ಸದಭಿರುಚಿ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಆರಂಭವಾದ ಉಡುಪಿಯ ಯಕ್ಷಗಾನ ಕಲಾರಂಗ ಕಲೆ ಮತ್ತು ಶಿಕ್ಷಣ ಕ್ಷೇತ್ರಗಳೆರಡರಲ್ಲೂ ಕೆಲಸ ಮಾಡುತ್ತ ಬೃಹತ್ತಾಗಿ ಬೆಳೆದು ನಿಂತ ಸಂಸ್ಥೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಸಂಸ್ಥೆಯ ಸಮಾಜಮುಖಿ ಕೆಲಸಗಳ ಇಣುಕು ನೋಟ ಇಲ್ಲಿದೆ.
ಕುಂದಾಪುರದ ಕಟ್ಕೆರೆ ಎಂಬ ಹಳ್ಳಿಯಲ್ಲಿ ವಾಸಿಸುತ್ತಿರುವ ಸತ್ಯವತಿಯ ಕಣ್ಣಲ್ಲಿ ಈಗ ಹೊಳಪಿದೆ. ಅವಳೀಗ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ. ಕಳೆದ ವರ್ಷವಷ್ಟೇ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕಗಳು ಬಂದಾಗ, ಮುಂದೇನು ಎಂದು ತೋಚದೆ ಆಕೆ ಕಂಗಾಲಾಗಿ ಕುಳಿತಿದ್ದಳು. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲವೆಂದ ಮೇಲೆ ಓದು ಮುಂದುವರೆಸುವುದಾದರೂ ಹೇಗೆ? ಅಷ್ಟರಲ್ಲಿ ಪರಿಚಿತರೊಬ್ಬರು ಉಡುಪಿಯಲ್ಲಿರುವ ಯಕ್ಷಗಾನ ಕಲಾರಂಗವು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದೆ ಎಂಬ ವಿಷಯ ತಿಳಿಸಿದರು. ಸತ್ಯವತಿ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಅರ್ಜಿ ಸಲ್ಲಿಸಿದಳು. ಅರ್ಜಿ ಪರಿಶೀಲಿಸಿದ ಯಕ್ಷಗಾನ ಕಲಾರಂಗದ ಸ್ವಯಂಸೇವಕರ ತಂಡವು, ಸತ್ಯವತಿಯ ಮನೆಗೆ ಭೇಟಿ ನೀಡಿದಾಗ, ಮನೆಯ ಪರಿಸ್ಥಿತಿಯೇ ವಾಸ್ತವವನ್ನು ತಿಳಿಸುವಂತಿತ್ತು. ಯಕ್ಷಗಾನ ಕಲಾರಂಗ ಸಂಸ್ಥೆಯ ಆಶ್ರಯದಲ್ಲಿಯೇ ನಡೆಯುತ್ತಿರುವ ‘ವಿದ್ಯಾ ಪೋಷಕ್’ ಯೋಜನೆಯಡಿ ಆಕೆಯ ಶಿಕ್ಷಣಕ್ಕೆ ನೆರವು ನೀಡಲು ನಿರ್ಧರಿಸಲಾಯಿತು.
ಸತ್ಯವತಿಯಂತಹ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಕಲಾರಂಗವು ಆರಂಭವಾಗಿದ್ದು 1975ರಲ್ಲಿ. ಯಕ್ಷಗಾನ ಆಸಕ್ತರಾದ ಅಮ್ಮುಂಜೆ ನಾಗೇಶ್ ನಾಯಕ್, ನಿಟ್ಟೂರು ಸುಂದರಶೆಟ್ಟಿ, ಎಂ.ಎಸ್.ಕೃಷ್ಣನ್, ವಿಶ್ವಜ್ಞ ಶೆಟ್ಟಿ ಮುಂತಾದವರು ಸೇರಿ ಡಾ.ಬಿ.ಬಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ರೂಪಿಸಿದ ಈ ಸಂಸ್ಥೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೆ. ಶಿವರಾಮ ಕಾರಂತರು ಉದ್ಘಾಟಿಸಿದ್ದರು. ಸಂಸ್ಥೆಯ ಆರಂಭಿಕ ಉದ್ದೇಶ ಸದಭಿರುಚಿಯ ಕಲೆಯನ್ನು ಪ್ರೋತ್ಸಾಹಿಸುವುದು. ಆದರೆ ಸಮಾನ ಮನಸ್ಕರು ಒಂದೆಡೆ ಸೇರಿ ಒಳ್ಳೆಯ ಕೆಲಸಗಳನ್ನು ಇನ್ನಷ್ಟು ಮಾಡಬೇಕು ಎಂಬ ಉತ್ಸಾಹದ ಪರಿಣಾಮ ಈ ಸಂಸ್ಥೆಯು ಆಲದಮರದಂತೆ ಬೆಳೆಯಿತು. ಕಲೆಗೆ ಸೀಮಿತವಾಗದೇ ಸಮಾಜಮುಖಿಯಾಗಿ ಹರಿಯಿತು.
