ADVERTISEMENT

ಗ್ಯಾಲರಿ ಪ್ರವೇಶಕ್ಕೆ ಶುಲ್ಕ ಬೇಕೇ?

ಮಂಜುಶ್ರೀ ಎಂ.ಕಡಕೋಳ
Published 28 ಡಿಸೆಂಬರ್ 2018, 19:45 IST
Last Updated 28 ಡಿಸೆಂಬರ್ 2018, 19:45 IST
ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ ಕಟ್ಟಡದ ಹೊರನೋಟ. –ಚಿತ್ರ: ಆನಂದ ಭಕ್ಷಿ
ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ ಕಟ್ಟಡದ ಹೊರನೋಟ. –ಚಿತ್ರ: ಆನಂದ ಭಕ್ಷಿ   

ಅರಮನೆ ರಸ್ತೆಯಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ (ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ) ಈಚೆಗೆ ಗ್ಯಾಲರಿ ಪ್ರವೇಶಕ್ಕೆ ಶುಲ್ಕ ವಿಧಿಸಿದೆ. ಇದು ಅನೇಕ ಚಿತ್ರ ಕಲಾವಿದರ ವಿರೋಧಕ್ಕೆ ಕಾರಣವಾಗಿದೆ.

ಪ್ರವೇಶ ದರ ಶುಲ್ಕ ವಿರೋಧಿಸಿ ಕೆಲ ಕಲಾವಿದರು ಎನ್‌ಜಿಎಂಎ ನಿರ್ದೇಶಕರಿಗೆ ಇಮೇಲ್ ಬರೆದು ತಮ್ಮ ಪ್ರತಿರೋಧವನ್ನೂ ತೋರಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಕಲಾವಿದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಮೆಟ್ರೊ’ ಜತೆ ಕೆಲ ಕಲಾವಿದರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ.

***
ಸಿನಿಮೋತ್ಸವಕ್ಕೆಹಿನ್ನಡೆ
ಬೆಂಗಳೂರು ಫಿಲಂ ಸೊಸೈಟಿ ಲಾಭರಹಿತ ಸಂಸ್ಥೆ. ಇದರ ವತಿಯಿಂದ ಎರಡು ವರ್ಷ ಕಾಲ ನಿರಂತರವಾಗಿ ಎನ್‌ಜಿಎಂಎಯಲ್ಲಿ ತಿಂಗಳಿಗೊಮ್ಮೆಯಂತೆ 5 ಸಿನಿಮಾಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಪ್ರದರ್ಶಿಸುತ್ತಿದ್ದೆವು. ಆದರೆ, ಈಗ ಎನ್‌ಜಿಎಂಎ ಆವರಣ ಪ್ರವೇಶಕ್ಕೆ ₹ 20 ಪ್ರವೇಶ ಶುಲ್ಕ ವಿಧಿಸಿರುವುದು ಫಿಲಂ ಸೊಸೈಟಿಯ ಆಶಯಕ್ಕೆ ಹಿನ್ನಡೆಯಂತಾಗಿದೆ.

ADVERTISEMENT

ಉಚಿತ ಪ್ರವೇಶ ಎಂದು ಹೇಳಿ ಗೇಟಿನಲ್ಲಿ ₹ 20 ಶುಲ್ಕ ನಿಗದಿಪಡಿಸಿದರೆ ತಪ್ಪಾಗುತ್ತದೆ. ಅದಕ್ಕಾಗಿ ಈ ವರ್ಷ ಫಿಲಂ ಸೊಸೈಟಿ ವತಿಯಿಂದ ಸಿನಿಮೋತ್ಸವ ರದ್ದುಪಡಿಸಲಾಗಿದೆ. ಎನ್‌ಜಿಎಂಎ ನಗರದ ಮಧ್ಯೆ ಇರುವ ಸುಂದರ ಪ್ರದೇಶ. ಇಲ್ಲಿ ಕಲಾವಿದರ ಅನೇಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದರು. ಒಂದರ್ಥದಲ್ಲಿ ಕಲಾವಿದರ ಸಂಗಮ ತಾಣವಾಗಿತ್ತು. ಆದರೆ, ಈಗ ಪ್ರವೇಶ ಶುಲ್ಕ ವಿಧಿಸಿರುವುದು ಸರಿಯಲ್ಲ.
–ಬಾಬು ಈಶ್ವರ್ ಪ್ರಸಾದ್,ಸಂಯೋಜಕ ಸದಸ್ಯ, ಬೆಂಗಳೂರು ಫಿಲಂ ಸೊಸೈಟಿ

