ಮಕ್ಕಳಿಗೆ ರಜೆ ಬಂತು ಎಂದರೆ ಪೋಷಕರಲ್ಲೊಂದು ಆತಂಕ ಮನೆ ಮಾಡುತ್ತದೆ. ದಿನವಿಡೀ ಗ್ಯಾಜೆಟ್ ಲೋಕದಲ್ಲಿ ಕಳೆದುಹೋಗಿಬಿಡುತ್ತಾರೇನೋ ಎನ್ನುವ ಆಂತಕವದು. ಇವುಗಳನ್ನು ಹೊರತುಪಡಿಸಿ ಮಕ್ಕಳನ್ನು ರಜಾ ಸಮಯದಲ್ಲಿ ಸೃಜನಶೀಲವಾಗಿ ಹಿಡಿದಿಡುವ ಬಗೆಯನ್ನು ವನಿತಾ ಅಣ್ಣಯ್ಯ ಯಾಜಿ ವಿವರಿಸಿದ್ದಾರೆ.
ದಸರಾ ರಜೆ, ಬೇಸಿಗೆ ರಜೆ ಎಂದಾಕ್ಷಣ ಮಕ್ಕಳೇನೋ ನಿಟ್ಟುಸಿರು ಬಿಡುತ್ತಾರೆ. ಆದರೆ, ಪೋಷಕರಲ್ಲಿ ಒಂದು ತಲ್ಲಣ. ಮಕ್ಕಳನ್ನು ಚಟುವಟಿಕೆಯಲ್ಲಿ ಇರುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಮಕ್ಕಳೊಂದಿಗೆ ನೀವೂ ಮಕ್ಕಳಾಗಿ ಅಥವಾ ಮಕ್ಕಳಿಂದ ಯಾವುದೇ ಅಪೇಕ್ಷೆ ಇಲ್ಲದೆ ಈ ರಜೆಯನ್ನು ಕಳೆಯಬೇಕು ಎಂದರೆ ಅದಕ್ಕೂ ಬಹಳ ವಿವರವಾದ ಯೋಜನೆಯನ್ನಂತೂ ಮಾಡಿಕೊಳ್ಳಲೇಬೇಕು.
ಮೊದಲನೆಯದಾಗಿ ಎಷ್ಟು ದಿನ ಶಾಲೆಗೆ ರಜೆ ಇದೆ ಎಂಬುದನ್ನು ಮಕ್ಕಳೊಂದಿಗೆ ಚರ್ಚಿಸಿ. ಆ ನಂತರ ನಿಮ್ಮ ಮಗುವಿನ ಆಸಕ್ತಿ ಕ್ಷೇತ್ರವೇನು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಈ ರಜೆಯಲ್ಲಿ ಏನನ್ನೆಲ್ಲ ಮಾಡಬಹುದು ಎಂಬ ವೇಳಾಪಟ್ಟಿ ತಯಾರಿಸಿ. ವೇಳಾಪಟ್ಟಿ ಹೆಚ್ಚು ವಿವರವಾಗಿದ್ದಷ್ಟು ನೀವು ಹೆಚ್ಚು ತೊಡಗಿಕೊಳ್ಳಲು ಸಾಧ್ಯ. ವೇಳಾಪಟ್ಟಿಯಲ್ಲಿ ಪ್ರತಿದಿನ ಹೇಗಿರಬೇಕು ಎಂಬುದು ಕಡ್ಡಾಯವಾಗಿರಲಿ. ಮಕ್ಕಳೊಂದಿಗೆ ಪೂರ್ತಿ ದಿನ ನೀವು ಏನನ್ನೆಲ್ಲ ಮಾಡಬಹುದು ಎಂಬುದನ್ನು ಬರೆದುಕೊಳ್ಳಿ. ಪ್ರತಿದಿನವೂ ಚಟುವಟಿಕೆಗಳಿಂದ ಕೂಡಿರಲಿ.
ಉದಾಹರಣೆಗೆ:- ಮನೆ ಕೆಲಸ, ಅಡುಗೆ ಮಾಡುವುದು, ಪರಿಸರ ನಡಿಗೆ, ಕಲೆ, ಸಂಗೀತ, ಡಾನ್ಸ್ ,ಚಿತ್ರಕಲೆ.
