ADVERTISEMENT

ಕಲೆ: ಚಿತ್ರಾನುಭವದ ‘ಪ್ರಿಂಟ್‌ಮೇಕಿಂಗ್’ ಚಮತ್ಕಾರ

ಸುಕೃತ ಎಸ್.
Published 7 ಜನವರಿ 2024, 3:37 IST
Last Updated 7 ಜನವರಿ 2024, 3:37 IST
ಕಲಾವಿದ: ಜುಆನ್‌ ಸೆಬಾಸ್ಟಿಯನ್‌ ಕಾರ್ನೆರೊ, ಅರ್ಜೆಂಟೀನಾ, ವಿಧಾನ: ಲಿನೋಕಟ್‌
ಕಲಾವಿದ: ಜುಆನ್‌ ಸೆಬಾಸ್ಟಿಯನ್‌ ಕಾರ್ನೆರೊ, ಅರ್ಜೆಂಟೀನಾ, ವಿಧಾನ: ಲಿನೋಕಟ್‌   

ಚೌಕಟ್ಟಿನೊಳಗೆ ಉಬ್ಬು–ತಗ್ಗುಗಳ ಕೆತ್ತನೆ. ಅದರ ಮೇಲೆ ಬಣ್ಣ ತೀಡಿದರೆ ಉಬ್ಬು ಇದ್ದ ಜಾಗದಲ್ಲಿ ಕೂರುತ್ತದೆ. ತಗ್ಗಿನ ಜಾಗಕ್ಕೆ ಬಣ್ಣ ಮೆತ್ತಿಕೊಳ್ಳುವುದಿಲ್ಲ. ಎಷ್ಟು ಜಾಗದಲ್ಲಿ ಬಣ್ಣ ಇರಬೇಕು, ಎಷ್ಟು ಜಾಗದಲ್ಲಿ ಬಣ್ಣ ಇರಬಾರದು ಎಂಬ ಸ್ಪಷ್ಟ ಕಲ್ಪನೆಯೇ ಕಲಾಕೃತಿಗೆ ಆಕಾರ ನೀಡುತ್ತದೆ. ಚೌಕಟ್ಟಿನಲ್ಲಿ ಮೂಡಿದ ಈ ಆಕಾರವನ್ನು ಕ್ಯಾನ್ವಾಸ್‌ (ಹಾಳೆ ಅಥವಾ ಬಟ್ಟೆ) ಮೇಲೆ ಅಚ್ಚು ಮಾಡಬೇಕು. ಹೀಗೆ ಬಣ್ಣ ಇರುವ, ಇಲ್ಲದಿರುವ ಜಾಗಗಳೇ ಚಿತ್ರವಾಗಿ ಮೂಡುತ್ತದೆ.

ಪ್ರಿಂಟ್‌ಮೇಕಿಂಗ್‌ ಒಂದು ಕರಕುಶಲ ಕಲೆ. ಇಲ್ಲಿ ಚಿತ್ರಗಳನ್ನು ಬರೆಯುವುದಲ್ಲ, ಮೂಡಿಸಬೇಕು. ಕೊರೆಯುವ ಮೂಲಕ, ಕೆತ್ತುವ ಮೂಲಕ ಚಿತ್ರಗಳನ್ನು ಸೃಷ್ಟಿಸಬೇಕು. ಹೀಗೆ ಚಿತ್ರಗಳನ್ನು ಸೃಷ್ಟಿಸಲು ಹಲವು ವಿಧಾನಗಳಿವೆ. ಲೀನೊಕಟ್‌, ಮೆಜೋಟಿಂಟ್‌, ವುಡ್‌ಕಟ್‌, ಸ್ಕ್ರೀನ್‌ಪ್ರಿಂಟ್‌, ಎಚಿಂಗ್‌, ಅಕ್ವಾಟಿಂಟ್‌...

ವುಡ್‌ಕಟ್‌ ಎಂದರೆ, ಮರದ ತುಂಡಿನ ಮೇಲೆ ಕಲಾಕೃತಿಗಳನ್ನು ಕೆತ್ತುವುದು. ಲೀನೊಕಟ್‌ ಎಂದರೆ, ಲೀನೊಲಿಯಂ ಅಥವಾ ರಬ್ಬರ್‌ಶೀಟ್‌ನ ಮೇಲೆ ಕೊರೆಯುವುದು. ಎಚ್ಚಿಂಗ್‌, ಅಕ್ವಾಟಿಂಟ್‌, ಮೆಜೊಟಿಂಟ್‌ ಅಂದರೆ, ಲೋಹ ಅದರಲ್ಲೂ ತಾಮ್ರದ ಪ್ಲೇಟಿನ ಮೇಲೆ ಕೊರೆಯುವುದು. ಹೀಗೆ ಕೆತ್ತಿದ, ಕೊರೆದ ಚಿತ್ರವನ್ನು ಕ್ಯಾನ್ವಾಸ್‌ ಮೇಲೆ ಅಚ್ಚು ಮಾಡಲಾಗುತ್ತದೆ. ಮರ ಅಥವಾ ತಾಮ್ರದ ಪ್ಲೇಟ್‌ಗಳ ಮೇಲೆ ಮತ್ತೊಮ್ಮೆ ಬಣ್ಣಗಳನ್ನು ಮೆತ್ತಿ ಕಲಾಕೃತಿಯ ಇನ್ನೂ ಹಲವು ಪ್ರತಿಗಳನ್ನು ಪಡೆದುಕೊಳ್ಳಬಹುದು. ಇದೇ ಈ ಚಿತ್ರಕಲಾ ಪ್ರಕಾರದ ವೈಶಿಷ್ಟ್ಯ.

