ADVERTISEMENT

ಜುರಿಜುರಿ ಕಾಲ್ಮರಿ: ಗತ್ತಿನ ನಡಿಗೆಗೆ ಮಿಶ್ರಿಕೋಟಿ ಚಡಾವು

ಎಸ್.ರಶ್ಮಿ
Published 5 ಫೆಬ್ರುವರಿ 2022, 19:45 IST
Last Updated 5 ಫೆಬ್ರುವರಿ 2022, 19:45 IST
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಕೈಯಿಂದಲೇ ದೇವರಿಗಾಗಿ ಜುರಕಿ ಚಪ್ಪಲಿ ತಯಾರಿಸುತ್ತಿರುವ ಶ್ರೀಧರ ದೊಡ್ಡವಾಡ
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಕೈಯಿಂದಲೇ ದೇವರಿಗಾಗಿ ಜುರಕಿ ಚಪ್ಪಲಿ ತಯಾರಿಸುತ್ತಿರುವ ಶ್ರೀಧರ ದೊಡ್ಡವಾಡ   

ನಾಗವಲ್ಲಿಯ ಕಾಡಿಗೆ ಕಪ್ಪು ಕಣ್ಣುಗಳು, ವಿಷ್ಣುವರ್ಧನ್ ಅವರ ಚೊರಚೊರ ಸದ್ದು ಮಾಡುವ ನಡಿಗೆಯ ಚಡಾವುಗಳು.
ಹುಬ್ಬಳ್ಳಿ–ಧಾರವಾಡದ ಸುತ್ತ ಈ ಚೊರ ಚೊರ ಸದ್ದು ಕೇಳಿದ್ರ ಸಾಕು, ಗೌಡರು ಬಂದರು ಅಂತಾರ. ಒಂದು ಕಾಲಕ್ಕ ಜಾತಿ ದ್ಯೋತಕವಾಗಿದ್ವು ಈ ಜುರಕಿ ಕಾಲ್ಮರಿಗಳು.
ಜುರಿಜುರಿ ಸದ್ದು ಬರೂದ್ರಿಂದ ಆ ಹೆಸರು ಬಂತು. ಕಾಲು ಮರಿ (ಮುಚ್ಚುವುದರಿಂದ) ಮಾಡುವುದರಿಂದ ಚಪ್ಪಲಿಗೆ ಕಾಲ್ಮರಿ ಅಂತ ಕರೀತಾರ.
ಈ ಕಾಲ್ಮರಿಯ ಬೆನ್ನು ಹತ್ತಿ ಹೋದಾಗ ನಾವು ತಲುಪಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿಗೆ. ಇಲ್ಲಿಯ ಶ್ರೀಧರ್‌ ದೊಡ್ಡವಾಡ ಮತ್ತು ಅವರ ಚಿಕ್ಕಪ್ಪ ಅವರ ಎರಡೇ ಎರಡು ಕುಟುಂಬಗಳು ಈ ಚಪ್ಪಲಿಗಳನ್ನು ಸಿದ್ಧಪಡಿಸ್ತಾವ.

ಕೊಲ್ಹಾಪುರಿ ಚಪ್ಪಲಿಯಂತೆ ಕಂಡರೂ ಈ ಕಾಲ್ಮರಿಗಳ ಗತ್ತೇ ಗತ್ತು. ನಾವು ಜುರುಜುರು ಸದ್ದು ಬರುವ ಚಪ್ಪಲಿ ಕೊಡಿ ಅಂತ ಪಡೆದು, ಅಲುಗಾಡಿಸಿ ನೋಡಿದೆವು. ಕೈಯಿಂದ ಒತ್ತಿ ನೋಡಿದೆವು... ಯಾವ ಸದ್ದೂ ಇಲ್ಲ.ಮುನಿದು ಸುಮ್ಮನಾದ ನಾಗವಲ್ಲಿಯಂತೆ ಮೌನವಾಗಿತ್ತು.

ಪ್ರಶ್ನಾರ್ಥಕವಾಗಿ ಶ್ರೀಧರ ಕಡೆ ನೋಡಿದೆ... ನಸುನಗುತ್ತ, ‘ಮುಟ್ಟಿದ ಕೂಡಲೇ ಸಪ್ಪಳ ಮಾಡಾಕ ಅವೇನು ಚೈನಾ ಮಾಲೇನ್ರಿ ಅಕ್ಕಾ... ಕಾಲಿಗೆ ಹಾಕ್ಕೊಂಡು, ಪಾದ ಊರಿ, ಹೆಬ್ಬೆರಳಿನ ಮೇಲೆ ಭಾರ ಹಾಕಿದ್ಹಂಗ ಹೆಜ್ಜಿ ಎತ್ತಬೇಕು...’ ನಡಿಗೆಯ ಪಾಠ ಮಾಡಿದರು ಶ್ರೀಧರ್‌. ಹಾಗೆ ನಡೆದಾಗ ಚುರುಚುರು ಸದ್ದಾಗತೊಡಗಿದಾಗ, ಕಣ್ಣೊಳಗೆ ಮಿಂಚು.