ಪ್ರಸ್ತುತ ಯಕ್ಷಗಾನ ಕಲಾರಂಗವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಇದರ ಆಸರೆಯಲ್ಲಿಯೇ 1999–2000ನೇ ಇಸವಿಯಲ್ಲಿ ಹುಟ್ಟಿಕೊಂಡ ‘ಪ್ರೊ. ಬಿ.ವಿ. ಆಚಾರ್ಯ ಯಕ್ಷನಿಧಿ’ಗೆ ಈಗ ರಜತ ಸಂಭ್ರಮ. 2005ರಲ್ಲಿ ‘ವಿದ್ಯಾ ಪೋಷಕ್’ ಅಂಗಸಂಸ್ಥೆಯಾಗಿ ಕಲಾರಂಗದೊಡನೆ ಸೇರಿಕೊಂಡಿತು. ಅಂದರೆ ಯಕ್ಷಗಾನ ಕಲಾರಂಗ ಎಂಬ ಮಾತೃಸಂಸ್ಥೆಯ ನೆರಳಿನಲ್ಲಿ ಯಕ್ಷನಿಧಿ, ವಿದ್ಯಾ ಪೋಷಕ್ ಮತ್ತು ಯಕ್ಷ ಶಿಕ್ಷಣ ಎಂಬ ಮೂರು ಪ್ರಧಾನ ಶಾಖೆಗಳು ಕೆಲಸ ಮಾಡುತ್ತಿವೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಸಂಸ್ಥೆಯು ನಡೆದು ಬಂದ ದಾರಿಯತ್ತ ಕಣ್ಣು ಹಾಯಿಸಿದರೆ ಕಾಣುವುದು ನೂರಾರು ಸುಂದರ ಚಿತ್ರಗಳು. ಕೇಳುವುದು ಸಾವಿರಾರು ಸಂತೃಪ್ತಿಯ ದನಿಗಳು.
ಇತ್ತೀಚೆಗಷ್ಟೇ ಸತ್ಯವತಿಯ ಕುಟುಂಬಕ್ಕೆ ಕಷ್ಟಗಳು ಸರಮಾಲೆಯಂತೆಯೇ ಬಂದಾಗ ಕಲಾರಂಗವೇ ಆಸರೆಯಾಗಿ ನಿಂತಿದ್ದು. ಅನಾರೋಗ್ಯಪೀಡಿತರಾದ ಅಮ್ಮ ತೀರಿಕೊಂಡು, ಅರ್ಧಕಟ್ಟಿದ ಮನೆ ಹಾಗೆಯೇ ಗಾಳಿಮಳೆಗೆ ತೆರೆದುಕೊಂಡಿತ್ತು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮುಂದುವರೆದರು. ಸೂಕ್ತ ಪ್ರಾಯೋಜಕರನ್ನು ಹುಡುಕಿ ಹೊಸ ಮನೆಯನ್ನು ಕಟ್ಟಿಸಿಕೊಡಲು ನಿರ್ಧರಿಸಿದರು. ಅಕ್ಟೋಬರ್ 18ರಂದು ಮನೆಯನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಈ ದೀರ್ಘ ಪಯಣದಲ್ಲಿ ಒಟ್ಟು 70 ಮನೆಗಳನ್ನು ಅರ್ಹರಿಗೆ ಕಲಾರಂಗ ಕಟ್ಟಿಕೊಟ್ಟಿದೆ.
