ಒಂದು ರಂಗಪಠ್ಯಕ್ಕೆ ಕತೆಯೇ ಇರಬೇಕೆಂದೇನಿಲ್ಲ. ಒಂದು ಮೂಲ ಆಶಯದ ರೂಪಗಳು ಸಹ ಕತೆಯಾಗಬಲ್ಲವು. ನಾಟಕಕಾರ ದೃಶ್ಯಾಭಿವ್ಯಕ್ತಿಯ ಮೂಲಕ ಪ್ರಧಾನವಾಗಿ ತಾನೇನನ್ನು ಹೇಳಲು ಬಯಸಿದ್ದಾನೆಯೋ ಅದನ್ನು ನಾಟ್ಯ, ರೂಪಕ, ಪ್ರತಿಮೆ, ಸಂಕೇತಗಳ ನೆರೆವು ಪಡೆದು ದೃಶ್ಯ ರೂಪಗಳನ್ನು ಸೃಜಿಸಿ ಹೇಳುವುದು ಮುಖ್ಯ. ಹಾಗೂ ಅವುಗಳನ್ನು ರೂಪಗಳಾಚೆ ಕ್ರಮದಲ್ಲಿ ಕಟ್ಟಿಕೊಡಲೂ ಸಾಧ್ಯವಿದೆ ಎಂಬುದನ್ನು ‘ಕಲ್ಯಾಣದ ಬಾಗಿಲು’ ನಾಟಕವು ಈ ಮಾತನ್ನು ಸಾಬೀತು ಪಡಿಸುತ್ತದೆ.
ಶರಣರ ಕತೆಗಳನ್ನೇ ಕೇಳಬೇಕೇಂದಾಗ ಅದಕ್ಕೆ ಅದರದೇ ಪಠ್ಯಗಳಿವೆ. ಆ ಬಗೆಯಲ್ಲಿ ಬಂದಂಥ ನಾಟಕಗಳೂ ಇವೆ. ಆದರೆ ನಟರಾಜ ಬೂದಾಳು ಅವರು ಕಲ್ಯಾಣವೆಂಬುದು ಚರಿತ್ರೆಯಲ್ಲಿರುವುದು ಅಷ್ಟೇ ಅಲ್ಲ; ಭೂತ, ವರ್ತಮಾನ ಮತ್ತು ಭವಿಷ್ಯದಲ್ಲೂ ಮನುಜ ಕುಲಕ್ಕೆ ಅಗತ್ಯವಾದ ತೆರದ ಬಾಗಿಲವು ಎಂಬುದನ್ನು ಹೇಳಲು ಯತ್ನಿಸಿರುವರು. ಪ್ರಸ್ತುತ ‘ಕಲ್ಯಾಣದ ಬಾಗಿಲು’ ನಾಟಕವು ಸಮಾಜೋ ಧಾರ್ಮಿಕ, ಸಮಾಜೋ ರಾಜಕೀಯ ಎಳೆಗಳನ್ನು ತನ್ನ ಮೈತುಂಬ ದಟ್ಟವಾಗಿ ಹಬ್ಬಿಸಿಕೊಂಡು ಸಾದರೀಕರಣಗೊಂಡಿದೆ. ಈ ನಾಟಕದ ಪ್ರಯೋಗವು ಈಚೆಗೆ ಬೆಳಗಾವಿಯ ಬಿಮ್ಸ್ ರಂಗಮಂದಿರದಲ್ಲಿ ನಡೆಯಿತು.
ಕನ್ನಡ ನೆಲಕ್ಕೆ ಈ ಭುವಿಯ ಪರಂಪರೆಯಲ್ಲಿ ಮಾನವ ಧಾರೆಯ ಒಂದು ತಾತ್ವಿಕತೆ ದಕ್ಕಿದೆ. ಹೀಗಾಗಿ ಕಾಲದ ಓಘಗಳಲ್ಲಿ ನಡೆದ ಮಾನವ ದ್ವೇಷಿ ಕ್ರಿಯೆಗಳು ಇಲ್ಲಿ ನಿಷ್ಫಲಗೊಳ್ಳುತ್ತಲೇ ಬಂದಿವೆ. ಅದಕ್ಕೆ ಕಾರಣ ಇಲ್ಲಿ ನೆಲೆಯೂರಿದ ಬೌದ್ಧ, ಜೈನ, ನಾಥ, ಸಿದ್ಧ, ಸೂಫಿ, ಶರಣರ ವಚನ, ಮರಾಠಿ ಸಂತರ ಅಭಂಗಗಳು, ತತ್ವಪದಗಳ ಧಾರೆಗಳು. ಇವು ನಮ್ಮ ನೆಲದ ಮೇಲೆ ಆಗಾಗ ಎರಗುವ, ಘಟಿಸುವ, ಎದುರಾಗುವ ಸಾಮಾಜಿಕ, ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಬಗೆಹರಿಸಿವೆ. ಮತ್ತು ಆ ಮೌಲ್ಯಗಳನ್ನು ಎತ್ತಿ ಹಿಡಿದಿವೆ.