***

ಸಚಿವಾಲಯದ ನಿಯಮ ಪಾಲನೆ
ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿ ಬರುವ ಭಾರತದ ಎಲ್ಲಾ ರಾಷ್ಟ್ರೀಯ ಮ್ಯೂಸಿಯಂಗಳಿಗೆ ಮಾರ್ಗದರ್ಶಿ ಸೂತ್ರಗಳಿವೆ. ಅದರಂತೆ ಪ್ರವೇಶ ದರವನ್ನೂ ನಿಗದಿಪಡಿಸಲಾಗಿದೆ. ಕೆಲವು ಮ್ಯೂಸಿಯಂಗಳು ಇವನ್ನು ಪರಿಪಾಲಿಸುತ್ತಿವೆ. ಮತ್ತೆ ಕೆಲವು ಪರಿಪಾಲಿಸುತ್ತಿಲ್ಲ. ರಾಷ್ಟ್ರೀಯ ಮ್ಯೂಸಿಯಂಗಳಲ್ಲಿ ರಕ್ಷಣೆಗಾಗಿ ಸಿಐಎಸ್‌ಎಫ್‌ (ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ) ಕೂಡಾ ಇರುತ್ತದೆ. ಆದರೆ, ಇದು ಎಲ್ಲೆಡೆಯೂ ಜಾರಿಗೆ ಬಂದಿಲ್ಲವಷ್ಟೇ. ಬೆಂಗಳೂರು ಎನ್‌ಜಿಎಂಎ ಸಚಿವಾಲಯದ ನಿಯಮಗಳನ್ನು ಪಾಲಿಸಿದೆಯಷ್ಟೇ. ಅದರಂತೆ ₹ 20 ಪ್ರವೇಶ ಶುಲ್ಕ ಜಾರಿಗೆ ತಂದಿದೆ. ಶುಲ್ಕ ಪಾವತಿಸಿ ಆವರಣ ಪ್ರವೇಶಿಸಿದವರು ಎನ್‌ಜಿಎಂಎ ಒಳಗೆ ಎಲ್ಲೆಡೆ ಉಚಿತವಾಗಿ ಪ್ರವೇಶಿಸಬಹುದು.

ನಮ್ಮ ವೆಬ್‌ಸೈಟ್‌ನಲ್ಲೂ ಪ್ರವೇಶ ದರ ಸ್ಪಷ್ಟವಾಗಿ ನಮೂದಾಗಿದೆ. ಭಾರತೀಯರಿಗೆ ₹ 20 ಹಾಗೂ ವಿದೇಶಿಯರಿಗೆ ₹ 500 ಪ್ರವೇಶ ದರವಿದೆ. ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ. (ಗುರುತಿನ ಚೀಟಿ ಕಡ್ಡಾಯ)
–ಸುವರ್ಣ ಪಾತ್ರೊ,ಕ್ಯುರೇಟರ್, ಎನ್‌ಜಿಎಂಎ, ಬೆಂಗಳೂರು

