ಸಿಂಹಿಣಿಯೊಂದು ಅಡ್ಡಾಡುತ್ತಿದ್ದ ತನ್ನ ಕೂಸನ್ನು ಪ್ರೀತಿಯಿಂದ ಬಿಗಿದಪ್ಪಿ ಸುರಕ್ಷಿತ ಸ್ಥಳಕ್ಕೆ ಹೊತ್ತೊಯ್ಯುತ್ತಿತ್ತು. ಸೂರ್ಯ ಮುಳುಗುವ ಹೊತ್ತು. ಬಾನಂಗಳದಲ್ಲಿ ಕೆಂಬಣ್ಣದ ಹಿಂಪರದೆ. ಅದರೆದುರು ಗುಡ್ಡದ ಮೇಲೆ ಕೋಲುದ್ದದ ಕತ್ತು ಕೊಂಕಿಸುತ್ತಾ ನಿಂತ ಜಿರಾಫ್‌ಗಳು. ಹುಲಿಮರಿಗಳ ಮುದ್ದಾಟ, ಮಕರಂದ ಹೀರಲು ಚಿಮ್ಮಿದ ಹಕ್ಕಿ, ಬಂಡೆಯ ಕೆಳಗೆ ಕುಳಿತು ದಿಟ್ಟಿಸುತ್ತಿದ್ದ ಹುಲಿರಾಯ... ವನ್ಯಲೋಕಕ್ಕೆ ನಮ್ಮ ಮನಸ್ಸನ್ನು ಎಳೆದುಕೊಳ್ಳುವ ಅಯಸ್ಕಾಂತೀಯ ಗುಣಕ್ಕೆ ಛಾಯಾಚಿತ್ರಗಳಲ್ಲಿ ಕಂಡ ಈ ವಿವರಗಳೇ ಸಾಕ್ಷಿ.
ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವನ್ಯಜೀವಿ ಛಾಯಾಗ್ರಾಹಕ ಎಂ.ಎನ್.ಜಯಕುಮಾರ್ ಅವರ ವನ್ಯಜೀವಿ ಛಾಯಾಚಿತ್ರಗಳಿವು. ಬೆಂಗಳೂರಿನ ಕರ್ನಾಟಕ ಚಿತ್ರ ಕಲಾಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಇಂಥ 231 ವನ್ಯಜೀವಿ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಪ್ರತಿ ಫೋಟೊದ ಹಿಂದೆ ಆಸಕ್ತಿಕರ ಕಾಡಿನ ಕಥೆಗಳಿವೆ.
ಇದು ಭಾರತದ ಹೆಮ್ಮೆಯ 'ಹುಲಿ ಯೋಜನೆ'ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ‘ಎನ್‌ಕೌಂಟರ್ಸ್ ಇನ್ ವೈಲ್ಡ್ 2.0’ ಶೀರ್ಷಿಕೆಯಡಿ ಆಯೋಜಿಸಿರುವ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನದ ಝಲಕ್.
‘'1998 ರಲ್ಲಿ ‘ಹುಲಿಯೋಜನೆ’ಯ ‘ಬೆಳ್ಳಿಹಬ್ಬ’ದ ಸಂದರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರದ ಆಹ್ವಾನದ ಮೇರೆಗೆ ದೆಹಲಿಯಲ್ಲಿ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಮಾಡಿದ್ದೆ. ಈಗ ಅದೇ ಯೋಜನೆಯ ‘ಸುವರ್ಣ ಮಹೋತ್ಸವ’ದಲ್ಲೂ ವನ್ಯಜೀವಿ ಛಾಯಾಚಿತ್ರಗಳನ್ನು ಪ್ರದರ್ಶಿಸುತ್ತಿದ್ದೇನೆ’’ ಎಂದು ಜಯಕುಮಾರ್ ಸಂತಸದಿಂದ ನೆನಪಿಸಿಕೊಂಡರು.
ಈ ಪ್ರದರ್ಶನದಲ್ಲಿ ‘ಹುಲಿ ಯೋಜನೆ ಮತ್ತು ಜಾಗತಿಕ ಜೀವವೈವಿಧ್ಯ’ ಥೀಮ್‌ಗೆ ಹೊಂದುವಂಥ ಆಯ್ದ 231 ಛಾಯಾಚಿತ್ರಗಳಿವೆ. ಭಾರತದ ತಡೋಬ (ಮಹಾರಾಷ್ಟ್ರ), ರಣಥಂಬೋರ್(ರಾಜಸ್ಥಾನ), ಬಂಡಿಪುರ, ನಾಗರಹೊಳೆ, ಕಬಿನಿ (ಕರ್ನಾಟಕ), ವಿಯೆಟ್ನಾಂ, ಕೆನ್ಯಾ, ಬೊಟ್ಸ್‌ವಾನ, ತಾಂಜೇನಿಯಾ, ದಕ್ಷಿಣ ಆಫ್ರಿಕ, ಕೋಸ್ಟೆರಿಕಾ, ಪೆರು, ಈಕ್ವೆಡಾರ್, ಗಾಲ್‌ಪೊಗಾಸ್ ಐಲ್ಯಾಂಡ್ಸ್ ದೇಶಗಳ ವೈವಿಧ್ಯಮಯ ವನ್ಯಜೀವಿ ಚಿತ್ರಗಳಿವು.
ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ನಾಲ್ಕು ವಿಭಾಗಗಳ ಚಿತ್ರ ಪ್ರದರ್ಶನವಿದೆ. ಮೊದಲ ಗ್ಯಾಲರಿ ‘ಹುಲಿ ಯೋಜನೆ’ಯ ಸುವರ್ಣ ಮಹೋತ್ಸವಕ್ಕೆ ಮೀಸಲು. ಇಲ್ಲಿ ಭಾರತದ ವಿವಿಧ ಪ್ರದೇಶಗಳಲ್ಲಿರುವ ಹುಲಿಗಳ ಚಿತ್ರಗಳಿವೆ. ಎರಡನೇ ಗ್ಯಾಲರಿಯಲ್ಲಿ ಏಷ್ಯಾ ವನ್ಯಜೀವಿಗಳ ದರ್ಶನ. ಇಲ್ಲಿ ಹುಲಿ ಹೊರತುಪಡಿಸಿ ಭಾರತದ ಇತರೆ ವನ್ಯಜೀವಿಗಳು ಹಾಗೂ ವಿಯೆಟ್ನಾಂ ದೇಶದ ಕಾಡು ಪ್ರಾಣಿಗಳ ಚಿತ್ರಗಳಿವೆ. ಗ್ಯಾಲರಿ ಮೂರರಲ್ಲಿ ಆಫಿಕಾ ಖಂಡದ ವನ್ಯಜೀವಿಗಳ ಫೋಟೊಗಳಿವೆ. ಗ್ಯಾಲರಿ ನಾಲ್ಕರಲ್ಲಿ ‘ಕಲರ್ಸ್ ಆಫ್ ನೇಚರ್’- ಬಣ್ಣ ಬಣ್ಣದ ದಕ್ಷಿಣ ಅಮೆರಿಕ ಮತ್ತು ಸೆಂಟ್ರಲ್ ಅಮೆರಿಕದ ಪಕ್ಷಿಗಳನ್ನು ನೋಡಬಹುದು. ಪ್ರತಿ ಫೋಟೊದ ಎದುರು ಕ್ಯೂ ಆರ್ ಕೋಡ್ ಫಲಕವಿದೆ. ಕೋಡ್ ಸ್ಕ್ಯಾನ್ ಮಾಡಿದರೆ, ಫೋಟೊದಲ್ಲಿರುವ ಚಿತ್ರದ ಪೂರ್ಣ ಮಾಹಿತಿಯು ಪಠ್ಯ ಹಾಗೂ ಧ್ವನಿ ಮೂಲಕ ಲಭ್ಯ. ಹೆಡ್‌ಫೋನ್ ಬಳಸಿ, ಮಾಹಿತಿ ಆಲಿಸುವ ಸೌಲಭ್ಯವೂ ಇದೆ.
ಅ.8ರವರೆಗೆ ಪ್ರದರ್ಶನ
ಸೆ.28 ರಿಂದ ಆರಂಭವಾಗಿರುವ ‘ಎನ್‌ಕೌಂಟರ್ಸ್ ಇನ್ ದಿ ವೈಲ್ಡ್ 2.0’ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಅ. 8 ರವರೆಗೂ ನಡೆಯಲಿದೆ. ನಿತ್ಯ ಬೆಳಿಗ್ಗೆ 10ರಿಂದ ಸಂಜೆ 7.30ರವರೆಗೆ ಚಿತ್ರ ಪ್ರದರ್ಶನವಿದೆ. ಪ್ರತಿದಿನ ಸಂಜೆ 5.30 ರಿಂದ 7.30 ರವರೆಗೆ ಪರಿಸರ, ವನ್ಯಜೀವಿ ಸಂರಕ್ಷಣೆ, ವನ್ಯಜೀವಿ ಛಾಯಾಗ್ರಹಣ ಕುರಿತು ತಜ್ಞರಿಂದ ವಿಚಾರ ಮಂಡನೆ ಹಾಗೂ ಸಂವಾದವೂ ನಡೆಯಲಿದೆ.
ಅ.8ರವರೆಗೆ ಪ್ರದರ್ಶನ
ಸೆ.28 ರಿಂದ ಆರಂಭವಾಗಿರುವ ‘ಎನ್‌ಕೌಂಟರ್ಸ್ ಇನ್ ದಿ ವೈಲ್ಡ್ 2.0’ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಅ. 8 ರವರೆಗೂ ನಡೆಯಲಿದೆ. ನಿತ್ಯ ಬೆಳಿಗ್ಗೆ 10ರಿಂದ ಸಂಜೆ 7.30ರವರೆಗೆ ಚಿತ್ರ ಪ್ರದರ್ಶನವಿದೆ. ಪ್ರತಿದಿನ ಸಂಜೆ 5.30 ರಿಂದ 7.30 ರವರೆಗೆ ಪರಿಸರ ವನ್ಯಜೀವಿ ಸಂರಕ್ಷಣೆ ವನ್ಯಜೀವಿ ಛಾಯಾಗ್ರಹಣ ಕುರಿತು ತಜ್ಞರಿಂದ ವಿಚಾರ ಮಂಡನೆ ಹಾಗೂ ಸಂವಾದವೂ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.