ADVERTISEMENT

ಟ್ಯಾಗೋರರು ಈಗೇಕೆ ನೆನಪಾಗುತ್ತಾರೆ?

ರಹಮತ್ ತರೀಕೆರೆ
Published 3 ಮೇ 2020, 3:35 IST
Last Updated 3 ಮೇ 2020, 3:35 IST
ರವೀಂದ್ರನಾಥ‌ ಟ್ಯಾಗೋರ್‌
ರವೀಂದ್ರನಾಥ‌ ಟ್ಯಾಗೋರ್‌   

ಬುದ್ಧರು ಕೇಳಿದ ಹತ್ತು ಪ್ರಶ್ನೆಗಳಿಗೆ ಬಾಲಕ ಸೋಪಾಕನು ನೀಡಿರುವ ಉತ್ತರಗಳು ’ಕುಮಾರ ಪನ್ಹ‘ ಎಂದೇ ಪ್ರಸಿದ್ಧವಾಗಿದೆ. ಕನ್ನಡದಲ್ಲಿ ‘ಆಸೆಯೇ ದುಃಖಕ್ಕೆ ಕಾರಣ’ ಎಂಬ ಪ್ರಸಿದ್ಧ ಸರಳ ಹೇಳಿಕೆಯೊಂದಿದೆ. ಅದು ಸಮರ್ಪಕವಾದುದಲ್ಲ. ಪಾಲಿಯ ತನ್ಹಾ ಎಂಬ ಪದಕ್ಕೆ ಆಸೆ ಸಂವಾದಿಯಲ್ಲ.

ಭಾರತೀಯ ಲೇಖಕರಲ್ಲಿ ಯಾಕೆ ರವೀಂದ್ರನಾಥ ಟ್ಯಾಗೋರ್‌ ಮತ್ತೆ ಮತ್ತೆ ನೆನಪಾಗುತ್ತಾರೆ? ಅವರ ಕಥೆ, ಕಾದಂಬರಿ, ಕವನಗಳಿಂದ? ಶಾಂತಿನಿಕೇತನದ ಪ್ರಯೋಗದಿಂದ? ಗಾಂಧಿ ಜತೆ ಮಾಡಿದ ನಿಷ್ಠುರ ವಾಗ್ವಾದದಿಂದ? ರಾಷ್ಟ್ರಗೀತೆ ರಚಿಸಿದ್ದರಿಂದ ಅಥವಾ ನೊಬೆಲ್ ಪ್ರಶಸ್ತಿಯಿಂದ? ಬಹುಶಃ ನೊಬೆಲ್, ಅವರ ಮಹತ್ವ ಮನಗಾಣಿಸುವಲ್ಲಿ ಅತ್ಯಂತ ಸಣ್ಣಸಂಗತಿ. ಟ್ಯಾಗೋರರು ಮಹತ್ವದವರಾಗಿರುವುದು ಅವರು ತಮ್ಮ ಸಾಹಿತ್ಯ ಮತ್ತು ಕೃತಿಗಳ ಮೂಲಕ ಮುಂದಿಟ್ಟ ಆದರ್ಶ ವ್ಯಕ್ತಿಯ, ಮಾನವೀಯ ಸಮಾಜದ ಹಾಗೂ ಘನತೆವೆತ್ತ ದೇಶದ ಪರಿಕಲ್ಪನೆಗಳಿಂದ.

ವಿವರಣೆಯನ್ನು ‘ಕಾಬೂಲಿವಾಲಾ' ಕಥೆಯಿಂದ ಶುರು ಮಾಡಬಹುದು. ಇದು ಕಲಾತ್ಮಕತೆಯ ದೃಷ್ಟಿಯಿಂದ ಅಷ್ಟೇನು ಪ್ರಸಿದ್ಧವಲ್ಲದ ಅಗದೀ ಸರಳ ಕಥೆ. ಕಥೆಯ ನಿರೂಪಕ ಒಬ್ಬ ಲೇಖಕ. ಅವನ ಪುಟ್ಟಮಗಳು ಮಿನಿ. ಕಲ್ಲಿಗೂ ಮುಟ್ಟಿ ಮಾತಾಡಿಸುವ ವಾಚಾಳಿ. ಇವಳೊಮ್ಮೆ ಒಣದ್ರಾಕ್ಷಿ, ಬಾದಾಮಿ ಮಾರುವ ಬೀದಿ ವ್ಯಾಪಾರಿ ಜತೆ ಸ್ನೇಹ ಬೆಳೆಸುತ್ತಾಳೆ. ಆತನಿಗೂ ಮಿನಿಯ ಮಡಿಲನ್ನು ಹಣ್ಣುಗಳಿಂದ ತುಂಬಿ ಹರಟೆ ಕೊಚ್ಚುವುದು ಇಷ್ಟ. ಒಮ್ಮೆ ಆತನಿಗೆ ಮೋಸ ಮಾಡಿದ ಗಿರಾಕಿಯೊಬ್ಬನ ಮೇಲೆ ಆಕ್ರಮಣ ಮಾಡಿದ ಕಾರಣಕ್ಕೆ, ಏಳು ವರ್ಷ ಜೈಲಾಗುತ್ತದೆ. ಕಥೆಯ ಕೊನೆಗೆ ಅವನು ಬಿಡುಗಡೆಯಾಗಿ ಕಾಬೂಲಿಗೆ ಹೊರಡುವ ಸನ್ನಿವೇಶ ಬರುತ್ತದೆ.