ವರ್ಣರಂಜಿತ ಬಣ್ಣಗಾರಿಕೆ, ಚೆಂಡೆಮದ್ದಳೆಯ ಅಬ್ಬರ ಮತ್ತು ಭಾಗವತಿಕೆಯ ಹಿನ್ನೆಲೆಯಲ್ಲಿ ರಂಗಸ್ಥಳದಲ್ಲಿ ವಿಜೃಂಭಿಸುವ ಯಕ್ಷಗಾನ ಕಲಾವಿದರ ವೈಯಕ್ತಿಕ ಬದುಕು ಭಿನ್ನ. ವೃತ್ತಿಮೇಳದಲ್ಲಿ ತಿರುಗಾಟ ನಡೆಸುವ ಕಲಾವಿದರು ರಂಗದಲ್ಲಿ ದೇವಲೋಕವನ್ನೇ ಆಳ್ವಿಕೆ ಮಾಡುವರು. ಆದರೆ ಬಣ್ಣಕಳಚಿ ವಿಶ್ರಮಿಸುವಷ್ಟರಲ್ಲಿ ವಾಸ್ತವ ಅವರನ್ನು ಕೈಬೀಸಿ ಕರೆಯುವುದು. ವೇಷಧರಿಸಿ ಗೆಯ್ಮೆ ಮಾಡುವ ಕಲಾವಿದರ ಮನೆಯಲ್ಲಿ ವೈಭವವಿದೆಯೇ ? ಮನೆ ಕಟ್ಟಿಕೊಳ್ಳಲು, ಹೆಣ್ಮಗಳಿಗೆ ಮದುವೆ ಮಾಡಲು, ಅನಾರೋಗ್ಯವಿದ್ದಾಗ ಚಿಕಿತ್ಸೆ–ಆರೈಕೆ ಮಾಡಲು ಹಣಕಾಸಿನ ಬೆಂಬಲವಿಲ್ಲದೆ ಕಂಗಾಲಾಗುತ್ತಾರೆ. ನಿರಂತರ ಪ್ರಯಾಣ, ನಿದ್ದೆ ಕೊರತೆ, ವಯೋಸಹಜ ಸಮಸ್ಯೆಗಳಿಂದ ಕಲಾವಿದರು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಕಲಾವಿದರನ್ನು ಅಮ್ಮನಂತೆ ಪೊರೆಯುವ ಕೆಲಸ ವಹಿಸಿಕೊಂಡಿದೆ ಈ ಯಕ್ಷಗಾನ ಕಲಾರಂಗ. ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು, ಶಿವಮೊಗ್ಗದ ಕಲಾವಿದರ ಪರವಾಗಿ ಹೆಸರು, ಆರ್ಥಿಕ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ 40 ಜನರ ತಂಡವಿದೆ. ಸಂಸ್ಥೆಯ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಮಾರ್ಗದರ್ಶನ ಮಾಡುತ್ತಿದ್ದಾರೆ.
ಯಕ್ಷನಿಧಿ ಯೋಜನೆಯಡಿ ಕಲಾವಿದರಿಗೆ ವೈದ್ಯಕೀಯ ನೆರವು ನೀಡುವುದು, ಅವರ ಪ್ರಯಾಣಕ್ಕೆ ಖಾಸಗಿ ಬಸ್‌ಗಳಲ್ಲಿ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಒದಗಿಸುವುದು, ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದು, ಬಡ ಕಲಾವಿದರಿಗೆ ಮನೆ ಕಟ್ಟಿಕೊಡುವುದು, ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡುವುದು... ಹೀಗೆ ವೃತ್ತಿಮೇಳದಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ ಕಲಾವಿದರು ಯಕ್ಷನಿಧಿಯ ಸದಸ್ಯತ್ವ ಪಡೆದು ಈ ಸೌಲಭ್ಯಗಳನ್ನು ಪಡೆಯುವ ಅವಕಾಶ ಕಲ್ಪಿಸಿದೆ.