ADVERTISEMENT

ಈ ಚಿತ್ರಕಲಾ ಪ್ರಕಾರ ಭಾರತಕ್ಕೆ ಹೊಸತೇನೂ ಅಲ್ಲ; ಇಲ್ಲಿ ಇದಕ್ಕೆ ದೊಡ್ಡ ಇತಿಹಾಸವೇ ಇದೆ. ಆದರೆ, ಈಗ ಜನರು ಇದನ್ನು ಮರೆತಿದ್ದಾರಷ್ಟೆ. ರಾಜಾ ರವಿವರ್ಮನ ಕಲಾಕೃತಿಗಳು ಯಾರಿಗೆ ನೆನಪಿಲ್ಲ ಹೇಳಿ. ಇವರು ಕೂಡ ಪ್ರಿಂಟ್‌ಮೇಕಿಂಗ್‌ ತಂತ್ರವನ್ನು ಬಳಸಿ ಕಲಾಕೃತಿಗಳನ್ನು ಮಾಡುತ್ತಿದ್ದರು. ಬಾಂಬೆಯಲ್ಲಿ ‘ರವಿವರ್ಮ ಪ್ರೆಸ್‌’ ಎಂಬ ಪ್ರೆಸ್‌ ತೆರೆದಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಕೋಲ್ಕತ್ತ ಪ್ರಿಂಟ್‌ಮೇಕಿಂಗ್‌ನ ಕೇಂದ್ರವಾಗಿತ್ತು. ಈಗ ದೇಶದಲ್ಲಿ ಕೆಲವು ಚಿತ್ರಕಲಾ ಕಾಲೇಜುಗಳಲ್ಲಿ ‘ಪ್ರಿಂಟ್‌ಮೇಕಿಂಗ್‌’ ಪಠ್ಯವಾಗಿದೆ.

ಬೆಂಗಳೂರಿನಲ್ಲಿ ಚಿತ್ರ ಪ್ರದರ್ಶನ

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಬಳಿಯ ಜಿಗಣಿಯಲ್ಲಿರುವ ‘ಲಾವರು ಆರ್ಟ್‌ ಸೆಂಟರ್‌’ನಲ್ಲಿ ಪ್ರಿಂಟ್‌ಮೇಕಿಂಗ್‌ ಕಲಾಕೃತಿಗಳ ‘ಬೆಂಗಳೂರು ಪ್ರಿಂಟ್‌ ಎಕ್ಸ್‌ಚೇಂಚ್‌ ಇಂಟರ್‌ನ್ಯಾಷನಲ್‌ 2023’ ಪ್ರದರ್ಶನ ನಡೆಯುತ್ತಿದೆ. 2023ರ ಡಿಸೆಂಬರ್‌ 16ರಿಂದ ನಡೆಯುತ್ತಿರುವ ಈ ಪ್ರದರ್ಶನವು ಇದೇ ಜನವರಿ 15ರಂದು ಕೊನೆಗೊಳ್ಳಲಿದೆ. ಲಾವರು ಆರ್ಟ್ ಸೆಂಟರ್‌, ಕಳೆದ ಮೂರು ವರ್ಷಗಳಿಂದ ಇಂಥ ಕಲಾಕೃತಿಗಳ ಪ್ರದರ್ಶನ ನಡೆಸುತ್ತಿದೆ. ಪ್ರಿಂಟ್‌ಮೇಕಿಂಗ್‌ ಕಲೆಯನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಗುರಿ ಈ ಸೆಂಟರ್‌ನದ್ದು.

