ADVERTISEMENT

ಸಾಧಕಿ: ಯಕ್ಷಗಾನದಲ್ಲಿ ಸುಮಾ ಕಂಪು

ಗಡಿ ದಾಟಿದ ಯಕ್ಷಗಾನಕ್ಕೆ ಸುಮಾ ಗಡಿಗೆಹೊಳೆ ಹೊಳಪು

ಪವಿತ್ರಾ ಭಟ್
Published 8 ಮಾರ್ಚ್ 2024, 23:30 IST
Last Updated 8 ಮಾರ್ಚ್ 2024, 23:30 IST
<div class="paragraphs"><p>ಸುಮಾ ಗಡಿಗೆಹೊಳೆ</p></div>

ಸುಮಾ ಗಡಿಗೆಹೊಳೆ

   

ಅಂದು ಕಡಲತೀರದ ಭಾರ್ಗವ ಶಿವರಾಮ ಕಾರಂತರು ಯಾರದೋ ಮನೆಯ ಅಂಗಳದಲ್ಲಿ, ಶಾಲೆಯ ಹಜಾರದಲ್ಲಿ ಹೇಳಿಕೊಡುತ್ತಿದ್ದ ಯಕ್ಷಗಾನ ಈಗ ಆನ್‌ಲೈನ್ ಮೂಲಕ ಯಕ್ಷಗಾನಾಸಕ್ತರ ಮನೆ ಪ್ರವೇಶಿಸಿದೆ. ಹೀಗಾಗಿ ಯಕ್ಷಗಾನ ಕಲಿಯಲು, ಕಲಿಸಲು ಜಾಗ ಹುಡುಕಬೇಕಿಲ್ಲ. ಮೈಲುಗಟ್ಟಲೆ ನಡೆಯಬೇಕಿಲ್ಲ. ಮನೆಯಂಗಳದಲ್ಲೇ ಯಕ್ಷಗಾನದ ಹೆಜ್ಹೆ ಹಾಕಬಹುದು. ಧೀಂ ತಕಿಟ ಧೀಂ ಎನ್ನಬಹುದು.

ಕಾಲಕ್ಕನುಗುಣವಾಗಿ ಬದಲಾಗುತ್ತಲೇ ಸಾಗಿರುವ ಯಕ್ಷಗಾನದ ವೇಷ, ಕುಣಿತ ಕೇವಲ ನಮ್ಮವರಿಗಷ್ಟೇ ತಿಳಿದರೆ ಸಾಲದು, ಇನ್ನಷ್ಟು ಜನರನ್ನು ತಲುಪಬೇಕು ಎನ್ನುವ ನಿಟ್ಟಿನಲ್ಲಿ ವಿದೇಶಿ ಮಕ್ಕಳಿಗೆ ಆನ್ಲೈನ್‌ ತರಗತಿ ಮೂಲಕ ಯಕ್ಷಗಾನ ಹೇಳಿಕೊಟ್ಟ ಕೀರ್ತಿ ಉತ್ತರ ಕನ್ನಡ ಜಿಲ್ಲೆಯ ಸುಮಾ ಗಡಿಗೆಹೊಳೆ ಅವರದ್ದು.

ADVERTISEMENT

ಯಲ್ಲಾಪುರ ಬಳಿಯ ಗಡಿಗೆಹೊಳೆ ಎನ್ನುವ ಪುಟ್ಟ ಹಳ್ಳಿಯಲ್ಲಿ ಗೃಹಿಣಿಯಾಗಿರುವ ಸುಮಾ ಇಂದು ಮಹಿಳಾ ಯಕ್ಷಗಾನ ಪಾತ್ರಧಾರಿಯಾಗಿ, ಯಕ್ಷಗಾನ ಶಿಕ್ಷಕಿಯಾಗಿದ್ದಾರೆ. ಯಕ್ಷಗಾನದಲ್ಲಿನ ಗಾಢ ಆಸಕ್ತಿ, ಆನ್ಲೈನ್‌ ಕ್ಲಾಸ್‌ನ ಯೋಚನೆ ಇವೆಲ್ಲವುಗಳ ಬಗ್ಗೆ ಸುಮಾ ಗಡಿಗೆಹೊಳೆಯವರು ನಮ್ಮೊಂದಿಗೆ ಮುಖಾಮುಖಿಯಾದಾಗ ಹೊರಬಂದ ಮಾತು ಇಲ್ಲಿದೆ.