ಇದರಲ್ಲಿ ಕಲ್ಯಾಣವು ಒಂದು. ಕಲ್ಯಾಣವು ಸಮ ಸಮಾಜದ ಕನಸನ್ನು ನನಸಾಗಿಸಲು ಹೊರಟ ಶರಣ ಕ್ರಾಂತಿಯ ದಿವ್ಯ ಮದ್ದಾಗಿದೆ. ‘ಕಲ್ಯಾಣದ ಬಾಗಿಲು’ ನಾಟಕವು ಅಭಿವ್ಯಕ್ತಿಸುವುದು ಸಹ ಇದನ್ನೇ! ಸಾರ್ವಕಾಲಿಕ ನೆಲೆಯಲ್ಲಿಯ ಮೌಲ್ಯವಾದ ಲೋಕಕಾರುಣ್ಯ, ಬಹುತ್ವ ಹಾಗೂ ಜಾತ್ಯಾತೀತ ತಾತ್ವಿಕ ನಡೆಯ ದರ್ಶನವನ್ನೇ ಈ ನಾಟಕ ನೀಡಿದೆ.
ಸಿ.ಬಸವಲಿಂಗಯ್ಯನವರು ಶೈಲಿಕೃತ ನಾಟಕಗಳಲ್ಲಿ ನಿಷ್ಣಾತರು. ‘ಒಡಲಾಳ’ ಮತ್ತು ‘ಮಹಾಮಾಯಿ’ ತಮ್ಮ ವಿಲಕ್ಷಣ ವ್ಯಾಖ್ಯಾನದ ಮುದ್ರೆ ಒತ್ತಿದ ಅವರ ಮಹತ್ವದ ಪ್ರಯೋಗಗಳು. ನಟ ಕೇಂದ್ರಿತ ವಾಸ್ತವವಾದಿ ನಾಟಕದಲ್ಲಿ ಅವರು ಯಶಸ್ವಿಯಾಗಿದ್ದು ಕೇವಲ ‘ಗಾಂಧಿ ವರ್ಸಸ್ ಗಾಂಧಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಪ್ರಯೋಗಗಳಲ್ಲಿ. ಹೆಚ್ಚಾಗಿ ಶೈಲಿಕೃತವುಗಳನ್ನೇ ನೆಚ್ಚಿದ ನಿರ್ದೇಶಕ ಬಸವಲಿಂಗಯ್ಯನವರು. ಆದರೆ ಅವರ ‘ಕಲ್ಯಾಣದ ಬಾಗಿಲು’ ನಾಟಕ ಮಾತ್ರ ಭಿನ್ನಸ್ತರದಲ್ಲಿ ನಿಲ್ಲುತ್ತದೆ. ಇಲ್ಲಿ ಹಳೆಯ ಮತ್ತು ಹೊಸ ಶೈಲಿಕೃತ ತಂತ್ರಗಳನ್ನು ಸಮಾವಿಷ್ಠಗೊಳಿಸಿ ಕಟ್ಟಿಕೊಟ್ಟಿದ್ದಾರೆ. ಅದು ಪ್ರೇಕ್ಷಕನಿಗೆ ಅಪ್ಯಾಯವೆನಿಸಿ ಅನುಭವಿಸಲು ನೆರವಾಗುತ್ತದೆ. ಹಾಗೂ ನೋಡುಗನ ಪ್ರತಿಕ್ರಿಯೆಗೆ ಒಳಪಡುವಷ್ಟು ಸಶಕ್ತವೆನಿಸುತ್ತದೆ.
ಕಳೆದ ಹಲವು ವರ್ಷಗಳ ಹಿಂದೆ ವೀಕ್ಷಿಸಿದ ಎರಡು ಆಧುನಿಕೋತ್ತರ ಸಮಾಜೋ ರಾಜಕೀಯ ಮರಾಠಿ ನಾಟಕಗಳ ಪ್ರಸ್ತುತೀಕರಣವನ್ನು ನೆನಪಿಗೆ ತರುವ ಈ ನಾಟಕ ಅವುಗಳಿಕ್ಕಿಂತ ವಿಶಿಷ್ಟವೆನಿಸಿತು. ನಟರಾಜ ಬೂದಾಳು ಹೇಳ ಹೊರಟಿರುವ ನಾಟ್ಯಾಶಯದ ವ್ಯಾಖ್ಯಾನವನ್ನು ಬಸವಲಿಂಗಯ್ಯ ಮುರಿದು ಕಟ್ಟಿರುವರು. ಆ ಕಲೆ ಅವರಿಗೆ ಸಿದ್ಧಿಸಿದೆ. ಹಾಗೆಯೇ ಬಿಟ್ವೀನ್ ದಿ ಲೈನ್ ಗ್ರಹಿಸಿ ತಮ್ಮ ನಿರ್ದೇಶಕನ ವ್ಯಾಖ್ಯಾನವನ್ನು ಶೈಲಿಕೃತ ಅಭಿನಯದ ಎರಡು ಮಾದರಿಗಳಲ್ಲಿ ನೀಡಿದ್ದಾರೆ.
