ಭಾಷೆ ನಮ್ಮ ಅನುಭವಗಳಿಗೆ ಒಂದು ರೂಪ ನೀಡಿ, ಅವುಗಳನ್ನು ನಮ್ಮಿಂದ ಬೇರೆಯಾಗಿ ನಿಲ್ಲಿಸಿ ನಮ್ಮ ಅವಲೋಕನಕ್ಕೆ ನಿಲುಕುವಂತೆ ಮಾಡುತ್ತದೆ.
ಯಾವುದಕ್ಕೆ ನಾಮ, ರೂಪ, ಆಕಾರಗಳಿಲ್ಲವೋ ಅದು ನಮ್ಮನ್ನು ಹೆದರಿಸುತ್ತದೆ, ಅನೂಹ್ಯ ರೀತಿಯಲ್ಲಿ ಬಂಧಿಸಿಡುತ್ತದೆ. ಕತ್ತಲ ಗುಣವೂ ಹೀಗೆ, ಭಯವನ್ನು ಮೂಲವಾಗಿಟ್ಟುಕೊಂಡು ಹಿಡಿತವನ್ನು ಸಾಧಿಸುವುದು. ನಮ್ಮ ಆಂತರ್ಯದ ಲೋಕವೂ ಕತ್ತಲ ಈ ಹಿಡಿತಕ್ಕೆ ಹೊರತಾಗಿಲ್ಲ, ಅಲ್ಲಿ ಏನಿದೆಯೋ, ಏನಿಲ್ಲವೋ, ಯಾವುದು ಯಾವುದರ ಮುಸುಕು ಹೊದ್ದು ಕೂತಿದೆಯೋ, ಎಲ್ಲಿಂದಲೋ ಬಂದು ಇಲ್ಲಿ ಸೇರಿಕೊಂಡಿರುವ ಪರಕೀಯ ವಸ್ತು ಯಾವುದೋ – ಎಲ್ಲವೂ ಅಸ್ಪಷ್ಟ. ಈ ಅಸ್ಪಷ್ಟತೆಗೆ, ಅಮೂರ್ತತೆಗೆ ಒಂದು ರೂಪ ಕೊಡುವುದು ಸುಲಭವಲ್ಲ. ಆದರೆ ಅಸ್ಪಷ್ಟತೆಯನ್ನು ಅಪೂರ್ಣವಾಗಿಯಾದರೂ ದಾಖಲಿಸಿ ನಮ್ಮಿಂದಾಚೆಗೆ ಒಂದು ಅಸ್ತಿತ್ವ ಕೊಡಬಲ್ಲ ಕ್ರಿಯೆಯೇ ಬರವಣಿಗೆ.
ಬರವಣಿಗೆ ಎಂದಾಕ್ಷಣ ಅದು ಸೃಜನಶೀಲ ಪ್ರಕ್ರಿಯೆ ಎಂದೆಣಿಸಬೇಕಾಗಿಲ್ಲ. ಎಲ್ಲ ಬರವಣಿಗೆಯೂ ಸೃಜನಶೀಲತೆಯನ್ನು ಬೇಡುವುದಿಲ್ಲ, ಎಲ್ಲ ಬರವಣಿಗೆ ಕಲೆಯಲ್ಲ. ನಮ್ಮ ಅನುಭವಗಳು ಅನೇಕ ಸಾರಿ ಕಥೆ, ಕವನ, ಕಾದಂಬರಿಗಳಿಗೆ ಪ್ರೇರಕವಾಗಿದ್ದರೂ ಸಾಹಿತ್ಯ ಕೇವಲ ಅನುಭವಕಥನವಲ್ಲ, ಅಲ್ಲಿ ಕಲೆಗಾರಿಕೆಯ, ಕಲ್ಪನಾಶಕ್ತಿಯ, ಕಟ್ಟುವಿಕೆಯ ಅಂಶಗಳಿವೆ. ಅನುಭವವನ್ನು ಕಲೆಯಾಗಿಸುವುದು ಎಲ್ಲರಿಗೂ ದಕ್ಕುವಂಥದ್ದಲ್ಲ. ಅನುಭವಗಳನ್ನು ಹಸಿ ಹಸಿಯಾಗಿಯೇ ದಾಖಲಿಸುವುದರಿಂದ ಅನೇಕ ಪ್ರಯೋಜನಗಳಿವೆ, ಅದರಲ್ಲಿ ಮುಖ್ಯವಾದದ್ದು ಮಾನಸಿಕ ಸ್ವಾಸ್ಥ್ಯ.