ADVERTISEMENT

ಹೋಗುವ ಮುನ್ನ ಆತ ತನ್ನ ಪುಟ್ಟಗೆಳತಿ ಮಿನಿಯನ್ನು ಕಾಣಬಯಸುತ್ತಾನೆ. ಆದರೆ, ಆ ದಿನ ಅವಳ ಮದುವೆ. ಮದುವೆ ಮನೆಗೆ ಜೈಲಿನಿಂದ ವ್ಯಕ್ತಿ ಬಂದಿದ್ದು ನಿರೂಪಕನಿಗೆ ಅಶುಭವೆನಿಸುತ್ತದೆ. ಮಿನಿಯನ್ನು ಭೇಟಿ ಮಾಡಿಸಲು ಆತ ಕಟುವಾಗಿ ನಿರಾಕರಿಸುತ್ತಾನೆ. ಆಗ ವ್ಯಾಪಾರಿ ಮೋರೆ ಸಪ್ಪಗಾಗಿಸಿಕೊಂಡು, ತಂದಿದ್ದ ಒಣಹಣ್ಣಿನ ಪೊಟ್ಟಣವನ್ನು ಆಕೆಗೆ ಮುಟ್ಟಿಸುವಂತೆ ಕೋರುತ್ತಾನೆ. ತೆರಳುವ ಮುನ್ನ ಕಿಸೆಯೊಳಗಿಂದ ಒಂದು ಕಾಗದದ ತುಂಡನ್ನು ತೆಗೆದು ತೋರಿಸುತ್ತಾನೆ. ಅದು ಮಸಿಗೈಯಿಂದ ಪಡೆದ ಹಸ್ತಮುದ್ರೆ. ಅವನ ಮಗಳದು. ಅವಳು ಮಿನಿಯಷ್ಟೆ ವಯಸ್ಸಿನವಳಂತೆ. ನಿರೂಪಕ ಹೇಳುತ್ತಾನೆ: ‘ಅದನ್ನು ನೋಡಿ ನನ್ನ ಕಣ್ಣು ಒದ್ದೆಯಾಯಿತು. ಅವನು ದ್ರಾಕ್ಷಿ, ಬಾದಾಮಿ ಮಾರುವ ಕಾಬೂಲಿ ಮತ್ತು ನಾನೊಬ್ಬ ಬಂಗಾಳಿ ಸದ್ಗೃಹಸ್ಥ ಎಂಬುದನ್ನು ಮರೆತುಬಿಟ್ಟೆ. ಅವನೂ ತಂದೆ ನಾನೂ ತಂದೆ. ಪರ್ವತದ ತಪ್ಪಲ ಮನೆಯಲ್ಲಿ ವಾಸಿಸುವ ಅವನ ಮಗಳ ಅಂಗೈಮುದ್ರೆ ನನ್ನ ಮಿನಿಯನ್ನೇ ನೆನಪು ಮಾಡಿಕೊಟ್ಟಿತು’.

ನಿರೂಪಕ ಮಿನಿಯನ್ನು ಕರೆಸುತ್ತಾನೆ. ಮದುಮಗಳಾಗಿ ಅಲಂಕೃತಳಾಗಿರುವ ಮಿನಿಯನ್ನು ನೋಡುತ್ತಲೇ ಕಾಬೂಲಿವಾಲಾ ಆನಂದಪಡುತ್ತಾನೆ. ಒಡನೆಯೆ ನಿಟ್ಟುಸಿರಿಟ್ಟು ಅನ್ಯಮನಸ್ಕನಾಗುತ್ತಾನೆ. ತನ್ನ ಮಗಳೂ ದೊಡ್ಡವಳಾಗಿರಬಹುದು ಎಂದು ಅವನಿಗೆ ಹೊಳೆಯುತ್ತದೆ. ಆಗ ನಿರೂಪಕ ನೂರು ರೂಪಾಯಿ ಕೊಟ್ಟು ‘ನಿನ್ನ ಮಗಳ ಬಳಿ ಹೋಗು. ನಿಮ್ಮ ಭೇಟಿಯಿಂದ ನಮ್ಮ ಮಿನಿಗೆ ಮಂಗಳವಾಗುತ್ತದೆ’ ಎನ್ನುತ್ತಾನೆ. ಲಗ್ನದ ಖರ್ಚಿನಲ್ಲಿ ನೂರು ರೂಪಾಯಿ ಖೋತಾ ಆಗಿದ್ದರಿಂದ ಮೆರವಣಿಗೆ ಬಾಜಾಬಜಂತ್ರಿ ರದ್ದು ಮಾಡಬೇಕಾಗುತ್ತದೆ. ಆದರೆ, ನಿರೂಪಕ ಮಿನಿಯ ಮದುವೆ ಪವಿತ್ರವಾಯಿತು’ ಎಂದು ಸಂತೃಪ್ತಿ ಅನುಭವಿಸುತ್ತಾನೆ.