ತತ್ವಪದಕಾರರು ಹಾಡು ಹೇಳುತ್ತ ನಾಟಕದ ಕತೆಯನ್ನು ಕೊಂಡೊಯ್ಯುತ್ತಾರೆ. ಕಾಡಲ್ಲಿ ನಾಡಲ್ಲಿ ತಪಗೈದು ಜಾಗರಗೊಳ್ಳುವುದರಲ್ಲಿ ಯಾವ ಅರ್ಥವಿಲ್ಲ. ಅಂತರಂಗದ ಶೋಧವು ಎಲ್ಲರಿಗೂ ಎಲ್ಲಾದರೂ ಸಾಧ್ಯ. ಬುದ್ಧನಿಂದ ಹಿಡಿದು ಬಸವಣ್ಣ ಮತ್ತು ಶರಣರು, ಅವರ ಚಳವಳಿ, ಗಾಂಧಿ, ಅಂಬೇಡಕರ ಮುಂತಾದವರು ಆ ಹುಡುಕಾಟ ನಡೆಸಿರುವರು. ಇದನ್ನು ರಂಗದ ಮೇಲೆ ಬಂದು ಅವರು ಅರುಹುವ ತತ್ವಸಾರವನ್ನು ನಾಟಕವು ಮಾತನಾಡುತ್ತದೆ. ಇದೊಂದು ತಾರ್ಕಿಕ ನಾಟಕ. ಆಚಾರ ಹೇಳುವವರು ಬದನೆಕಾಯಿ ತಿಂದಂತೆ-ಇಲ್ಲಿ ತತ್ವ ಸಿದ್ಧಾಂತಗಳನ್ನು ಪುಟಪಟಿಸುವವರು ಬಹುಸಂಖ್ಯಾತರು. ಆಚರಣೆಗೆ ತರುವವರು ವಿರಳ. ಅಂಥ ನಡಾವಳಿಗಳಿಂದ ಜಡತ್ವ ತುಂಬಿದವರಿಗೆ ನಾಟಕ ತನ್ನನ್ನು ತಾನು ಶೋಧಿಸಲು ಪ್ರೇರೇಪಿಸುತ್ತದೆ.
ಕೋಮುವಾದ ಮತ್ತು ಧರ್ಮಗಳು ಆಫೀಮು ತರಹ ಸಾಮಾನ್ಯಗೊಳ್ಳುತ್ತಿವೆ. ಧರ್ಮೋಪದೇಶ ಮಾಡುವ ಸ್ವಾಮೀಜಿ, ಸನ್ಯಾಸಿಗಳೆಲ್ಲ ಕತ್ತಿ ಗುರಾಣಿ, ಬಂದೂಕುಗಳ ಧ್ಯಾನ ಮಾಡಲು ಶುರುವು ಹಚ್ಚಿಕೊಂಡಿದ್ದಾರೆ. ಈ ಬಗೆಯ ಅನೇಕ ಸಂಭಾಷಣೆಗಳು ಚಿಂತನೆಗೆ ಹಚ್ಚುತ್ತವೆ. ಸತಿ ಪತಿಗಳು ಪರಸ್ಪರ ಸೇವೆಯ ಮೂಲಕ ಒಂದಾದೊಡೆ ಅದು ಪರಮಾತ್ಮನನ್ನು ಕಾಣುವ ಅಧ್ಯಾತ್ಮದ ಅನುಸಂಧಾನವು. ಕಾಯಕ ಜೀವಿಗಳು ಧ್ಯಾನದಂತೆ ತಮ್ಮ ಕಾಯಕವನ್ನು ನಿರ್ವಹಿಸಿದರೆ ಅನುಭವ ಮತ್ತು ಅನುಭಾವ ಎರಡನ್ನೂ ಗಳಿಸಲು ಸಾಧ್ಯ.
