ADVERTISEMENT

ಕಲಾಕೃತಿಗಳಲ್ಲಿ ನಿಸರ್ಗ ಸೌಂದರ್ಯ

ಮಹದೇವಶೆಟ್ಟಿ.ಕೆ.ಸಿ
Published 24 ಮೇ 2019, 19:56 IST
Last Updated 24 ಮೇ 2019, 19:56 IST
.
.   

ಕಲಾವಿದ ಎಚ್.ಪಿ.ರಂಗಸ್ವಾಮಿ ಅವರು ರಚಿಸಿರುವ ನಿಸರ್ಗ ಚಿತ್ರಕಲಾ ಪ್ರದರ್ಶನವು ನಗರದ ಗೋಕುಲಂನ ‘ಆರ್ಟ್ಜ್ ಗ್ಯಾಲರಿ’ಯಲ್ಲಿ ನಡೆಯುತ್ತಿದೆ.

ಮೈಸೂರಿನ ಹೆಸರಾಂತ ಸ್ಥಳಗಳಲ್ಲಿ ಖುದ್ದು ಭೇಟಿ ನೀಡಿ ರಚಿಸಿ ತಂದ 54ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಚಾಮುಂಡಿ ಬೆಟ್ಟ, ನಂದಿ, ಡಾ. ರಾಜಕುಮಾರ್ ಉದ್ಯಾನ, ಇರ್ವಿನ್ ರಸ್ತೆ, ಸ್ವತಂತ್ರ ಹೋರಾಟಗಾರರ ಉದ್ಯಾನ, ಗಂಗೋತ್ರಿಯ ಹಲವು ಸ್ಥಳಗಳು, ಶಿವಾಜಿರಸ್ತೆ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ, ವಿಧಾನಸೌಧ, ಮೈಸೂರು ಅರಮನೆ, ಜಯಚಾಮರಾಜ ಒಡೆಯರ್ ವೃತ್ತ, ಹಾರೋಹಳ್ಳಿಯ ಹಳ್ಳಿಚಿತ್ರ, ನಂಜನಗೂಡಿನ ಮಂಟಪ, ಹುಲ್ಲಹಳ್ಳಿಯಲ್ಲಿನ ಬಾಗಿಲಚಿತ್ರ, ನಗರದ ರಸ್ತೆಗಳಲ್ಲಿರುವ ಗಲ್‌ಮೊಹರ್ ಮರಗಳ ದೃಶ್ಯಗಳು... ಹೀಗೆ ಹಲವು ಕಲಾಕೃತಿಗಳನ್ನು ಇಲ್ಲಿ ಕಾಣಬಹುದು.

ADVERTISEMENT

ಎಚ್.ಪಿ.ರಂಗಸ್ವಾಮಿ ಅವರು ಮೈಸೂರು ತಾಲ್ಲೂಕಿನ ಹಾರೋಹಳ್ಳಿಯವರು. ತಂದೆ ಪುಟ್ಟನಾಯಕ, ತಾಯಿ ಸಣ್ಣಮರಮ್ಮ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾರೋಹಳ್ಳಿ ಮತ್ತು ಜಯಪುರದಲ್ಲಿ ಮುಗಿಸಿದ್ದಾರೆ.

‘ಕಲೆಯಲ್ಲಿ ಆಸಕ್ತಿ ಇದ್ದುದರಿಂದ ಮೈಸೂರಿನ ಶ್ರೀಕಲಾನಿಕೇತನ ಕಲಾ ಶಾಲೆಗೆ ಸೇರಿ ಕಲೆಯ ಎಲ್ಲಾ ಆಯಾಮಗಳನ್ನು ಗ್ರಹಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಎಚ್.ಪಿ.ರಂಗಸ್ವಾಮಿ.

ವಿಭಿನ್ನ ಕಲಾಪ್ರಕಾರಗಳನ್ನು ಕಲಿತಿದ್ದರೂ ನನಗೆ ಹೆಚ್ಚು ಆಸಕ್ತಿ ಇರುವುದು ನಿಸರ್ಗ ಚಿತ್ರಕಲೆಯ ಮೇಲೆ. ಹಾಗಾಗಿ ನಾಡಿನ ಹಲವಾರು ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಕೊಟ್ಟು ಸ್ಥಳದಲ್ಲಿ ಚಿತ್ರ ರಚಿಸಿದ್ದೇನೆ ಎಂದರು.

