ಹುಬ್ಬಳ್ಳಿಯ ಜಿಮ್ಖಾನಾ ಮೈದಾನದಲ್ಲಿ ಜ.27, 2018 ರ ಮುಸ್ಸಂಜೆಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ನೋಡಲೆಂದು ಬಂದಿದ್ದವರುಹತ್ತಾರು ಸಾವಿರ ಮಂದಿ. ಎಂ.ಎಂ.ಜೋಶಿ ನೇತ್ರವಿಜ್ಞಾನ ಸಂಸ್ಥೆಯ 51ನೇ ವರ್ಷದ ಸಂಭ್ರಮ ನೆಪವಷ್ಟೆ. (ಎಸ್‌ಪಿಬಿ ಹಾಡಲು ಆರಂಭಿಸಿಯೂ ಅಷ್ಟೇ ವರ್ಷ) ಎಲ್ಲರೂ ಮನತುಂಬಿಕೊಂಡಿದ್ದು ಅವರ ಹಾಡುಗಳನ್ನು. ಕಣ್ತುಂಬಿಕೊಂಡಿದ್ದು ಅವರ ಲವಲವಿಕೆಯನ್ನು. ಮುಸ್ಸಂಜೆಯ ಹಿತವಾದ ಚಳಿಯಲ್ಲಿ ಅವರ ಒಂದೊಂದೇ ಹಾಡು, ನಡುನಡುವೆ ಕಚಗುಳಿ ಇಡುವ ಮಾತು ಪ್ರೇಕ್ಷಕರಿಗೆ ರಸದೌತಣ ನೀಡಿತ್ತು. 'ಪ್ರಜಾವಾಣಿ’ಯಲ್ಲಿ ಜ.29, 2018ರಂದು ಪ್ರಕಟವಾಗಿದ್ದ ಬರಹ ಇಲ್ಲಿದೆ...
***
ಗಾಯಕನಿಗೆ ವಯಸ್ಸಾಗಿದೆ; ಗಾಯನಕ್ಕಲ್ಲ. ಕೇಳುಗರು ಬದಲಾಗಿದ್ದಾರೆ; ಅಭಿಮಾನ, ಪ್ರೀತಿ ಕಡಿಮೆಯಾಗಿಲ್ಲ. ಹಿಂದೊಮ್ಮೆ ಹಿಟ್ ಅನ್ನಿಸಿಕೊಂಡಿದ್ದ ಹಾಡುಗಳನ್ನು ಮತ್ತೆ ಅವರದೇ ಕಂಠಸಿರಿಯಲ್ಲಿ ಕೇಳುತ್ತಿದ್ದರೆ ‘ವಾಹ್, ಒನ್ಸ್‌ಮೋರ್’ ಎನ್ನುವ ಒತ್ತಾಸೆ ಅಭಿಮಾನಿಗಳಿಂದ! ಗಾಯಕನ ಕಂಠದಲ್ಲಿ ಅದೇ ಮಾಧುರ್ಯ, ಅದೇ ಮೋಡಿ... ‘ಯಾತಕ್ಕಾಗಿ ನನ್ನನ್ನು ಇಷ್ಟೊಂದು ಪ್ರೀತಿಸ್ತೀರಾ? ಮರಳಿ ನಿಮಗೇನು ಕೊಡಲಿ ನಾನು?’ ಎನ್ನುತ್ತ ಭಾವುಕರಾಗುತ್ತಾರೆ ಈ ಮೇರು ಗಾಯಕ...
ಪ್ರೀತಿ, ಪ್ರೇಮ, ಪ್ರಣಯ, ವಿಷಾದ, ಭಕ್ತಿ, ಶೃಂಗಾರ ಯಾವುದೇ ಇರಲಿ ಈ ಗಾಯಕ ಹಾಡಿದರೇನೇ ಆ ಹಾಡು ಹಿಟ್ ಆಗುತ್ತದೆ ಎಂಬ ನಂಬಿಕೆಯ ಕಾಲ ವೊಂದಿತ್ತು. ಈಗ ಈ ಗಾಯಕ ಸಿನಿಮಾಗಳಿಗೆ ಅಷ್ಟಾಗಿ ಹಾಡುತ್ತಿಲ್ಲ, ತೆರೆಮರೆಗೆ ಸರಿದಾಗಿದೆ. ಆದರೆ ಸಂಗೀತಪ್ರಿಯರು ಈಗಲೂ ಇವರನ್ನು ಅಷ್ಟೇ ಆರಾಧಿಸುತ್ತಾರೆ, ಪ್ರೀತಿಸುತ್ತಾರೆ. ಅರ್ಧಶತಮಾನಗಳಿಂದ (1966) ಹಾಡುತ್ತಲೇ ಬಂದ ಈ ಗಾನಗಂಧರ್ವನಿಗೆ ಈಗ 71 (ಜನನ:1946) ವರ್ಷ. ಶರೀರಕ್ಕೆ ವಯಸ್ಸಾದಂತೆ ಕಾಣುತ್ತಿದೆ, ಆದರೆ ಶಾರೀರ ಹಾಗೆಯೇ ಇದೆ.