ADVERTISEMENT

ಹೆಂಗಿದು ಸಾಧ್ಯ ಅಂದಾಗ ಶ್ರೀಧರ್‌ ಅದರ ಕತೆ ಹೇಳತೊಡಗಿದರು. ‘ಇವಕ್ಕ ನೋಡ್ರಿ ಅಕ್ಕಾರ, ಹಿಂಗ ಮೊದಲು ಕಾಲಿನ ಅಳತಿಯ ಮೆಟ್ಟು ಮಾಡ್ತೀವಿ. ಆಮೇಲೆ ಉಳಿಯಿಂದ ಮೇಲ್ಪಟ್ಟಿ ಮಾಡ್ಕೊಂತೀವಿ. ಸಂದೂಕಿನ ಮ್ಯಾಲೆ ಬಡದು ಅಳತಿ ಸರಿ ಮಾಡ್ಕೊಂತೇವಿ. ಆದ್ರ ಕೆಲವೊಮ್ಮೆ ಕೈಲೆ ಕಟ್‌ ಮಾಡೂದ್ರಿಂದ ಅಂಚು ಸಮ ಇರೂದಿಲ್ಲ. ಗಾಜಿನಿಂದ ಅಂಚು ಸಮಗೊಳಸ್ತೀವಿ. ಅದಕ್ಕ ಒಡದ ಗಾಜು ಬೇಕು. ಅಗ್ದಿ ತೀಕ್ಷ್ಣ ಇರಬೇಕದು. ನಾಜೂಕಿನ ಕೆಲಸ. ಪರಪರ ಮಾಡಿ ಮುಗಿಸಬೇಕು...’ ಅಂತ್ಹೇಳ್ಕೊಂತನ ಅಲ್ಲಿದ್ದ ಒಂದು ಮೆಟ್ಟನ್ನು ಗಾಜಿನಿಂದ ಕೊರೆದು ಸಮ ಮಾಡಿ, ಒಮ್ಮೆ ಬೆರಳಾಡಿಸಿ ನೋಡಿದ್ರು. ಪಟ್ಟಿಯನ್ನು ಮೊದಲೇ ಜಡಿಹೆಣದ್ಹಂಗ ಹೆಣದಿಟ್ಟಿದ್ರು. ಅದಕ್ಕ ಅಡಿಪಟ್ಟಿ ಹಾಕಿ, ಅವನ್ನು ಮೆಟ್ಟಿಗೆ ಜೋಡಿಸಿ, ಹೊಲಗಿ ಹಾಕಿದ್ರು.

ಆದ್ರ ಆಗಲೂ ನನಗ ಸ್ಪಷ್ಟ ಆಗಿರಲಿಲ್ಲ. ಈ ಚೊರಚೊರ ಸದ್ದಿಗೆ ಕಾರಣ ಏನಂತ. ಅದನ್ನೇ ಶ್ರೀಧರ್‌ ಅವರಿಗೆ ಕೇಳಿದ್ವಿ. ಶ್ರೀಧರ್‌ ಈ ಚೊರಚೊರ ಸದ್ದಿಗೂ ಎಮ್ಮಿಬಾಲಕ್ಕೂ, ಕಾಗಿಕಾಯಿಗೂ ನೇರಸಂಬಂಧ ಅದ ಅಂದ್ರು.

