ವಾರಾಣಸಿ ಅಂದಾಕ್ಷಣ ಗಂಗೆಯ ದಡದಲ್ಲಿರುವ ದೇವಾಲಯಗಳ ಚಿತ್ರಣವೇ ಕಣ್ಮುಂದೆ ಸುಳಿಯುತ್ತದೆ. ವಾರಾಣಸಿಯ ಕುರಿತ ಧಾರ್ಮಿಕ, ಆಧ್ಯಾತ್ಮಿಕ ಆಕರ್ಷಣೆಯೇ ಅಂಥದ್ದು. ಧಾರ್ಮಿಕ ಒಲವುಳ್ಳವರು, ಛಾಯಾಚಿತ್ರಗಾರರು, ಪ್ರವಾಸಿಗರು, ವಿದೇಶಿಯರಿಗಷ್ಟೇ ಈ ಸ್ಥಳ ಆಕರ್ಷಕವಲ್ಲ. ಚಿತ್ರಕಲಾವಿದರಿಗೂ ಈ ಸ್ಥಳ ಅತ್ಯಾಪ್ತ. ಅಲ್ಲಿನ ದೇವಾಲಯಗಳು, ಸಾಧು–ಸಂತರು, ನದಿ ದಡದ ಚಟುವಟಿಕೆಗಳು, ದೋಣಿಗಳ ಚಿತ್ರಣ ಯಾವುದೇ ಕಲಾವಿದನ ಮನದಲ್ಲಿ ಅಚ್ಚಳಿಯದೇ ಉಳಿಯುವಂಥದ್ದು.
ಅಂಥ ಅಚ್ಚಳಿಯದ ಚಿತ್ರಗಳನ್ನು ತಮ್ಮ ಕುಂಚದ ಮೂಲಕ ಕಲಾಕೃತಿಗಳನ್ನಾಗಿ ರೂಪಿಸಿದ್ದಾರೆ ಕೋಲ್ಕತ್ತದ ಕಲಾವಿದೆ ನಿಕಿತಾ ಅಗರ್‌ವಾಲ್. ಅವರು ಓದಿದ್ದು ಬಿಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಫ್ಯಾಷನ್ ಡಿಸೈನಿಂಗ್. ಆದರೆ, ಬಣ್ಣಗಳ ಮೋಹದಿಂದ ನಿಕಿತಾ ಅವರಿಗೆ ಹೊರ ಬರಲಾಗಲಿಲ್ಲ. ಅದು ಅವರಿಗೆ ಬಾಲ್ಯದಲ್ಲೇ ಅಂಟಿದ ನಂಟು.
ವಾರಾಣಸಿಗೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಚಿತ್ರಣಗಳನ್ನು ನಿಕಿತಾ ತಮ್ಮ ಕುಂಚದಲ್ಲಿ ಅದೇ ಭಾವ–ಬಣ್ಣಗಳಲ್ಲಿ ಹಿಡಿದಿಟ್ಟಿದ್ದಾರೆ. ಆಧ್ಯಾತ್ಮಿಕದೊಂದಿಗೆ ನಂಟು ಬೆಸೆಯುವ, ಚೈತನ್ಯಸೂಸುವ ಬಣ್ಣಗಳಾದ ಕೇಸರಿ, ಹಳದಿ, ಕೆಂಪು, ನೀಲಿ ಬಣ್ಣಗಳ ಬಳಕೆ ಅವರ ಕಲಾಕೃತಿಗಳ ವಿಶೇಷ. ವಾರಾಣಸಿಯ ಘಾಟ್‌ಗಳಿಂದ ಪ್ರೇರಿತವಾದ ಅವರ ಕಲಾಕೃತಿಗಳು ಅಲ್ಲಿನ ಆಧ್ಯಾತ್ಮಿಕ ತತ್ವವನ್ನು ಹಿಡಿದಿಟ್ಟಿವೆ. ದೇವಾಲಯಗಳ ಮತ್ತು ಇತರ ಕಟ್ಟಡಗಳ ಚಿತ್ರಣವು ವಾಸ್ತುಶಿಲ್ಪದ ಸೌಂದರ್ಯವನ್ನು ಪ್ರತಿಬಿಂಬಿಸುವಂತಿವೆ.
ಕೋಲ್ಕತ್ತ, ನವದೆಹಲಿಯಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿರುವ ನಿಕಿತಾ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತಮ್ಮ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದಾರೆ. ಜೂನ್ 6ರಿಂದ 10ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಆಸಕ್ತರು ಕಲಾಕೃತಿಗಳನ್ನು ಖರೀದಿಸಲೂಬಹುದು.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರ ಪಾರ್ಕ್ ರಸ್ತೆ. ಸಮಯ: ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.