ADVERTISEMENT

ಕಲಘಟಗಿ ‘ಬಣ್ಣದ ತೊಟ್ಟಿಲಿಗೆ’ ಮರು ಜೀವ!

ವೈ.ಜಿ.ಭಗವತಿ, ಕಲಘಟಗಿ
Published 18 ಡಿಸೆಂಬರ್ 2018, 19:33 IST
Last Updated 18 ಡಿಸೆಂಬರ್ 2018, 19:33 IST
ತೊಟ್ಟಿಲುತಯಾರಿಕಯಲ್ಲಿ ನಿರತ ಕಲಘಟಗಿಯ ಗೋಲಪ್ಪನ ಓಣಿಯ ಮಾರುತಿ ಬಡಿಗೇರ
ತೊಟ್ಟಿಲುತಯಾರಿಕಯಲ್ಲಿ ನಿರತ ಕಲಘಟಗಿಯ ಗೋಲಪ್ಪನ ಓಣಿಯ ಮಾರುತಿ ಬಡಿಗೇರ   

ಇತ್ತೀಚಿಗೆ ಒಂದು ಸಂಜೆ ‘ಸರ್ ಮತ್ತೊಂದು ಬಣ್ಣದ ತೊಟ್ಟಿಲು ಮಾಡಿದ್ದೇನೆ ಬಂದು ನೋಡಿಕೊಂಡು ಹೋಗಿ’ ಎಂದು ಕರೆ ಮಾಡಿ ಕರೆದಾಗ, ಖುಶಿಯಿಂದ ಬೈಕ್‌ ಏರಿ ಹೋದೆ. ಮನೆಯ ಪಡಸಾಲಿಯಲ್ಲಿ ಅತ್ಯಾಕರ್ಷಕ ಬಣ್ಣದಿಂದ, ಚಿತ್ರಾವಳಿಯಿಂದ ಮೆರಗುಗೊಂಡಿದ್ದ ತೊಟ್ಟಿಲು ನೋಡಿ ಹೆಮ್ಮೆ ಎನಿಸಿತು. ಈಗಾಗಲೇ ಇವರು ತಯಾರಿಸಿದ ಬಹಳಷ್ಟು ಬಣ್ಣದ ತೊಟ್ಟಲುಗಳು ರಾಜ್ಯದಾಚೆಯವರೆಗೂ ಮಾರಾಟ ಕಂಡಿವೆ. ತೊಟ್ಟಿಲಿನ ಅಳತೆ ಗಮನಿಸಿದಾಗ 21 ಇಂಚು ಎತ್ತರ, ಅಷ್ಟೇ ಪ್ರಮಾಣದ ಅಗಲ, 31ಇಂಚು ಉದ್ದದ ತೊಟ್ಟಿಲನ್ನು 5 ಫೂಟ್ ಎತ್ತರ, 4 ಫೂಟ್ ಅಗಲದ ಸ್ಟ್ಯಾಂಡಿಗೆ ಅಳವಡಿಸಲಾಗಿತ್ತು. ನೋಡಲು ಸುಂದರವಾದ ಅದ್ಭುತ ಕಲಾಕೃತಿ. ತೊಟ್ಟಿಲಿನ ಸುತ್ತಲೂ ನಾಲ್ಕು ಭಾಗಗಳಲ್ಲಿ ಕೃಷ್ಣಾವತಾರದ ಬಾಲ ಕೃಷ್ಣನನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ನದಿಯಿಂದ ದಾಟುವ, ಬೆಣ್ಣಿ ಕದಿಯುವ ಕೃಷ್ಣ, ಕಾಳಿಂಗ ಮರ್ಧನ, ಗೋವರ್ಧನ ಗಿರಿಧಾರಿ, ಗುರುಕುಲದಲ್ಲಿ ಅಧ್ಯಯನ, ಗೆಳೆಯ ಸುಧಾಮ ಭೇಟಿ ಹೀಗೆ ಹಲವು ಪ್ರಸಂಗಗಳ ದೃಶ್ಯಗಳನ್ನು ಬಿಡಿಸಲಾಗಿತ್ತು. ಬಳ್ಳಿಗಳು, ಕಮಾನುಗಳು, ಮಿಂಚುವ ಆ ಬಣ್ಣದ ಕುಶಲತೆಗಳು ತೊಟ್ಟಿಲಿನ ಸೊಬಗು ಹೆಚ್ಚಿಸಿದ್ದವು

