ADVERTISEMENT

ಪಂ.ಪ್ರವೀಣ್‌ ಗೋಡ್ಖಿಂಡಿ ಸಂದರ್ಶನ: ರಾಗಗಳ ಹೊನಲಿನ ಹಾಡುವ ಗಡಿಯಾರ

ಎಂ.ಎನ್.ಯೋಗೇಶ್‌
Published 20 ಫೆಬ್ರುವರಿ 2022, 1:13 IST
Last Updated 20 ಫೆಬ್ರುವರಿ 2022, 1:13 IST
ಪಂ.ಪ್ರವೀಣ್‌ ಗೋಡ್ಖಿಂಡಿ
ಪಂ.ಪ್ರವೀಣ್‌ ಗೋಡ್ಖಿಂಡಿ   

ವಿಶ್ವವಿಖ್ಯಾತ ಬಾನ್ಸುರಿವಾದಕ ಪಂ.ಪ್ರವೀಣ್‌ ಗೋಡ್ಖಿಂಡಿ ಅವರು ಕೊಳಲ ಹಿಡಿದು ನಿಂತರೆ ಸ್ವರ, ರಾಗ, ಲಯ ತಾಳಗಳು ಬೆರಳ ತುದಿ– ತುಟಿಯಂಚಿನಲಿ ಮಿಡಿದು ಕೇಳುಗರ ಎದೆ ತಲುಪುತ್ತವೆ. ಗೋಡ್ಖಿಂಡಿ ಈಗ ಸ್ವರಗಳನ್ನಷ್ಟೇ ಅಲ್ಲ, ಕನ್ನಡದ ಅಕ್ಷರಗಳನ್ನೂ ಹಿಡಿಯಲೆತ್ನಿಸಿದ್ದಾರೆ. ಅವರು ‘‍ಪ್ರಹರ... ಹಾಡುವ ಗಡಿಯಾರ’ ಕಾದಂಬರಿ ಬರೆದಿದ್ದು ಸಾಹಿತ್ಯ ಲೋಕಕ್ಕೂ ಪದಾರ್ಪಣೆ ಮಾಡಿದ್ದಾರೆ.

‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಮಾಗಿ ನಿಂತ ಅಪ್ಪಟ ನಾದ ಸಂವೇದನೆಯ ಕಿಟಕಿಯೊಂದು ಬರವಣಿಗೆಯ ಲೋಕಕ್ಕೆ ತೆರೆದುಕೊಳ್ಳುತ್ತಿದೆ’ ಎಂದು ಕವಿ ಜಯಂತ ಕಾಯ್ಕಿಣಿ ‘ಪ್ರಹರ’ ಕುರಿತು ಬರೆದಿದ್ದಾರೆ. ನಾದಯೋಗ, ತಲೆಮಾರುಗಳ ಸಂಗೀತದಿಂದ ಮನತಣಿಸುತ್ತಿರುವ ಅವರು ಪ್ರಯೋಗಗಳಿಗೆ ಹೆಸರುವಾಸಿ. ಎಂಟಡಿ ಉದ್ದ, 22 ಕೆ.ಜಿ ತೂಕದ ‘ಗಾಡ್ಸ್‌ ಬನ್ಸಿ’ ಸೇರಿ ಹಲವು ಪ್ರಕಾರದ ಬಾನ್ಸುರಿಗಳಿಗೆ ರೂಪ ಕೊಟ್ಟ ಅವರೀಗ ಕಾದಂಬರಿಗೆ ಉಸಿರು ತುಂಬಿದ್ದಾರೆ.

ಚೊಚ್ಚಲ ಕಾದಂಬರಿ ಬಿಡುಗಡೆಯಾಗುವ ಹೊತ್ತಿನಲ್ಲಿ ಪ್ರವೀಣ್‌ ಗೋಡ್ಖಿಂಡಿ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

ADVERTISEMENT

ನೀವು ವಿಶ್ವಪ್ರಸಿದ್ಧ ಪ್ರದರ್ಶನ ಕಲಾವಿದ, ಬರವಣಿಗೆಗೆ ಪ್ರೇರಣೆ ಏನು?

