ADVERTISEMENT

ಜಾನಪದ ಪರಿಷತ್ತಿಗೆ ಯುನೆಸ್ಕೊ ಮಾನ್ಯತೆಯ ಗರಿ

ಓದೇಶ ಸಕಲೇಶಪುರ
Published 12 ಅಕ್ಟೋಬರ್ 2024, 23:52 IST
Last Updated 12 ಅಕ್ಟೋಬರ್ 2024, 23:52 IST
<div class="paragraphs"><p>ರಾಮನಗರದಲ್ಲಿರುವ ಜಾನಪದ ಪರಿಷತ್ತಿನ ಜಾನಪದ ಲೋಕದ ಆವರಣದಲ್ಲಿ ಗಮನ ಸೆಳೆಯುವ ಗಿರಿಜನ ಶಿಲ್ಪಗಳು</p></div>

ರಾಮನಗರದಲ್ಲಿರುವ ಜಾನಪದ ಪರಿಷತ್ತಿನ ಜಾನಪದ ಲೋಕದ ಆವರಣದಲ್ಲಿ ಗಮನ ಸೆಳೆಯುವ ಗಿರಿಜನ ಶಿಲ್ಪಗಳು

   

-ಪ್ರಜಾವಾಣಿ ಚಿತ್ರ

ಅದು 1979ರ ಫೆಬ್ರುವರಿ 11ನೇ ದಿನ. ಐಎಎಸ್ ಅಧಿಕಾರಿಯಾಗಿ ನಲವತ್ತು ವರ್ಷಗಳ ಸುದೀರ್ಘ ಸಾರ್ವಜನಿಕ ಸೇವೆಯಿಂದ ನಿವೃತ್ತರಾಗಿದ್ದ ಎಚ್‌.ಎಲ್.ನಾಗೇಗೌಡ ಅವರಿಗೆ ಹಿತೈಷಿಗಳು ಬೆಂಗಳೂರಿನಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದರು. ಅಭಿಮಾನದೊಂದಿಗೆ ₹1.15 ಲಕ್ಷ ಮೊತ್ತವನ್ನು ಗೌಡರಿಗೆ ಕಾಣಿಕೆಯಾಗಿ ಕೊಟ್ಟರು. ಜಾನಪದ ಕ್ಷೇತ್ರದ ಸಂಶೋಧನಾ ಕೃಷಿಯಲ್ಲಿ ಅದಾಗಲೇ ತೊಡಗಿದ್ದ ನಾಗೇಗೌಡರು, ಆ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಜಾನಪದವನ್ನು ಉಳಿಸಿ–ಬೆಳೆಸುವ ಕಾಯಕಕ್ಕೆ ವಿನಿಯೋಗಿಸುವ ಆಲೋಚನೆ ಮಾಡಿದರು.

ADVERTISEMENT

ಕನ್ನಡನಾಡಿನ ಜಾನಪದ ಪರಂಪರೆಯ ಸಂವರ್ಧನೆ, ಸಂರಕ್ಷಣೆ, ಪ್ರಸರಣ, ದಾಖಲಾತಿ ಹಾಗೂ ಪ್ರಚಾರ ಪ್ರಧಾನ ಆಶಯಗಳೊಂದಿಗೆ ಮಾರ್ಚ್‌ 21, 1979ರಲ್ಲಿ ಕರ್ನಾಟಕ ಜಾನಪದ ಪರಿಷತ್ತನ್ನು ಸ್ಥಾಪಿಸಿದರು. ರಾಗಿ ಬೀಸುತ್ತಾ ಹಾಡುವ ಹೆಣ್ಣಿನ ಚಿತ್ರವನ್ನೇ ಪರಿಷತ್ತಿನ ಚಿಹ್ನೆಯಾಗಿ ರೂಪಿಸಿದ ಅವರು, ಪರಿಷತ್ತಿನ ಭವಿಷ್ಯದ ಚಟುವಟಿಕೆಗಳು ಹಾದಿ ತಪ್ಪದಂತೆ ಭದ್ರ ಅಡಿಪಾಯ ಹಾಕಿದರು. ಹೀಗೆ ಮಹಾನ್ ಆಶಯದೊಂದಿಗೆ ಶುರುವಾಗಿ ಕಳೆದ 45 ವರ್ಷಗಳಿಂದ ಜಾನಪದ ಪರಂಪರೆ, ಸಂಸ್ಕೃತಿ ಹಾಗೂ ಕಲೆಗಳನ್ನು ಉಳಿಸಿ ಪೋಷಿಸುತ್ತಾ ಬಂದಿರುವ ಪರಿಷತ್ತಿಗೆ ಇದೀಗ ಯನೆಸ್ಕೊ ಮಾನ್ಯತೆ ಸಿಕ್ಕಿದೆ. ದೇಶದ ಪ್ರಮುಖ ಸಾಂಸ್ಕೃತಿಕ ಕೇಂದ್ರವಾದ ಪರಿಷತ್ತಿಗೆ ವಿಶ್ವಸಂಸ್ಥೆಯ ಅಂಗಸಂಸ್ಥೆ ನೀಡಿರುವ ಈ ಮಾನ್ಯತೆಯು, ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಜಾಗತಿಕ ಮುದ್ರೆ ಒತ್ತಿದೆ. ವಿಶ್ವದಲ್ಲಿರುವ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ, ಪರಿಷತ್ತು ಸಹ ಒಂದಾಗಿ ಗುರುತಿಸಲ್ಪಟ್ಟಿದೆ. ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಯುನೆಸ್ಕೊದ ಆಂತರಿಕ ಸಮಿತಿಗೆ ಸಲಹೆಗಳನ್ನು ನೀಡುವ ಗೌರವವು ಪರಿಷತ್ತಿಗೆ ಸಿಕ್ಕಿದೆ.