ನಿಮ್ಮ ಮನೆತನದಲ್ಲಿ ಯಾರ್‍ಯಾರು ಈ ಕಲೆ ಬೆಳೆಸಿಕೊಂಡಿದ್ದರು’ ಎನ್ನುವ ನನ್ನ ಪ್ರಶ್ನೆಗೆ "ಸರ್ ನಮ್ಮ ಮುತ್ತಜ್ಜನ ಕಾಲದಿಂದಲೂ ಬಣ್ಣದ ತೊಟ್ಟಿಲು ಮಾಡುವ ಪರಂಪರೆ ಇದೆ. ಬಹುಮುಖ್ಯವಾಗಿ ಮಲ್ಲೇಶಪ್ಪ ಬಡಿಗೇರ ಅಜ್ಜಾ ಹಾಗೂ ಓಂಕಾರೆಪ್ಪ ಬಡಿಗೇರ ತುಂಬಾ ದೊಡ್ಡ ಕಲಾವಿದರು. ಇದು ನಾಲ್ಕು ತಲೆಮಾರಿನಿಂದ ಬಂದ ಕಲೆಯಾಗಿದೆ. ಓಂಕಾರಜ್ಜ ನೂರಾರು ಬಣ್ಣದ ತೊಟ್ಟಿಲುಗಳನ್ನು ಮಾಡಿ ಕೊಟ್ಟ ದಾಖಲೆ ಇದೆ. ನಾನು ಬಾಲ್ಯದಲ್ಲಿ ಓಂಕಾರಜ್ಜ ತೊಟ್ಟಿಲು ಮಾಡುವಾಗ ಅತೀ ಶ್ರದ್ಧೆಯಿಂದ ಗಮನಿಸುತ್ತಿದ್ದರಿಂದ ನನಗೂ ಈ ಬಣ್ಣದ ವ್ಯಾಮೋಹದ ಕಲೆ ಒಲಿದು ಬಂತು’ ಎನ್ನುವ ಮಾರುತಿ ಅವರು ಪಿಯುಸಿ ವರೆಗೆ ಶಿಕ್ಷಣ ಪಡೆದಿದ್ದಾರೆ. ಯಾವುದೇ ವೃತ್ತಿಪರ ಚಿತ್ರಕಲೆಯ ತರಬೇತಿಯನ್ನು ಪಡೆದಿಲ್ಲ.

‘ನಮ್ಮಲ್ಲಿ ಈಗ ಈ ಕಲೆಯನ್ನು ಯಾರು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಯಾಕೆಂದರೆ ಇದರಿಂದಲೇ ಬದುಕು ನಡೆಸುವುದು ಕಷ್ಟ. ಸ್ಟ್ಯಾಂಡ್ ಸೇರಿ ಒಂದು ತೊಟ್ಟಿಲು ತಯಾರಿಸಲು ಕನಿಷ್ಠ ಎರಡು ತಿಂಗಳು ಸಮಯ ತೆಗೆದುಕೊಳ್ಳುತ್ತಾರೆ. ಕೇವಲ ತೊಟ್ಟಿಲಾದರೆ ಒಂದು ತಿಂಗಳು ಸಾಕಾಗುತ್ತದೆ. ಸಾಮಾನ್ಯವಾಗಿ ತೊಟ್ಟಿಲನ್ನು ತೆಗೆದುಕೊಳ್ಳುವವರು ಉಳ್ಳವರೇ ಆಗಿರುತ್ತಾರೆ. ನಾಜೂಕಿನ ಹಾಗೂ ಉತ್ತಮ ಗುಣಮಟ್ಟದ ತೊಟ್ಟಿಲು ಕೊಡಬೇಕಾಗುತ್ತದೆ. ಕೆಲಸ ಬಹಳ. ಆದರೆ ಬರುವ ಆದಾಯ ಕಡಿಮೆ. ಹೀಗಾಗಿ ನಮ್ಮ ಜನ ತೊಟ್ಟಿಲು ಮಾಡಲು ಮನಸ್ಸು ಮಾಡುವುದಿಲ್ಲಾ, ಖಾಯಂ ಆಗಿ ತೊಟ್ಟಿಲು ಬೇಡಿಕೆ ಬರುವುದಿಲ್ಲ. ಇದರ ಮೇಲೆ ನಮ್ಮ ಜೀವನ ನಡೆಯುವುದು ಅಸಾಧ್ಯ’ ಎನ್ನುತ್ತಾರೆ.

