ADVERTISEMENT

ಆರು ತಿಂಗಳು ಹರಿಕೆಯ ಆಟ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 0:35 IST
Last Updated 22 ಸೆಪ್ಟೆಂಬರ್ 2024, 0:35 IST
<div class="paragraphs"><p>ಗುಂಡಬಾಳ ಕ್ಷೇತ್ರದ ಆವರಣದಲ್ಲೇ ಇರುವ ರಂಗಸ್ಥಳದಲ್ಲಿ ಯಕ್ಷಗಾನ ಆಟ</p></div>

ಗುಂಡಬಾಳ ಕ್ಷೇತ್ರದ ಆವರಣದಲ್ಲೇ ಇರುವ ರಂಗಸ್ಥಳದಲ್ಲಿ ಯಕ್ಷಗಾನ ಆಟ

   

‘ದೇವ್ರೇ, ನನ್ನ ಮಗಳಿಗೆ ಮದುವೆಯಾದರೆ ನಿನಗೊಂದು ಬೆಳ್ಳಿ ಕಂಕಣ ಮಾಡಿಸುತ್ತೇನೆ’ ಎಂತಲೋ, ‘ನಿನ್ನ ಹೆಸರಿನಲ್ಲಿ ಸಮಾರಾಧನೆ ಮಾಡಿಸುತ್ತೇನೆ’ ಎಂತಲೋ ಹರಕೆ ಹೊರುವುದು ಸಾಮಾನ್ಯ. ಆದರೆ ‘ನಿನ್ನ ಹೆಸರಲ್ಲಿ ಯಕ್ಷಗಾನ ಆಟ ಕೊಡಿಸ್ತೇನೆ’ ಎಂದು ಹರಕೆ ಹೊರುವುದನ್ನು ಕೇಳಿದ್ದೀರಾ?!

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಐದು ಕಿಲೊಮೀಟರ್‌ ದೂರದ ಗುಂಡಬಾಳದಲ್ಲಿರುವ ಶ್ರೀ ಮುಖ್ಯಪ್ರಾಣ ಲಕ್ಷ್ಮಿ ವೆಂಕಟೇಶ ದೇವಸ್ಥಾನಕ್ಕೆ ಶತಮಾನಗಳಷ್ಟು ಹಿನ್ನೆಲೆ ಇದೆ. ಈ ದೇವರಿಗೆ ಹೀಗೊಂದು ಹರಕೆ ಸಲ್ಲಿಸುವ ಸಂಪ್ರದಾಯ ಇದೆ. ಹರಕೆ ತೀರಿಸಲೆಂದೇ ಇಲ್ಲಿ ಪ್ರತಿ ರಾತ್ರಿ ಯಕ್ಷ ಕಲಾವಿದರು ವೇಷ ಕಟ್ಟಿಕೊಂಡು ಪೌರಾಣಿಕ ಪ್ರಸಂಗವನ್ನು ಶಾಸ್ತ್ರೋಕ್ತವಾಗಿ ಚಂಡೆ ಮದ್ದಳೆ, ಭಾಗವತಿಕೆ ಸಮೇತ ಅಭಿನಯಿಸುತ್ತಾರೆ. ಪ್ರೇಕ್ಷಕರು ಇರಲಿ, ಇಲ್ಲದಿರಲಿ ವರ್ಷಕ್ಕೆ ಸತತ ಆರು ತಿಂಗಳು (ಮಳೆಗಾಲದ ಆರು ತಿಂಗಳು ಬಿಟ್ಟು) ಪ್ರದರ್ಶನ ಇರುತ್ತದೆ!.

ADVERTISEMENT

ದೇವಸ್ಥಾನದ ಆಡಳಿತ ಮಂಡಳಿ ಶ್ರೀ ಮುಖ್ಯಪ್ರಾಣ ಪ್ರಸಾದಿತ ಯಕ್ಷಗಾನ‌ ಮಂಡಳಿ ಮೂಲಕ ಯಕ್ಷಗಾನ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಡಿಸೆಂಬರ್‌ ಕೊನೆ ವಾರದಲ್ಲಿ ಪ್ರಾರಂಭಗೊಂಡು ನಿರಂತರವಾಗಿ ರಾತ್ರಿ 9 ರಿಂದ ಬೆಳಗಿನ ಜಾವ 6ರ ತನಕ ಯಕ್ಷಗಾನ ಸೇವೆ ನಡೆಯುತ್ತದೆ.