ಜಾನಪದ ಲೋಕ

ಯುನೆಸ್ಕೊ ಮಾನ್ಯತೆ ಸಿಗುವಂತಹ ಕೆಲಸವನ್ನು ಪರಿಷತ್ತು ಏನು ಮಾಡಿದೆ? ಎಂಬ ಪ್ರಶ್ನೆ ಯಾರಲ್ಲಾದರೂ ಮೂಡಿದರೆ, ಒಮ್ಮೆ‘ಜಾನಪದ ಲೋಕ’ಕ್ಕೆ ಭೇಟಿ ನೀಡಬೇಕು. ಬೆಂಗಳೂರು– ಮೈಸೂರು ಹೆದ್ದಾರಿಯ ರಾಮನಗರದ ಬಳಿ ಸುಮಾರು 15 ಎಕರೆ ಪ್ರದೇಶದಲ್ಲಿರುವ ಈ ಲೋಕವು ಪರಿಷತ್ತು ಮಾಡಿಕೊಂಡು ಬಂದಿರುವ ಕೆಲಸಕ್ಕೆ ಬಹುದೊಡ್ಡ ಸಾಕ್ಷ್ಯವೆನಿಸುತ್ತದೆ. ನಾಗೇಗೌಡ ಅವರ ಕನಸಿನ ಕೂಸಾದ ಈ ಲೋಕ 1994ರಲ್ಲಿ ಶುರುವಾಗಿದ್ದು, ಬೃಹತ್ ಜಾನಪದ ವಸ್ತು ಸಂಗ್ರಹಾಲಯವಾಗಿದೆ. ಜನಪದ ಕಲೆಗಳು, ಸಂಸ್ಕೃತಿ, ಆಚರಣೆ, ಬದುಕಿನ ಅನಾವರಣ, ಅಧ್ಯಯನ, ಸಂಶೋಧನೆ, ಕಲೆಗಳ ತರಬೇತಿ ಸೇರಿದಂತೆ ಬಹುಮುಖಿ ಕಾರ್ಯಗಳನ್ನು ಮಾಡುತ್ತಿರುವ ಸಾಂಸ್ಕೃತಿಕ ಕೇಂದ್ರವಾಗಿದೆ.