ಹಾಗೂ ಹೊಸ ಕೌಶಲದ ಕಲಿಕೆ ಎಂಬ್ರಾಯ್ಡರಿ, ಕ್ರೋಷೆ, ನಿಟ್ಟಿಂಗ್, ಗೊಂಬೆ ತಯಾರಿಕೆ.
ನೆನಪುಗಳ ಕುಸುರಿ: ನಿಮ್ಮ ಬಾಲ್ಯದ ನೆನಪುಗಳು ಕಥೆಗಳಾಗಿ ಬರಲಿ. ಇದನ್ನೇ ಇಟ್ಟುಕೊಂಡು ಮಕ್ಕಳೊಂದಿಗೆ ಸೇರಿ ಚಿತ್ರ ಬಿಡಿಸಲು ಮನಸ್ಸು ಮಾಡಿ. ಕೆಲವೊಂದು ವಿಷಯವನ್ನು ಕುಟುಂಬ ಸಮೇತರಾಗಿ ಚರ್ಚಿಸಿ.
ರಜಾ ದಿನವನ್ನು ಬಹಳ ಉಪಯುಕ್ತವಾಗಿ ಕಳೆಯುವುದರ ಜೊತೆ ಅದು ವಿಶ್ರಾಂತಿದಾಯಕವಾಗಿರಲಿ. ಹಾಗಾಗಿ ಪರಿಸರದಲ್ಲಿ ಹೆಚ್ಚು ಸಮಯ ಕಳೆಯಿರಿ. ಮೋಡಗಳ ವೀಕ್ಷಣೆ ಮತ್ತು ಮೋಡಗಳನ್ನು ಚಿತ್ರಿಸುವುದು ನಿಮ್ಮ ಸುತ್ತಲಿನ ಮರಗಳ ಕುರಿತು ತಿಳಿದುಕೊಳ್ಳುವುದು. ಹಕ್ಕಿ ಪಕ್ಷಿಗಳನ್ನು ನೋಡಿ ಅವುಗಳಂತೆ ನಟಿಸಿ.
ಕುಟುಂಬದವರೆಲ್ಲ ಸೇರಿ ಇಷ್ಟವಾದ ಸಂಗೀತದ ಪ್ಲೇ ಲಿಸ್ಟ್ ಮಾಡಿ, ಒಟ್ಟಿಗೆ ಸಂಗೀತ ಕೇಳಿ. ಹಾಗೆ ನೀವು ಬಾಲ್ಯದಲ್ಲಿ ಕಲಿತ ಕಲೆ ಕೌಶಲ ಆಟಗಳನ್ನು ಮಕ್ಕಳಿಗೆ ಕಲಿಸಿ, ಪುಟ್ಟ ಮಕ್ಕಳಿದ್ದರೆ ಕಥೆಗಳನ್ನು ಹೇಳಿ.
ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಭಾಗಿಯಾದಷ್ಟು ನೀವು ಹೆಚ್ಚು ಹೆಚ್ಚು ಕ್ರಿಯಾಶೀಲವಾಗಿ ಯೋಚಿಸಲು ಸಾಧ್ಯ. ಮಕ್ಕಳು ನಿಮಗೆ ಹತ್ತಿರವಾಗುವುದಲ್ಲದೆ ನಿಮಗೆ ಹೊಸತನವನ್ನು ಜೀವನೋತ್ಸಾಹವನ್ನು ತುಂಬುತ್ತಾರೆ.
ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಈ ಪ್ರತಿ ದಿನದ ವೇಳಾಪಟ್ಟಿ ತಯಾರಿಸಿ ಪಾಲಿಸುವುದು ಉತ್ತಮ ಆಯ್ಕೆ. ನಿಮ್ಮ ಮಕ್ಕಳ ಬಾಂಧವ್ಯ ಕಟ್ಟಿಕೊಳ್ಳಲು ಸಹಾಯಕ ಅಲ್ಲದೆ ನಿಮಗೆ ಗೊತ್ತಿಲ್ಲದಂತೆ ಮೊಬೈಲ್ ಟಿ.ವಿ ಬಳಕೆ ಕಡಿಮೆಯಾಗಿ, ಕೌಟುಂಬಿಕ ಬಾಂಧವ್ಯ ಗಟ್ಟಿಯಾಗುತ್ತದೆ.