ಹುಬ್ಬು ಗಂಟಿಕ್ಕಿ ನೋಡಿದೆ. ಡಬ್ಬಿಯೊಳಗಿಂದ ಒಂದು ಎಮ್ಮಿಬಾಲ ತೆಗೆದುಕೊಟ್ರು. ಬದುಕಿನಾಗ ಮೊದಲ ಸಲ ಎಮ್ಮಿ ಬಾಲ ಹಿಡದಿದ್ದೆ. ತಣ್ಣಗ ಕೊರೀತಿತ್ತದು. ಹದವಾಗಿರುವ ಎಮ್ಮಿಬಾಲದ ಚರ್ಮ ಅದು. ಅದನ್ನ ಒಂದಂಗುಲದಷ್ಟು ಸಣ್ಣ ಸಣ್ಣ ಚೂರುಗಳನ್ನು ಮಾಡಿದ್ದರು. ಕಾಗಿಕಾಯಿ ಅಂತ ಕರೆಯಿಸಿಕೊಳ್ಳುವ ಕಾಯಿಗಳನ್ನು ಬಡಿದು ಚಪ್ಪಟೆಯಾಗಿಸಿದ್ದರು. ಅದಕ್ಕೊಂದು ಮುಳ್ಳಿನ ಮೊನಚು ಇರ್ತದ. ಅವೆರಡನ್ನೂ ಹೊಟ್ಟೆಯೊಳಗೆ ಹಾಕಿ, ಹೊಲಿಗೆ ಹಾಕ್ತಾರ. ಈ ಮೊಳೆಹೊಡೆದು ಜೋಡಿಸಿರುವ ಮೆಟ್ಟಿನ ಪಟ್ಟಿಯ ಸಂದಿಯೊಳಗ ಚಿಮಣಿ ಎಣ್ಣಿ ಹನಿಯುಣಸ್ತಾರ. ಇನ್ನೊಂದು ಕಡೆಯಿಂದ ಅದು ಹೊರಗ ಬರುವಷ್ಟು ಎಣ್ಣಿಯುಣಿಸಬೇಕು. ಆಮೇಲೆ ಒಂದೆರಡು ದಿನ ಬಿಟ್ಟು, ಈ ಕಾಲ್ಮರಿ ಮೆಟ್ಟು ನಡೆದರೆ, ನಡಿಗಿಗೆ ಒಂದು ಗತ್ತು ಬರ್ತದ.

ಐದು ಕೆ.ಜಿ. ಹದ ಮಾಡಿದ ಚರ್ಮದೊಳಗ ಮೂರು ಜೊತಿ ಕಾಲ್ಮರಿ ಆಗ್ತಾವ. ಒಂದು ಜೋಡಿ ತಯಾರಿ ಮಾಡಾಕ ಎರಡು ದಿನ ಬೇಕು. ಈಗ ಒಂದು ಕೇಜಿ ಚರ್ಮಕ್ಕ ಕನಿಷ್ಠ ಅಂದ್ರೂ ಎರಡು ಸಾವಿರ ರೂಪಾಯಿ ಕೊಡಬೇಕು. ಬೆಲಿ ಹೆಚ್ಚಾಗೇದ. ಯಾರೂ ಅಷ್ಟು ರೊಕ್ಕ ಕೊಟ್ಟು ತೊಗೊಳೂದಿಲ್ಲ. ಶೋಕಿಗೆ ಹಾಕ್ಕೊಳ್ಳೋರು ಅಷ್ಟೆ ತೊಗೊತಾರ. ಆದ್ರ ಹಂಗ ತೊಗೊಳ್ಳೋರಿಗೆ ಇಲ್ಲಿ ಸಿಗ್ತಾವ ಅನ್ನೂದು ಗೊತ್ತಿಲ್ಲ. ಹಂಗಾಗಿ ಈ ಕೆಲಸ ಮಾಡೋರು ಹಗುರಕ್ಕ ಇದನ್ನ ಬಿಟ್ಟು ಬ್ಯಾರೆ ಚಪ್ಪಲಿ ಅಂಗಡಿ ಇಟ್ಕೊಂಡಾರ ಅಂತ ಶ್ರೀಧರ್‌ ವಿವರಿಸಿದ್ರು.

ನೀವು ಯಾಕ ಮುಂದುವರಿಸೀರಿ ಅಂತ ಕೇಳಿದಾಗ, ‘ನಾವು ಬರೆ ಮನುಷ್ಯರಿಗಷ್ಟೆ ಮಾಡೂದಿಲ್ರಿ. ದೇವರಿಗೂ ಮಾಡ್ತೀವಿ. ದೇವರಿಗೆ ಆಕಳ ಚರ್ಮ ಬಳಸಿ ಮಾಡ್ತೀವಿ. ಒಂದು ಜೊತಿ ದೇವರ ಚಡಾವು ಮಾಡಾಕ 14–16 ಕೆ.ಜಿ. ಚರ್ಮ ಬೇಕು. ಮತ್ತ ಅವು ಒಂದೊಂದೂ ಒಂದು ಮಾರು ಉದ್ದ ಇರ್ತಾವ. ಆ ಒಂದು ಜೊತಿ ಮಾಡಾಕ, ಕನಿಷ್ಠ ಒಂದು ವಾರ ಬೇಕು. ಆ ಸಮಯದೊಳಗ ಬ್ಯಾರೆ ಕಾಲ್ಮರಿ ಮಾಡೂದಿಲ್ಲ, ಬ್ಯಾರೆ ಚರ್ಮ ಮುಟ್ಟೂದಿಲ್ಲ ಅಂತ ಹೇಳುವ ಶ್ರೀಧರ್‌, ಈ ಭಾಗದಲ್ಲಿ ಮೈಲಾರಜ್ಜನಿಗೆ, ಕದರಮಂಡಲಗಿ ಹನುಮಪ್ಪನಿಗೆ, ನುಗ್ಗಿಕಾಯಿ ಹನುಮಪ್ಪನಿಗೆ ಈ ಜೋಡುಗಳನ್ನು ಮಾಡಿಕೊಡ್ತಾರ.