‘ಎಲ್ಲಿಂದಲೋ ಬಂದವನು ನಾನು. ದೂರದ ಆಂಧ್ರಪ್ರದೇಶದಲ್ಲಿ ಹುಟ್ಟಿದೆ. ಕಳೆದ 52 ವರ್ಷಗಳಿಂದ ಹಾಡುತ್ತಿದ್ದೇನೆ. ಚಲನಚಿತ್ರಗಳಿಗೆ ನಾನು ಹಾಡಿದ 2ನೇ ಹಾಡೇ ಕನ್ನಡದ ಹಾಡು...ಈಗೇನೂ ನಾನು ಅಷ್ಟಾಗಿ ಹಾಡುವುದಿಲ್ಲ, ಆದರೆ ನಾನು ಹಿಂದೆಲ್ಲ ಹಾಡಿದ ಹಾಡುಗಳನ್ನೇ ಈಗಲೂ ನೀವೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ನನ್ನನ್ನು ಇಷ್ಟೊಂದು ಪ್ರೀತಿಸುತ್ತೀರಲ್ಲ, ಸತ್ಯವಾಗಿ ಹೇಳ್ತೀನಿ ಮತ್ತೊಂದು ಜನ್ಮವಿದ್ದರೆ ಕರ್ನಾಟಕದಲ್ಲಿಯೇ ಹುಟ್ಟುವಾಸೆ’
–ಹೀಗೆಂದು ಭಾವ ಪರವಶರಾಗಿ ನುಡಿದವರು ಕನ್ನಡ, ತೆಲುಗು, ತಮಿಳು, ಹಿಂದೆ ಸೇರಿದಂತೆ ಬಹು ಭಾಷೆಯಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆ ಮಾಡಿರುವ ಸುಪ್ರಸಿದ್ಧ ಹಿನ್ನೆಲೆ ಗಾಯಕ ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ(ಎಸ್‌ಪಿಬಿ)ಅವರು.
ಹುಬ್ಬಳ್ಳಿಯ ಜಿಮ್ಖಾನಾ ಮೈದಾನದಲ್ಲಿ ಶನಿವಾರ ಮುಸ್ಸಂಜೆಯಲ್ಲಿ ಎಸ್‌ಪಿಬಿ ಅವರನ್ನು ನೋಡಲೆಂದು ಬಂದವರು ಹತ್ತಾರು ಸಾವಿರ ಮಂದಿ. ಎಂ.ಎಂ.ಜೋಶಿ ನೇತ್ರವಿಜ್ಞಾನ ಸಂಸ್ಥೆಯ 51ನೇ ವರ್ಷದ ಸಂಭ್ರಮ ನೆಪವಷ್ಟೆ. (ಎಸ್‌ಪಿಬಿ ಹಾಡಲು ಆರಂಭಿಸಿಯೂ ಅಷ್ಟೇ ವರ್ಷ) ಎಲ್ಲರೂ ಮನತುಂಬಿಕೊಂಡಿದ್ದು ಅವರ ಹಾಡುಗಳನ್ನು. ಕಣ್ತುಂಬಿಕೊಂಡಿದ್ದು ಅವರ ಲವಲವಿಕೆಯನ್ನು. ಮುಸ್ಸಂಜೆಯ ಹಿತವಾದ ಚಳಿಯಲ್ಲಿ ಅವರ ಒಂದೊಂದೇ ಹಾಡು, ನಡು ನಡುವೆ ಕಚಗುಳಿ ಇಡುವ ಮಾತು ಪ್ರೇಕ್ಷಕರಿಗೆ ರಸದೌತಣ ನೀಡಿದ್ದು ಖರೆ.