ADVERTISEMENT

ಸರ್ಕಾರಿ ಇಲಾಖಾ ಬೋರ್ಡ್, ಶಾಲೆಗಳಲ್ಲಿ ಚಿತ್ರ, ಗಾದೆ ಮಾತು ಬರಹ, ಬೋರ್ಡ್ ಬರೆಯುವುದು ಇದರ ಜೊತೆಯಲ್ಲಿ ವರ್ಷವಿಡಿ ದೇವರ ಮಂಟಪ, ದೇವರ ಪಲ್ಲಕ್ಕಿ, ಗ್ರಾಮದೇವಿ ಮೂರ್ತಿ ಕೆತ್ತುವ ಬಣ್ಣ ಬಳಿಯುವ, ಮೊಹರಂ ಹುಲಿವೇಷಕ್ಕೆ ಬಣ್ಣ ಹಚ್ಚುವ, ಗುಡಿ ಗೋಪುರಗಳಿಗೆ ಚಿತ್ರ ಬಿಡಿಸುವ, ಗಣಪತಿ ಹಬ್ಬದಲ್ಲಿ ಗಣಪತಿಗಳ ನಿರ್ಮಾಣ, ಹೋಳಿಹುಣ್ಣಿಮೆಯ ಕಾಮಣ್ಣನಿಗೆ ಬಣ್ಣ, ಆಧುನಿಕತೆಯ ಕಟ್ಟಿಗೆ ಪರಿಕರಗಳಾದ ಪಲ್ಲಂಗ , ಸೋಫಾ ಸೆಟ್, ಡೈನಿಂಗ್ ಸೆಟ್‌ಗಳನ್ನು ಬೇಡಿಕೆ ತಕ್ಕಂತೆ ತಯಾರಿ ಕೊಡುವ ಹೀಗೆ ಹತ್ತಾರು ಕೆಲಸಗಳಲ್ಲಿ ಸದಾ ತೊಡಗಿರುವ ಮಾರುತಿ ಬಡಿಗೇರ ಅವರು ಬಣ್ಣದ ತೊಟ್ಟಿಲನ್ನು ಆರ್ಥಿಕ ಆಸರೆಗೆಂದು ನಿರ್ಮಿಸುತ್ತಿಲ್ಲ. ಪರಂಪರಾಗತವಾಗಿ ಬಂದ ಈ ಕಲೆ ನಶಿಸಿ ಹೋಗಬಾರದೆಂಬ ಕಳಕಳಿ ಅವರದಾಗಿದೆ.

ಸಂಜೆ ಸಮಯದಲ್ಲಿ ಮಾತ್ರ ತೊಟ್ಟಿಲು ಕೆಲಸಕ್ಕೆ ಕೈ ಹಾಕುತ್ತೇನೆ, ತೊಟ್ಟಿಲಿನ ಕಟ್ಟಿಗೆಗಳಿಗೆ ಪಾಲಿಶ್ ಮಾಡಲು ಬಣ್ಣ ಬಳಿಯಲು ಮನೆಯಲ್ಲಿ ತಾಯಿ ಪ್ರೇಮವ್ವ, ಪತ್ನಿ ನಾಗರತ್ನಾ, ಮಗಳು ರೋಹಿಣಿ ಸಹಕರಿಸುತ್ತಾರೆ. ಈ ತೊಟ್ಟಲು ತಯಾರಿಸಲು ಸಾಗವಾನಿ ಕಟ್ಟಿಗೆಯೇ ಬೇಕು ಉಳಿದ ಕಟ್ಟಿಗೆಯಿಂದಾದರೆ ತೊಟ್ಟಿಲು ಬಹುಕಾಲ ಬಾಳಿಕೆ ಬಾರದು, ಅಷ್ಟೇ ಅಲ್ಲ, ಕಟ್ಟಿಗೆ ಸೀಳುವಿಕೆ, ಬೆಂಡಾಗಿ ತೊಟ್ಟಿಲ ಅಂದ ಹಾಳಾಗುತ್ತದೆ ಎನ್ನುತ್ತಾರೆ.

ನೈಸರ್ಗಿಕ ಬಣ್ಣಗಳನ್ನು ಅರಗಿನಲ್ಲಿ ತಯಾರಿಸಿ ತೊಟ್ಟಿಲಿಗೆ ಬಣ್ಣ ಬಳಿಯಲಾಗುತ್ತದೆ, ತೊಟ್ಟಿಲು ತಯಾರಾದ ಮೇಲೆ ಗಿರಾಕಿಗಳ ಮನೋಭಿಲಾಷೆಗೆ ತಕ್ಕಂತೆ ಚಿತ್ರಾವಳಿ ಬಿಡಿಸುತ್ತೇವೆ. ರಾಮಾಯಣ ಮಹಾಭಾರತ, ಬುದ್ಧ, ಬಸವ ಕಥಾವಳಿಗಳನ್ನು ಬಿಡಿಸುತ್ತೇವೆ. ಈಗ ಕೃಷ್ಣಾವತಾರದ ಚಿತ್ರಾವಳಿಗೆ ಬಹಳ ಬೇಡಿಕೆ ಇದೆ. ಮುಸಲ್ಮಾನರಿಗೆ ಮಕ್ಕಾ ಮದಿನಾ ಹಾಗೂ ಕ್ರೈಸ್ತರಿಗೆ ಏಸುಕ್ರಿಸ್ತನ ಕಥಾವಳಿ ಬಿಡಿಸಿಕೊಟ್ಟಿದ್ದೇವೆ. ಈ ತೊಟ್ಟಿಲುಗಳು 150 ರಿಂದ 200 ವರ್ಷಗಳ ವರೆಗೂ ಬಾಳಿಕೆ ಬರುತ್ತವೆ. ಮೊಮ್ಮಗ, ಅಪ್ಪ, ಅಜ್ಜ ಎಲ್ಲರೂ ಒಂದೇ ತೊಟ್ಟಿಲು ಬಳಸಿದವರೂ ಇದ್ದಾರೆ. ತೊಟ್ಟಿಲುಗಳ ದರ 20 ಸಾವಿರದಿಂದ ಒಂದು ಲಕ್ಷದವರೆಗೂ ಇದ್ದು, ಗ್ರಾಹಕರ ಆಸಕ್ತಿ, ತೊಟ್ಟಿಲಿನ ಗಾತ, ಅರಗಿನ ಬಣ್ಣದ ರಚನೆ ಇವುಗಳ ಮೇಲೆ ದರ ನಿಗದಿಯಾಗುತ್ತದೆ.