ಕೊರೊನಾ ಕಾಲದಲ್ಲಿ ಆನ್‌ಲೈನ್‌ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿತ್ತು. ಯಕ್ಷಗಾನಕ್ಕೂ ಅದನ್ನು ಅಳವಡಿಸುವ ಯೋಜನೆಯಿಂದಾಗಿ ಆನ್‌ಲೈನ್ ತರಗತಿ ಆರಂಭವಾಯಿತು. ಸಾಮಾಜಿಕ ಮಾಧ್ಯಮಗಳ ಮೂಲಕ ತಿಂಗಳ ಅಂತರದಲ್ಲೇ ಅದು ಅಮೆರಿಕದಲ್ಲಿನ ಕನ್ನಡಿಗರನ್ನೂ ತಲುಪಿತ್ತು. ಅವರು ನನ್ನನ್ನು ಸಂಪರ್ಕಿಸಿ ನಮಗೂ ಯಕ್ಷಗಾನ ಕಲಿಸಬೇಕೆಂಬ ಹಂಬಲ ವ್ಯಕ್ತಪಡಿಸಿದ್ದರು.

ಆರಂಭದಲ್ಲಿ ಹೇಗೆ, ಏನು ಎನ್ನುವ ಚಿತ್ರಣವಿಲ್ಲದಿದ್ದರೂ, ಮಹಿಳೆಯರಿಗೆ, ಮಕ್ಕಳಿಗೆಂದೇ ತರಗತಿ ಆರಂಭಿಸಿದ್ದೆ. ಕ್ರಮೇಣ ಅದರಲ್ಲಿ ಪುರುಷರೂ ಪಾಲ್ಗೊಳ್ಳುತ್ತಿದ್ದರು. ಕಥೆಗೆ ತಕ್ಕಹಾಗೆ ಪಾತ್ರದ ಆಯ್ಕೆ ನಡೆಸಿ ಪ್ರತಿದಿನ ರಾತ್ರಿ (ಅಮೆರಿಕದ ಹಗಲು) ಒಂದು ತಾಸು ಗೂಗಲ್‌ ಮೀಟ್‌, ಝೂಮ್‌ನಂಥ ವೇದಿಕೆಗಳ ಮೂಲಕ ತಾಳ, ಹಾಡು, ಸಣ್ಣಪುಟ್ಟ ಹೆಜ್ಜೆಗಳನ್ನು ಕಲಿಸುತ್ತಿದ್ದೆ. ಕೆಲವು ಸಮಯದಲ್ಲಿ ವಿಡಿಯೊ ಮಾಡಿ ಕಳಿಸಿ ತರಬೇತಿ ನೀಡುತ್ತಿದ್ದೆ. ಅವರೂ ಆಸಕ್ತಿಯಿಂದಲೂ ಕಲಿಯುತ್ತಿದ್ದರು. ಆಗಾಗ ಪರೀಕ್ಷೆಗಳನ್ನೂ ಮಾಡುತ್ತಿದ್ದೆ. ಆನ್‌ಲೈನ್‌ ತರಗತಿ ಒಂದು ಹಂತದ ಯಶಸ್ಸು ಕಂಡಿತ್ತು. ‘

ಆದರೆ ಯಕ್ಷಗಾನ ಪರಿಪೂರ್ಣವಾಗಿ ನೋಡಿ ಕಲಿಯಲು ಸಾಧ್ಯವಿಲ್ಲ. ಕಲಿಸಿ, ಪರೀಕ್ಷೆ ಮಾಡಿ ಬಿಟ್ಟುಬಿಡಲು ಯಕ್ಷಗಾನ ಎನ್ನುವುದು ವಾರ್ಷಿಕ ಪಠ್ಯವಲ್ಲ. ಕಳೆದ ವರ್ಷ ಅಮೆರಿಕಕ್ಕೆ ತೆರಳಿ ಅವರನ್ನೆಲ್ಲ ಭೇಟಿಯಾಗಿ  ಹೆಜ್ಜೆ, ತಾಳ, ಕುಣಿತ, ಪದ್ಯ, ಮಾತು ಎಲ್ಲವನ್ನೂ ತಿದ್ದಿದ್ದೆ. ಶೃದ್ಧೆಯಿಂದ ಕಲಿತು ಯಕ್ಷಗಾನ ಪ್ರದರ್ಶನವನ್ನೂ ನೀಡಿದ್ದರು. ಅದೊಂದು ಮರೆಯಲಾರದ ಅನುಭವ.