ಈ ಪ್ರದರ್ಶನದಲ್ಲಿ ಸುಮಾರು 60 ಕಲಾವಿದರ ಕಲಾಕೃತಿಗಳು ಪ್ರದರ್ಶಿತವಾಗುತ್ತಿವೆ. ಇದರಲ್ಲಿ ಬೆಂಗಳೂರು ಸೇರಿದಂತೆ ಭಾರತದ ವಿವಿಧ ಭಾಗದ 34 ಕಲಾವಿದರ ಕಲಾಕೃತಿಗಳೂ ಇವೆ. ಪ್ರದರ್ಶನಕ್ಕೆ ಬರುವ ಕಲಾಕೃತಿಗಳನ್ನು, ಕಲಾವಿದರ ನಡುವೆಯೇ ಹಂಚಿಕೆ (ಎಕ್ಸ್‌ಚೇಂಚ್‌) ಮಾಡಲಾಗುತ್ತದೆ. ರಷ್ಯಾ, ಇಸ್ರೇಲ್‌, ಬಾಂಗ್ಲಾದೇಶ, ಕೆನಡಾ ಸೇರಿ 26 ದೇಶಗಳಿಂದ ತರಿಸಿಕೊಳ್ಳಲಾದ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.

ಕಲಾವಿದ: ಸ್ಪಂದನ್‌ ಎಸ್‌. ಮುಂಡೆ ಭಾರತ ವಿಧಾನ: ಎಚಿಂಗ್‌
ಕಲಾವಿದ: ಮೊಹಮ್ಮದ್‌ ಫಕ್ರುಲ್‌ ಇಸ್ಲಾಂ ಮಜುಂದಾರ್‌ ಬಾಂಗ್ಲಾದೇಶ ವಿಧಾನ: ವುಡ್‌ಕಟ್‌
ಒಂದೊಮ್ಮೆ ಚಿತ್ರ ಬಿಡಿಸುವಾಗ ತಪ್ಪಾಯಿತು ಎಂದುಕೊಳ್ಳಿ. ಅದನ್ನು ಬಣ್ಣಗಳ ಸಹಾಯದಿಂದ ಸರಿಪಡಿಸಬಹುದು. ಆದರೆ ಪ್ರಿಂಟ್‌ಮೇಕಿಂಗ್‌ನಲ್ಲಿ ತಪ್ಪಿಗೆ ಅವಕಾಶವಿಲ್ಲ. ಒಂದು ಬಾರಿ ಚಿತ್ರವನ್ನು ಕೆತ್ತಿದರೆ ಅಥವಾ ಕೊರೆದರೆ ಮುಗಿಯಿತು. ತಪ್ಪಾದರೆ ಮತ್ತೊಮ್ಮೆ ಹೊಸದಾಗಿಯೇ ಚಿತ್ರ ಕೆತ್ತಬೇಕಾಗುತ್ತದೆ.
ಇದಕ್ಕಾಗಿಯೇ ಪ್ರಿಂಟ್‌ಮೇಕಿಂಗ್‌ಗೆ ಹೆಚ್ಚು ಏಕಾಗ್ರತೆ ಹಾಗೂ ಹಲವು
ದಿನಗಳ ಪರಿಶ್ರಮ ಬೇಕಾಗುತ್ತದೆ
ಸುರೇಶ್‌ ಕುಮಾರ್‌ ಮಹತೊ ಲಾವರು ಆರ್ಟ್‌ ಸೆಂಟರ್‌ನ ಕ್ಯುರೇಟರ್‌
ಕಲಾಕೃತಿಯ ಸ್ಪರ್ಶವೂ ಅನುಭವ ನೀಡುತ್ತದೆ. ಚಿತ್ರಕಲೆಯಲ್ಲಿನ ಒಂದು ರೇಖೆ ಮರ ಅಥವಾ ಕಲ್ಲಿನ ಶಿಲ್ಪದಲ್ಲಿನ ಕೆತ್ತನೆ ನಮಗೆ ಅನುಭವ ನೀಡುತ್ತದೆ. ಆದರೆ ಪ್ರಿಂಟ್‌ಮೇಕಿಂಗ್‌ನಲ್ಲಿ ನೋಡುವುದೇ ಅನುಭವ. ಇದು ಪ್ರಿಂಟ್‌ಮೇಕಿಂಗ್‌ನ ದೊಡ್ಡ ಶಕ್ತಿಯೂ ಹೌದು ಕಲಾವಿದನಿಗೆ ದೊಡ್ಡ ಸವಾಲೂ ಹೌದು. ಕೆಲವೊಮ್ಮೆ ಇದು ಮಿತಿಯೂ ಆಗುತ್ತದೆ. ನೋಡುವವನಿಗೆ ನೋಟದಲ್ಲಿಯೇ ಅನುಭವ ದಾಟಿಸಬೇಕು. ಆದ್ದರಿಂದಲೇ ಪ್ರಿಂಟ್‌ಮೇಕಿಂಗ್‌ ಕಲಾವಿದರ ಸೃಜಶೀಲತೆಗೆ ಎಲ್ಲೆ ಇಲ್ಲ
ಸುನೀಲ್‌ ರಾಮಕೃಷ್ಣ ಲಾವರು ಆರ್ಟ್‌ ಸೊಸೈಟಿಯ ಟ್ರಸ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.