ಹತ್ತು ವರ್ಷಗಳ ಹಿಂದೊಮ್ಮೆ ಎಸ್‌ಪಿಬಿ ಹುಬ್ಬಳ್ಳಿಗೆ ಭೇಟಿ ನೀಡಿದ್ದರಂತೆ. ಆ ಬಳಿಕ ಬಂದಿದ್ದು ಈಗಲೇ. ತಿಳಿ ಕಂದು ಬಣ್ಣದ ಟೀಶರ್ಟ್, ಮೇಲೆ ಬೂದು ಬಣ್ಣದ ಕೋಟ್, ಕಪ್ಪು ಪ್ಯಾಂಟ್ ಧರಿಸಿದ್ದ ಎಸ್‌ಪಿಬಿ, ತಮ್ಮ ಆರ್ಕೆಸ್ಟ್ರಾ ತಂಡದ ಯುವ ಗಾಯಕರನ್ನು ಹುರಿದುಂಬಿಸಿ ಹಾಡುತ್ತಿದ್ದ ರೀತಿಯೇ ಅನನ್ಯವಾಗಿತ್ತು.
ಪುಣ್ಯಭೂಮಿ ಇದು...
‘ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್ ಅವರಂತಹ ಮಹಾನ್ ಗಾಯಕರು ಹುಟ್ಟಿದ ನೆಲವಿದು. ಅವರು ಓಡಾಡಿದ ನೆಲದಲ್ಲಿ ಕಾಲಿಟ್ಟು ಹಾಡುವುದೇ ನಮ್ಮ ಸೌಭಾಗ್ಯ’ ಎಂದು ವಿನೀತಭಾವದಿಂದ ನುಡಿಯುತ್ತ ಅವರು ಸಂಗೀತ ರಸಸಂಜೆ ಮುನ್ನಡೆಸುತ್ತ ಸಾಗಿದರು. (ಗಂಗೂಬಾಯಿ ಹಾನಗಲ್ ಅವರಂತಹ ಮೇರು ಹಿಂದೂಸ್ತಾನಿ ಗಾಯಕಿ ಬದುಕಿದ್ದಾಗ ಅವರ ಮನೆಗೆ ಬಂದು ಹೋಗುವ ಸೌಭಾಗ್ಯ ಸಿಕ್ಕಿಲ್ಲವಲ್ಲ ಎನ್ನುವ ವಿಷಾದ ಭಾವ ಮಾರನೆಯ ದಿನ ಗಂಗಜ್ಜಿ ಮನೆಗೆ ಎಸ್‌ಪಿಬಿ ಭೇಟಿ ನೀಡಿದಾಗ ಅವರಿಂದ ವ್ಯಕ್ತವಾಯಿತು.)
1966ರಲ್ಲಿ ‘ಶ್ರೀ ಶ್ರೀ ಶ್ರೀ ಮರ್ಯಾದಾ ರಾಮಣ್ಣ’ ಎಂಬ ತೆಲುಗು ಚಿತ್ರಕ್ಕೆ ಹಾಡುವ ಮೂಲಕ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ ಮಾಡಿದ ಎಸ್‌ಪಿಬಿ, ಮುಂದಿನ ಕೆಲವೇ ದಿನಗಳಲ್ಲಿ ಎಂ.ರಂಗರಾವ್ ಸಂಗೀತ ನೀಡಿದ, ವಿಜಯನಾರಸಿಂಹ ವಿರಚಿತ ‘ನಕ್ಕರೆ ಅದೇ ಸ್ವರ್ಗ’ ಕನ್ನಡ ಚಿತ್ರದ ‘ಕನಸಿದೋ ನನಸಿದೋ ಮುಗುದ ಮನದ ಬಿಸಿ ಬಯಕೆಯೋ...’ ಎಂಬ ಹಾಡನ್ನು ಗಾಯಕಿ ಪಿ.ಸುಶೀಲಾ ಅವರೊಂದಿಗೆ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. ಇದು ಕನ್ನಡದಲ್ಲಿ ಅವರು ಹಾಡಿದ ಮೊದಲ ಹಾಡಾದರೆ ಅವರ ವೃತ್ತಿ ಬದುಕಿನ ಎರಡನೇ ಹಾಡು! ಶಾಸ್ತ್ರೀಯವಾಗಿ ಸಂಗೀತ ಕಲಿಯದ ಎಸ್‌ಪಿಬಿ ದೈವದತ್ತವಾಗಿ ಒಲಿದ ಕಂಠಮಾಧುರ್ಯದಿಂದಲೇ ಕಲಾರಸಿಕರ ಮನಗೆದ್ದವರು.
