‘ಅಯ್ಯೋ... ಈ ಸಿನಿಮಾ, ಮೊಬೈಲ್ ಬಂದ ಮೇಲೆ ತೊಗಲು ಬೊಂಬೆಯಾಟವನ್ನು ಯಾರು ನೋಡುತ್ತಾರೆ. ನಾವು ತಯಾರಿಸಿದ ತೊಗಲು ಬೊಂಬೆಗಳು ಕಲಾ ಪ್ರದರ್ಶನದಲ್ಲಿ ಕೇವಲ ಶೋಪೀಸ್‌ಗಳಾಗಿರುತ್ತವೆಯೇ ಹೊರತು ಮಾರಾಟವಾಗುವುದಿಲ್ಲ. ಈಗಿನ ಮಕ್ಕಳಿಗೆ ಇವು ಕೇವಲ ಚಿತ್ರಗಳಷ್ಟೆ. ಪಾಲಕರಿಗಂತೂ ಇದನ್ನು ವಿವರಿಸುವ ಸಮಯವೂ ಇಲ್ಲ, ಮಾಹಿತಿಯೂ ಇಲ್ಲ. ಇನ್ನು ತೊಗಲು ಬೊಂಬೆಯಾಟವಾಡಿಸುವವರು ಈ ವೃತ್ತಿ ತೊರೆದು ನಗರಗಳತ್ತ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ನಾವೂ ಕಾಲಕ್ಕೆ ತಕ್ಕಂತೆ ತೊಗಲು ಬೊಂಬೆಯ ಸ್ವರೂಪವನ್ನು ಕೊಂಚ ಬದಲಾಯಿಸಿ ಶೇಡ್‌ಲ್ಯಾಂಪ್, ಡೋರ್ ಹ್ಯಾಂಗಿಂಗ್ಸ್ ಮತ್ತು ವರ್ಣಚಿತ್ರದತ್ತ ಹೊರಳಿದ್ದೇವೆ..’
ಹೀಗೆ ಒಂದೇ ಉಸಿರಿನಲ್ಲಿ ತೊಗಲು ಬೊಂಬೆಯಾಟದ ಭವಿಷ್ಯ, ತಮ್ಮ ಸಂಕಷ್ಟವನ್ನು ಕೊಂಚ ಗದ್ಗದಿತ ದನಿಯಲ್ಲಿ ಹೇಳಿದವರು ಅನಂತಪುರ ಜಿಲ್ಲೆಯ ಧರ್ಮಾವರಂನ ಕೆ.ಶ್ರೀನಿವಾಸಲು.
ಭಾರತದ ಜಾನಪದ ಸಂಪ್ರದಾಯದ ಭಾಗವಾಗಿರುವ ತೊಗಲು ಬೊಂಬೆಯಾಟಕ್ಕೆ ಸುಮಾರು 15 ಶತಮಾನಗಳ ಇತಿಹಾಸವಿದೆ. ಟಿ.ವಿ, ಮೊಬೈಲ್ ಇಲ್ಲದ ಕಾಲದಲ್ಲಿ ಮನರಂಜನೆಯ, ಮಕ್ಕಳಿಗೆ ಪುರಾಣ ಕಥೆಗಳನ್ನು ಹೇಳುವ ಮಾಧ್ಯಮವಾಗಿ ಈ ಬೊಂಬೆಯಾಟ ಈ ಭೂಮಿಯಲ್ಲಿ ಬೇರೂರಿತ್ತು. ಆದರೆ ಕಾಲ ಬದಲಾದಂತೆ ಇತರೆ ಕಲೆಗಳಂತೆ ತೊಗಲು ಬೊಂಬೆಯಾಟವೂ ಕ್ರಮೇಣವಾಗಿ ತೆರೆಯ ಹಿಂದೆ ಸರಿಯುತ್ತಿದೆ. ನೆರಳು–ಬೆಳಕಿನಾಟ ಪೂರ್ಣ ಕತ್ತಲೆಯತ್ತ ಹೆಜ್ಜೆ ಇಟ್ಟಿದೆ.ಇದನ್ನು ಬಹಳ ಹತ್ತಿರದಿಂದ ಕಂಡವರು ಶ್ರೀನಿವಾಸಲು. ಏಕೆಂದರೆ, ತೊಗಲು ಬೊಂಬೆ ತಯಾರಿಸುವವೃತ್ತಿಯಲ್ಲಿ ಇವರಿಗೆ 33 ವರ್ಷಗಳ ಸುದೀರ್ಘ ಅನುಭವ. ಮುತ್ತಾತನ ಕಾಲದಿಂದಲೂ ಇವರ ಕುಟುಂಬಕ್ಕೆ ಇದೇ ಆಧಾರ. ಬೊಂಬೆಗಳ ತಯಾರಿಕೆಯಷ್ಟೇ ಅಲ್ಲದೆ ಅವುಗಳನ್ನು ಆಟವಾಡಿಸುತ್ತಲೂ ಇದ್ದ ಹಲವು ಕುಟುಂಬಗಳಿರುವ ಪ್ರದೇಶದಿಂದಲೇ ಬಂದಿರುವವರು ಶ್ರೀನಿವಾಸಲು.