ಈ ತೊಟ್ಟಿಲುಗಾಗಿ ಬಳಸುವ ಕಟ್ಟಿಗೆ, ಬಣ್ಣ, ಹಿತ್ತಾಳಿಪಿರಿಕಿ, ಬೇರಿಂಗ್‌ಗಳು, ಗಂಟೆ, ತಳಾಸ, ಮಾಡುವ ಮಜೂರಿ ಸೇರಿ ವೆಚ್ಚ ನೋಡಿದರೇ ಇದರಲ್ಲಿ ಯಾವುದೇ ಲಾಭವಿಲ್ಲ. ಹೀಗಾಗಿ ಈ ತೊಟ್ಟಿಲುಗಳನ್ನು ನಿರ್ಮಿಸಲು ಯಾರೂ ಮನಸ್ಸು ಮಾಡುವುದಿಲ್ಲ. ಅದೇನೋ ಅಜ್ಜಂದಿರು ಹಾಗೂ ಸಾಹುಕಾರ ಮನೆತನದವರು ಮಾಡುತ್ತಿದ್ದ ಈ ಕಲೆಯಿಂದ ಕಲಘಟಗಿಗೆ ವಿಶ್ವಮಟ್ಟದಲ್ಲಿ ಹೆಸರು ದಕ್ಕಿದೆ. ಅದನ್ನು ಕಾಪಾಡಿಕೊಂಡು ಹೋಗುವುದೇ ನನ್ನ ಇಚ್ಛೆ. ಕಲಘಟಗಿ ತೊಟ್ಟಿಲನ್ನು ಇಂದಿಗೂ ಜನ ಬೆರಗಿನಿಂದ ನೋಡುತ್ತಾರೆ. ಇದರ ನಿರ್ಮಾಣದಿಂದಾಗಿ ನನಗೂ ಗೌರವ ದೊರೆಯುತ್ತಿದೆ. ಅಷ್ಟು ನನಗೆ ಸಾಕೆನ್ನುವ ಮಾರುತಿ ಬಡಿಗೇರ ಈಗ ತಯಾರಿಸಿದ ಈ ತೊಟ್ಟಿಲು ಪಾರ್ವತಮ್ಮಾ ರಾಜಕುಮಾರ ಅವರ ಸಂಬಂಧಿಗಳು ಹೇಳಿ ಮಾಡಿಸಿದ್ದಾರಂತೆ. ಈಗ ಕೇರಳ ರಾಜ್ಯಕ್ಕೊಂದು ಹಾಗೂ ಗೊಟಗುಡಿಯ ಜಾನಪದ ವಿಶ್ವವಿದ್ಯಾಲಯಕ್ಕೊಂದು ಈ ತೊಟ್ಟಿಲು ನಿರ್ಮಿಸಿಕೊಡುವ ಹೊಣೆ ಹೊತ್ತಿದ್ದಾರೆ. ಮನೆಯ ಕುಟುಂಬದ ಆರ್ಥಿಕ ನಿರ್ವಹಣೆಗಾಗಿ ಸದಾ ಬಿಡುವಿಲ್ಲದ ಕೆಲಸಗಳ ಮಧ್ಯ ತೊಡಗಿಕೊಂಡಿರುವ ಕರಕುಶಲಗಾರ ಮಾರುತಿ ಬಡಿಗೇರ ಕಲಘಟಗಿ ಬಣ್ಣದ ತೊಟ್ಟಿಲು ಕಲೆ ಉಳಿಯಲು ಆಸರೆಯಾಗಿದ್ದಾರೆ. ಬಣ್ಣದ ತೊಟ್ಟಲಿಗಾಗಿ ಸಂಪರ್ಕ ದೂರವಾಣಿ ಸಂಖ್ಯೆ: 92422 11652

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.