ನನಗೆ ಚಿಕ್ಕವಯಸ್ಸಿನಿಂದ ಯಕ್ಷಗಾನದ ಬಗ್ಗೆ ಆಸಕ್ತಿಯಿದ್ದರೂ ಅವಕಾಶಗಳಿರಲಿಲ್ಲ. ಹೆಣ್ಣು ಮಕ್ಕಳು ವೇಷ ಕಟ್ಟಿ ಕುಣಿಯುವುದಕ್ಕೆ ಹಳ್ಳಿಗಳಲ್ಲಿ ಪ್ರೋತ್ಸಾಹ ಇರಲಿಲ್ಲ. ಆದರೆ ಮದುವೆಯಾಗಿ, ಮಕ್ಕಳಾದ ಬಳಿಕ ಗಡಿಗೆಹೊಳೆ ಸುಬ್ರಾಯ ಭಟ್‌ ಎನ್ನುವವರ ಸಹಾಯದಿಂದ ಹಳೆಯ ವಿದ್ಯಾರ್ಥಿಗಳನ್ನು ಒಟ್ಟಗೂಡಿಸಿ ಮೊದಲು ಮಾಡಿದ್ದು ತಾಳಮದ್ದಲೆ ಕಾರ್ಯಕ್ರಮ. ಅಲ್ಲಿಂದ ಯಕ್ಷ ಪಯಣ ಆರಂಭವಾಗಿತ್ತು.

2007ರಲ್ಲಿ ಭಸ್ಮಾಸುರ ಪಾತ್ರದ ಮೂಲಕ ವೇಷ ಕಟ್ಟಿ ಕುಣಿತ ಆರಂಭಿಸಿದ್ದೆ.  ಹೊಸ ಕಲೆ ಕರಗತಕ್ಕೆ ಹೆಚ್ಚು ಸಮಯ ಅಗತ್ಯವಿತ್ತು. ಮನೆ, ಮಕ್ಕಳು ಸಂಸಾರದ ನಡುವೆಯೂ ಸಿಕ್ಕ ಸಮಯದಲ್ಲಿ ಯಕ್ಷಕಲೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಸಾರ್ಥಕತೆಯಿದೆ. ವೇಷ ತೊಟ್ಟ ಮೇಲೆ ಪಾತ್ರದೊಳಗೆ ಪ್ರವೇಶ ಮಾಡಿದಂತೆಯೇ. ಹೊರಗಿನ ಪ್ರಪಂಚದ ಮಾತುಗಳಾಗಲೀ, ಭಯವಾಗಲಿ ಕಾಡುವುದಿಲ್ಲ. ಆವೇಷ, ರೋಷ ಪ್ರತಿಯೊಂದೂ ಯಕ್ಷವೇಷದಿಂದಲೇ ಬರುವುದು.

ಮನೆಯಲ್ಲಿ ಸಿಕ್ಕ ಪ್ರೋತ್ಸಾಹ, ಗುರುಗಳು ನೀಡಿದ ಧೈರ್ಯ ಕೀಳರಿಮೆಯಿಂದ ಹೊರಬರುವಂತೆ ಮಾಡಿತು. ನನ್ನಂತಹ ಅನೇಕ ಮಹಿಳೆಯರು, ಹೆಣ್ಣುಮಕ್ಕಳು ಕಲೆಯಲ್ಲಿ ತೊಡಗಿಸುವಂತೆ ಮಾಡಲು ಸಾಧ್ಯವಾಯಿತು.

ನನ್ನ ವಯಸ್ಸು 50 ದಾಟಿದೆ. ಇಂದಿಗೂ ಯಕ್ಷಗಾನದ ತರಗತಿಯನ್ನು ನಡೆಸುತ್ತೇನೆ. 30ಕ್ಕೂ ಹೆಚ್ಚು ಜನ ತರಬೇತಿಗೆ ಬರುತ್ತಾರೆ. ಯಕ್ಷಕಲಾಸಂಗಮ ಸಂಸ್ಥೆಯ ಮೂಲಕ ಯಕ್ಷಗಾನವನ್ನು ಇನ್ನಷ್ಟು ಮಹಿಳೆಯರನ್ನು, ಮುಂದಿನ ಪೀಳಿಗೆಯನ್ನು ತಲುಪುವ ಕೆಲಸ ನಡೆಯುತ್ತಿದೆ.  

ಸುಮಾ ಗಡಿಗೆಹೊಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.