***
ಎಲ್ಲರಿಗೂ ಮುಕ್ತ ಪ್ರವೇಶವಿರಲಿ
ಎನ್‌ಜಿಎಂಎ ಸಲಹಾ ಮಂಡಳಿಯ ಸದಸ್ಯನಾಗಿ ನನ್ನ ಅವಧಿ ಅಕ್ಟೋಬರ್‌ಗೆ ಮುಗಿದಿದೆ. ಇದುವರೆಗೆ ನಡೆದ ಸಭೆಗಳಲ್ಲಿ ಪ್ರವೇಶ ಶುಲ್ಕದ ಬಗ್ಗೆ ಯಾವುದೇ ಚರ್ಚೆಗೆ ಬಂದಿಲ್ಲ. ಒಬ್ಬ ಕಲಾವಿದನಾಗಿ ನಾನು ಇದನ್ನು ವಿರೋಧಿಸುತ್ತೇನೆ. ಕಲಾಕೃತಿಗಳನ್ನು ನೋಡಲು ಬರುವವರೇ ಕಡಿಮೆ. ಅದರಲ್ಲೂ ಕಲಾ ಗ್ಯಾಲರಿ ಪ್ರವೇಶಕ್ಕೆ ಗೇಟಿನಲ್ಲೇ ಪ್ರವೇಶ ದರ ನಿಗದಿಪಡಿಸಿರುವುದು ಸರಿಯಲ್ಲ. ನನ್ನ ಪ್ರಕಾರ ಗ್ಯಾಲರಿ ಒಳಗೆ ಚಿತ್ರಕಲಾ ವೀಕ್ಷಣೆಗೂ ಯಾವುದೇ ಶುಲ್ಕ ಇರಬಾರದು. ಎನ್‌ಜಿಎಂಎ ರಾಷ್ಟ್ರೀಯಮಟ್ಟದಲ್ಲಿ₹ 20 ಪ್ರವೇಶ ಶುಲ್ಕ ವಿಧಿಸಿರುವುದನ್ನೂ ತೆಗೆಯಲಿ ಎಂಬುದು ನನ್ನ ಅನಿಸಿಕೆ. ಒಟ್ಟಾರೆ ಆವರಣ ಪ್ರವೇಶ, ಗ್ಯಾಲರಿ ವೀಕ್ಷಣೆಗೆ ಇತ್ಯಾದಿಗಳಿಗೆ ಮುಕ್ತಪ್ರವೇಶ ಇರಬೇಕು. ಭಾರತೀಯರಿಗಷ್ಟೇ ಅಲ್ಲ ವಿದೇಶಿಯರಿಗೂ ಇಲ್ಲಿ ಪ್ರವೇಶ ಶುಲ್ಕ ವಿಧಿಸಲಾಗುತ್ತಿದೆ. ಅವರಿಗೂ ಮುಕ್ತ ಪ್ರವೇಶ ಇರಬೇಕೆಂಬುದು ನನ್ನ ಅಭಿಮತ.
–ಚಿ.ಸು. ಕೃಷ್ಣಸೆಟ್ಟಿ,ಎನ್‌ಜಿಎಂಎ, ಸಲಹಾ ಮಂಡಳಿ ಮಾಜಿ ಸದಸ್ಯ

***
ಸರಿಯಾದ ಕ್ರಮವಲ್ಲ
ಎನ್‌ಜಿಎಂಎ ಒಂದು ಘಟ್ಟದಲ್ಲಿ ಚೆನ್ನೈಗೆ ಹೋಗಬೇಕಿತ್ತು. ಆದರೆ, ಇಲ್ಲಿನ ಕಲಾವಿದರ ಪರಿಶ್ರಮದ ಫಲವಾಗಿ ದಕ್ಷಿಣ ಭಾರತದ ಪ್ರತಿನಿಧಿಯಂತೆ ಎನ್‌ಜಿಎಂಎ ಬೆಂಗಳೂರಿನಲ್ಲೇ ಸ್ಥಾಪನೆಗೊಂಡಿತು. ಎನ್‌ಜಿಎಂಎ ಕಲೆ ಮತ್ತು ಕಲಾವಿದರಿಗಾಗಿಯೇ ಮೀಸಲಾಗಿರುವಂಥದ್ದು. ಎನ್‌ಜಿಎಂಎಗೆ ಬರುವವರಿಗೆ ಮುಕ್ತ ಪ್ರವೇಶವಿರಬೇಕು. ಅಲ್ಲಿ ಷೋ ನಡೆದಾಗ ₹ 20 ಶುಲ್ಕ ಪಾವತಿಸಿ ಚಿತ್ರ ಪ್ರದರ್ಶನ ನೋಡುತ್ತಿದ್ದೆವು. ಆದರೆ, ಈಗ ಆವರಣ ಪ್ರವೇಶಕ್ಕಾಗಿಯೇ ₹ 20 ಶುಲ್ಕ ನಿಗದಿಪಡಿಸಿರುವುದು ಸರಿಯಲ್ಲ.