ಕಥೆ ಏನನ್ನು ಧ್ವನಿಸುತ್ತಿದೆ? ವರ್ಗ, ಜಾತಿ, ಧರ್ಮ, ಭಾಷೆ, ರಾಷ್ಟ್ರೀಯತೆಯನ್ನು ಮೀರಿದಂತೆ ಮನುಷ್ಯರನ್ನು ಬೆಸೆಯುವ ಭಾವನೆಯ ತಂತುಗಳಿವೆ. ಅವನ್ನು ನಾವು ಸಾಯಗೊಡಬಾರದು. ನಾವು ‘ಅನ್ಯ’ರೆಂದು ಭಾವಿಸಿದವರಿಗೂ ಕುಟುಂಬವಿದೆ. ಮನುಷ್ಯ ಸಹಜ ಕಷ್ಟಸುಖಗಳಿವೆ. ಅದನ್ನು ಸಮಾನ ಮನಸ್ಕತೆಯಿಂದ ನೋಡಬೇಕು. ಹೀಗಲ್ಲದೆ ಹೋದರೆ ಮನಸ್ಸು ದ್ವೇಷಕ್ಕೆ ಹಿಂಸೆಗೆ ಜಾರಬಹುದು ಎಂಬ ಸತ್ಯವನ್ನು ತಾನೇ?

‘ಗೋರಾ’ ಕಾದಂಬರಿ ಈ ಸತ್ಯದ ಇನ್ನೊಂದು ಮಗ್ಗುಲನ್ನು ಕಾಣಿಸುತ್ತದೆ. ಅತಿಯಾದ ಧರ್ಮಶ್ರದ್ಧೆಯ ಮೂಲಕವೇ ರಾಷ್ಟ್ರ ಕಟ್ಟಬೇಕೆಂದು ಹೊರಡುವ ಯುವಕನ ಕಥೆಯಿದು. ಗೋರಾ ತನ್ನೀ ಸಂಕಲ್ಪಕ್ಕಾಗಿ ಕೆಲಸದಾಳು ಮುಟ್ಟಿದ ನೀರನ್ನೂ ಕುಡಿಯದಷ್ಟು ವ್ರತಶುದ್ಧತೆ ಆಚರಿಸುವವನು. ಕೊನೆಗೊಂದು ದಿನ ಅವನಿಗೆ ತಾನು ಗಲಭೆಗೆ ಸಿಕ್ಕ ಆಂಗ್ಲ ಯೂರೋಪಿನ ಬಿಳಿಯ ದಂಪತಿ ಬಿಟ್ಟುಹೋದ ಕೂಸೆಂದು ಗೊತ್ತಾಗುತ್ತದೆ. ತನ್ನ ಮೂಲವನ್ನು ಅಡಗಿಸಿ ಸಾಕಿದ ತಾಯಿಯ ಅಪಾರ ವಾತ್ಸಲ್ಯ ಅವನನ್ನು ಕರಗಿಸಿಬಿಡುತ್ತದೆ. ಅವನು ಕಟ್ಟಿಕೊಂಡಿದ್ದ ಧರ್ಮರಾಷ್ಟ್ರದ ಪರಿಕಲ್ಪನೆ ಕಳಚಿಬೀಳುತ್ತದೆ. ಈಗಾತ ತಾನು ತುಚ್ಛವಾಗಿ ನೋಡುತ್ತಿದ್ದ ಅಸ್ಪೃಶ್ಯ ಮಹಿಳೆಯ ಕೈಯಿಂದ ನೀರನ್ನು ಕುಡಿಯುತ್ತಾನೆ. ಅವನೀಗ ಕಾಣುವ ಮನುಷ್ಯರ, ಸಮಾಜದ ಹಾಗೂ ದೇಶದ ಕಲ್ಪನೆಯೇ ವಿಭಿನ್ನವಾಗುತ್ತದೆ. ಧರ್ಮ ಮತ್ತು ಜನಾಂಗದ ನೆಲೆಯ ಮೇಲೆ ಹುಟ್ಟುವ ರಾಷ್ಟ್ರದ ಕಲ್ಪನೆಗಳು, ಮನುಷ್ಯ ಸಂವೇದನೆಯನ್ನು ಕಳೆದುಹಾಕಬಹುದು ಎಂಬ ಆತಂಕ ಟ್ಯಾಗೋರರಿಗೆ ಉದ್ದಕ್ಕೂ ಇತ್ತು. `ಗೋರಾ’ ಧರ್ಮದ ಬುನಾದಿಯ ಮೇಲೆ ರಾಷ್ಟ್ರಕಟ್ಟುವ ಪರಿಕಲ್ಪನೆ ಪ್ರತಿಪಾದಿಸಿದ, ಬಂಕಿಮಚಂದ್ರರ ಆನಂದಮಠ’ ಕಾದಂಬರಿಗೆ ಕೊಟ್ಟ ಉತ್ತರದಂತೆಯೂ ಕಾಣುತ್ತದೆ.