ಗಿರಿಜನ ಲೋಕದಲ್ಲಿ ಮೈದಳೆದ ಜೇನು ಕುರುಬರ ಹಾಡಿ

‘ಸಾವಿರಕ್ಕೂ ಹೆಚ್ಚು ಗಂಟೆಗಳು ಕೇಳಬಹುದಾದ ಜನಪದ ಗೀತೆಗಳ ಧ್ವನಿಮುದ್ರಣ, 800 ಗಂಟೆ ವೀಕ್ಷಿಸಬಹುದಾದ ಜಾನಪದ ಕಲೆಗಳ ವಿಡಿಯೊ ಪರಿಷತ್ತಿನ ಸಂಗ್ರಹದಲ್ಲಿದೆ. ಗ್ರಾಮೀಣ ಬದುಕಿನ ಹಳ್ಳಿಗಳಲ್ಲಿ ಬಳಸುವ ವಸ್ತುಗಳು, ನಾಗೇಗೌಡರ ಬದುಕು ಮತ್ತು ಸಾಧನೆ ಹೇಳುವ ಬದುಕು ಚಿತ್ರಕುಟೀರ, ಇತಿಹಾಸವನ್ನು ಹೇಳುವ ಶಿಲ್ಪಮಾಳ, ಹಬ್ಬ–ಆಚರಣೆ– ಸಾಂಸ್ಕೃತಿಕ ಪರಿಕರಗಳ ದರ್ಶನದ ಲೋಕಮಹಲ್, ಜನಪದರ ಕರಕುಶಲತೆ ಹಾಗೂ ಬದುಕು ಹೇಳುವ ಆಯಗಾರರ ಮಾಳ, ಜಾನಪದ ಕಲೆಗಳಿಗೆ ಸಂಬಂಧಿಸಿದ ಲೋಕಸಿರಿ, ಕಲಾ ಪ್ರದರ್ಶನಕ್ಕೆ ಬಯಲು ರಂಗಮಂದಿರ, ವಿಡಿಯೊ ಸ್ಕೋಪ್ ಥಿಯೇಟರ್, ಜಾನಪದ ಗ್ರಂಥಾಲಯ, ದೊಡ್ಡಮನೆ, ಬುಡಕಟ್ಟು ಸಮುದಾಯಗಳ ಬದುಕು ಪರಿಚಯಿಸುವ ಗಿರಿಜನ ಲೋಕವು ನೋಡುಗರಿಗೆ ಜಾನಪದ ಜಗತ್ತಿನ ದರ್ಶನ ಮಾಡಿಸುತ್ತದೆ’ ಎಂದು ಪರಿಷತ್ತಿನ ಆಡಳಿತಾಧಿಕಾರಿ ಡಾ.ನಂದಕುಮಾರ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾನಪದ ಶೈಕ್ಷಣಿಕ ಚಟುವಟಿಕೆ

‘ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜಾನಪದ ಲೋಕದಲ್ಲಿ ಡಿಪ್ಲೋಮಾ ಕೋರ್ಸ್ ನಡೆಯುತ್ತಿದೆ. ಎಚ್‌.ಎಲ್. ನಾಗೇಗೌಡ ಸಂಶೋಧನಾ ಕೇಂದ್ರದಿಂದ ಕಳೆದೆರಡು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಾಗುತ್ತಿದ್ದು, ಈ ಸಾಲಿನಿಂದ ಪಿಎಚ್‌.ಡಿ ಪ್ರವೇಶಕ್ಕೆ ಮಾನ್ಯತೆ ಸಿಕ್ಕಿದೆ. ರಾಜ್ಯಮಟ್ಟದ ಜಾನಪದ ಗೀತ ಗಾಯನ ಸ್ಪರ್ಧೆ, ವರ್ಷಕ್ಕೊಮ್ಮೆ ಮೂರು ದಿನ ಲೋಕೋತ್ಸವದಲ್ಲಿ ಜಾನಪದ ಕಲೆಗಳ ಪ್ರದರ್ಶನ, ವಿವಿಧ ಕಲಾ ಪ್ರಕಾರಗಳಲ್ಲಿ ಸಾಧನೆ ಮಾಡಿದ 30 ಸಾಧಕರಿಗೆ ‘ಲೋಕೋತ್ಸವ ಪ್ರಶಸ್ತಿ’, ರಾಷ್ಟ್ರಮಟ್ಟದ ಜಾನಪದ ಸಾಧಕರಿಗೆ ‘ನಾಡೋಜ
ಎಚ್‌.ಎಲ್. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ’ ಹಾಗೂ ಕಲಾಶಾಲೆಯಲ್ಲಿ ಜಾನಪದ ಕಲೆಗಳ ತರಬೇತಿಯನ್ನು ನೀಡಲಾಗುತ್ತಿದೆ. ತಿಂಗಳಿಗೊಮ್ಮೆ ನಡೆಯುವ ಲೋಕಸಿರಿ ಕಾರ್ಯಕ್ರಮದಲ್ಲಿ, ವೈವಿಧ್ಯಮಯ ಕಲಾ ಪ್ರಕಾರಗಳ ಅಪರೂಪದ ಸಾಧಕರನ್ನು ಜಾನಪದ ಲೋಕಕ್ಕೆ ಆಹ್ವಾನಿಸಿ ಅವರೊಂದಿಗೆ ಮಾತುಕತೆ ಹಾಗೂ ಸನ್ಮಾನ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತಿದೆ. ದಸರಾ ಗೊಂಬೆ ಪ್ರದರ್ಶನ, ನವರಾತ್ರಿ ಬನ್ನಿ ಪೂಜೆ, ಸಂಕ್ರಾಂತಿ ಸುಗ್ಗಿ ಸಂಭ್ರಮ, ಹಳ್ಳಿ ಆಟಗಳ ಪ್ರದರ್ಶನ ಮತ್ತ ಸ್ಪರ್ಧೆ, ರಾಜ್ಯಮಟ್ಟದ ಗಾಳಿಪಟ ಉತ್ಸವವನ್ನು ಪರಿಷತ್ತು ಆಯೋಜಿಸುತ್ತಾ ಬಂದಿದೆ. ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತೆ 130ಕ್ಕೂ ಹೆಚ್ಚು ಪುಸ್ತಕಗಳು ಪರಿಷತ್‌ನಿಂದ ಪ್ರಕಟವಾಗಿದ್ದು, ಅವುಗಳ ಪ್ರದರ್ಶನ ಮತ್ತು ಮಾರಾಟ ನಿರಂತರವಾಗಿ ನಡೆಯುತ್ತಿದೆ’ ಎಂದು ಜಾನಪದ ಲೋಕದ ಕ್ಯುರೇಟರ್ ಡಾ. ರವಿ ಯು.ಎಂ ಪರಿಷತ್ತಿನ ಶೈಕ್ಷಣಿಕ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡರು.