‘ಶಂಕರಾಭರಣಂ’ನಂತಹ ಶುದ್ಧ ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ಹಾಡುಗಳನ್ನು ಹಾಡುತ್ತ , ಮತ್ತೆ ಜನರನ್ನು ರಂಜಿಸಲು ‘ಬಾರೆ ಸಂತೆಗೆ ಹೋಗೋಣು ಬಾ, ಸಿನಿಮಾ ಟೆಂಟಲ್ಲಿ ಕೂರೋಣ ಬಾ’ ಎಂಬ ಮಸಾಲೆ ಹಾಡನ್ನೂ ಹಾಡಿದರು. ಶುದ್ಧ ಸಂಗೀತದ ಹಾಡು ಹಾಡಿ ಇಂಥವನ್ನೂ ಹಾಡಬೇಕಲ್ಲ ಎನ್ನುತ್ತಲೇ ನಗುತ್ತ ದನಿಗೂಡಿಸಿದರು. ಹಾಡಿನ ನಡುವೆ ಜೋಕ್ ಮಾಡುತ್ತ, ಸಹಗಾಯಕರ, ವಾದ್ಯಗಾರರ ಕಾಲೆಳೆಯುತ್ತ ಲವಲವಿಕೆಯಿಂದ ಕೇಳುಗರ ಕಿವಿಗಿಂಪುನೀಡಿದ್ದು ಸತ್ಯ.
ನನ್ನ ಕಾಲ ಸುವರ್ಣಯುಗ ...
‘ಎಷ್ಟೇ ದೊಡ್ಡ ಗಾಯಕನಾದರೂ ಉತ್ತಮ ಹಾಡುಗಳು ಸಿಗದೇ ಇದ್ದರೆ, ದೊಡ್ಡ ದೊಡ್ಡ ಸಂಗೀತ ನಿರ್ದೇಶಕರು ಸ್ವರ ಸಂಯೋಜನೆ ಮಾಡದೇ ಇದ್ದರೆ ನಾವೆಲ್ಲ ಈಗ ಇಲ್ಲಿ ಬಂದು ಹಾಡುತ್ತಿರಲಿಲ್ಲ. ನಮ್ಮದೆಲ್ಲ ಸುವರ್ಣಯುಗ. ಹಲವಾರು ಮಹಾನ್ ಸಂಗೀತ ನಿರ್ದೇಶಕರ ಬಳಿ ಕೆಲಸ ಮಾಡಿದೆವು’ ಎಂದು ನೂರೊಂದು ನೆನಪುಗಳನ್ನು ಎದೆಯಾಳದಿಂದ ಹೆಕ್ಕಿ ತೆಗೆದು ಹಳೆಯ ನೆನಪಿಗೆ ಜಾರಿದರು.
‘ಒಂದು ಹಾಡು ಹುಟ್ಟಿ, ಯಶಸ್ವಿಯಾಗಿ ನಿಮ್ಮ ಬಳಿಗೆ ಬರುವುದರ ಹಿಂದೆ ಹತ್ತಾರು ತಜ್ಞರ ಶ್ರಮವಿದೆ. ಹೀಗಾಗಿ ನಾವಿಲ್ಲಿ ಬಂದು ಷೋ ಕೊಡ್ತೀವಿ ಅಂದ ಮಾತ್ರಕ್ಕೆ ನೂರಕ್ಕೆ ನೂರರಷ್ಟು ಉತ್ತಮವಾಗಿ ಹಾಡ್ತೀವಿ ಅಂತ ಅರ್ಥವಲ್ಲ. ಶೇ 60ರಷ್ಟು ಮಾತ್ರ ನಾವಿಲ್ಲಿ ಹಾಡ ಬಹುದಷ್ಟೇ’ ಎನ್ನುವುದು ಅವರ ಅನುಭವದ ಮಾತು.
ಈಗಲೂ ನಾನು ರಿಹರ್ಸಲ್ ಮಾಡ್ತೀನಿ...