‘ಮಾಡೋರ ಕಸುಬಿನ್ಯಾಗೆ, ಸಿಗೋ ಫಲದಾಗೆ ಬುದ್ಧತ್ವವಿದೆ.’ ಇದು ಬದುಕಿನ ಪಾಡು ಹಾಡಿನಲ್ಲಿದೆ. ತತ್ವಪದಗಳ ಗಾಯಕಿ ನಾಟಕವನ್ನು ಚೆಲುವುಗೊಳಿಸಿದೆ. ಒಂದು ಸಂಗೀತ ನಾಟಕದ ಅನುಭವ ದಕ್ಕುತ್ತದೆ. ಕೆಲವೊಮ್ಮೆ ಆಧುನಿಕ ಸಂಗೀತ ಹಾಡು ಕುಣಿತವು ನವ ಶೈಲಿಕೃತದಲ್ಲಿ ದೃಶ್ಯವನ್ನು ಅಂದಗೊಳಿಸಿದೆ. ಬುದ್ಧ, ಬಸವ, ಅಲ್ಲಮ, ಗಾಂಧಿ ಮತ್ತು ಅಂಬೇಡಕರರಷ್ಟೆ ಅಲ್ಲ ನಮ್ಮ ಸಂವಿಧಾನದ ಮಹತ್ವವನ್ನು ನಾಟಕ ಬಿಂಬಿಸುತ್ತದೆ. ಆ ತಿಳಿವು ಇಂದಿನ ತುರ್ತು ಸಹ ಆಗಿದೆ. ನಾಟಕಕಾರ ಮತ್ತು ನಿರ್ದೇಶಕರು ವರ್ತಮಾನದಲ್ಲಿ ಗಾಂಧಿ ಮತ್ತು ಅಂಬೇಡಕರರನ್ನು ತಂದಿದ್ದು ಇಂದಿನ ಇಂಡಿಯಾಗೆ ಈ ಎರಡು ಚಿಂತನೆಗಳ ಮಹಾನದಿಗಳ ಅಗತ್ಯತೆಯನ್ನು ಸಾರುತ್ತದೆ.
ಹನ್ನೆರಡನೆಯ ಶತಮಾನದಿಂದ ಇಪ್ಪತ್ತನೆಯ ಶತಮಾನದವರೆಗೂ ಮನುಷ್ಯ ಶೋಧವನ್ನು ನಡೆಸುವ ನಾಟಕದ ಪ್ರಯೋಗವು ನಟರ ಸಹಜ ಅಭಿನಯ ಮೂಲಕ ಪ್ರೇಕ್ಷರನ್ನು ತಲುಪುವಲ್ಲಿ ಗೆದ್ದಿತು. ನೇಪಥ್ಯದಲ್ಲಿ ಮಧ್ಯದ ಹೆಬ್ಬಾಗಿಲಿಗೆ ಕಲ್ಯಾಣದ ಲಾಂಛನವಿದೆ. ಅದರ ಕೆಳಗೆಯೆ ಮನುಷ್ಯ ವ್ಯವಹಾರಗಳು ಜರುಗುವವು.
ಆಯಗಾರ ಬದುಕು ಇದು ಸಹಬಾಳ್ವೆ. ಕಮ್ಮಾರ, ಮೋಚಿ, ಮಡಿವಾಳ ಮುಂತಾದ ಬಹುತ್ವದ ಬದುಕು ಸಾಮರಸ್ಯದ್ದೆ ಅಲ್ಲವೇ! ಪ್ರಶ್ನೆ ಕೇಳುವ ಕನ್ನಡಿ ಆಂತರಿಕ ಶೋಧಕ್ಕೆ ಮದ್ದಾಗಿದೆ. ಅದೊಂದು ಬಹುರೂಪಕದಲ್ಲಿ ನಿಲ್ಲುತ್ತದೆ.
ಅಂತ್ಯದಲ್ಲಿ ಕಲ್ಯಾಣದ ಲಾಂಛನ ಕಳೆದು ವರ್ತಮಾನದಲ್ಲಿ ಬಸವ ಕುದುರೆ ಸವಾರಿಯ ಪ್ರತಿಮೆಯಾಗಿ ಸ್ಥಾವರಗೊಳ್ಳುತ್ತಾನೆ. ಚಲನತ್ವಕ್ಕೆ ಮಂಟೆದಲ್ಲಮ ಆಗಮಿಸಬೆಕಾಗುತ್ತದೆ. ಆ ಮಂಟೇದಲ್ಲಮನನ್ನು ಹುಡುಕಾಟ ನಡೆಸುತ್ತಿದ್ದ ಬಸವ ಪ್ರಮುಖ ಶರಣರು ಸಮ್ಮಿಲನಗೊಂಡು ಬಯಲು ಬಯಲಾಗಿ ಸಾಗುವಲ್ಲಿ ನಾಟಕ ಅಂತ್ಯಗೊಳ್ಳುತ್ತದೆ.
ಈ ನಾಟಕದ ವಸ್ತು ಮತ್ತು ಪಾತ್ರಗಳು ಕಾಲ್ಪನಿಕತೆಯ ರೂಪಗಳು ಸರಿ, ವಾಸ್ತವದ ಅನುಭವವೂ ಹೌದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.