ಮಹಾತ್ಮ ಗಾಂಧಿ ಅವರ ಚಿತ್ರವಿರುವ ನಾಲ್ಕು ಅಂಚೆ ಚೀಟಿಗಳು 1948ರಲ್ಲಿ ಬಿಡುಗಡೆಯಾಗಿದ್ದವು. ಆ ನಾಲ್ಕರಲ್ಲಿ ಒಂದು ಅಂಚೆ ಚೀಟಿಯ ಮುಖಬೆಲೆ ₹ 10. ಆಗಿನ ಕಾಲದಲ್ಲೇ ಹತ್ತು ರೂಪಾಯಿ ಎಂದರೆ ಊಹಿಸಿ. ಜನಸಾಮಾನ್ಯರು ಈ ಅಂಚೆ ಚೀಟಿ ಕೊಳ್ಳಲಿಲ್ಲ. ಇದರ ಜೊತೆ ಬಿಡುಗಡೆಯಾಗಿದ್ದ ಕಡಿಮೆ ಮೌಲ್ಯದ ಒಂದೂಕಾಲು ಆಣೆ, ಮೂರೂವರೆ ಆಣೆ, 12 ಆಣೆ ಮುಖಬೆಲೆಯ ಅಂಚೆ ಚೀಟಿಗಳ ಬಳಕೆ ಮಾಡತೊಡಗಿದರು.
ಬೇರೆ ದಾರಿಕಾಣದೇ ಸರ್ಕಾರ ₹ 10 ಮುಖಬೆಲೆಯ ಸ್ಟ್ಯಾಂಪ್‌ಅನ್ನು ಸಾರ್ವಜನಿಕ ಬಳಕೆಯಿಂದ ಹಿಂಪಡೆದುಕೊಂಡಿತು. ಅದರ ಮೇಲೆ ಸರ್ವಿಸ್ ಎಂಬ ಮೊಹರು ಒತ್ತಿ ತಾನೇ ಬಳಸಲು ನಿರ್ಧರಿಸಿ ರಾಜ್ಯಪಾಲರುಗಳಿಗೆ ಕಳುಹಿಸಿತು. ಈಗ ಅತ್ಯಂತ ವಿರಳವಾಗಿರುವ ಆ ಅಂಚೆ ಚೀಟಿಯ ಬೆಲೆೆ ಎಷ್ಟು ಗೊತ್ತೇ? ಸುಮಾರು ಎಂಟು ಲಕ್ಷ ರೂಪಾಯಿ! ಮೌಲ್ಯದ ದೃಷ್ಟಿಯಿಂದ ಇದು ದೇಶದ ಅತ್ಯಂತ ದುಬಾರಿ ಅಂಚೆ ಚೀಟಿ.
ಸರ್ವಿಸ್ ಎಂಬ ಮೊಹರು ಹೊಂದಿಲ್ಲದ ಇದೇ ಅಂಚೆ ಚೀಟಿಯ ಬೆಲೆ ಸುಮಾರು ₹ 10 ಸಾವಿರದಿಂದ 12 ಸಾವಿರ ಇದೆ ಎಂಬ ಅಂದಾಜು ಇದೆ. ನಕಲು ಮಾಡುವವರೂ ಇಲ್ಲೂ ಬುದ್ಧಿ ಓಡಿಸಿದರು. ಮೊಹರು ಇರದ ಅಂಚೆ ಚೀಟಿಯ ಮೇಲೆ ಸರ್ವಿಸ್ ಎಂಬ ನಕಲು ಮೊಹರು ಹಾಕಿ ಮಾರಾಟ ಮಾಡಿದರು. ಆದರೆ ಈ ಕೃತ್ಯ ಬೇಗ ಬೆಳಕಿಗೆ ಬಂತು.
1948ರ ಆಗಸ್ಟ್ 15ರಂದು, ಸ್ವಾತಂತ್ರ್ಯದ ಮೊದಲ ವರ್ಷದ ನೆನಪಿಗಾಗಿ ಈ ನಾಲ್ಕು ಅಂಚೆ ಚೀಟಿಗಳ ಬಿಡುಗಡೆಯಾಗಿತ್ತು. ಸ್ವತಂತ್ರ್ಯ ಭಾರತದಲ್ಲಿ ವ್ಯಕ್ತಿಯೊಬ್ಬರ ಮೇಲೆ ಅಂಚೆ ಚೀಟಿ ಹೊರಬಂದಿದ್ದು ಅದೇ ಮೊದಲು. ನಾಸಿಕ್‌ನ ಸೆಕ್ಯುರಿಟಿ ಪ್ರೆಸ್‌ನಲ್ಲಿ ಈ ಅಂಚೆ ಚೀಟಿ ಮುದ್ರಣಗೊಂಡಿತ್ತು. ಆದರೆ ಅಂಚೆ ಚೀಟಿ ಬಿಡುಗಡೆಗೆ ಎಂಟು ತಿಂಗಳ ಮೊದಲು ಬಾಪು ಅವರ ಹತ್ಯೆಯಾಗಿತ್ತು.
