ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿರುವ ಪ್ರಸಿದ್ದ ವಿಶ್ವಶಾಂತಿ ಆಶ್ರಮದ ಸಂಸ್ಥಾಪಕ ಹಾಗೂ ಹರಿಕಥಾ ವಿದ್ವಾನ್ ಸಂತ ಭದ್ರಗಿರಿ ಕೇಶವದಾಸರ 21ನೇ ಪುಣ್ಯಾರಾಧನಾ ಮಹೋತ್ಸವ ಬುಧವಾರ, ಶನಿವಾರ ಮತ್ತು ಭಾನುವಾರ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಧ್ಯಕ್ಷೆ ರಮಾ ಕೇಶವದಾಸರು ಈ ಕುರಿತು ಮಾಹಿತಿ ನೀಡಿದರು.
ಭದ್ರಗಿರಿ ಕೇಶವದಾಸರು ದೇಶ ವಿದೇಶಗಳಲ್ಲಿ ಇಂಗ್ಲಿಷ್‍ನಲ್ಲಿ ಹರಿಕತೆ ನಡೆಸಿಕೊಟ್ಟು, ದಾಸ ಸಾಹಿತ್ಯ, ಕೀರ್ತನೆಗಳನ್ನು ಪ್ರಚುರಪಡಿಸಿದ್ದರು. ಸ್ವತಃ ಕೀರ್ತನೆಗಳನ್ನು ರಚಿಸಿದ್ದರು.
14 ಎಕರೆ ವಿಸ್ತೀರ್ಣದ ಪ್ರಶಾಂತವಾದ ಪ್ರಕೃತಿ ಮಡಿಲಲ್ಲಿರುವ ಆಶ್ರಮ ಪ್ರವೇಶಿಸುತ್ತಿದ್ದಂತೆಯೆ 36 ಅಡಿ ಎತ್ತರದ ಏಕಶಿಲಾ ವಿಶ್ವರೂಪ ವಿಜಯ ವಿಠ್ಠಲ ಮೂರ್ತಿ ನಮ್ಮನ್ನು ಎದುರುಗೊಳ್ಳುತ್ತದೆ. ಯಾವ ಬೇಧ ಭಾವ ಇಲ್ಲದೆ ಎಲ್ಲರೂ ಸ್ಪರ್ಶಿಸಿ ನಮಸ್ಕರಿಸುವ ಅವಕಾಶ ಇಲ್ಲಿದೆ. ವಿಠ್ಠಲನ ಸುತ್ತಲೂ ಅಷ್ಟಲಕ್ಷ್ಮಿಯರ ವಿಗ್ರಹ, ಪಕ್ಕದಲ್ಲೆ ಅಮೃತಶಿಲೆಯ ದುರ್ಗಾ ಮಂದಿರ, ಪ್ರವೇಶದ್ವಾರದಲ್ಲಿ ಆಂಜನೇಯ ಮಾರ್ಕಂಡೇಯ ಮಂದಿರಗಳಿವೆ.
ಅನತಿ ದೂರದಲ್ಲೇ ಶ್ರೀಕೃಷ್ಣನ ಬೃಹತ್ ವಿಶ್ವರೂಪ ಪ್ರತಿಮೆ, ಸಪ್ತ ಋಷಿಗಳ ವಿಗ್ರಹ, ಮಂದಿರದ ಒಳಗೋಡೆಯ ಸುತ್ತ ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲಿಷ್‌ನಲ್ಲಿಪೂರ್ಣ ಭವದ್ಗೀತೆಯ ಕೆತ್ತನೆ, ಕೆಳಗೆ ಅಮೃತ ಶಿಲೆಯ ಗಾಯತ್ರಿ ದೇವಿ, ಶ್ವೇತಾಶ್ವಗಳ ರಥ, ಗೀತಾ ಭೋಧನೆಯ ದೃಶ್ಯ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ.
ಅಲ್ಲೆ ಪಕ್ಕದಲ್ಲೆ ಸಂತ ಭದ್ರಗಿರಿ ಕೇಶವದಾಸರ ಸ್ಮಾರಕ, ಸಪ್ತನದಿಗಳ ಮೂರ್ತಿಯಿಂದ ನೀರು ಬರುವ ದೃಶ್ಯ ಕಣ್ಮನ ಸೆಳೆಯುತ್ತದೆ.
ಪುಣ್ಯಾರಾಧನೆ ಪ್ರಯುಕ್ತ ಬುಧವಾರ ಬೆಳಗ್ಗೆ 10.30ಕ್ಕೆ ಗುರುಪೂಜೆ, ಕೀರ್ತನಚಾರ್ಯ ಲಕ್ಷ್ಮಣದಾಸ್ ವೇಲಣಕರ್ ಅವರಿಂದ ಆಶೀರ್ವಚನ, 12.30ಕ್ಕೆ ಭಜನೆ, ಸಂಜೆ 5:30ಕ್ಕೆ ಪುತ್ತೂರು ನರಸಿಂಹನಾಯಕ್ ಅವರಿಂದ ಭಕ್ತಿಸಂಗೀತ ನಡೆಯಲಿದೆ.
ಶನಿವಾರ ಬೆಳಗ್ಗೆ 10:30ಕ್ಕೆ ದಾಸಕೀರ್ತನೆ ಮಂಡಳಿಯವರಿಂದ ಭಜನೆ, 11:30ಕ್ಕೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಗ್ರಿಗಳ ವಿತರಣೆ, ಸಂಜೆ 4ಕ್ಕೆ ನೃತ್ಯಧಾಮ ಕಲಾ ತಂಡದ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ
ಭಾನುವಾರ ಬೆಳಗ್ಗೆ 5:30ಕ್ಕೆ ಗೋಂಧಿ ಸಂಸ್ಥಾನ ಮಠದ ನಾಮದೇವಾನಂದ ಭಾರತಿ ಸ್ವಾಮೀಜಿ ಅವರಿಂದ ಭಜನೆ, ಕಾಕಡಾರತಿ ಹಾಗು ಸಾಮೂಹಿಕ ಪಂಢರಿ ಭಜನೆ, 10ಕ್ಕೆ ಹರಿನಾಮ ಸಂಕೀರ್ತನೆ, 10:30ಕ್ಕೆ ಏಕಶಿಲಾ ವಿಜಯ ವಿಠ್ಠಲನಿಗೆ ಮಹಾ ಕುಂಬಾಭಿಷೇಕ, ಮಧ್ಯಾಹ್ಯ 12.30ಕ್ಕೆ ವಿವಿಧ ಜಾನಪದ ಕಲಾ ಪ್ರದರ್ಶನಗಳೊಂದಿಗೆ ಅರಿಶಿನಕುಂಟೆಯ ಪ್ರಮುಖ ಬೀದಿಗಳಲ್ಲಿ ಪುಷ್ಪ ರಥೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.