ಈಗಾಗಲೇ ಶ್ರವಣಬೆಳಗೊಳ, ಹಂಪಿ, ಬದಾಮಿ, ಐಹೊಳೆ, ಪಟ್ಟದಕಲ್ಲು, ವಿಜಯಪುರ, ಲಕ್ಕುಂಡಿ, ಚಿತ್ರದುರ್ಗ, ಶೃಂಗೇರಿ, ಮೇಲುಕೋಟೆ, ಆದಿಚುಂಚನಗಿರಿ ಸೇರಿದಂತೆ ಮುಂತಾದ ಕಡೆಗಳಲ್ಲಿ ನಿಸರ್ಗ ಚಿತ್ರ ರಚಿಸಿದ್ದಾರೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲೂ ಚಿತ್ರ ರಚಿಸುವುದು ಇವರ ಅಚ್ಚುಮೆಚ್ಚಿನ ಹವ್ಯಾಸವಾಗಿದೆ.

ತೈಲವರ್ಣ ಮತ್ತು ಅಕ್ರಿಲಿಕ್‌ ವರ್ಣಗಳಲ್ಲಿ ನಿಸರ್ಗಚಿತ್ರ ರಚಿಸುವ ರಂಗಸ್ವಾಮಿ ಅವರು, ಜಲವರ್ಣದಲ್ಲಿ ಚಿತ್ರ ರಚಿಸಿದ್ದು ಮತ್ತೊಂದು ವಿಶೇಷ. ಜಲವರ್ಣದ ಬಳಕೆ ಸ್ವಲ್ಪ ಕಷ್ಟಕರವಾದದ್ದು. ತುಂಬಾ ಜಾಗರೂಕತೆಯಿಂದ ಪೇಪರ್ ಮೇಲೆ ಬಣ್ಣವನ್ನು ಹರಡಬೇಕಾಗುತ್ತದೆ. ನಾರ್ವೆ, ಕಾಟ್ರೇಜ್, ಹ್ಯಾಂಡ್‌ಮೇಡ್ ಪೇಪರ್ ಮೇಲೆ ಗರಿಷ್ಠ ಒಂದು ತಾಸಿನಲ್ಲಿ ಕಲಾಕೃತಿ ಮುಗಿಸುವ ಹೊಣೆಗಾರಿಕೆ ಕಲಾವಿದನದ್ದಾಗಿರುತ್ತದೆ. ಈಗ ಕ್ಯಾನ್ವಸ್ ಮೇಲೂ ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ.

ಸೂರ್ಯನ ನೆರಳು ಮತ್ತು ಬೆಳಕು ಬದಲಾಗುತ್ತಿರುತ್ತದೆ. ಇದರಿಂದ ಕಲಾಕೃತಿಗಳಲ್ಲಿ ಯಥಾದರ್ಶನ, ಡ್ರಾಯಿಂಗ್, ಬ್ರೆಷ್‌ ಸ್ಟ್ರೋಕ್ಸ್, ಫೋರ್ಸ್, ಟೈಮಿಂಗ್ಸ್, ಆಯ್ಕೆಮಾಡಿಕೊಂಡ ಸ್ಥಳವನ್ನು ಕಲಾತ್ಮಕವಾಗಿ ಎಫೋರ್‌ ಅಳತೆಯಿಂದ ಮೂರ‍್ನಾಲ್ಕು ಅಡಿಯವರೆಗೆ ನಿಸರ್ಗ ಚಿತ್ರ ರಚಿಸುತ್ತಿದ್ದಾರೆ. ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಇವರಿಗೆ ಸಾಧನೆಯ ಹಾದಿಯಲ್ಲಿ ವಿಭಿನ್ನ ದೃಶ್ಯಗಳು ಗೋಚರಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.