ಅಂಚೆ ಚೀಟಿ ಸಂಗ್ರಹ ಹಳೆಯ ಹವ್ಯಾಸ. ಭಾರತದಲ್ಲಿ ಗಾಂಧಿ ಅಂಚೆ ಚೀಟಿ ಸಂಗ್ರಹ ಮಾಡುವವರ ಸಂಖ್ಯೆಯೂ ದೊಡ್ಡದೇ. ದಾವಣಗೆರೆಯ ಉದ್ಯಮಿ ಬಸವರಾಜ ಯಳಮಲ್ಲಿ ಅವರೂ ಗಾಂಧೀಜಿ ಅಂಚೆ ಚೀಟಿಗಳ ಸಂಗ್ರಾಹಕರು.
ಗಾಂಧೀಜಿ ಅಂಚೆ ಚೀಟಿಗಳನ್ನು ಹೆಚ್ಚಿನ ಆಸ್ಥೆಯಿಂದ ಸಂಗ್ರಹಿಸಿರುವ ಅವರಿಗೆ 2007ರ ಕರ್ನಾಪೆಕ್ಸ್‌ನಲ್ಲಿ (ರಾಜ್ಯ ಮಟ್ಟದ ಅಂಚೆ ಚೀಟಿ ಮೇಳ) ಎರಡನೇ ಸ್ಥಾನ ಒಲಿದಿತ್ತು. ಮರುವರ್ಷ ಚೆನ್ನೈನಲ್ಲಿ (ಆಗಸ್ಟ್ 5) ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ (ಇನ್‌ಪೆಕ್ಸ್) ತಮ್ಮ ಪ್ರದರ್ಶನಕ್ಕಾಗಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಕುಟುಂಬದ ವ್ಯವಹಾರವಾಗಿದ್ದ ತೂಕದ ಅಂಗಡಿಯನ್ನು ನಡೆಸುತ್ತಿದ್ದ ಅವರು 2014ರಲ್ಲಿ ದಾವಣಗೆರೆಯ ಚಾಮರಾಜಪೇಟೆಯಲ್ಲಿ ‘ತುಲಾ ಭವನ’ ಆರಂಭಿಸಿದರು. ಇದು ದೇಶದಲ್ಲೇ ವಿಶಿಷ್ಟ ಎನಿಸಿದ ತೂಕ ಮತ್ತು ಮಾಪನಗಳ ಸಂಗ್ರಹಾಲಯ. ‘ನನ್ನ ಕನಸಾದ ಸಂಗ್ರಹಾಲಯದ ಕಡೆ ಗಮನಹರಿಸುವ ಉದ್ದೇಶದಿಂದ ಅಂಚೆ ಚೀಟಿ, ನಾಣ್ಯ ಸಂಗ್ರಹ ಹವ್ಯಾಸಕ್ಕೆ ವಿರಾಮ ನೀಡಿದೆ’ ಎನ್ನುತ್ತಾರೆ ಅವರು.
ಗಾಂಧೀಜಿ ಅವರಿಗೆ ಸಂಬಂಧಿಸಿ ವಿಶ್ವದ 138 ದೇಶಗಳು ಅಂಚೆ ಚೀಟಿಗಳನ್ನು ಹೊರತಂದಿವೆ. ಒಂದೇ ವ್ಯಕ್ತಿಯ ಮೇಲೆ ಇಷ್ಟೊಂದು ವರ್ಣ, ಅಳತೆ, ವೈವಿಧ್ಯಮಯ ಅಂಚೆ ಚೀಟಿಗಳು ಬೇರೆ ಯಾವ ವ್ಯಕ್ತಿಯ ಮೇಲೂ ಬಂದಿಲ್ಲ.
ಭಾರತದಲ್ಲೇ ಮಹಾತ್ಮ ಗಾಂಧಿ ಕುರಿತು ವಿವಿಧ ಸಂದರ್ಭಗಳಲ್ಲಿ 90ಕ್ಕೂ ಹೆಚ್ಚು ಅಂಚೆ ಚೀಟಿಗಳು ಪ್ರಕಟವಾಗಿವೆ. ಭಾರತ ಬಿಟ್ಟರೆ, ಗಾಂಧೀಜಿ ಅವರ ಮೇಲೆ ಅಂಚೆಚೀಟಿ ಹೊರತಂದ ದೇಶ ಎರಡಬೇ ಅಮೆರಿಕ (1961ರಲ್ಲಿ). ಆಫ್ರಿಕಾ ಖಂಡದ ಕಾಂಗೊ 1967ರಲ್ಲಿ ಗಾಂಧೀಜಿ ಅವರ ಸ್ಟ್ಯಾಂಪ್ ಹೊರತಂದಿತ್ತು. 1969ರಲ್ಲಿ, ಗಾಂಧೀಜಿ ಅವರ ಜನ್ಮ ಶತಮಾನೋತ್ಸವದ ವರ್ಷ 40ಕ್ಕೂ ಹೆಚ್ಚು ದೇಶಗಳು ಅವರ ಭಾವಚಿತ್ರದ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದವು. 2006ರ ಹೊತ್ತಿಗೆ 103 ದೇಶಗಳು ಭಾರತದ ರಾಷ್ಟ್ರಪಿತನ ಸ್ಟ್ಯಾಂಪ್ ಹೊರತಂದಿದ್ದವು.