ವಿಶ್ವಮಾನವತ್ವದ ನಿಲುವು

ಟ್ಯಾಗೋರರು ವಿಶ್ವಮಾನವತ್ವವು ರಾಷ್ಟ್ರವಾದಕ್ಕಿಂತ ಮಿಗಿಲಾದುದು ಎಂದು ಪರಿಭಾವಿಸಿದ್ದರು. ಅವರು ಶಾಂತಿನಿಕೇತನದಲ್ಲಿ ಕಟ್ಟಿದ ‘ವಿಶ್ವಭಾರತಿ’ ವಿಶ್ವವಿದ್ಯಾಲಯದ ಪರಿಕಲ್ಪನೆಯಲ್ಲೂ ಇದೇ ಚಿಂತನೆಯಿದೆ. ನೊಬೆಲ್ ಪ್ರಶಸ್ತಿ ಸ್ವೀಕಾರದ ಭಾಷಣದಲ್ಲಿಯೂ (1913) ಇದೇ ಆಶಯವಿದೆ. ಹಾಗೆ ಕಂಡರೆ ಟ್ಯಾಗೋರರ ಈ ವಿಶ್ವಮಾನವತ್ವದ ಪರಿಕಲ್ಪನೆ ಶುರುವಾಗುವುದು ಜನಗಣಮನ’ದಿಂದ (1911). ನಾವು ರಾಷ್ಟ್ರಗೀತೆಯಾಗಿ ಹಾಡುವುದು ಒಂದೇ ನುಡಿ. ಹಾಡದೆ ಕೈಬಿಟ್ಟಿರುವ ಉಳಿದ ನಾಲ್ಕು ನುಡಿಗಳಲ್ಲಿ ಅವರ ಗಹನವಾದ ಚಿಂತನೆಗಳಿವೆ. ಇದರಲ್ಲೆಲ್ಲೂ ಚರಿತ್ರೆಯ ರಾಜರ ಪ್ರಸ್ತಾಪವಿಲ್ಲ. ಗತಕಾಲದ ರಾಜಕೀಯ ಯುದ್ಧಗಳ ಮೂಲಕ ಕಟ್ಟಿಕೊಳ್ಳುವ ಚರಿತ್ರೆಯು ವರ್ತಮಾನವನ್ನು ಅರಿಯಲು ಹಾಗೂ ಭವಿಷ್ಯ ಕಟ್ಟಲು ತೊಡಕೆಂದೇ ಟ್ಯಾಗೋರರು ತಿಳಿದಿದ್ದರು. (ಕನ್ನಡದಲ್ಲಿ ಹೀಗೆ ತಮ್ಮ ಕಾವ್ಯವನ್ನು ರಾಜಕೀಯ ಚರಿತ್ರೆಯ ಭಾರದಿಂದ ಮುಕ್ತಗೊಳಿಸಿಕೊಂಡವರು ಬೇಂದ್ರೆ.)