‘ವೃತ್ತಿಮೇಳದಲ್ಲಿ ತಿರುಗಾಟ ಮಾಡುವಾಗ ದೈನಂದಿನ ಜೀವನ ನಿರ್ವಹಣೆ, ಮನೆಯ ಸದ್ಯದ ಅಗತ್ಯಗಳನ್ನು ಪೂರೈಸುವ ಬಗ್ಗೆಯಷ್ಟೇ ಯೋಚನೆ ಮಾಡಲು ಸಾಧ್ಯ. ದೀರ್ಘಕಾಲದ ಹೂಡಿಕೆ ನಮ್ಮ ಸಂಪಾದನೆಯ ಮಟ್ಟದಲ್ಲಿ ಸಾಧ್ಯವಾಗುವುದಿಲ್ಲ. ಕೌಟುಂಬಿಕವಾಗಿ ಹತ್ತಾರು ಸಮಸ್ಯೆಗಳಿದ್ದಾಗಲಂತೂ ಕಲಾವಿದರು, ತಲೆಗೆಳೆದರೆ ಕಾಲಿಗೆ ಸಾಲದು, ಕಾಲಿಗೆಳೆದರೆ ತಲೆಗೆ ಸಾಲದು ಎಂಬಂತೆ ಬದುಕು ಸಾಗಿಸಬೇಕಾಗುತ್ತದೆ. ನನ್ನ ಬದುಕಿನಲ್ಲಿಯೂ ಹಾಗೆಯೇ ಆಯಿತು’ ಎನ್ನುತ್ತ ಮಾತು ಶುರು ಮಾಡಿದರು ಸಾಲಿಗ್ರಾಮ ಮೇಳದ ವೇಷಧಾರಿ ಪ್ರವೀಣ್ ಗಾಣಿಗ ಕೆಮ್ಮಣ್ಣು.
‘ಬಡಾನಿಡಿಯೂರಿನಲ್ಲಿ ವಾಸವಾಗಿರುವ ನನಗೆ ಇಬ್ಬರು ಮಕ್ಕಳು. ಅವರು ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದಾಗ ಕಣ್ಣು ತುಂಬಿ ಹೆಮ್ಮೆಯೆನಿಸಿತು. ಆದರೆ ಕಾಲೇಜು ಶಿಕ್ಷಣ ಕೊಡಿಸುವುದು ಹೇಗಪ್ಪಾ ಎಂಬ ಚಿಂತೆಯಾದಾಗ, ಆಶ್ರಯ ದೊರಕಿದ್ದು ಯಕ್ಷಗಾನ ಕಲಾರಂಗದಲ್ಲಿ. ಅವರು ವಿದ್ಯಾ ಪೋಷಕ್ ಯೋಜನೆಯಡಿಯೇ ಫೀಸು ಕಟ್ಟಿದರು. ನಾನು ವೃತ್ತಿಮೇಳದಲ್ಲಿ ಮೂವತ್ತು ವರ್ಷದಿಂದ ತಿರುಗಾಟ ಮಾಡುತ್ತ ವೇಷ ಮಾಡುತ್ತಿರುವೆ. ಕೊನೆಗೂ ಮನೆಕಟ್ಟಿಕೊಳ್ಳಲು ಸಾಧ್ಯವಾಗಲೇ ಇಲ್ಲ. ದಾನಿಯೊಬ್ಬರ ನೆರವಿನಿಂದ ಯಕ್ಷನಿಧಿ ಯೋಜನೆಯಡಿ ಹೊಸ ಮನೆಯಲ್ಲಿ ವಾಸಮಾಡುವ ಯೋಗ ನನಗೆ ದೊರೆಯಿತು. ನಾನಷ್ಟೇ ಅಲ್ಲ, ವೃತ್ತಿಮೇಳದಲ್ಲಿರುವ ಯಾವುದೇ ಕಲಾವಿದರನ್ನು ಯಕ್ಷಗಾನ ಕಲಾರಂಗ ಕೈಬಿಟ್ಟಿಲ್ಲ. ಸದಸ್ಯತ್ವ ಪಡೆದವರ ಮನದಲ್ಲಿ ವಿಶ್ವಾಸ, ಭದ್ರತೆಯನ್ನು ಮೂಡಿಸಿದ ಕಾಮಧೇನು ಈ ಸಂಸ್ಥೆ’ ಎಂದು ಕಣ್ಣುತುಂಬಿ ಮಾತನಾಡುತ್ತಾರೆ ಪ್ರವೀಣ್. ಅವರ ಮಕ್ಕಳಿಬ್ಬರೂ ಪದವಿ ಓದುತ್ತಿದ್ದಾರೆ. ವಿದ್ಯಾ ಪೋಷಕ್ ಯೋಜನೆಯಡಿ ಈವರೆಗೆ ಆರು ಸಾವಿರ ಮಕ್ಕಳಿಗೆ ಹತ್ತು ಕೋಟಿ ರೂಪಾಯಿಗೂ ಅಧಿಕ ನೆರವು ಸಂದಿದೆ ಎಂದರೆ ಸಂಸ್ಥೆಯ ಶ್ರಮ ಖಂಡಿತಾ ಸಣ್ಣದಲ್ಲ.
