ಬೆಂಗಳೂರು: Royal Swedish Academy of Sciences ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಆಲ್ಪ್ರೆಡ್ ನೊಬೆಲ್ ಸ್ಮರಣಾರ್ಥ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತದೆ. ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ಈ ಪ್ರಶಸ್ತಿಗಳು ಘೋಷಣೆಯಾಗುತ್ತವೆ. ಡಿಸೆಂಬರ್‌ನಲ್ಲಿ ಪ್ರದಾನ ಮಾಡಲಾಗುತ್ತದೆ.
ವಿಶೇಷವೆಂದರೆ ನೊಬೆಲ್ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳ ಬದಲಿಗೆ ರೇಖಾಚಿತ್ರಗಳನ್ನು ಅಕಾಡೆಮಿ ಅಧಿಕೃತವಾಗಿ ಹಂಚಿಕೊಳ್ಳುತ್ತದೆ. ಈ ವಿಶೇಷ ರೇಖಾಚಿತ್ರಗಳನ್ನು ರಚಿಸುವ ಕಲಾವಿದ ಯಾರು ಎಂಬುದು ಹಲವರ ಪ್ರಶ್ನೆಯಾಗಿದೆ.
Royal Swedish Academy of Sciencesನ X ವೇದಿಕೆ ಈ ಕಲಾವಿದನ ಬಗ್ಗೆ ತನ್ನ ಮಾಹಿತಿ ಹಂಚಿಕೊಂಡು ಪ್ರಶಂಶೆ ವ್ಯಕ್ತಪಡಿಸಿದೆ.
ಸ್ವಿಡಿಷ್ ಕಲಾವಿದ ನಿಕ್ಲಾಸ್ ಎಲ್ಮೆಡ್ (Niklas Elmehed) ಅವರೇ ಈ ರೇಖಾಚಿತ್ರಗಳ ಹಿಂದೆ ಇರುವ ಕಲಾವಿದ. ಅವರು 2012 ರಿಂದ ನೊಬೆಲ್ ಪುರಸ್ಕೃತರ ಭಾವಚಿತ್ರಗಳನ್ನು ಬಂಗಾರದ ಬಣ್ಣದ ಗೆರೆಗಳೊಂದಿಗೆ (Gold Leafed) ಆಕರ್ಷಕವಾಗಿ ರಚಿಸುತ್ತಾರೆ. ಇದೇ ಚಿತ್ರಗಳನ್ನು ಅಕಾಡೆಮಿ ಹಂಚಿಕೊಳ್ಳುತ್ತದೆ.
36 ವರ್ಷದ ನಿಕ್ಲಾಸ್ ಎಲ್ಮೆಡ್ ಅವರು ಸ್ವಿಡನ್‌ನ ಸ್ಟಾಕ್‌ಹೋಮ್‌ನ ನಿವಾಸಿಯಾಗಿದ್ದಾರೆ. ಅಕಾಡೆಮಿ ಪ್ರತಿ ವರ್ಷ ಇವರಿಂದ ಅಧಿಕೃತವಾಗಿ ನೊಬೆಲ್ ಪುರಸ್ಕೃತರ ರೇಖಾಚಿತ್ರಗಳನ್ನು ಬರೆಸುತ್ತದೆ.
ಈಗಾಗಲೇ ಈ ವರ್ಷದ ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಶಾಂತಿ, ಅರ್ಥಶಾಸ್ತ್ರ ಹಾಗೂ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗಿವೆ.
ನೊಬೆಲ್ ಪ್ರಶಸ್ತಿಯು 1 ಮಿಲಿಯನ್ ಡಾಲರ್ (ಅಂದಾಜು ₹8.32 ಕೋಟಿ) ನಗದು, ಚಿನ್ನದ ಪದಕ ಹಾಗೂ ಪ್ರಶಂಸಾ ಪತ್ರವನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.