ಹೀಗೆ ಮಾಡಬಹುದು
ನಾವು ಪಾರಂಪರಿಕವಾಗಿ ಕೌದಿ ತಯಾರಿಸುತ್ತೇವೆ. ನನ್ನ ಮಗಳು ಸುರಗಿಯನ್ನು ಜತೆ ಮಾಡಿಕೊಂಡು ಮೂರು ದಿನಗಳ ಸಮಯ ತೆಗೆದುಕೊಂಡು ಕೌದಿಯನ್ನು ಹೊಲಿದೆವು. ಮೊದಲಿಗೆ ಅವಳಿಗೆ ಇಷ್ಟವಾದ ಕೆಲವು ಶಬ್ದಗಳನ್ನು ಆಯ್ಕೆ ಮಾಡಿಕೊಂಡು ಬಣ್ಣ ಬಣ್ಣದ ಬಟ್ಟೆಯನ್ನು ಕತ್ತರಿಸಿ ಹೊಲಿಯಲಾಯಿತು. ಚೌಕದ ಒಳಗೆ ಅವಳಿಗೆ ಇಷ್ಟದ ಪದಗಳನ್ನು ಹೊಲಿಗೆ ಮಾಡಿದಳು. ಸಂಪೂರ್ಣವಾಗಿ ಕೈಹೊಲಿಗೆಯಲ್ಲಿ ತಯಾರಿಸಿರುವ ಈ ಕೌದಿಯನ್ನು ದಿನವೂ ಕಣ್ಣಿಗೆ ಕಾಣುವಂತೆ ಮನೆಯಲ್ಲಿ ಇಡಲಾಗಿದೆ. ಇದು ನಮ್ಮಿಬ್ಬರಲ್ಲಿಯೂ ಸೃಜನಶೀಲತೆಯಿಂದ ಇರಲು ಆಗಾಗ್ಗೆ ಪ್ರೇರಣೆ ಒದಗಿಸುತ್ತದೆ.
ಜಪಾನಿ ಶೈಲಿಯಲ್ಲಿ ಕರ್ಟನ್ ಅನ್ನು ಹೊಲಿಯಲಾಯಿತು. ಕತ್ತಲು ಬೆಳಕು ಪರಿಕಲ್ಪನೆಯಲ್ಲಿ ಹೊಲಿದಿರುವ ಈ ಕರ್ಟನ್ ಮನೆಯೊಳಗಿನ ಬಾಗಿಲನ್ನು ಅಲಂಕರಿಸಿರುವುದಲ್ಲದೇ ಕರ್ಟನ್ ತಯಾರಿಕೆಯಲ್ಲಿ ಮಗಳು ಆಸ್ಥೆ ವಹಿಸಿದ್ದು ಮತ್ತೊಂದು ವಿಶೇಷ ಅನಿಸಿತು. ಸಾಮಾನ್ಯವಾಗಿ ಮರ-ಗಿಡಗಳ ಸುತ್ತ ಮರ ಬಿದ್ದಿರುವ ಹೂವು ತೊಗಟೆ ಕಾಯಿ ಬೀಜ ಇವುಗಳನ್ನು ಬಳಸಿ ಪ್ರತಿ ದಿನ ರಂಗೋಲಿ ಹಾಕುವ ಪದ್ಧತಿಯನ್ನು ನಾವು ಪಾಲಿಸುತ್ತಿದ್ದೇವೆ.
ಮಕ್ಕಳು ನಾವು ಹೇಳುವುದನ್ನು ಮಾಡುವುದಕ್ಕಿಂತಲೂ ಹೆಚ್ಚಾಗಿ ನಾವು ಮಾಡುವುದನ್ನು ಮಾಡುತ್ತಾರೆ. ಒಳ್ಳೆಯ ಅರ್ಥಪೂರ್ಣವಾದ ಸಮಯವನ್ನು ಹೇಗೆ ಕಳೆಯಬೇಕು ಎಂಬುದನ್ನು ನಾವು ರೂಢಿಸಿಕೊಂಡಾಗ ಮಾತ್ರ ಮಕ್ಕಳು ಅದನ್ನು ನೋಡಿ ರೂಢಿಸಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.