***
ಹಾಗೆಂದು ಯಕ್ಷಗಾನ ಕಲೆಯನ್ನು ಹೊಸ ತಲೆಮಾರಿಗೆ ಪರಿಚಯ ಮಾಡಬೇಕಾದ ಜವಾಬ್ದಾರಿಯನ್ನೂ ಕಲಾರಂಗ ಮರೆತಿಲ್ಲ. ಕರಾವಳಿ ಜಿಲ್ಲೆಗಳ ವಿವಿಧ ಶಾಲೆಗಳಲ್ಲಿ ಹದಿನೈದು ವರ್ಷಗಳಿಂದ ಯಕ್ಷ ಶಿಕ್ಷಣ ಕಾರ್ಯಕ್ರಮ ಪ್ರತೀ ವರ್ಷ ನಡೆಯುತ್ತಿದೆ. ಯಕ್ಷಗಾನ ಕಲಿಸಲು ಆಸಕ್ತಿ ತೋರುವ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಯಕ್ಷಗಾನ ಗುರುಗಳು ಶಾಲೆಗೆ ತೆರಳಿ ತಂಡವನ್ನು ಕಟ್ಟಿ ಒಂದು ಪ್ರಸಂಗವನ್ನು ಆಡಿಸುವುದು, ಆ ಮೂಲಕ ಮಕ್ಕಳಲ್ಲಿ ಕಲಾಭಿರುಚಿ ಬೆಳೆಯುವಂತೆ ಮಾಡುವುದು ಇದರ ಉದ್ದೇಶ.
ಕಲೆ ಮತ್ತು ಕಲಾವಿದರ ಏಳ್ಗೆ, ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಯಕ್ಷಗಾನ ಕಲಾರಂಗ ನಿರಂತರವಾಗಿ ಶ್ರಮಿಸುತ್ತ ಬಂದಿದೆ. ಇದೇ ಆಶಯವನ್ನು ಹೊತ್ತ ಅನೇಕ ದಾನಿಗಳು ಈ ಸಂಸ್ಥೆಯ ಕೆಲಸ ವ್ಯಾಪಕವಾಗಿ ಬೆಳೆಯುವಂತೆ ಮಾಡಿದ್ದಾರೆ. ಪಾರದರ್ಶಕವಾಗಿ ನಿರ್ವಹಿಸವ ಸಮಾಜ ಸೇವೆಗೆ ಸಂಪನ್ಮೂಲದ ಕೊರತೆ ಇರುವುದಿಲ್ಲ. ಇಲ್ಲಿ ನೆರವು ಪಡೆದು ಓದಿದ ವಿದ್ಯಾರ್ಥಿಗಳಲ್ಲಿ ಅನೇಕರು ಉದ್ಯೋಗ ದೊರೆತನಂತರ ಈ ಸಂಸ್ಥೆಯ ಸೇವಾಕಾರ್ಯಕ್ಕೆ ಕೈ ಜೋಡಿಸಲು ಮುಂದಾಗಿದ್ದಾರೆ.–ಮುರಲಿ ಕಡೆಕಾರ್ ಕಾರ್ಯದರ್ಶಿ, ಯಕ್ಷಗಾನ ಕಲಾರಂಗ, ಉಡುಪಿ
‘ಯಕ್ಷಗಾನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಮಾತು ನಡೆನುಡಿಗಳಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಅಂಕಗಳ ಹಿಂದೆಯೇ ಓಡದೇ, ಇತರ ವಿಚಾರಗಳನ್ನು ತಿಳಿಸುವ ಪ್ರೇರಣೆ ದೊರೆಯುತ್ತದೆ’ ಎಂದು ಹೇಳುತ್ತಾರೆ ಯಕ್ಷಗಾನ ವೇಷಧಾರಿಯೂ ಆಗಿರುವ ಬ್ರಹ್ಮಾವರ ಶಿರಿಯಾರದ ಹೆಸ್ಕತ್ತೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ರೌಫ್. ಅವರ ಶಾಲೆಯಲ್ಲಿ ಪ್ರಸ್ತುತ 44 ಮಕ್ಕಳು ಯಕ್ಷ ಶಿಕ್ಷಣ ತಂಡದಲ್ಲಿದ್ದಾರೆ. ಈ ಸಾಲಿನಲ್ಲಿ 92 ಪ್ರೌಢಶಾಲೆಗಳಲ್ಲಿ ಯಕ್ಷ ಶಿಕ್ಷಣ ನಡೆಯುತ್ತಿದ್ದು ಅಂದಾಜು ಮೂರು ಸಾವಿರ ಮಕ್ಕಳು ಜಾತಿ ಧರ್ಮ ಭೇದವಿಲ್ಲದೆ ಯಕ್ಷಗಾನ ಕಲಿಯುತ್ತಿದ್ದಾರೆ.