ನಮ್ಮ ಅನುಭವಗಳನ್ನು ಬರೆದುಬಿಟ್ಟರೆ ಅಥವಾ ಭಾವನೆಗಳನ್ನು ನೇರವಾಗಿ ಅಭಿವ್ಯಕ್ತಿಸಿದರೆ ಮಾನಸಿಕ ಸ್ವಾಸ್ಥ್ಯ ಸಿದ್ಧಿಸಿಬಿಡುತ್ತದೆಯೇ? ಅದು ಹೇಗೆ?
ಮೊದಲನೆಯದಾಗಿ ಬರವಣಿಗೆಯಿರಬಹುದು ಅಥವಾ ಯಾವುದೇ ಅಭಿವ್ಯಕ್ತಿಮಾರ್ಗ ಇರಬಹುದು, ಅದಕ್ಕೆ ಸ್ಪಂದಿಸುವ ಇನ್ನೊಂದು ಜೀವಿ ಇಲ್ಲದಿದ್ದರೆ ಮಾನಸಿಕ ಸ್ವಾಸ್ಥ್ಯ ಸಿದ್ಧಿಸುವುದಿಲ್ಲ. ಮುಖ್ಯವಾಗಿ ನಮ್ಮನ್ನು ಕಾಣುವ, ಕೇಳುವ, ನಮಗೆ ಸ್ಪಂದಿಸುವ ವ್ಯಕ್ತಿ/ ಸಮುದಾಯದೊಟ್ಟಿಗೆ ನಾವು ಕಟ್ಟಿಕೊಳ್ಳುವ ಮಾನವ ಸಂಬಂಧಗಳಷ್ಟೇ ನಿಜಕ್ಕೂ ನಮ್ಮನ್ನು ಗುಣಪಡಿಸುವಂಥದ್ದಾಗಿದೆ; ಮತ್ತೆಲ್ಲ ಕಸರತ್ತು ಅದಕ್ಕೆ ಪೂರಕವಷ್ಟೇ. ಹೀಗಿದ್ದರೂ ಬರೆಯುವುದು ಎನ್ನುವ ಕ್ರಿಯೆಗೆ ನಮ್ಮ ಅನುಭವಲೋಕದಲ್ಲೇ ಅಸಾಧಾರಣ ಬದಲಾವಣೆ ತರುವ ಶಕ್ತಿಯಿದೆ. ಇದಕ್ಕೆ ಮುಖ್ಯ ಕಾರಣವಿದೆ; ಭಾಷೆಗೆ ಎಟುಕದ ಅನುಭವಗಳು ಪತ್ತೆಹಚ್ಚಲಾರದ ರೋಗದಂತೆ ನಮ್ಮನ್ನು ಇನ್ನಿಲ್ಲದಷ್ಟು ಬವಣೆಗೆ, ಅಸಹಾಯಕತೆಗೆ ದೂಡುತ್ತದೆ. ರೋಗನಿರ್ಣಯವೇ ಆಗದಿರುವಾಗ ಚಿಕಿತ್ಸೆಯ ಬಗೆ ಕಂಡುಹಿಡಿಯುವುದಾದರೂ ಹೇಗೆ?
ಭಾಷೆ ನಮ್ಮ ಅನುಭವಗಳಿಗೆ ಒಂದು ರೂಪ ನೀಡಿ, ಅವುಗಳನ್ನು ನಮ್ಮಿಂದ ಬೇರೆಯಾಗಿ ನಿಲ್ಲಿಸಿ ನಮ್ಮ ಅವಲೋಕನಕ್ಕೆ ನಿಲುಕುವಂತೆ ಮಾಡುತ್ತದೆ. ಭಾಷೆಯ ನೆರವಿಲ್ಲದ ಅನುಭವ ಅದು ಹೇಗಿರಬಹುದೆಂಬ ಕಲ್ಪನೆಯೂ ನಮಗೆ ಸುಲಭವಾಗಿ ಎಟುಕುವಂಥದ್ದಲ್ಲ. ಮೇಲಾಗಿ ಬರವಣಿಗೆ ಒಂದು ಕ್ರಿಯೆ: ಭಾವನೆಗಳನ್ನು, ಸಂವೇದನೆಗಳನ್ನು ಕ್ರಿಯೆಯ ಮೂಲಕ ಅಭಿವ್ಯಕ್ತಿಸಿದಾಗ ಅವುಗಳ ಒತ್ತಡ ಕಡಿಮೆಯಾಗುವುದು ನಮ್ಮ ದಿನನಿತ್ಯದ ಅನುಭವಗಳಲ್ಲೊಂದು. ಉದಾಹರಣೆಗೆ, ಚಿಂತೆಯಲ್ಲಿ ಮುಳುಗಿದ್ದಾಗ ನಮಗೆ ಒಂದು ಸರಳ ಕೆಲಸವೂ ಸಾಧ್ಯವಿಲ್ಲ. ಆದರೆ ಪ್ರಯತ್ನಪಟ್ಟು ಯಾವುದಾದರೂ ಕೆಲಸದಲ್ಲಿ ಮನಸಿಟ್ಟಿದ್ದೇ ಆದರೆ ಚಿಂತೆಯ ಒತ್ತಡ ಕಡಿಮೆಯಾಗುತ್ತದೆ. ಹೀಗಿರುವಾಗ ನೇರವಾಗಿ ಚಿಂತೆ, ದುಃಖಗಳನ್ನೇ ಗಮನದಲ್ಲಿಟ್ಟುಕೊಂಡು ಬರೆಯುವ ಕ್ರಿಯೆಯೂ ಒಂದು ಬಗೆಯ ವ್ಯಾಯಾಮದಂತೆ, ನಡಿಗೆಯಂತೆ ಒಳಗಿನ ಒತ್ತಡವನ್ನು ನಿಯಂತ್ರಿಸುತ್ತದೆ.
