.