ಆಗೋಡೆಯ ಮೇಲೆ ಗೆರೆಗಳಲ್ಲಿ ಮೂಡಿದ್ದ ಯಕ್ಷಗಾನದ ವಿವಿಧ ಭಂಗಿಗಳ ಚಿತ್ರಗಳು ಅಲ್ಲಿದ್ದವರನ್ನೆಲ್ಲ ತಿರುಗಿ ನೋಡುವಂತೆ ಮಾಡಿದ್ದವು. ಬಣ್ಣಗಳ ಸಂಯೋಜನೆ, ಗೆರೆಗಳ ಶೈಲಿ, ಚಿತ್ರದ ಚೌಕಟ್ಟನ್ನು ಮತ್ತಷ್ಟು ಸಿರಿವಂತಗೊಳಿಸಿದ್ದವು.
‘ಯಾರು ಈ ಚಿತ್ರಕಾರ’ ಎಂದು ಕೇಳಿದಾಗ, ಅಲ್ಲಿದ್ದವರು ಕೈ ತೋರಿದ್ದು ಪಕ್ಕದಲ್ಲೇ ಇದ್ದ ಸತೀಶ ಯಲ್ಲಾಪುರ ಅವರ ಕಡೆಗೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಿಸಗೋಡಿನ ಪ್ರೌಢಶಾಲೆಯ ಶಿಕ್ಷಕ ಸತೀಶ್. 1988 ರಲ್ಲಿ ಚಿತ್ರಕಲಾ ಶಿಕ್ಷಕರಾಗಿ (ಸರ್ಕಾರಿ ಪ್ರೌಢಶಾಲೆಯಲ್ಲಿ) ಸೇವೆ ಆರಂಭಿಸಿದರು, ಈಗ ಚಿತ್ರಕಲೆಯಲ್ಲಷ್ಟೇ ಅಲ್ಲದೇ, ರಂಗಭೂಮಿ, ಯಕ್ಷಗಾನ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಾ ಮಾಧ್ಯಮ ಬೋಧಿಸುತ್ತಿರುವ ಸತೀಶ, ಚಿತ್ರಕಲೆ ಮಾತ್ರವಲ್ಲ, ಯಕ್ಷಗಾನ, ನಾಟಕ, ಪತ್ರಿಕೋದ್ಯಮ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ತಂತ್ರಜ್ಞಾನದಲ್ಲೂ ಪರಿಣತಿ ಪಡೆದಿದ್ದಾರೆ.
ಕಲಾ ಮಾಧ್ಯಮದಲ್ಲಿ ಅಪರೂಪದ ಸನ್ನಿವೇಶಗಳನ್ನು ಚಿತ್ರಿಸುವುದು ಸತೀಶ್ ಹವ್ಯಾಸ. ವಿಶೇಷವಾಗಿ ಯಕ್ಷಗಾನದ ದೃಶ್ಯಗಳನ್ನು ಚಿತ್ರರೂಪಕ್ಕೆ ಇಳಿಸುವುದರಲ್ಲಿ ಎತ್ತಿದ ಕೈ. ಚಿತ್ರಗಳನ್ನು ಬರೆಯುತ್ತಾ ಬರೆಯುತ್ತಾ, ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ. ಯಕ್ಷಗಾನದ ವಿವಿಧ ಭಂಗಿಗಳ ಚಿತ್ರಗಳನ್ನು ಬಿಡಿಸಲು ಆ ಕಲೆಯೊಂದಿಗೆ ಮಿಳಿತಗೊಂಡಿರುವುದು ಕಾರಣ.
‘ಯಕ್ಷಗಾನದ ವೇಷಧಾರಿಯ ನೃತ್ಯ, ಅಭಿನಯಿಸುವ ಭಂಗಿ, ಎದುರಾಳಿಯನ್ನು ನೋಡುವ ರೀತಿ.. ಹೀಗೆ ಪ್ರತಿಯೊಂದರಲ್ಲಿಯೂ ಭಿನ್ನತೆ ಇರುತ್ತದೆ. ಪಾತ್ರವೊಂದೇ ಆದರೂ, ಬೇರೆ ಬೇರೆ ಪ್ರಸಂಗದಲ್ಲಿ; ಬೇರೆ ಬೇರೆ ಪದ್ಯಗಳಿಗೆ ನರ್ತಿಸುವ ರೀತಿಯಲ್ಲಿಯೂ ವ್ಯತ್ಯಾಸ ಇರುತ್ತದೆ. ಅದೆಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸಿದ್ದರೆ ಮಾತ್ರ, ಇಂಥ ಚಿತ್ರಗಳನ್ನು ಬಿಡಿಸಲು ಸಾಧ್ಯ’ ಎನ್ನುವುದು ಸತೀಶ್ ಅಭಿಪ್ರಾಯ.
ಯಕ್ಷಗಾನದ ದೃಶ್ಯಗಳ ಚಿತ್ರ ಬಿಡಿಸುವವರಿಗೆ, ಈ ದೃಶ್ಯ ಇಂಥಹ ಪ್ರಸಂಗದ, ಇಂಥದ್ದೇ ಸನ್ನಿವೇಶದ ಪದ್ಯಕ್ಕೆ ನರ್ತಿಸುವ ದೃಶ್ಯ ಎಂದು ಗುರುತಿಸುವಷ್ಟು ಪರಿಣತಿ ಇರಬೇಕು. ಜತೆಗೆ, ಪಾತ್ರ, ವೇಷಭೂಷಣ, ಸನ್ನಿವೇಶಗಳನ್ನೂ ಅಧ್ಯಯನ ಮಾಡಿರಬೇಕು. ಅವೆಲ್ಲವನ್ನೂ ಅರಿತಿರುವುದರಿಂದಲೇ ಸತೀಶ್ ಅವರಿಗೆ ಇಂಥ ಚಿತ್ರಗಳನ್ನು ಬಿಡಿಸಲು ಸಾಧ್ಯವಾಗಿದೆ.
ಸತೀಶ್ ಅವರು ರಚಿಸಿರುವ ಯಕ್ಷಗಾನದ ವಿವಿಧ ವೇಷಧಾರಿಯ ನೂರೆಂಟು ಬಗೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿಪಡೆದಿವೆ. ಸಾಕಷ್ಟು ಪ್ರಶಂಸೆಯೂ ವ್ಯಕ್ತವಾಗಿದೆ. ಯಕ್ಷ ಪ್ರೇಮಿಗಳು ತೋರಿದ ಪ್ರೀತಿಗೆ ಕಲಾಸಕ್ತರ ಶಬ್ಬಾಸ್‍ಗಿರಿಗೆ ಧನ್ಯತಾಭಾವ ವ್ಯಕ್ತಪಡಿಸುತ್ತಾರೆ ಇವರು. ‘ಈ ಪ್ರೋತ್ಸಾಹ ಇನ್ನಷ್ಟು ‘ಯಕ್ಷಚಿತ್ರ’ಗಳನ್ನು ಚಿತ್ರ ಬಿಡಿಸಲು ಉತ್ತೇಜನ ನೀಡಿದೆ’ ಎನ್ನುತ್ತಾರೆ ಸತೀಶ್.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.