ಬರೆಯುವುದೇನೋ ಸರಿ, ಆದರೆ ಹೇಗೆ ಮತ್ತು ಏನು ಎಂದರೆ ಅದಕ್ಕಾಗಿ ಇಲ್ಲಿ ಕೆಲವು ಸರಳ ದಿಕ್ಸೂಚಿಗಳಿವೆ. ಇವುಗಳು ಉದಾಹರಣೆಗಳಷ್ಟೇ,; ನಮ್ಮ ಅಗತ್ಯಗಳು ಮತ್ತು ಗ್ರಹಿಕೆಯ ರೀತಿಗೆ ತಕ್ಕಂತೆ ಅನೇಕ ಪ್ರಯೋಗಗಳನ್ನು ಮಾಡಬಹುದು.
*ಆಲೋಚನೆಗಳನ್ನು ಬರೆಯುವುದು ಸುಲಭ. ಅಲ್ಲಿಂದಲೇ ಶುರು ಮಾಡಿ.
*ಕಾಡುವ ಚಿಂತೆ, ಸಮಸ್ಯೆಗಳನ್ನು ಬರೆಯಿರಿ.
*ಕಣ್ಣುಮುಚ್ಚಿ ದೇಹದ ಸಂವೇದನೆಗಳನ್ನು ಅನುಭವಿಸಿ, ಅದರ ಮಾತನ್ನು ಆಲಿಸಿ ಬರೆಯಿರಿ.
*ಭಾವನೆಗಳ ಬಗ್ಗೆ ಬರೆಯುವಾಗ ಅವುಗಳನ್ನು ಆದಷ್ಟು ಒಂದು ಪದ ಅಥವಾ ವಾಕ್ಯದಲ್ಲಿ ಪ್ರತ್ಯೇಕವಾಗಿ ಹೆಸರಿಸಿ ಬರೆಯಿರಿ.
ಘಟನೆಗಳು ಮತ್ತು ಅವುಗಳಿಗೆ ಸಂಬಂಧಪಟ್ಟ ಜನರ ಬಗ್ಗೆ ಬರೆಯುವಾಗ ಅವು ಕಥೆಗಳಂತೆ ಒಂದಕ್ಕೊಂದು ಹೆಣೆದುಕೊಳ್ಳುತ್ತವೆ. ಹೀಗೆಂದು ಕಥೆಯ ವಿವರಗಳಲ್ಲೇ ಮುಳುಗಿಹೋಗದೆ, ನಿಮ್ಮನ್ನು ಅದು ಹೇಗೆ ಪ್ರಭಾವಿಸಿದೆ ಅನ್ನುವುದರ ಕಡೆ ಗಮನ ಕೊಡಿ.
‘ನನಗೆ ಈಗ ಏನು ಬೇಕು’, ‘ನನಗೆ ನಾನು ಹೇಗೆ ಕಾಣಿಸಿಕೊಳ್ಳುತ್ತಿದ್ದೇನೆ’ ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಬರವಣಿಗೆಯನ್ನು ಮುಂದುವರಿಸಲು ಸಹಾಯಕ.
ಅಸ್ಪಷ್ಟ ನೋವು, ನೆನಪುಗಳಿಗೆ ತೆರೆದುಕೊಳ್ಳಿರಿ; ಒಂದೇ ಬಾರಿಗೆ ಎಲ್ಲವನ್ನೂ ಬರೆಯುವ ಹಠ ಬೇಡ. ಹೇಳಿಕೊಳ್ಳಲು ಸಾಧ್ಯವಿಲ್ಲದ್ದನ್ನು ಬರೆದಿಡುವ ಸಂಕಲ್ಪವೇ ಸಾಕು – ಒಳಗಿನ ಲೋಕಕ್ಕೆ ಚಲನೆ ಸಿಕ್ಕಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.