ADVERTISEMENT

ಮರಾಠಿಯಲ್ಲಿ ‘ಚಕ್ರವ್ಯೂಹ’ ಯಕ್ಷಗಾನ ಮೋಡಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 0:07 IST
Last Updated 13 ಅಕ್ಟೋಬರ್ 2024, 0:07 IST
<div class="paragraphs"><p>ಮರಾಠಿ ಯಕ್ಷಗಾನ ‘ಚಕ್ರವ್ಯೂಹ’ದ ದೃಶ್ಯ </p></div>

ಮರಾಠಿ ಯಕ್ಷಗಾನ ‘ಚಕ್ರವ್ಯೂಹ’ದ ದೃಶ್ಯ

   

ಚಿತ್ರ: ಪ್ರಶಾಂತ್‌ ಮಲ್ಯಾಡಿ

ಪ್ರಯೋಗಶೀಲತೆಯ ಮೂಲಕ ಕರಾವಳಿಯ ಜನಪ್ರಿಯ ಕಲೆ ಯಕ್ಷಗಾನದ ಕಂಪನ್ನು ದೇಶ– ವಿದೇಶಗಳಲ್ಲಿ ಪಸರಿಸಿರುವ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ.

ADVERTISEMENT

ಎಪ್ಪತ್ತರ ಹರೆಯದಲ್ಲೂ ಲವಲವಿಕೆಯಿಂದ ಧೀಂಗಿಣ ಕಲಿಸುವ ಸುವರ್ಣರ ಕಲಾಶಾಲೆ ಯಕ್ಷಸಂಜೀವ ಯಕ್ಷಗಾನ ಕೇಂದ್ರದಲ್ಲಿ ಈ ಪ್ರಸಂಗವು ಪರಿಪಕ್ವಗೊಂಡಿದೆ. ಹನ್ನೊಂದು ಮಂದಿ ಯುವತಿಯರು ಸೇರಿದಂತೆ ಇಪ್ಪತ್ತು ಕಲಾವಿದರ ತಂಡವು ಮರಾಠಿ ವೇದಿಕೆಯಲ್ಲಿ ಕರಾವಳಿಯ ಕಲೆಯ ಸೊಬಗನ್ನು ಉಣಬಡಿಸಿದೆ.

ಈ ಹಿಂದೆ ಮರಾಠಿಯಲ್ಲಿ ಯಕ್ಷಗಾನ ಪ್ರಯೋಗ ನಡೆದಿದ್ದರೂ ಹಾಡುಗಾರಿಕೆ ಮಾತ್ರ ಕನ್ನಡದಲ್ಲೇ ಇತ್ತು. ಸುವರ್ಣರ ಮರಾಠಿ ಯಕ್ಷಗಾನದಲ್ಲಿ ಹಾಡುಗಾರಿಕೆ ಕೂಡ ಮರಾಠಿ ಭಾಷೆಯಲ್ಲಿಯೇ ಇರುವುದು ವಿಶೇಷ. ಅದೂ ಛಂದೋಬದ್ಧವಾಗಿ!

ಮರಾಠಿ ಯಕ್ಷಗಾನಕ್ಕಾಗಿ ಸುವರ್ಣರು ಆಯ್ದುಕೊಂಡ ಪ್ರಸಂಗ ‘ಚಕ್ರವ್ಯೂಹ’ (ಅಭಿಮನ್ಯು ಕಾಳಗ). ಕಾರ್ತಿಕ್‌ ಭಟ್‌ ಅವರ ಭಾಗವತಿಕೆಯ ಸ್ವರ ಮಾಧುರ್ಯಕ್ಕೆ ಉಡುಪಿಯ ಕಲಾವಿದರ ನಾಟ್ಯ ಹಾಗೂ ಅರ್ಥಗಾರಿಕೆಗೆ ಮೊದಲ ಪ್ರದರ್ಶನದಲ್ಲೇ ಮರಾಠಿಗರು ಮರುಳಾಗಿದ್ದಾರೆ. ಮರಾಠಿ ಮಣ್ಣಲ್ಲಿ ಈಗಾಗಲೇ ಮೂರು ಪ್ರದರ್ಶನಗಳನ್ನು ‘ಚಕ್ರವ್ಯೂಹ’ ಕಂಡಿದೆ. ಮಹಾರಾಷ್ಟ್ರದ ಸಾವಂತ್‌ವಾಡಿ ಅರಮನೆಯಲ್ಲೂ ಪ್ರದರ್ಶನ ನೀಡಿದ್ದಾರೆ.