‘ನಾನು ಈಗಲೂ ಸ್ಟೇಜ್ ಮೇಲೆ ಹಾಡುವಾಗ ಭಯ ಪಡ್ತೇನೆ. ಕಾರಿನಲ್ಲಿ ಬರುವಾಗ ಕೂಡ ರಿಹರ್ಸಲ್ ಮಾಡ್ತೇನೆ. ರೆಕಾರ್ಡಿಂಗ್‌ನಲ್ಲಿ ಹತ್ತಾರು ಬಾರಿ ಮಾರ್ಪಾಟು ಮಾಡಿ ಒಂದು ಹಾಡು ಹಾಡಬಹುದು. ಅದು ಬಹಳ ಪ್ರಸಿದ್ಧವಾಗಲೂಬಹುದು. ಅದನ್ನು ನೀವೆಲ್ಲ ಕೇಳಿ ಅಭ್ಯಾಸವಾಗಿರುತ್ತದೆ. ಆದರೆ ಅದೇ ಹಾಡನ್ನು ಇಲ್ಲಿ ಒಂದೇ ಸಲಕ್ಕೆ ಹಾಡಬೇಕಲ್ಲ. ನೀವು ಅಂದುಕೊಂಡಂತೆ ಹಾಡುವುದು ಕಷ್ಟ. ನಾನೊಬ್ಬ ಚಿಕ್ಕ ಹಾಡುಗಾರ, ಪ್ರಯತ್ನ ಮಾಡ್ತೀನಿ ಅಷ್ಟೆ ’ ಎನ್ನುತ್ತಲೇ ‘ಶಂಕರಾ... ನಾದ ಶರೀರಾಪರ, ಜೀವೇಶ್ವರಾ ವೇದವಿಹಾರಾ ಪರಾ...’ ಭಾವಲೋಕಕ್ಕೆ ಕರೆದೊಯ್ದರು. ‘ಭಲೆ ಭಲೆ ಚಂದದ ಚೆಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು...’ ಎಂಬ ಅಮೃತವರ್ಷಿಣಿಯ ಗೀತೆಗೆ ಜನ ತಲೆದೂಗಿ ತಾಳ ಹಾಕುತ್ತಿದ್ದಂತೆ ‘ತೇರೆ ಮೇರೆ ಬೀಚ್ ಮೇ... ಕೈಸಾ ಹೈ ಯೆ ಬಂಧನ್...’ ಎಂಬ ಅನುರಾಗದ ಅನುಬಂಧದ ಗೀತೆಯನ್ನು ಹಾಡಿ ಇಳಿಸಂಜೆಗೆ ರಂಗೇರಿಸಿದರು.
ಒಂದೆಡೆ ವೇದಿಕೆಯತ್ತ ನುಗ್ಗುತ್ತಿದ್ದ ಅಭಿಮಾನಿಗಳು, ಇನ್ನೊಂದೆಡೆ ಮೊಬೈಲ್‌ನಲ್ಲಿ ಸೆಲ್ಫಿ ಹಿಡಿಯುತ್ತ ಅವರೊಂದಿಗೆ ತಮ್ಮನ್ನೂ ಒಂದೇ ಫ್ರೇಂನಲ್ಲಿ ಸೇರಿಸಲು ಕಾತರಿಸಿದ ಆರಾಧಕ ಮಹಿಳೆಯರು, ಪ್ರತಿ ಹಾಡನ್ನೂ ವಿಡಿಯೊ ಮಾಡಿಕೊಳ್ಳುವ ಆತುರದ ಜನರು, ಹಾಡಿಗೆ ತಾಳ ಹಾಕಿ ಭಾವಲೋಕಕ್ಕೆ ಜಾರುತ್ತಿದ್ದ ಹಿರಿಯರು, ಅಬ್ಬರದ ಹಾಡಿಗೆ ನೃತ್ಯ ಮಾಡುತ್ತಿದ್ದ ಮಕ್ಕಳು, ಹದಿಹರೆಯದವರು... ಎಲ್ಲರದ್ದೂ ಒಂದೇ ಮಾತು ‘ಜೈ ಎಸ್‌ಪಿಬಿ, ಎಸ್‌ಪಿಬಿ’... ಆದರೆ ನಡು ನಡುವೆ ಎಸ್‌ಪಿ ಅವರೇ ಅದನ್ನು ತಿದ್ದುತ್ತಿದ್ದರು. ‘ಬೋಲೋ ಭಾರತ್ ಮಾತಾಕಿ’ ಎಂದು ಹುರಿದುಂಬಿಸುತ್ತಿದ್ದರು.
71ರ ಈ ವಯಸ್ಸಿನಲ್ಲಿಯೂ ಇಷ್ಟೊಂದು ಜೀವನೋತ್ಸಾಹದಿಂದ ಹಾಡುತ್ತ ನಿಮ್ಮ ಸಮಸ್ತ ಅಭಿಮಾನಿಗಳನ್ನೆಲ್ಲ ಗಾನ ಗಂಧರ್ವಲೋಕಕ್ಕೆ ಕರೆದೊಯ್ದ ಎಸ್‌ಪಿಬಿ ಅವರೇ, ಮತ್ತೆ ಯಾವಾಗ ಹುಬ್ಬಳ್ಳಿಗೆ ಬಂದು ಹಾಡ್ತೀರಿ..?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.