ಆ ಕಾಲದಲ್ಲಿ ಜನ ಬಡತನದಿಂದ ಬಳಲುತ್ತಿದ್ದರೂ ಆಟ ನೋಡುವುದನ್ನು ಬಿಡುತ್ತಿರಲಿಲ್ಲ. ಹಲಸಿನ ಬೀಜವನ್ನು, ತಾಳೆಮರದ ಹಣ್ಣಿನಿಂದ ಹಿಟ್ಟನ್ನು (ಗಂಜಿ ರೂಪದಲ್ಲಿ) ತಯಾರಿಸಿ ಜೊತೆಯಲ್ಲಿ ತೆಗೆದುಕೊಂಡು ಕಾಲ್ನಡಿಗೆಯಲ್ಲಿ ಗುಂಡಬಾಳಕ್ಕೆ ಹೋಗುತ್ತಿದ್ದರು. ರಾತ್ರಿ ಆಟ ನೋಡಿ, ಹಗಲು ಪಕ್ಕದಲ್ಲಿರುವ ಹೊಳೆಯ ಬದಿ ಹಲಸಿನ ಬೀಜ, ತಾಳೆಮರದ ಹಿಟ್ಟಿನ ಗಂಜಿ ಮಾಡಿ ಊಟ ಮಾಡಿ ನಿದ್ರೆ ಮಾಡುತ್ತಿದ್ದರು. ಮತ್ತೆ ರಾತ್ರಿ ಆಟ ನೋಡುತ್ತ ನಾಲ್ಕಾರು ದಿನ ಉಳಿದು ಬರುತ್ತಿದ್ದರು. ಬೆಳಗಿನಜಾವ ಕಾಡಿಗೆ ಹೋಗಿ ಸೊಪ್ಪು, ಉರುವಲು ತರುವವರು ರಾತ್ರಿ ಊಟವಾದ ಮೇಲೆ ಗುಂಡಬಾಳಕ್ಕೆ ಹೋಗಿ ಬೆಳಗಿನಜಾವದ ತನಕ ಆಟ ನೋಡಿ ಮತ್ತೆ ಕಾಡಿಗೆ ಹೋಗುತ್ತಿದ್ದರು. ಹಿಂದೆ ಇಲ್ಲಿಗೆ ಬರಲು ನಡೆಯಬೇಕಿತ್ತು. ಈಗ ಹೊನ್ನಾವರದಿಂದ ಸರ್ಕಾರಿ ಬಸ್ ವ್ಯವಸ್ಥೆ ಇದೆ ಎಂದು ವಯೋವೃದ್ಧ ‌ಗಣಪಯ್ಯ ನೆನಪಿಸಿಕೊಂಡರು.

‘ಪ್ರತಿನಿತ್ಯ ಅಪರೂಪದ ಪೌರಾಣಿಕ ಪ್ರಸಂಗಗಳು ಮಾತ್ರ ಇಲ್ಲಿ ನಡೆಯುತ್ತವೆ. ಅಂದಿನ ಪ್ರಸಂಗವನ್ನು ಅಂದೇ ನಿರ್ಧರಿಸಲಾಗುತ್ತದೆ. ಭಕ್ತರ ಹರಕೆಯ ಆಟಗಳು ಮಾತ್ರ ನಡೆಯದೇ, ಅಪಾರಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಯಕ್ಷಗಾನವನ್ನು ಅಭ್ಯಾಸ ಮಾಡಲು ಬರುತ್ತಾರೆ‌. ವಿದ್ಯಾರ್ಥಿಗಳಿಗೆ ರಂಗಸ್ಥಳದ ಪಕ್ಕದಲ್ಲಿ ವಸತಿ ನಿಲಯವಿದ್ದು, ಆಸಕ್ತ ವಿದ್ಯಾರ್ಥಿಗಳು ಅಲ್ಲಿಯೇ ಉಳಿದುಕೊಳ್ಳಬಹುದು. ಹೆಚ್ಚಿನದಾಗಿ ಮಕ್ಕಳು ಬೇಸಿಗೆ ರಜೆಯ ಸಮಯದಲ್ಲಿ ಇಲ್ಲಿಯೇ ಉಳಿದು ಪೂರ್ಣ ಪ್ರಮಾಣದ ಶಿಕ್ಷಣ ಪಡೆಯುತ್ತಾರೆ. ಆದ್ದರಿಂದ ಯಕ್ಷಗಾನವನ್ನು ಕಲಿಯುವಂತಹ ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ಇದೊಂದು ಯಕ್ಷ-ಪಾಠಶಾಲೆಯಾಗಿದೆ’ ಎಂದು ಮುಖ್ಯಪ್ರಾಣ ಪ್ರಸಾದಿತ ಮೇಳಕ್ಕೆ ಯಜಮಾನರಾಗಿರುವ ಪ್ರಭಾಕರ ಚಿಟ್ಟಾಣಿ ಹೇಳುತ್ತಾರೆ. 