‘ಜನಗಣಮನ’ದಲ್ಲಿ ಯಾವ ಜಾತಿ–ಧರ್ಮಗಳಿಗೂ ಸೇರದ ಭಾರತದ ನದಿ, ಬೆಟ್ಟ, ಸಮುದ್ರ, ಕಾಡುಗಳ ಉಲ್ಲೇಖವಿದೆ. ಭಾಷಾವಾರು ಪ್ರಾಂತ್ಯಗಳ ಉಲ್ಲೇಖವಿದೆ; ಸಿಖ್, ಬೌದ್ಧ ಒಳಗೊಂಡಂತೆ ಭಾರತದ ಸರ್ವಧರ್ಮಗಳ ಪ್ರಸ್ತಾಪವಿದೆ. (ನಮ್ಮ ನಾಡಗೀತೆಯಲ್ಲಿರುವ `ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕರ ಜೈನರುದ್ಯಾನ’ ಚರಣವನ್ನು ನೆನಪಿಸಿಕೊಳ್ಳಬಹುದು); ಪೂರ್ವ-ಪಶ್ಚಿಮಗಳು ಅರ್ಥಾತ್ ಭಾರತ ಮತ್ತು ಯೂರೋಪ್‌ ಸಾಂಸ್ಕೃತಿಕ ಕಾರಣಕ್ಕಾಗಿ ಒಗ್ಗೂಡುವ ಮಾತಿದೆ. (ಇದು ಬಿ.ಎಂ.ಶ್ರೀಯವರ ‘ಇವಳ ತೊಡಿಗೆ ಅವಳಿಗಿಟ್ಟು ಹಾಡಬಯಸಿದೆ’ ಆಶಯವನ್ನೇ ಹೋಲುವುದು); ಪ್ರೇಮದಿಂದ ದೇಶದ ಜನರೆಲ್ಲ ಒಂದಾಗಿ ಬದುಕುವ ಆಶಯವಿದೆ; ಭಯ -ದಾರಿದ್ರ್ಯದಿಂದ ನಮ್ಮನ್ನುಳಿಸು ಎಂಬ ಆರ್ತ ಪ್ರಾರ್ಥನೆಯಿದೆ. ಕೊನೆಯಲ್ಲಿ ಮೂಡಣ ಬೆಟ್ಟಗಳ ಮೇಲೆ ಸೂರ್ಯ ಹುಟ್ಟುತ್ತ ಹಕ್ಕಿಗಳು ಹಾಡುವ ಮತ್ತು ತಂಗಾಳಿ ಬೀಸುವ ವರ್ಣನೆಯಿದೆ; ಮಲಗಿರುವ ಭಾರತ ಎಚ್ಚರಗೊಳ್ಳುತ್ತಿದೆ ಎನ್ನುವ ಹೇಳಿಕೆಯ ಮೂಲಕ ಗೀತೆ ಮುಗಿಯುತ್ತದೆ.

‘ಗೀತಾಂಜಲಿ’ ಸಂಕಲನದಲ್ಲಿರುವ ‘where the mind is without fear’ ಎಂಬ ಪ್ರಸಿದ್ಧ ಕವನವು ಜನಗಣಮನದ ಇನ್ನೊಂದು ಪ್ರತಿಬಿಂಬ. ಅಹಂಕಾರವಿಲ್ಲದ, ಆತ್ಮವಿಶ್ವಾಸವನ್ನೂ ಕೀಳರಿಮೆಯಿಲ್ಲದ ವಿನಯವನ್ನೂ ಮಂಡಿಸುವ ನಾಗರಿಕ ದೇಶವೊಂದರ ಪ್ರಣಾಳಿಕೆ ಎಂದು ಇದನ್ನು ಕರೆಯಬಹುದು. ‘ಎಲ್ಲಿ ಮನಸ್ಸು ಭೀತಿಗೆ ಒಳಗಾಗದೊ, ಎಲ್ಲಿ ಜ್ಞಾನವು ಮುಕ್ತವಾಗಿರುತ್ತದೆಯೊ, ಎಲ್ಲಿ ಸಂಕುಚಿತ ಗೋಡೆಗಳಿಂದ ಲೋಕ ಛಿದ್ರವಾಗುವುದಿಲ್ಲವೊ, ಎಲ್ಲಿ ಸತ್ಯದಾಳದಿಂದ ಮಾತುಗಳು ಹೊಮ್ಮುವವೊ, ಎಲ್ಲಿ ವೈಚಾರಿಕತೆಯ ಝರಿಯು ಗೊಡ್ಡು ಸಂಪ್ರದಾಯಗಳ ಮರುಭೂಮಿಯಲ್ಲಿ ಹಾದಿತಪ್ಪಿ ಇಂಗುವುದಿಲ್ಲವೊ, ಅಂಥ ಸ್ವಾತಂತ್ರ್ಯದ ಸ್ವರ್ಗದತ್ತ ಚಲಿಸಲು ನನ್ನ ದೇಶ ಎಚ್ಚರಗೊಳ್ಳಲಿ’ ಎಂದು ಕವಿತೆ ನಾಯಕ ಪ್ರಾರ್ಥಿಸುತ್ತಾನೆ. ಜ್ಞಾನ ಮತ್ತು ವಿಚಾರಪ್ರಧಾನ ಸಮಾಜವೊಂದರ ಕನಸು ಇಲ್ಲಿದೆ. ಇದು ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಭಾಷಣವನ್ನು ನೆನಪಿಸುತ್ತದೆ.

