ADVERTISEMENT

ಕಲೆ: ಅಪೂರ್ವ ಮಕ್ಕಳ ಕುಂಚ ಹೇಳಿದ ಕತೆ

ಮಂಜುಶ್ರೀ ಎಂ.ಕಡಕೋಳ
Published 24 ನವೆಂಬರ್ 2024, 0:52 IST
Last Updated 24 ನವೆಂಬರ್ 2024, 0:52 IST
<div class="paragraphs"><p>autism children's painting</p></div>

autism children's painting

   

ಅಲ್ಲಿನ ಗೋಡೆಗಳ ಮೇಲೆ ತೂಗು ಹಾಕಿದ್ದ ಒಂದೊಂದು ಕಲಾಕೃತಿಯೂ ಭಿನ್ನ ಭಾವಾಭಿವ್ಯಕ್ತಿಯನ್ನು ಹೊರಸೂಸುತ್ತಿತ್ತು. ದಟ್ಟ ಬಣ್ಣಗಳಲ್ಲಿ ಮೇಳೈಸಿದ್ದ ಆ ಚಿತ್ರಗಳಲ್ಲಿ ಕೆಲವು ಸರಳವಾಗಿದ್ದರೆ, ಮತ್ತೆ ಕೆಲವು ಸಂಕೀರ್ಣತೆಯನ್ನು ಬಿಂಬಿಸುತ್ತಿದ್ದವು. ಏಕತಾನತೆಯನ್ನು ಮೀರಿ ಎಲ್ಲರೊಳಗೆ ಒಂದಾಗುವ ಆಶಯ ಕಲಾವಿದರದ್ದಾಗಿತ್ತು.

ಕಡು ನೀಲಿ, ರಕ್ತಗೆಂಪು, ಕಾಡಿಗೆ ಕಪ್ಪು, ಗಿಡದ ಹಸುರು ಬಣ್ಣಗಳೇ ಹೆಚ್ಚಾಗಿದ್ದ ಆ ಕಲಾಕೃತಿಗಳು ನೋಡುಗರನ್ನು ಥಟ್ಟನೆ ಸೆಳೆದು ಕೆಲ ಕಾಲ ನಿಲ್ಲುವಂತೆ ಮಾಡಿದ್ದವು. ಇಂಥ ವಿಶಿಷ್ಟ ಚಿತ್ರಕಲಾ ಲೋಕದ ಪಯಣಕ್ಕೆ ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರ್‌ ಕಳೆದ ವಾರ ಸಾಕ್ಷಿಯಾಗಿತ್ತು.

ADVERTISEMENT

ಕೇರಳದ ‘ಕೇಡರ್’ ಸಂಸ್ಥೆಯು ‘ಕೇಡರ್ ಸ್ಪೆಕ್ಟ್ರಮ್ ಆಫ್ ಆರ್ಟ್‌’ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನವು ಹಲವು ಕಾರಣಗಳಿಗಾಗಿ ವಿಶಿಷ್ಟವಾಗಿತ್ತು. ‘ಸೆಲೆಬ್ರೇಟಿಂಗ್ ಆಟಿಸಂ ಟ್ಯಾಲೆಂಟ್’ ಟ್ಯಾಗ್‌ಲೈನ್ ಹೊಂದಿದ್ದ ಈ ಚಿತ್ರಕಲಾ ಪ್ರದರ್ಶನದಲ್ಲಿ ಆಟಿಸಂ ಮಕ್ಕಳ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು. ಮೂರು ವರ್ಷದ ಮಗುವಿನಿಂದ ಹಿಡಿದು ಮೂವತ್ತು ವರ್ಷದ ಯುವಕರವರೆಗಿನ ಮನಸಿನ ತಾಕಲಾಟಗಳು, ಭಾವಬಿಂಬಗಳು ಅಲ್ಲಿನ ಕಲಾಕೃತಿಗಳಲ್ಲಿ ಒಡಮೂಡಿದ್ದವು. ಚಿತ್ರಕಲಾ ಪರಿಭಾಷೆಯ ಚೌಕಟ್ಟನ್ನು ಮೀರಿದ ಆ ಕಲಾಕೃತಿಗಳು ಕಲಾವಿದರ ಅಂತರಂಗದ ತುಡಿತವನ್ನು ತೆರೆದಿಡುವಂತಿದ್ದವು. 