ಸಾಮಾನ್ಯವಾಗಿ ಕರಾವಳಿ ತೀರದ ಹಲವಾರು ದೇವಸ್ಥಾನಗಳು ಯಕ್ಷಗಾನ ಮೇಳಗಳನ್ನು ಹೊಂದಿದ್ದರೂ, ಅವೆಲ್ಲವುಗಳಿಗಿಂತಲೂ ಇಲ್ಲಿ ಹಲವಾರು ವಿಶೇಷಗಳಿವೆ. ಯಕ್ಷಗಾನಕ್ಕೆ ಬೇಕಾದ ಎಲ್ಲಾ ಪರಿಕರಗಳುಳ್ಳ ವ್ಯವಸ್ಥಿತ ರಂಗಸ್ಥಳ ಇಲ್ಲಿದೆ. ಇಲ್ಲಿ ಪುರಾತನ ಕಾಲದಿಂದಲೂ ಹಲವಾರು ವಿದ್ಯಾರ್ಥಿಗಳು ಯಕ್ಷಗಾನವನ್ನು ಕಲಿಯಲು ಬಂದಿದ್ದಾರೆ. ಮೇಳದ ಯಜಮಾನರು ಯಕ್ಷಗಾನವನ್ನು ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಹೇಗೆ ಪ್ರಸಂಗದ ಪದ್ಯವನ್ನು ನೆನಪಿಟ್ಟುಕೊಳ್ಳಬೇಕು, ಪದ್ಯದ ಅರ್ಥವನ್ನು ತಿಳಿಸಿಕೊಡುವುದು, ಗೆಜ್ಜೆ ಕಟ್ಟುವುದು, ವೇಷಭೂಷಣ ಧರಿಸುವುದು, ಬಣ್ಣ ಹಚ್ಚುವುದು, ಸ್ತ್ರೀ ವೇಷ, ಬಾಲ ವೇಷ ಇತರ ಪ್ರಧಾನ ವೇಷಗಳನ್ನು ಹೇಗೆ ಹಾಕಬೇಕು ಎನ್ನುವುದನ್ನು ಹಂತ ಹಂತವಾಗಿ ಕಲಿಸಿಕೊಡುತ್ತಾರೆ. ಇಷ್ಟೇ ಅಲ್ಲದೇ ಚಂಡೆ, ಮದ್ದಳೆ, ಭಾಗವತಿಕೆಯನ್ನು ಹಿರಿಯ ಕಲಾವಿದರು, ಯಜಮಾನರು ಕಲಿಸುತ್ತಾರೆ. ಜೊತೆಗೆ ಬೇರೆ ಎಲ್ಲಾ ದೇವಸ್ಥಾನಗಳ ಮೇಳಗಳು, ಹರಕೆ ಆಟಕ್ಕಾಗಿ ತಮ್ಮ ಮೇಳ ಡೇರೆಗಳನ್ನು ಹಾಕುತ್ತಾರೆ. ಆದರೆ, ಇಲ್ಲಿ ಮಾತ್ರ ಹರಕೆಯನ್ನು ಒಪ್ಪಿಸಲು ಸೇವಾದಾರರು ಗುಂಡಬಾಳ ಕ್ಷೇತ್ರಕ್ಕೆ ಬಂದು ದೇವಸ್ಥಾನದ ಮುಂಭಾಗದಲ್ಲಿರುವಂತಹ ರಂಗಸ್ಥಳದಲ್ಲಿಯೇ ಸೇವೆಯನ್ನು ನೀಡಬೇಕಾಗುತ್ತದೆ ಎಂದು ಹಿರಿಯ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರು ವಿವರಿಸಿದರು.

ಇಲ್ಲಿ ಆಟ ಆಡಿಸಬೇಕೆಂದರೆ ಹತ್ತು ವರ್ಷ ಕಾಯಬೇಕು! ಮುಂದಿನ ಹತ್ತು ವರ್ಷಕ್ಕೆ ಸೇವೆ ಆಟಗಳು ಈಗಾಗಲೇ ಬುಕ್‌ ಆಗಿವೆ. ವರ್ಷಕ್ಕೆ ಕನಿಷ್ಠ 500ಕ್ಕೂ ಮೇಲ್ಪಟ್ಟು ಹರಕೆ ಆಟಗಳ ಮುಂಗಡ ನೋಂದಣಿಯಾಗುತ್ತವೆ. ದೇವಸ್ಥಾನದ ಆಡಳಿತ ಮಂಡಳಿ ಅವರವರ ಸರತಿ ಬಂದಾಗ ತಿಂಗಳು ಮುಂಚಿತವಾಗಿ ಸೇವಾದಾರರಿಗೆ ಮಾಹಿತಿಯನ್ನು ಒದಗಿಸುತ್ತದೆ’ ಎಂದು ಅರ್ಚಕ ವೇದಮೂರ್ತಿ ಅರವಿಂದ ಭಟ್ ತಿಳಿಸಿದರು.