ನಮ್ಮ ಕುಟುಂಬದ ಹಿರಿಯರು ಸಾಹಿತ್ಯದ ಪರಿಚಾರಕರೇ ಆಗಿದ್ದರು. ನನ್ನ ತಾತ ‘ಪ್ರತಿಭಾಂಕುರ’ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಸೋಬಾನೆಪದ, ಹಸೆ ಪದ, ಆರತಿ ಹಾಡುಗಳನ್ನು ರಚಿಸುತ್ತಿದ್ದರು. ಚಲನಚಿತ್ರಗೀತೆಗಳ ಟ್ಯೂನ್‌ಗೆ ಕನ್ನಡ ಸಾಹಿತ್ಯ ಮೂಡಿಸುತ್ತಿದ್ದರು. ಇಂತಹ ಮೂರು ಸಾವಿರಕ್ಕೂ ಹೆಚ್ಚು ಗೀತೆ ಬರೆದಿದ್ದಾರೆ. ಆಕಾಶವಾಣಿ ಜತೆಗಿದ್ದ ನನ್ನ ತಂದೆ ಪಂ.ವೆಂಕಟೇಶ ಗೋಡ್ಖಿಂಡಿ ಅವರು ಸಂಗೀತ, ನಾಟಕ ಬರೆದು ನಿರ್ದೇಶಿಸಿದ್ದಾರೆ. ಬರವಣಿಗೆಯ ಹಾದಿಗೆ ನನ್ನ ಕುಟುಂಬವೇ ಪ್ರೇರಣೆ. ಜೊತೆಗೆ ಸ್ವರಸಂಯೋಜನೆಯ ದಾರಿಯಲ್ಲಿ ನನಗೂ ಸಾಹಿತಿಗಳ ಒಡನಾಟವಿದೆ, ಅವರೆಲ್ಲರ ಪ್ರೀತಿ ಈ ಕಾದಂಬರಿಯ ಜೊತೆಗಿದೆ.

ಸಂಗೀತಗಾರನಿಗೂ, ಗಡಿಯಾರಕ್ಕೂ ಏನು ಸಂಬಂಧ?

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ದಿನದ 24 ಗಂಟೆಗಳನ್ನು ತಲಾ ಮೂರು ತಾಸಿನ ಎಂಟು ಪ್ರಹರಗಳಾಗಿ ವಿಂಗಡಿಸಲಾಗಿದೆ. ಪ್ರತಿ ಪ್ರಹರ, ತಾಸಿಗೂ ವಿಶಿಷ್ಟ ರಾಗಗಳನ್ನು ನಿಗದಿಪಡಿಸಲಾಗಿದೆ. ಸಮಯಾಧಾರಿತ ಈ ರಾಗಚಕ್ರವನ್ನು ಅನುಸರಿಸಿದರೆ ಅದರಿಂದ ಉಂಟಾಗುವ ಪರಿಣಾಮ ದೊಡ್ಡದು. 40–50ರ ದಶಕದಲ್ಲೇ ಸಂಗೀತ ಸಾಧಕರು ಸೃಷ್ಟಿಸಿದ ಶಾಸ್ತ್ರವಿದು. ಈಗಿನ ಸಂಗೀತಗಾರರು ಬೇರೆಬೇರೆ ಒತ್ತಡ
ಗಳಲ್ಲಿದ್ದು ಈ ಶಾಸ್ತ್ರದ ಪರಿಪಾಲನೆ ಕಷ್ಟ. ಸಂಗೀತ ಕಾರ್ಯಕ್ರಮಗಳು ಈಗ ಸಂಜೆಗಷ್ಟೇ ಸೀಮಿತವಾಗಿವೆ. ಈ ಶಾಸ್ತ್ರ ಕಳೆದುಹೋಗಬಾರದು ಎಂಬ ಉದ್ದೇಶದಿಂದ ಹಾಡುವ ಗಡಿಯಾರದ ಜೊತೆ ಭಾವನೆಗಳನ್ನು ಬೆಸೆದು ಕಾದಂಬರಿ ರೂಪ ನೀಡಿದ್ದೇನೆ.

ಕಾದಂಬರಿಯಲ್ಲಿ ಬರುವ ಪಂಡಿತ್‌ ಬುವಾ ಯಾರು?

ಅವನೊಬ್ಬ ಸಂಗೀತ ಸಾಧಕ, ಜ್ಞಾನಿ, ಸಿದ್ಧಹಸ್ತ. ಪಂ.ಬುವಾ ಸೃಷ್ಟಿಸಿದ ಹಾಡುವ ಗಡಿಯಾರದ ಸುತ್ತಲೂ ಕತೆ ಹೆಣೆದಿರುವೆ. 80ರ ದಶಕದಲ್ಲಿ ಇಂಗ್ಲೆಂಡಿನ ವೈದ್ಯನೊಬ್ಬ ಹಾಡುವ ಗಡಿಯಾರ ಹುಡುಕಿಕೊಂಡು ಬರುತ್ತಾನೆ. ತನ್ನ ರೋಗಿಗೆ ‘ರಾಗ ಚಿಕಿತ್ಸೆ’ ನೀಡಲು ಹಾಡುವ ಗಡಿಯಾರ ಕೇಳುತ್ತಾನೆ. ತಾನಾಯ್ತು, ತನ್ನ ಗಡಿಯಾರವಾಯ್ತು ಎಂಬಂತಿದ್ದ ಬುವಾ ಅದನ್ನು ಕೊಡಲೊಪ್ಪುವುದಿಲ್ಲ. ಗಡಿಯಾರ ಸೃಷ್ಟಿಯಾಗಿದ್ದು 50–60ರ ದಶಕದಲ್ಲಿ, ಎಲ್‌ಪಿ ತಟ್ಟೆ, ಜ್ಯೂಕ್‌ ಬಾಕ್ಸ್‌ ಜೊತೆ ಸೃಷ್ಟಿಯಾಗಿದ್ದ ಪ್ರಯೋಗಾತ್ಮಕ ಗಡಿಯಾರವಿದು. ಅದರ ಸುತ್ತಲೂ ಪ್ರೀತಿ, ನೋವು, ಸೋಲು, ಗೆಲುವು, ಸಾವು ಸೇರಿ ಹಲವು ಭಾವನೆಗಳಿವೆ. ಈ ಕಾದಂಬರಿಯಲ್ಲಿ ಸಂಗೀತ ಥೆರಪಿ ಇದೆ. ಗಡಿಯಾರದ ಹಿಂದೆ ಜ್ಞಾನ, ವಿಜ್ಞಾನ, ತಂತ್ರಜ್ಞಾನವೂ ಇವೆ.