ಕೇರಳದ ಸಾಂಪ್ರದಾಯಿಕ ಕಲೆ, ಸಂಸ್ಕೃತಿಯ ಜತೆಗೆ ಮಕ್ಕಳ ಕಾರ್ಟೂನ್ ಅನ್ನು ಹೋಲುವಂಥ ಪಾತ್ರಗಳ ಚಿತ್ರಣವೂ ಅಲ್ಲಿತ್ತು.  ಕ್ರಿಸ್‌ಮಸ್‌ನ ರಾತ್ರಿಯ ಆಗಸ ಅಲ್ಲಿ ಕಪ್ಪಾಗದೇ ದಟ್ಟ ನೀಲಿ ಬಣ್ಣ ಪಡೆದಿತ್ತು. ಆ ಆಗಸದಲ್ಲಿ ಫಳಫಳ ಹೊಳೆಯುವ ನಕ್ಷತ್ರಗಳು, ಕ್ರಿಸ್‌ಮಸ್‌ ಮರದ ಜತೆಗೆ ಮಂಜಿನಲ್ಲಿ ಆಡುತ್ತಿರುವ ಪಾತ್ರಗಳು ಮಕ್ಕಳ ಮನೋಅಂಗಳಕ್ಕೆ ಕನ್ನಡಿ ಹಿಡಿದಿದ್ದವು. ಹವಳ ಕೆಂಬಣ್ಣದ ಆವರಣದಲ್ಲಿ ಹಾರಾಡುತ್ತಿದ್ದ ತಿಳಿ ನೀಲಿ ಚಿಟ್ಟೆಯ ಕಲಾಕೃತಿ ಒಳನೋಟ ನೀಡುತ್ತಿತ್ತು. ಬ್ಲಾಕ್ ಪ್ರಿಂಟ್‌ ಮಾದರಿಯ ಕಲಾಕೃತಿಗಳು ಬಾಂದನಿ ದುಪಟ್ಟಾದ ನೆನಪು ತಂದರೆ ಮತ್ತೆ ಕೆಲವು ಅಮೂರ್ತ ಸ್ಥಿತಿಯ ಪಡಿಯಚ್ಚಿನಂತಿದ್ದವು. ಮಕ್ಕಳ ಕಣ್ಣಲ್ಲಿ ಕಂಡ ಭಿನ್ನಲೋಕ ಅಲ್ಲಿನ ಚಿತ್ರಗಳಲ್ಲಿ ಒಡಮೂಡಿತ್ತು.  

ಮಾತಿನಲ್ಲಿ ಹೇಳಲಾಗದ, ಅಕ್ಷರಗಳಲ್ಲಿ ಹಿಡಿದಿಡಲಾಗದ, ಇಂಥದ್ದೇ ಭಾವ ನನ್ನ ಮನದಲ್ಲಿದೆ ಎಂದು ತಮ್ಮೆದುರಿಗೆ ಇರುವವರೊಂದಿಗೆ ಸಂವಹನ ಮಾಡಲಾಗದ ಆ ಮಕ್ಕಳು ತಮ್ಮ ಭಾವಾಭಿವ್ಯಕ್ತಿಗೆ ಚಿತ್ರಕಲೆಯನ್ನೇ ಮಾಧ್ಯಮವಾಗಿಸಿಕೊಂಡಿದ್ದರು. ಎಂದೂ ತಮ್ಮೊಂದಿಗೆ ಸ್ಪಷ್ಟವಾಗಿ ಮಾತನಾಡಲಾರದ ತಮ್ಮ ಮಕ್ಕಳು ಬಣ್ಣಗಳಲ್ಲಿ ಮನದ ಬಿಂಬಗಳನ್ನು ಮೂಡಿಸಿದ್ದು ಪೋಷಕರಿಗೂ ಅಚ್ಚರಿಯಷ್ಟೇ ಅಲ್ಲ, ಹೆಮ್ಮೆಯ ಭಾವ ಮೂಡಿಸಿತ್ತು.

ತಿರುವನಂತಪುರಂನ ‘ಕೇಡರ್’ ಆಟಿಸಂ ಮಕ್ಕಳಿಗಾಗಿಯೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ. ಆಟಿಸಂ ಆರಂಭಿಕ ಹಂತದಲ್ಲಿರುವ ಮಕ್ಕಳಿಗೆ ಇಲ್ಲಿ ನಿತ್ಯದ ಚಟುವಟಿಕೆಗಳನ್ನು ನಿರ್ವಹಿಸುವಂತೆ, ಓದಲು, ಬರೆಯಲು, ಕನಿಷ್ಠ ಮಟ್ಟದ ಸಂವಹನ ನಡೆಸುವುದಕ್ಕೆ ತರಬೇತಿ ನೀಡಲಾಗುತ್ತದೆ. ಅಷ್ಟೇ ಅಲ್ಲ, ಆ ಮಕ್ಕಳಲ್ಲಿನ ಸೃಜನಾತ್ಮಕ ಚಟುವಟಿಕೆಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