ಭಾರತದ ಭವಿಷ್ಯದ ಕನಸು

ದೇಶಕ್ಕೆ ಬಿಡುಗಡೆ ಸಿಗುವ ಮೊದಲೇ, ನಮ್ಮ ದಾರ್ಶನಿಕ ಕವಿಗಳು ಭವಿಷ್ಯದ ಭಾರತ ಹೇಗಿರಬೇಕೆಂಬ ಕನಸನ್ನು ಕಂಡರು. ಅವರ ಕನಸಿನಲ್ಲಿ ಸ್ವತಂತ್ರಗೊಂಡ ದೇಶದಲ್ಲಿ ನೆಲೆಗೊಳ್ಳಬೇಕಾದ ಡೆಮಾಕ್ರಸಿಯು ಹೇಗಿರಬೇಕೆಂಬ ನೋಟವೂ ಇತ್ತು. ಪ್ರಜ್ಞಾವಂತರಾದವರು ಹೊಸ ಸಮಾಜ ಕಟ್ಟುವ ಹಾದಿಯಲ್ಲಿ ತಮ್ಮ ದನಿಗೆ ಯಾರೂ ಕಿವಿಗೊಡದಿದ್ದರೂ ಚಿಂತೆಯಿಲ್ಲ, ಒಬ್ಬರೇ ನಡೆಯುವ ಹಠ ಮಾಡಬೇಕು ಎಂದು ಟ್ಯಾಗೋರರು ಹೇಳುತ್ತಿದ್ದರು. ಈ ಸಂದೇಶವು ಅವರ ಸುಪ್ರಸಿದ್ಧವಾದ ‘ಎಕಲ ಚಲೋರೆ’ (1905) ಹಾಡಿನಲ್ಲಿದೆ. ಅದರಲ್ಲಿ ಯಾವಾಗ ಎಲ್ಲರೂ ಸತ್ಯ ಹೇಳಲು ಅಂಜಿ ಬಾಯಿ ಮುಚ್ಚಿಕೊಂಡಿರುತ್ತಾರೊ, ಆಗ ನೀನು ಒಂಟಿಯಾದರೂ ಸರಿ ಬಾಯಿತೆರೆದು ಮಾತಾಡು’ ಎಂಬ ಮಾತೂ ಇದೆ. ಬ್ರಿಟಿಷ್‌ ಪ್ರಭುತ್ವದ ಎದುರು ಜನರಲ್ಲಿ ಧೈರ್ಯ, ಸ್ಫೂರ್ತಿ ತುಂಬಲೆಂದೇ ಅವರು ಇದನ್ನು ಬರೆದಂತಿದೆ. ಬದುಕಿನಲ್ಲಿ ದಿಟ್ಟತನವು ಎಷ್ಟು ಮುಖ್ಯವೊ ಕಡೆಗಣಿತರ ಬಗ್ಗೆ ತೋರುವ ಕಾಳಜಿಯೂ ಅಷ್ಟೇ ಮುಖ್ಯ.