ಕಳೆದ ವರ್ಷ ಗಾಂಧೀಜಿ ಅವರ 150ನೇ ಜನ್ಮ ಶತಮಾನೋತ್ಸವ. ವಿಶ್ವದ ಬಹುತೇಕ ದೇಶಗಳು ಗಾಂಧೀಜಿ ಅಂಚೆ ಚೀಟಿ ಬಿಡುಗಡೆ ಮಾಡಿದ್ದವು. ಭಾರತವೂ ವಿಭಿನ್ನ ರೀತಿಯ ಅಂಚೆ ಚೀಟಿಗಳನ್ನು ಹೊರತಂದಿತ್ತು.
ದೇಶದಲ್ಲಿ ಗಾಂಧಿ ಭಾವಚಿತ್ರದ ಸ್ಟ್ಯಾಂಪ್‌ಗಳ ಜೊತೆ ಪೋಸ್ಟ್ ಕವರ್, ಇನ್‌ಲ್ಯಾಂಡ್ ಲೆಟರ್, ವಿಶೇಷ ಕವರ್‌ಗಳು, ನೋಟು, ನಾಣ್ಯಗಳು ಬಿಡುಗಡೆಯಾಗಿವೆ. ಇವುಗಳ ಕರಾರುವಾಕ್ ಸಂಖ್ಯೆ ತಿಳಿದುಕೊಳ್ಳುವುದು ಕಷ್ಟ.
‘ಗಾಂಧಿ ಅಂಚೆ ಚೀಟಿ ಸಂಗ್ರಹಿಸುವರಲ್ಲಿ ನನಗೆ ಹಿರಿಯ ಸಂಗ್ರಾಹಕರಾದ ದಿ. ಮಹಾಲಿಂಗೇಶ್ವರ ಅಥಣಿ, ವಿಜಯಪುರದ ಎಲಿಗಾರ್, ದಾವಣಗೆರೆಯ ಡಾ.ಜಿನದತ್ತ ಅವರು ಮಾರ್ಗದರ್ಶನ ಮಾಡಿದ್ದರು. ಅವರ ಬಳಿಯೂ ದೊಡ್ಡ ಸಂಗ್ರಹವಿತ್ತು’ ಎನ್ನುತ್ತಾರೆ ಬಸವರಾಜ ಯಳಮಲ್ಲಿ.
‘ಈಗಿನ ಪೀಳಿಗೆಯವರಿಗೆ ಗಾಂಧಿ ಅಂಚೆ ಚೀಟಿಗಳ ಸಂಗ್ರಹವನ್ನು ದೊಡ್ಡ ಮಟ್ಟಿಗೆ ಮಾಡುವುದು ತುಂಬಾ ಪ್ರಯಾಸದ ಕೆಲಸ. ವಿಶ್ವದ ಬಹುತೇಕ ಕಡೆ ಮುದ್ರಣವಾದ ಅಂಚೆ ಚೀಟಿಗಳು ಈಗ ಸುಲಭವಾಗಿ ಸಿಗುವುದಿಲ್ಲ’ ಎನ್ನುತ್ತಾರೆ. ದಾವಣಗೆರೆ ನಗರದ ವಿವಿಧ ಕಡೆ ಅವರು ಗಾಂಧಿ ಸ್ಟ್ಯಾಂಪ್‌ಗಳ 20 ಪ್ರದರ್ಶನಗಳನ್ನು ಏರ್ಪಾಡು ಮಾಡಿದ್ದಾರೆ.
ಕಳೆದ ವರ್ಷ ಗಾಂಧೀಜಿ ಅವರ 150ನೇ ಜನ್ಮ ಶತಮಾನೋತ್ಸವ ಅಂಗವಾಗಿ ಭಾರತೀಯ ಅಂಚೆ ಇಲಾಖೆ ದೊಡ್ಡ ಮಟ್ಟದಲ್ಲಿ ಗಾಂಧೀಜಿ ಅಂಚೆ ಚೀಟಿಗಳ ಪ್ರದರ್ಶನ ಏರ್ಪಡಿಸಿದ್ದು, ಆಸಕ್ತರ ಗಮನ ಸೆಳೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.