ರಾಮನಗರದಲ್ಲಿರುವ ಜಾನಪದ ಲೋಕದಲ್ಲಿರುವ ಕಲಾವಿದರ ಶಿಲ್ಪಗಳು

‘ಕಾರ್ಯಚಟುವಟಿಕೆಗೆ ಉತ್ತೇಜನ’

‘ಅಮೂರ್ತ ಸಾಂಸ್ಕತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕಾಗಿ ಪರಿಷತ್‌ಗೆ ಯುನೆಸ್ಕೊ ಮಾನ್ಯತೆ ಸಿಕ್ಕಿದೆ. ಇದು ಎಚ್‌.ಎಲ್. ನಾಗೇಗೌಡರ ಶ್ರಮಕ್ಕೆ ಸಿಕ್ಕಿರುವ ಅತಿ ದೊಡ್ಡ ಗೌರವ. ಇದರಿಂದ ಜಾನಪದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಸಂವರ್ಧನೆ ಮತ್ತು ಪ್ರಸಾರ ಪ್ರಚಾರ ದಾಖಲಾತಿ ಮಾಡುತ್ತಿರುವ ಪರಿಷತ್ತಿನ ಕಾರ್ಯಗಳಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ.

ಪರಿಷತ್ತು ಜಾನಪದ ಕಲಾ ಪ್ರಕಾರಗಳನ್ನು ಹಾಗೂ ಕಲಾವಿದರನ್ನು ಗುರುತಿಸಿ ಪೋಷಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಮುಂದೆ ನಮ್ಮ ಪರಂಪರೆಗೆ ಸಂಬಂಧಿಸಿದಂತೆ ಪರಿಷತ್ತು ಅಧ್ಯಯನ ಅಥವಾ ಸಂಶೋಧನೆಗೆ ಮುಂದಾದರೆ ಯುನೆಸ್ಕೊ ನೆರವು ಸಿಗುತ್ತದೆ. ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಪರಂಪರೆ ಉಳಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳ ಸಹಯೋಗದಲ್ಲಿ ಸಂಶೋಧನೆ ಮತ್ತು ಅಧ್ಯಯನ ಕೈಗೊಳ್ಳಲು ಹಾಗೂ ಕಾರ್ಯಕ್ರಮಗಳನ್ನು ರೂಪಿಸಲು ಮಾನ್ಯತೆ ನೆರವಾಗುತ್ತದೆ.

ಪರಿಷತ್ತಿನ ಕಾರ್ಯಚಟುವಟಿಕೆ ಆಧರಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಕೇಳಲು ಮತ್ತಷ್ಟು ಬಲ ಬಂದಿದೆ. ಪರಿಷತ್ತಿನ ಚಟುವಟಿಕೆಗಳನ್ನು ವಿಸ್ತರಿಸುವ ಜೊತೆಗೆ ಜಾನಪದ ಲೋಕವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕಾರ್ಪೊರೇಟ್ ಸಂಸ್ಥೆಗಳಿಂದಲೂ ಅನುದಾನ ಕೋರಬಹುದು. ಪರಿಷತ್ತಿನ ಜಾನಪದ ಸಂಗ್ರಹಾಲಯದಂತಿರುವ ಜಾನಪದ ಲೋಕಕ್ಕೆ ದೇಶ–ವಿದೇಶಗಳ ಪ್ರವಾಸಿಗರ ಆಕರ್ಷಣೆಯೂ ಹೆಚ್ಚಾಗುತ್ತದೆ’ ಎಂದು ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.