ಬುದ್ಧನ ಕರುಣೆಯನ್ನು ನೆನಪಿಸುವ ಈ ಬಾಳಮೌಲ್ಯವನ್ನು ಟ್ಯಾಗೋರರ ‘ಕಾವ್ಯದ ಅನಾದರ’ ಎಂಬ ಲೇಖನದಲ್ಲಿ ಕಾಣಬಹುದು. ವಾಲ್ಮೀಕಿಯ ರಾಮಾಯಣ, ಬಾಣನ ‘ಕಾದಂಬರಿ’, ಕಾಳಿದಾಸ ‘ಶಾಕುಂತಲಾ’ ಕುರಿತ ವಿಮರ್ಶೆಯಿದು. ನಾಯಕ-ನಾಯಕಿ ಕೇಂದ್ರಿತವಾದ ಕಾವ್ಯಗಳಲ್ಲಿ ಸಾಮಾನ್ಯ ಜನರ ಬದುಕು-ಭಾವನೆಗಳನ್ನು ಕಾಣಿಸಲು ಅಭಿಜಾತ ಕವಿಗಳು ಯಾಕೆ ಮರೆಯುತ್ತಾರೆ ಎಂಬ ಪ್ರಶ್ನೆಯನ್ನು ಈ ಲೇಖನ ಎತ್ತುತ್ತದೆ. ಲಕ್ಷ್ಮಣನ ಹೆಂಡತಿ ಊರ್ಮಿಳೆ, ಶಾಕುಂತಲೆಯ ಸಖಿಯರಾದ ಪ್ರಿಯಂವದಾ-ಅನಸೂಯೆ, ಕಾದಂಬರಿಯ ಸಖಿಯಾದ ಪತ್ರಲೇಖೆಯರೂ ಮನುಷ್ಯರೇ. ಆದರೆ, ಇವರು ತಮ್ಮ ಪ್ರಿಯರಿಂದ ಅಗಲಿದ ಬದುಕನ್ನು ಹೇಗೆ ಕಳೆದರು ಎಂಬುದನ್ನು ಚಿತ್ರಿಸಲು ಕವಿಗಳು ಲಕ್ಷ್ಯಗೊಡಲಿಲ್ಲ. ಇದರಿಂದ ಅವರ ಕಾವ್ಯಗಳ ಮಾನವೀಯ ಮಿಡಿತಕ್ಕೆ ತುಸು ಊನವಾಯಿತು ಎಂದು ಲೇಖನ ಪ್ರತಿಪಾದಿಸುತ್ತದೆ. ಈ ಚಿಂತನೆಯೇ ಕುವೆಂಪು, ‘ರಾಮಾಯಣ ದರ್ಶನ’ದಲ್ಲಿ ಊರ್ಮಿಳೆಯ ಪಾತ್ರವನ್ನು ಮುತುವರ್ಜಿಯಿಂದ ಚಿತ್ರಿಸಲು ಕಾರಣವಾಯಿತು. ನಾಯಕರು ಮಾತ್ರ ಮುಖ್ಯರಲ್ಲ. ಲೋಕದ ಕಣ್ಣಲ್ಲಿ ಅಲಕ್ಷಿತರಾಗುವ ಸಾಮಾನ್ಯ ಎನಿಸಿಕೊಂಡವರ ಬದುಕೂ ಅಷ್ಟೇ ಮುಖ್ಯ ಎಂಬುದು ಇಲ್ಲಿನ ಸಮಾಜವಾದಿ ಗ್ರಹಿಕೆ.

ಟಾಲ್‍ಸ್ಟಾಯ್ ಕೂಡ ಸಾಮಾನ್ಯರ ಕಥನವನ್ನು ಬರೆದವರು. ‘ಶ್ರೀಸಾಮಾನ್ಯನೇ ಭಗವದ್ ಮಾನ್ಯಂ’ ಎಂದ ಕುವೆಂಪು, ಏಕನಾಯಕತ್ವವಿಲ್ಲದ ‘ಇಲ್ಲಿ ಯಾರೂ ಅಮುಖ್ಯರಲ್ಲ’ ಎಂಬ ನಿಲುವಿನ ‘ಮದುಮಗಳು’ ಬರೆದರು. ಇವರೆಲ್ಲರೂ ಧೀಮಂತ ಸ್ತ್ರೀಯರನ್ನು ತಮ್ಮ ಕೃತಿಗಳಲ್ಲಿ ಚಿತ್ರಿಸಿದರು. ಸ್ತ್ರೀಯರನ್ನು ನಿಕೃಷ್ಟವಾಗಿ ಚಿತ್ರಿಸುವ ಲೇಖಕರ ಎದುರು ಇವರು ದೊಡ್ಡವರಾಗಿ ಕಾಣುವುದು ಇಲ್ಲೇ. ಮಹಿಳೆಯರ ಸಾಮಾನ್ಯರ ಬದುಕನ್ನು ಶ್ರದ್ಧೆಯಿಂದ ಚಿತ್ರಿಸುವುದಕ್ಕೂ ಧರ್ಮಾಧರಿತ ಗಂಡುಕೇಂದ್ರಿತ ರಾಷ್ಟ್ರವಾದಗಳನ್ನು ನಿರಾಕರಿಸುವುದಕ್ಕೂ ಸಂಬಂಧವಿದೆ.