ಎಲ್ಲ ದಿನವೂ ನೂರಾರು ಪ್ರೇಕ್ಷಕರು ಇರುವುದಿಲ್ಲ. ಕೆಲವೊಮ್ಮೆ ಮೂರೋ, ನಾಲ್ಕೋ ಜನ ಇರುತ್ತಾರೆ. ಒಂದೊಂದು ದಿನ ಯಾರೂ ಇರುವುದಿಲ್ಲ. ಆದರೆ, ಆಟ ಕುಣಿಯುವವರಿಗೆ ವ್ಯತ್ಯಾಸವೇ ಆಗುವುದಿಲ್ಲ. ನಮಗೆ ಅದೊಂದು ತಾಲೀಮು ಅನ್ನುವ ಹಾಗೆ ಶ್ರದ್ಧೆಯಿಂದ ವೇಷ ಕಟ್ಟಿ ಕುಣಿಯುತ್ತೇವೆ. ಪ್ರತಿ ಆಟಕ್ಕೆ ₹500 ಸಿಗುತ್ತದೆ. ಜೊತೆಗೆ ದಿನದಿನಕ್ಕೆ ನಮ್ಮ ಕುಣಿತ, ಮಾತುಗಾರಿಕೆಯನ್ನು ಸುಧಾರಿಸಿಕೊಳ್ಳುವ ಅವಕಾಶವೂ ಸಿಗುತ್ತದೆ’ ಎಂದು ಕೃಷ್ಣನ ವೇಷ ಧರಿಸಿದ್ದ ತೋಟಿಮನೆ ಗಣಪತಿ ನಾಯ್ಕ ಹೇಳುತ್ತಾರೆ. 

ಹರಕೆ ಸೇವೆಯನ್ನು ನೀಡುವ ಸೇವಾದಾರರು ಅಂದಿನ ದಿನ ದೇವಸ್ಥಾನದಲ್ಲಿ ಉಳಿದುಕೊಳ್ಳಲು ಕೊಠಡಿಗಳ ವ್ಯವಸ್ಥೆ ಇದ್ದು, ಮುಂಚಿತವಾಗಿ ಕಚೇರಿಗೆ ತಿಳಿಸಬೇಕಾಗುತ್ತದೆ. ಈ ಹಳ್ಳಿಯಲ್ಲಿ ಪ್ರೇಕ್ಷಕರನ್ನು ನಂಬಿ ದಿನವೂ ಆಟ ಆಡಿಸುವುದು ಸಾಧ್ಯವಿಲ್ಲ ಎಂಬುದು ವ್ಯವಸ್ಥಾಪಕರಿಗೂ ಗೊತ್ತು. ಹಾಗಾಗಿ ಇಲ್ಲಿ ಊಟ ಅಥವಾ ವಸತಿಯ ವ್ಯವಸ್ಥೆ ಇಲ್ಲ. ದೇವಸ್ಥಾನದ ಪಕ್ಕದಲ್ಲಿ ಒಂದು ಚಿಕ್ಕ ಹೋಟೆಲ್‌ ಇದೆ ಅಷ್ಟೇ.

ಈ ಸನ್ನಿಧಿಯಲ್ಲಿ ಕಲಾವಿದರಾಗಿ ಆಟ ಕುಣಿಯುವುದು, ಸೇವಾದಾರನಾಗಿ ಆಟ ಆಡಿಸುವುದು, ಪ್ರೇಕ್ಷಕನಾಗಿ ಆಟ ನೋಡುವುದು ಸಹ ಸೇವೆಯೇ ಆಗಿದೆ. ಇಂದಿನ ನಾನಾ ಸಮೂಹ ಮಾಧ್ಯಮಗಳ ನಡುವೆಯು ಯಕ್ಷಗಾನ ಕಲೆಯನ್ನು ಪ್ರಕೃತಿಯ ಮಡಿಲಿನಲ್ಲಿ ಕುಳಿತು, ಮೊಬೈಲ್‌ನಿಂದ ದೂರ ಉಳಿದು ನೆಮ್ಮದಿಯಿಂದ ಆಸ್ವಾದಿಸುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಹರಕೆಯ ಆಟ ನೋಡಲು ಸೇರಿದ ನೂರಾರು ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.