ಚಿತ್ರಕಲಾ ಪ್ರದರ್ಶನದಲ್ಲಿ ಮೆಚ್ಚುಗೆ ಪಡೆದ ಕೆಲ ಕಲಾಕೃತಿಗಳು ಕಲಾಪ್ರೇಮಿಗಳ ಮನೆಯ ಗೋಡೆಗಳನ್ನು ಅಲಂಕರಿಸಿದವು. ನಿಮ್ಮ ಮನೆಯ ಗೋಡೆಯ ಮೇಲೂ ಈ ಮಕ್ಕಳ ಅಪರೂಪದ ಕಲಾಕೃತಿ ಇರಬೇಕು ಎನಿಸಿದರೆ ಸಂಸ್ಥೆಯನ್ನು ಸಂಪರ್ಕಿಸಬಹುದು. ಅಂದಹಾಗೆ ಖರೀದಿಯಾದ ಕಲಾಕೃತಿಗಳ ಕೆಲಭಾಗ ಆ ಮಕ್ಕಳಿಗೂ, ಕೆಲಭಾಗ ಸಂಸ್ಥೆಯ ಚಟುವಟಿಕೆಗಳಿಗೂ ವಿನಿಯೋಗವಾಗಲಿದೆ. ವಾಟ್ಸ್ಆ್ಯಪ್ ನಂಬರ್: 9207450001

ಆಟಿಸಂ ಎಂದರೆ...

‘ಆಟಿಸಂ’ ಪದದ ಮೂಲ ಗ್ರೀಕ್ ಭಾಷೆಯ ‘ಆಟೊಸ್‌’ನಿಂದ ಬಂದಿದೆ. ‘ಆಟೊಸ್’ ಎಂದರೆ ತನ್ನ ಪಾಡಿಗೆ ತಾನಿರುವುದು ಸ್ವಕೇಂದ್ರೀತವಾಗಿರುವುದು ಎಂದರ್ಥ. ಪುಟ್ಟ ಮಕ್ಕಳು ಸದಾ ತಮ್ಮದೇ ಲೋಕದಲ್ಲಿ ಮುಳುಗಿದ್ದರೆ ಕಾರಣವಿಲ್ಲದೇ ಪುಳಕಿತರಾದಂತೆ ಚಪ್ಪಾಳೆ ತಟ್ಟಿ ತಾವೇ ಮಾತನಾಡಿಕೊಳ್ಳುವ ಕೈಬೆರಳುಗಳ ಲೆಕ್ಕಾಚಾರದಲ್ಲಿ ಮುಳುಗಿದ್ದರೆ ಸಂವಹನದ ಸಮಸ್ಯೆ ಎದುರಿಸುತ್ತಿದ್ದರೆ ಅಂಥಹ ಸ್ಥಿತಿಯನ್ನು ವೈದ್ಯಲೋಕ ‘ಆಟಿಸಂ’ ಎಂದು ಗುರುತಿಸುತ್ತದೆ. ಕೆಲ ಮಕ್ಕಳಿಗೆ ಮೂರು ವರ್ಷ ಆಗುವಷ್ಟರಲ್ಲಿ ಆಟಿಸಂನ ಲಕ್ಷಣಗಳು ಗೋಚರಿಸಬಹುದು.  ಆಟಿಸಂ ಸ್ಥಿತಿಯ ಬಹುತೇಕರು ತಮ್ಮ ಕೆಲಸ ತಾವು ಮಾಡಿಕೊಳ್ಳಲಾಗದ ತಮ್ಮ ಮನದ ಭಾವನೆಗಳನ್ನು ಮತ್ತೊಬ್ಬರೊಂದಿಗೆ ಸಂಭಾಷಣೆ ಸಂಜ್ಞೆ ರೂಪದಲ್ಲೂ ಹಂಚಿಕೊಳ್ಳಲಾರರು. ಈ ಸ್ಥಿತಿಗೆ ಅವರ ಮಿದುಳಿನಲ್ಲಿ ಸಂವಹನ ವರ್ತನೆ ಹಾಗೂ ಸಾಮಾಜಿಕ ನಡವಳಿಕೆಗೆ ಸಂಬಂಧಿಸಿದ ನ್ಯೂನತೆಯೇ ಕಾರಣ ಎನ್ನುತ್ತಾರೆ ವೈದ್ಯರು. ಆದರೆ ಆ ನ್ಯೂನತೆಯಾಚೆಗೂ ಆಟಿಸಂ ಸ್ಥಿತಿ ಎದುರಿಸುತ್ತಿರುವವರು ಸಾಮಾನ್ಯರಿಗಿಂತ ಹೆಚ್ಚು ಸೃಜನಶೀಲರು ಕ್ರಿಯಾಶೀಲರಾಗಿರಬಲ್ಲರು.

autism children's painting

autism children's painting

autism children's painting

autism children's painting

autism children's painting

autism children's painting

autism children's painting

ಆಟಿಸಂ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.