‘ಪ್ರಹರ’ದ ಮೂಲಕ ಸಮಾಜಕ್ಕೆ ನೀಡುವ ಸಂದೇಶವೇನು?

ನನ್ನ ಬಾನ್ಸುರಿ ನಿನಾದ, ಸಮಕಾಲೀನ ಸಂಗೀತ ಪ್ರಯೋಗ, ಸ್ವರ ಸಂಯೋಜನೆ, ವಾದ್ಯ ಸೃಷ್ಟಿಯ ಹಿಂದೆ ಭಾರತೀಯ ಸಂಗೀತ ಮನೆಮನೆಗೂ ತಲುಪಬೇಕು ಎಂಬ ಉದ್ದೇಶವಿದೆ. ಶಾಸ್ತ್ರೀಯ ಸಂಗೀತದತ್ತ ಒಲವು ಸೃಷ್ಟಿಸಬೇಕು ಎಂಬ ಕನಸಿದೆ. ಈ ಕಾದಂಬರಿ ಮೂಲಕವೂ ಅದೇ ಸಂದೇಶ ನೀಡಬಯಸಿದ್ದೇನೆ.

ಪೆನ್ನು ಹಿಡಿದಾಗ ಸ್ವರಗಳಷ್ಟೇ ಸುಲಲಿತವಾಗಿ ಅಕ್ಷರಗಳೂ ಮೂಡಿ ಬಂದವಾ?

ಖಂಡಿತಾ ಬರಲಿಲ್ಲ, ಬಹಳ ಕಷ್ಟವಾಯಿತು. ಮೊದಲು ಇಂಗ್ಲಿಷ್‌ನಲ್ಲಿ ಕಾದಂಬರಿ ಬರೆದಿದ್ದೆ. ಬೇರೆಯವರ ಕಡೆಯಿಂದ ಭಾಷಾಂತರ ಮಾಡಿಸಲು ಯತ್ನಿಸಿದ್ದೆ. ಆದರೆ ಕವಿ ಜಯಂತ ಕಾಯ್ಕಿಣಿ ಅವರು ‘ನಿಮ್ಮ ಭಾವನೆಗಳನ್ನು ನೀವೇ ಅಭಿವ್ಯಕ್ತಿ ಮಾಡಿದರೆ ಚೆನ್ನ’ ಎಂದರು. ಆರಂಭದಲ್ಲಿ ಬಹಳ ಕಷ್ಟವಾಯಿತು, ಬರವಣಿಗೆ ಸಾಗಲಿಲ್ಲ, ಸಮಾಧಾನವಾಗಲಿಲ್ಲ. ಏಕೆಂದರೆ ನಾನು ಗೋವಾ, ಹೈದರಾಬಾದ್‌, ದೆಹಲಿಯಲ್ಲಿ ನನ್ನ ಬಾಲ್ಯ ಕಳೆದೆ. ಹೀಗಾಗಿ ಕನ್ನಡ ದೂರವೇ ಆಗಿತ್ತು. ಕಳೆದ 25 ವರ್ಷಗಳಿಂದೀಚೆಗೆ ನಾನು ಕನ್ನಡದ ಭಾಗವಾಗಿದ್ದೇನೆ. ಯತ್ನ, ಪ್ರಯತ್ನಗಳ ನಂತರ ಕನ್ನಡ ಕೈಗೂಡಿತು, ನಾನು ಮಾತನಾಡುವ ಧಾರವಾಡ ಕನ್ನಡದಲ್ಲೇ ಬರೆದಿದ್ದೇನೆ. ಸಾಹಿತಿಯೊಬ್ಬ ಬರೆದ ಕಾದಂಬರಿ ಎಂದುಕೊಳ್ಳುವುದಕ್ಕಿಂತ ಸಂಗೀತಗಾರನೊಬ್ಬ ಬರೆದ ಕಾದಂಬರಿ ಎಂದುಕೊಳ್ಳಬೇಕು ಎಂಬುದು ಓದುಗರಲ್ಲಿ ನನ್ನ ಅರಿಕೆ.

(ಸಪ್ನ ಬುಕ್‌ಹೌಸ್‌ ಪ್ರಕಟಿಸಿರುವ ‘ಪ್ರಹರ’ ಕಾದಂಬರಿ ಫೆ.25ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಸಿ.ಅಶ್ವತ್ಥ್‌ ಕಲಾಭವನದಲ್ಲಿ ಬಿಡುಗಡೆಯಾಗಲಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.