ಜನ ಬದಲಾಗಿದ್ದಾರೆ, ನಮ್ಮ ವೃತ್ತಿಯೂ ಬದಲಾಗಿದೆ. ‘ಇದು ಮೊಬೈಲ್ ಕಾಲ. ಕಲೆಯೂ ಫ್ಯಾಷನ್ ಆಗಿದೆ. ತೊಗಲು ಬೊಂಬೆಗಳೆಂದರೆ ಹೆಚ್ಚಿನ ಮಕ್ಕಳಿಗೆ ಮಾಹಿತಿಯೇ ಇಲ್ಲ. ಇನ್ನು ಶ್ರೀಮಂತರ ಮಕ್ಕಳ ಜನ್ಮದಿನದ ಕಾರ್ಯಕ್ರಮ, ಮದುವೆ ಆರತಕ್ಷತೆಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಈ ಆಟ ಸೀಮಿತವಾಗುತ್ತಿದೆ. ತೊಗಲು ಬೊಂಬೆ ಮಾರಾಟವಾದರಷ್ಟೇ ನಮ್ಮ ಹೊಟ್ಟೆ ತುಂಬುತ್ತದೆ. ಹೀಗಾಗಿ ಕೂಲಿ ಕೆಲಸಕ್ಕೆ ಹೋಗುವ ಸ್ಥಿತಿ ಬಂದಿದೆ. ಶೇ 10ರಷ್ಟು ಜನರಷ್ಟೇ ಇನ್ನೂ ಈ ವೃತ್ತಿಯಲ್ಲಿದ್ದಾರೆ. ಈ ಕಾರಣದಿಂದ ನಾವೂ ತೊಗಲು ಬೊಂಬೆಯ ಸ್ವರೂಪವನ್ನು ಕೊಂಚ ಬದಲಾಯಿಸಬೇಕಾದ ಅನಿವಾರ್ಯ ಎದುರಾಗಿದೆ’ ಎಂದು ಈ ಕಲಾವಿದ ಹೇಳುತ್ತಾರೆ.
‘ಚರ್ಮದಲ್ಲೇ ತಯಾರಿಸಲಾದ ವಾಲ್ ಹ್ಯಾಂಗಿಂಗ್ಸ್, ಡೋರ್ ಹ್ಯಾಂಗಿಂಗ್ಸ್ ಹಾಗೂ ಶೇಡ್‌ಲ್ಯಾಂಪ್ಸ್ ಈಗ ನಮ್ಮ ಹೊಟ್ಟೆ ತುಂಬಿಸುತ್ತಿವೆ. ಜನ ಇವುಗಳತ್ತ ಆಕರ್ಷಿತರಾಗುತ್ತಾರೆ. ಒಂದು ಶೇಡ್‌ಲ್ಯಾಂಪ್ ಮಾರಾಟದಿಂದ ₹800–₹2000ದವರೆಗೆ ಹಣ ಬರುತ್ತದೆ. ಅಷ್ಟೊಂದು ದುಬಾರಿಯೇ ಎನ್ನುವ ಜನರಿಗೆ ಇದರ ಹಿಂದಿರುವ ಕಷ್ಟ ತಿಳಿದಿಲ್ಲ. ಈ ಹೊಸ ಸ್ವರೂಪದ ತೊಗಲು ಬೊಂಬೆಗಳಲ್ಲೇ ನಾವುಸೀತಾರಾಮ ಪಟ್ಟಾಭಿಷೇಕ, ದಶಾವತಾರ, ರಾಧಾಕೃಷ್ಣ, ರಾಮಾಯಣ ಹಾಗೂ ಮಹಾಭಾರತದ ಕಥೆ ಹೇಳುತ್ತಿದ್ದೇವೆ’ ಎನ್ನುತ್ತಾರೆ.