ಟ್ಯಾಗೋರರು ಕೇವಲ ಆದರ್ಶಗಳನ್ನು ತಮ್ಮ ಬರೆಹಗಳಲ್ಲಿ ಸಂದೇಶಗಳಂತೆ ಸಾರಿದವರಲ್ಲ; ಅದನ್ನು ಭಾರತೀಯರ, ಜನಸಾಮಾನ್ಯರ ಬದುಕಿನಲ್ಲಿ ಶೋಧಿಸಿದವರು; ತಮ್ಮ ಸಮಕಾಲೀನರ ಜತೆ ವಾಗ್ವಾದ ಮಾಡಿದವರು. ಅವರು ಸ್ವರಾಜ್ಯ ಪರಿಕಲ್ಪನೆ ಕುರಿತು ಗಾಂಧಿಯವರ ಜತೆ ಮಾಡಿದ ಚಾರಿತ್ರಿಕ ಮಹತ್ವದ ವಾಗ್ವಾದವನ್ನು ನೆನೆಯಬೇಕು. ಗಾಂಧಿ -ಅಂಬೇಡ್ಕರ್ ನಡುವೆ ನಡೆದ ವಾಗ್ವಾದವನ್ನೂ ಸ್ಮರಿಸಬೇಕು. ಸಾತ್ವಿಕ ಆಕ್ರೋಶ ತುಂಬಿದ ಸೈದ್ಧಾಂತಿಕ ಕದನಗಳಿವು. ಪರಸ್ಪರ ವ್ಯಕ್ತಿಗೌರವ ಇಟ್ಟುಕೊಂಡೇ ದೇಶದ ಮತ್ತು ಸಮಾಜದ ಹಿತಕ್ಕಾಗಿ ಹರಿತವಾದ ಭಿನ್ನಮತಗಳನ್ನು ಹಂಚಿಕೊಳ್ಳುವ ಮೂಲಕ, ನಮ್ಮೀ ಹಿರೀಕರು ಆಧುನಿಕ ಭಾರತಕ್ಕೆ ಭದ್ರವಾದ ಬುನಾದಿ ಹಾಕಿದರು. ಕಂಪನಶೀಲವಾದ ಡೆಮಾಕ್ರಸಿಯನ್ನಾಗಲಿ, ಸಮಾಜವನ್ನಾಗಲಿ, ವ್ಯಕ್ತಿತ್ವಗಳನ್ನಾಗಲಿ ಜೀವಂತವಿಡುವುದು ವಿವಾದಗಳಲ್ಲ, ಅರ್ಥಪೂರ್ಣ ವಾಗ್ವಾದ-ಸಂವಾದಗಳು.

ಟ್ಯಾಗೋರರು ಗಾಂಧಿ- ಅಂಬೇಡ್ಕರ್ ಅವರಷ್ಟು ಸಾರ್ವಜನಿಕ ವ್ಯಕ್ತಿಯಲ್ಲ. ರಾಜಕಾರಣಿಯೂ ಆಗಿದ್ದವರಲ್ಲ. ಮೂಲತಃ ಅವರೊಬ್ಬ ಕಲಾವಿದರು. ಬರಹ- ಸಂಗೀತ -ಚಿತ್ರ ಈ ಮೂರೂ ಕಲಾಪ್ರಕಾರಗಳಲ್ಲಿ ಅವರಿಗೆ ಪ್ರವೇಶವಿತ್ತು. ಈ ಕಲೆಗಳ ಮೂಲಕ ಅವರು ಮಾನವಧರ್ಮವನ್ನು ಹುಡುಕಿದರು. ತರತಮಗಳು ಇರುವ ಸಮಾಜದಲ್ಲಿ ಕಲೆಯು ಪ್ರತಿಪಕ್ಷವಾಗಿ ಕೆಲಸ ಮಾಡುತ್ತದೆ; ರಾಜಕಾರಣ, ದೇಶ ನಿರ್ಮಾಣ, ಆರ್ಥಿಕತೆ, ಸಮಾಜ ವ್ಯವಸ್ಥೆ ಇತ್ಯಾದಿ ಎಲ್ಲಾ ಬೃಹತ್ ಪರಿಕಲ್ಪನೆಗಳನ್ನು ಅಧಿಕಾರವಿಲ್ಲದ ಮನುಷ್ಯರ ಕಣ್ಣಕೋನದಿಂದ ಅಳೆಯುತ್ತದೆ. ಮನುಷ್ಯತ್ವದ ಪ್ರಶ್ನೆ ಬಂದಾಗ ಧರ್ಮ- ದೇಶಗಳ ಪ್ರಶ್ನೆಯನ್ನೂ ಬದಿಗಿಡುತ್ತದೆ. ಟ್ಯಾಗೋರ್‌, ಟಾಲ್‍ಸ್ಟಾಯ್, ಕುವೆಂಪು, ವೈಕಂ ಬಶೀರ್, ಪ್ರೇಮಚಂದ್, ಮಾರ್ಕ್ವೆಜ್ ಮುಂತಾದ ಜಗತ್ತಿನ ಶ್ರೇಷ್ಠ ಲೇಖಕರು ಪ್ರತಿಪಾದಿಸಿದ್ದು ಇಂಥ ಪರ್ಯಾಯ ಮನುಷ್ಯ ಧರ್ಮವನ್ನು. ಇಂಥವರನ್ನು ನೆನೆಯುವುದು ಎಂದರೆ, ಈ ಮಾನುಷ ಧರ್ಮದ ಹಾದಿಯಲ್ಲಿ ನಾವೆಲ್ಲಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.