ಪ್ರತಿವರ್ಷವೂ ಈ ಜೋಡುಗಳನ್ನು ಹಾಕ್ಕೊಂಡು ರಾತ್ರಿ ಇಡೀ ದೇವರು ಅಡ್ಡಾಡುವುದರಿಂದ, ಚಪ್ಪಲಿ ಸವೀತಾವಂತ. ಮತ್ತ ಮುಂದಿನ ಜಾತ್ರಿಯೊಳಗ ಹೊಸಾವು ಮಾಡಿಕೊಡ್ತಾರಂತ. ಈ ನಂಬಿಕಿ ಇರೂದ್ರಿಂದ ಪ್ರತಿವರ್ಷವೂ ಹೊಸ ಜೋಡು ಮಾಡಿಕೊಡುವ ಹೊಣೆ ಇವರ ಕುಟುಂಬಕ್ಕ ಅದ. ಅದೇ ದೇವರು ಕಾಯ್ತಾನ ಅನ್ನುವ ನಂಬಿಕಿಯೊಳಗ ಇವರೂ ನಡದಾರ. ಇವರ ಕುಟುಂಬ ನೆಮ್ಮದಿಯಿಂದ ಇರಲಿ ಅನ್ನೂದಾದ್ರ ನಾವೂ ಒಂದು ಜೊತಿ ಜುರಕಿ ಚಪ್ಪಲಿ ತೊಗೊಬೇಕು ಅಷ್ಟೆ!

ಕೈ ಹಿಡಿದ ಸಿನಿಮಾ ರಂಗ
ರಾಜಾ ಹುಲಿ ಚಿತ್ರದಲ್ಲಿ ಯಶ್‌ಗೆ, ಸಂಗೊಳ್ಳಿ ರಾಯಣ್ಣ ಚಿತ್ರಕ್ಕಾಗಿ ದರ್ಶನ್‌ಗೆ ಇಲ್ಲಿಂದಲೇ ಜುರಕಿ ಚಪ್ಪಲಿ ಮಾಡಿಸಿಕೊಂಡು ಹೋಗಿದ್ದರಂತೆ. ಇದಾದ ನಂತರ ದುಬೈನ ಉದ್ಯಮಿಯೊಬ್ಬರು ಒಟ್ಟಿಗೆ 25 ಜೋಡು ಚಪ್ಪಲಿಗಳಿಗೆ ಆದೇಶ ನೀಡಿ, ತರಿಸಿಕೊಂಡಿದ್ದರಂತೆ.

ಬಾಯಿ ಮಾತಿನ ಮೂಲಕವೇ, ಪ್ರಚಾರ ಪಡೆಯುತ್ತಿರುವ ಈ ಜುರಕಿ ಚಪ್ಪಲಿಗೆ ಒಂದು ಮಾರುಕಟ್ಟೆಯ ವ್ಯವಸ್ಥೆ ಆಗಬೇಕಿದೆ. ಹಳೆಯ ಜನ ಈಗಲೂ ಇವನ್ನು ಬಳಸಲು ಕಾರಣ, ಅಂಗಾಲು ಬೆವೆಯುವುದಿಲ್ಲ, ಚಳಿಗಾಲದಲ್ಲಿ ಬೆಚ್ಚಗಿದ್ದರೆ, ಬೇಸಿಗೆಯಲ್ಲಿ ಸುಡುವುದಿಲ್ಲ. ದೇಹದ ಭಾರ ಸಮವಾಗಿ ಪಡೆಯುತ್ತವೆ. ಈ ಕಾರಣದಿಂದ ಹಿರಿತಲೆಗಳು ಇಂದಿಗೂ ಇವೇ ಕಾಲ್ಮರಿಗಳನ್ನು ಅವಲಂಬಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: ಶ್ರೀಧರ ದೊಡ್ಡವಾಡ 7090876760, 9964383975

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.