***
ಈ ಮೂರು ಪ್ರಧಾನ ಯೋಜನೆಗಳಡಿ ನಿರ್ವಹಿಸುವ ಕೆಲಸಗಳಲ್ಲದೇ, ಕಲಾವಿದರ ಸಮ್ಮೇಳನ ನಡೆಸಿ ಅವರಿಗೆ ಒಡಿಸ್ಸಿ, ಕಥಕ್ ಅಥವಾ ಅಂತಹುದೇ ಇನ್ನೊಂದು ಕಲಾ ಪ್ರಕಾರವನ್ನು ಪರಿಚಯಿಸುವುದು, ತರಬೇತಿ ಕಮ್ಮಟಗಳನ್ನು ಆಗಾಗ ನಡೆಸುವುದು, ಮುಮ್ಮೇಳ, ಹಿಮ್ಮೇಳ ಕಲಾವಿದರು ಮತ್ತು ಚೌಕಿ ಸಹಾಯಕರು ಸೇರಿದಂತೆ, ಕಲಾವಿದರ ಸಾಧನೆಯನ್ನು ಗುರುತಿಸಿ ಪುರಸ್ಕಾರ ನೀಡುವುದು, ಈ ಕ್ಷೇತ್ರದಲ್ಲಿ ಬೆಳೆದು ಬಂದ ವಿದ್ವಾಂಸರನ್ನು ಗೌರವಿಸಿ, ಕಲಾವಿದರಿಗೆ ಮಾದರಿಯನ್ನು ತೋರಿಸಿಕೊಡುವುದು, ಯಕ್ಷಗಾನಕ್ಕೆ ಸಂಬಂಧಿಸಿದ ಉತ್ತಮ ಪುಸ್ತಕಗಳ ಪ್ರಕಟಣೆ ಮುಂತಾದವು ಕಲಾರಂಗ ನಿರ್ವಹಿಸುವ ಪ್ರಮುಖ ಕೆಲಸಗಳು.
ಹೀಗೆ ಕಲೆ, ಕಲಾವಿದರ ಏಳ್ಗೆ ಮತ್ತು ವಿದ್ಯಾರ್ಥಿಗಳ ಶಿಕ್ಷಣದ ಪರವಾಗಿ ನಿರಂತರವಾಗಿ ಶ್ರಮಿಸುತ್ತ ಬಂದಿರುವ ಯಕ್ಷಗಾನ ಕಲಾರಂಗದ ಕೆಲಸವನ್ನು ಗಮನಿಸಿ ಅನೇಕ ಗೌರವ ಪುರಸ್ಕಾರಗಳು ಬಂದಿವೆ. ಮುಖ್ಯವಾಗಿ ಸಂಸ್ಥೆಯು ಖರೀದಿಸಿದ ಜಾಗದಲ್ಲಿ ಇದೀಗ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ‘ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಆಂಡ್ ರಿಸರ್ಚ್ ಸೆಂಟರ್ (ಐವೈಸಿ) ಅನ್ನು ಇನ್‌ಫೋಸಿಸ್ ಫೌಂಡೇಷನ್ ನಿರ್ಮಿಸಿ ಕೊಟ್ಟಿದೆ. ಒಟ್ಟು ₹15.8 ಕೋಟಿ ವೆಚ್ಚದಲ್ಲಿ ಬೃಹತ್ ಸಭಾಭವನ ಸಿದ್ಧವಾಗಿದ್ದು ಕಲಾವಿದರಿಗೆ ಸಿದ್ಧ ವೇದಿಕೆಯೊಂದು ಒದಗಿದಂತಾಗಿದೆ.
ಕಲೆ, ಕಲಾವಿದ, ಕುಟುಂಬ, ಸಮಾಜ ಎಲ್ಲವೂ ಒಂದೇ ಎನ್ನುವಂತೆ ಯಕ್ಷಗಾನ ಕಲಾರಂಗ ಕೆಲಸ ಮಾಡುತ್ತಿದೆ. ಇದರ ಫಲವೇ ಈ ಗಣನೀಯ ಸಾಧನೆಯ ಶಿಖರ ತಲುಪಲು ಸಾಧ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.