ತೊಗಲು ಬೊಂಬೆಗಳಲ್ಲೂ ಹಲವು ವೈವಿಧ್ಯವಿದ್ದು, ಕೇರಳದಲ್ಲಿ ಬಳಕೆಯಾಗುವ ಬೊಂಬೆಗಳು ಕೇವಲ ನೆರಳು–ಬೆಳಕಿನಾಟಕ್ಕಷ್ಟೇ ಸೀಮಿತ. ಇವುಗಳಲ್ಲಿ ಯಾವುದೇ ವರ್ಣಗಳ ಬಳಕೆಯಿಲ್ಲ. ಕರ್ನಾಟಕದಲ್ಲಿ ತೊಗಲು ಬೊಂಬೆಯಾಟವನ್ನು ಕುಳಿತು ಆಡಿಸುತ್ತಾರೆ. ಅದೇ ಆಂಧ್ರದಲ್ಲಿ 7–8 ಅಡಿ ಎತ್ತರದ ತೊಗಲು ಬೊಂಬೆಗಳ ಬಳಕೆಯಾಗುತ್ತದೆ. ಇವುಗಳ ತಯಾರಿಗೆ ವಾರಗಳೇ ಹಿಡಿಯುತ್ತವೆ. ₹12 ಸಾವಿರದವರೆಗೆ ಖರ್ಚು ಬರುತ್ತದೆ... ಶ್ರೀನಿವಾಸಲು ಹಾಗೆಯೇ ವಿವರ ಕೊಡುತ್ತಾ ಹೋದರು.
ಹೊಸ ಸ್ವರೂಪ ಪಡೆದಿರುವ ತೊಗಲು ಬೊಂಬೆಗಳು ಸಾಂಪ್ರದಾಯಿಕ ಮಾದರಿಯವಲ್ಲದೇ ಇದ್ದರೂ ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ವಿಭಿನ್ನ ಪ್ರಯತ್ನವೇ ಆಗಿದೆ. ಈ ಮೂಲಕವಾದರೂ ಈ ವೃತ್ತಿ, ಕಲೆ ಇನ್ನೊಂದಿಷ್ಟು ಕಾಲ ಉಸಿರಾಡಲಿದೆ ಎನ್ನುವ ಆಶಾಭಾವ ಈ ಕಲಾವಿದರದ್ದು.
ತಯಾರಿ ಹೇಗೆ?
ಮಾರುಕಟ್ಟೆಯಿಂದ ಮೇಕೆಯ ಚರ್ಮ ತಂದು ಅದನ್ನು ಸ್ವಚ್ಛಗೊಳಿಸಿ ದಬ್ಬಣಗಳ ಸಹಾಯದಿಂದ ಅದನ್ನು ಬಟ್ಟೆಯಂತೆ ಹರಡಿ ಮೊದಲು ಚಿತ್ರದ ಔಟ್‌ಲೈನ್ ಮಾಡಲಾಗುತ್ತದೆ. ಈ ಚಿತ್ರಕಲೆಯ ನಂತರಅದಕ್ಕೆ ಬಣ್ಣ ತುಂಬಿಸಲಾಗುತ್ತದೆ. ಬಳಕೆಯಾಗುವ ಎಲ್ಲ ಬಣ್ಣವೂ ನೈಸರ್ಗಿಕವೇ.ಮರದ ಅಂಟಿಗೆ ಸೀಮೆಎಣ್ಣೆ ಮಿಶ್ರಣ ಮಾಡಿ ಕಪ್ಪು ಬಣ್ಣ ತಯಾರಿಸಲಾಗುತ್ತದೆ. ಅದೇ ರೀತಿ ಪೇರಳೆಯ ಬೀಜಗಳಿಂದ ಕೆಂಪು ಬಣ್ಣ, ಕಲ್ಲಿದ್ದಲು ಹಾಗೂ ತುಂಬೆ ಗಿಡದ ರಸದಿಂದ ನೀಲಿ ಬಣ್ಣ ಹೀಗೆ. ಹೀಗಾಗಿಯೇ ನೂರಿನ್ನೂರು ವರ್ಷಗಳವರೆಗೆ ಈ ಬಣ್ಣ ಮಾಸುವುದಿಲ್ಲ.
ಸಂಪರ್ಕ: 8897291616
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.