ಇಲ್ಲೊಂದು ತೊಡಕಿದೆ. ಏನೆಂದರೆ ಇಲ್ಲಿರುವ ಕೆಫೆಟೇರಿಯಾದಲ್ಲಿ ಕಲಾವಿದರಲ್ಲದವರು ಗಂಟೆಗಟ್ಟಲೇ ಕುಳಿತುಕೊಳ್ಳುತ್ತಾರೆ. ಅವರು ಈ ಸ್ಥಳವನ್ನು ಒಂದು ರೀತಿಯಲ್ಲಿ ಕಾರ್ಪೊರೇಟ್ ಕಚೇರಿ ಥರ ಮಾಡಿ ಕೊಂಡಿದ್ದಾರೆ. ಅಲ್ಲಿ ಧೂಮಪಾನವನ್ನೂ ಮಾಡುತ್ತಿದ್ದರು. ಆಗ ಅಲ್ಲಿನವರ ಗಮನಕ್ಕೆ ತಂದ ಮೇಲೆ ‘ನೋ ಸ್ಮೋಕಿಂಗ್’ ಫಲಕ ಅಳವಡಿಸಿದರು. ಬಹುಶಃ ಇಂಥದನ್ನು ನಿಯಂತ್ರಿಸಲೆಂದೇ ಪ್ರವೇಶ ದ್ವಾರದಲ್ಲೇ ₹ 20 ನಿಗದಿಪಡಿಸಿರುವುದು ಸಮಸ್ಯೆಗೆ ಪರಿಹಾರವಲ್ಲ.
–ಪ.ಸ.ಕುಮಾರ್, ಹಿರಿಯ ಚಿತ್ರಕಲಾವಿದ

***
ತಡೆಗೋಡೆ
ತುಂಬಾ ವರ್ಷಗಳಿಂದ ಎನ್‌ಜಿಎಂಎ ಕಲಾಪ್ರಿಯರ ನೆಚ್ಚಿನ ತಾಣವಾಗಿದೆ. ಅದೊಂದು ಮುಕ್ತ ಪ್ರದೇಶವಾಗಿತ್ತು. ಈಗ ಅಲ್ಲಿ ಪ್ರವೇಶ ಶುಲ್ಕ ವಿಧಿಸಿರುವುದು ಸಮಂಜಸವಲ್ಲ. ಇದು ಕಲಾ ಪ್ರವೇಶಕ್ಕೆ ತಡೆಗೋಡೆಯಂತಾಗುತ್ತದೆ.

ಆರಂಭದಲ್ಲೇ ತಡೆಯಾದರೆ ಯಾರಿಗೇ ಆಗಲಿ ಅಲ್ಲಿ ಏಕೆ ಹೋಗಬೇಕು ಅನ್ನುವ ಭಾವ ಮೂಡುತ್ತದೆ. ಅಲ್ಲಿ ಗ್ರಂಥಾಲಯ, ಗ್ಯಾಲರಿ, ಸಿನಿಮಾ ಪ್ರದರ್ಶನ ಹಾಲ್ ಎಲ್ಲವೂ ಇವೆ. ಇದು ಸಾರ್ವಜನಿಕರಿಗೆ ಉಚಿತವಾಗಿ ಲಭ್ಯವಾಗುವಂತಿರಬೇಕು. ಶುಲ್ಕ ವಿಧಿಸಿರುವ ಹಿನ್ನೆಲೆ ಏನು ಅಂತ ಅರ್ಥವಾಗುತ್ತಿಲ್ಲ.
–ಉಷಾ ರಾವ್, ಆ್ಯಂಥ್ರೋಪಾಲಜಿಸ್ಟ್‌, ಪಬ್ಲಿಕ್ ಸ್ಪೇಸ್ ರಿಸರ್ಚರ್

***
ಏಕಾಏಕಿ ಕ್ರಮ ಸರಿಯಲ್ಲ
ಎನ್‌ಜಿಎಂಎನ ಸಲಹಾ ಮಂಡಳಿಯ ಅವಧಿ ಮುಗಿದು ಹೋಗಿದೆ. ಕಲಾವಿದರ ಗಮನಕ್ಕೆ ತಾರದೇ ಈ ರೀತಿ ಏಕಾಏಕಿ ಪ್ರವೇಶ ಶುಲ್ಕ ನಿಗದಿ ಪಡಿಸಿರುವುದು ಸರಿಯಲ್ಲ. ಜನರು ಕಲೆಯತ್ತ ಬರಲಿ ಎಂಬುದು ಕಲಾವಿದರ ಆಶಯ. ಆದರೆ, ಈ ರೀತಿ ಶುಲ್ಕ ವಿಧಿಸಿದರೆ ಯಾರೂ ಬರುತ್ತಾರೆ? ಚಿತ್ರಕಲಾ ಪ್ರದರ್ಶನಕ್ಕೆ ಶುಲ್ಕ ವಿಧಿಸುವುದು ಬೇರೆ ಮಾತು. ಆದರೆ, ಆವರಣದೊಳಗೇ ಹೋಗಲು ಶುಲ್ಕ ನಿಗದಿ ಪಡಿಸುವುದು ಎಷ್ಟು ಸರಿ?
–ಸುರೇಶ್, ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.