ADVERTISEMENT

ಫೈಬರ್ ಬದಲು ಚರ್ಮ ವಾದ್ಯಗಳ ಬಳಕೆ

ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 19:45 IST
Last Updated 22 ಡಿಸೆಂಬರ್ 2019, 19:45 IST
ಮಂಜಮ್ಮ ಜೋಗತಿ, ಜಾನಪದ ಅಕಾಡೆಮಿ ಅಧ್ಯಕ್ಷೆ
ಮಂಜಮ್ಮ ಜೋಗತಿ, ಜಾನಪದ ಅಕಾಡೆಮಿ ಅಧ್ಯಕ್ಷೆ   

ಉಡುಪಿ: ಜಾನಪದ ಕಲೆಗಳಲ್ಲಿ ಫೈಬರ್ ವಾದ್ಯಗಳ ಬಳಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಎಲ್ಲ ಶಾಲಾ–ಕಾಲೇಜುಗಳಲ್ಲಿ ಚರ್ಮ ವಾದ್ಯಗಳ ಬಳಕೆಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ರಾಜ್ಯದಾದ್ಯಂತ ಚರ್ಮವಾದ್ಯ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಬೀಯಿಂಗ್ ಸೋಶಿಯಲ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಎಂ.ಜಿ.ಎಂ ಕಾಲೇಜು ಜಂಟಿ ಆಶ್ರಯದಲ್ಲಿ ಭಾನುವಾರ ಕಾಲೇಜಿನ ಧ್ವನ್ಯಾಲೋಕದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ಕಲೆಗಳನ್ನು ಉಳಿಸಲು ಶಾಲಾ ಕಾಲೇಜುಗಳಲ್ಲಿ ನುರಿತ ಕಲಾವಿದರಿಂದ ಮಕ್ಕಳಿಗೆ ತರಬೇತಿ ನೀಡಲಾಗುವುದು. ಗುರುಗಳಿಗೆ ₹ 10,000, ಸಹಾಯಕರಿಗೆ ₹ 2,500 ನೆರವು ನೀಡಲಾಗುವುದು. ತರಬೇತಿ ಬಳಿಕ ಶಾಲೆಗಳಲ್ಲಿಯೇ ಚಿಕ್ಕ ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕೆ ತಗುಲುವ ವೆಚ್ಚವನ್ನು ಅಕಾಡೆಮಿ ಭರಿಸಲಿದೆ ಎಂದರು.

ADVERTISEMENT

ತರಬೇತಿಯ ಬಳಿಕಎಲ್ಲ ಜಿಲ್ಲೆಗಳ ಯುವ ಕಲಾವಿದರನ್ನು ಬೆಂಗಳೂರಿನಲ್ಲಿ ಒಟ್ಟುಗೂಡಿಸಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಸುವ ಉದ್ದೇಶವಿದೆ. ಜತೆಗೆ, ರಾಜ್ಯದೆಲ್ಲೆಡೆ ಇರುವ ಮಂಗಳಮುಖಿ ಕಲಾವಿದರನ್ನು ಒಟ್ಟುಗೂಡಿಸಿ ಉತ್ಸವ ಮಾಡುವ ಉದ್ದೇಶವೂ ಇದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಾಸಾಶನಕ್ಕಾಗಿ ನೂರಾರು ಸಂಖ್ಯೆಯಲ್ಲಿ ಅರ್ಜಿಗಳು ಬಂದಿವೆ. ಆದರೆ, ಉಡುಪಿಯಿಂದ ಒಂದೂ ಅರ್ಜಿಯೂ ಬಂದಿಲ್ಲ. ಬಹುಶಃ ಜಾನಪದ ಕಲಾವಿದರಿಗೆ ಮಾಸಾಶನ ಸೌಲಭ್ಯ ಇರುವ ಮಾಹಿತಿ ಕೊರತೆ ಇರುವಂತೆ ಕಾಣುತ್ತಿದೆ. ಅರ್ಹ ಕಲಾವಿದರು ಅರ್ಜಿ ಸಲ್ಲಿಸಿದರೆ ಪರಿಗಣಿಸುವುದಾಗಿ ಮಂಜಮ್ಮ ಜೋಗತಿ ಭರವಸೆ ನೀಡಿದರು.

ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಜಾನಪದ ಕಲೆಯ ಕಲಿಕೆಯಲ್ಲಿ ಆಸಕ್ತಿ ಹೊಂದಿರುವವರು ಅರ್ಜಿ ಹಾಕಿದರೆ ಅಕಾಡೆಮಿಯಿಂದ ನೆರವು ನೀಡಲಾಗುವುದು ಎಂದರು.

ಗಾಂಧಿಯನ್ ಸೆಂಟರ್ ಫಾರ್ ಫಿಲಾಸೊಫಿಕಲ್‌ ಆರ್ಟ್ಸ್‌ ಅಂಡ್‌ ಸೈನ್ಸ್‌ನ ನಿರ್ದೇಶಕ ವರದೇಶ್ ಹಿರೇಗಂಗೆ ಮಾತನಾಡಿ, ಜನಪದ ಕಲಾವಿದರ ಬದುಕನ್ನು ಸುಂದರವಾಗಿಸಲು ಅವರಿಗೆ ಮಾಸಾಶನ ನೀಡುವಂತಹ ಮಹತ್ವದ ನಿರ್ಧಾರವನ್ನು ಆಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಆರಂಭದಲ್ಲಿಯೇ ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಎಂದರು.

ಪ್ರೊ.ಎಂ.ಎಲ್‌.ಸಾಮಗ ಮಾತನಾಡಿ, ಶುದ್ಧ ಜಾನಪದ ಕಲೆಯನ್ನು ಹೈಜಾಕ್ ಮಾಡಲಾಗುತ್ತಿದೆ. ಮೂಲ ಜಾನಪದ ಕಲಾವಿದರನ್ನು ಹಿನ್ನೆಲೆಗೆ ಸರಿಸಿ, ವಿದ್ಯಾವಂತರೆನಿಸಿಕೊಂಡವರೇ ವೇದಿಕೆಯನ್ನು ಕಸಿದುಕೊಳ್ಳುತ್ತಿದ್ದಾರೆ. ಇದರಿಂದ ಮೂಲ ಕಲಾವಿದರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಅಕಾಡೆಮಿ ಚಿಂತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ವಿಶ್ವನಾಥ ಶೆಣೈ, ಪ್ರೊ.ಶಂಕರ್ ಮಾತನಾಡಿದರು. ಭಾವನ ಕೆರೆಮಠ ಜಾನಪದ ನೃತ್ಯ ಪ್ರದರ್ಶಿಸಿದರೆ, ಅನಿರುದ್ದ ಆರ್.ಭಟ್ ಕೀಬೋರ್ಡ್‌ ನುಡಿಸಿದರು. ರಂಗಕರ್ಮಿ ರವಿರಾಜ್ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಮೈಬಣ್ಣ ಮರೆಮಾಚಿದ ‘ಬಣ್ಣ’

ಎಸ್ಸೆಸ್ಸೆಲ್ಸಿ ಓದುವಾಗ ದೇಹದೊಳಗಿನ ಹಾರ್ಮೋನ್‌ ಬದಲಾವಣೆಯಿಂದ ಜೋಗಮ್ಮ ಧೀಕ್ಷೆ ತೆಗೆದುಕೊಂಡೆ. ನಿರಂತರ ಸಂಕಟಗಳನ್ನು ಅನುಭವಿಸಿದ್ದೇನೆ. ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷೆ ಬೇಡಿದ್ದೇನೆ. ಇಡ್ಲಿ ಮಾರಿದ್ದೇನೆ. ಕೊನೆಗೂ ನನ್ನೊಳಗಿದ್ದ ಕಲೆ ಕೈಹಿಡಿಯಿತು. ಕಾಳವ್ವ ಜೋಗತಿ ಎಂಬ ಗುರುವಿನ ಸಂಪರ್ಕವಾದ ಬಳಿಕ, ಬಣ್ಣದ ಲೋಕ ಪ್ರವೇಶಿಸಲು ಸಾಧ್ಯವಾಯಿತು. ಅಂದು ಕಪ್ಪು ಮೈಬಣ್ಣ ಮರೆಮಾಚಲು ಹಚ್ಚಿದ ಬಣ್ಣದ ಮೋಹ ಇಂದಿಗೂ ಮಾಸಿಲ್ಲ. ಬಣ್ಣವೇ ಬದುಕಿಗೆ ಆಧಾರವಾಗಿದ್ದು, ಹೊಟ್ಟೆ ತುಂಬಿಸುತ್ತಿದೆ ಎಂದು ಮಂಜಮ್ಮ ಜೋಗತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.