ಈ ಮೂಲಕ ಕನ್ನಡ, ತುಳು, ಹಿಂದಿ, ಮರಾಠಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬಡಗುತಿಟ್ಟು ಯಕ್ಷಗಾನ ಮಾಡಿದ ಕೀರ್ತಿಗೆ ಸುವರ್ಣರು ಪಾತ್ರರಾಗಿದ್ದಾರೆ. ತಮ್ಮ ಹೊಸ ಪ್ರಯೋಗವನ್ನು ತಮ್ಮೂರಿನ ಜನರಿಗೂ ತೋರಿಸಲು ಉಡುಪಿಯಲ್ಲೂ ಈ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು.

ಸುವರ್ಣರು ತಮ್ಮ ಯಕ್ಷಗಾನ ಕೇಂದ್ರದಲ್ಲಿ ಯಕ್ಷಾಸಕ್ತರಿಗೆ ಉಚಿತವಾಗಿ ತರಬೇತಿ ನೀಡುವ ಮೂಲಕ ಕಲೆಯನ್ನು ಉಳಿಸುವಲ್ಲಿ ಅವಿರತ ಶ್ರಮಿಸುತ್ತಿದ್ದಾರೆ. ಜೊತೆಗೆ ತಮ್ಮಲ್ಲಿ ಯಕ್ಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವಾಗುತ್ತಿದ್ದಾರೆ.

‌‘ಮರಾಠಿ ಯಕ್ಷಗಾನ ನೋಡಿ ಮಹಾರಾಷ್ಟ್ರದ ಹಲವರು, ನಮ್ಮಲ್ಲಿಗೆ ಬನ್ನಿ ಎಂದು ಕರೆದಿದ್ದಾರೆ. ಆದರೆ ಕಲೆಯನ್ನು ವಾಣಿಜ್ಯ ಸರಕಾಗಿಸಲು ನನಗೆ ಇಷ್ಟವಿಲ್ಲದ ಕಾರಣ ನಯವಾಗಿ ನಿರಾಕರಿಸಿದೆ’ ಎನ್ನುತ್ತಾರೆ ಸಂಜೀವ ಸುವರ್ಣ.

ಹೆಮ್ಮೆಯ ವಿದೇಶಿ ಶಿಷ್ಯರು

ತಾವು ಯಕ್ಷಗಾನ ಕಲಿಸಿರುವ ವಿದೇಶಿ ಶಿಷ್ಯರ ಬಗ್ಗೆ ಸುವರ್ಣ ಅವರು ಹೆಮ್ಮೆಯಿಂದಲೇ ವಿವರಿಸುತ್ತಾರೆ. ಜರ್ಮನಿಯ ಕ್ಯಾಥರಿನ್‌ ಬೈಂಡರ್‌ ಇವರ ಬಳಿ ಮೂರು ವರ್ಷ ಯಕ್ಷಗಾನ ಕಲಿತಿದ್ದಾರೆ. ಯಕ್ಷಗಾನದಲ್ಲಿ ಪಿಎಚ್‌.ಡಿ.ಯನ್ನೂ ಪೂರೈಸಿದ್ದಾರೆ.

ಕ್ಯಾಥರಿನ್‌ ‘ಅಭಿಮನ್ಯು ಕಾಳಗ’ ಪ್ರಸಂಗವನ್ನು ಜರ್ಮನ್‌ ಭಾಷೆಗೆ ಭಾಷಾಂತರ ಮಾಡಿದ್ದಾರೆ. ಅಲ್ಲಿಯೂ ಯಕ್ಷಗಾನ ಕಲಿಸುವ ಕಾಯಕದಲ್ಲಿ ನಿರತರಾಗಿದ್ದಾರೆ ಎನ್ನುತ್ತಾರೆ ಸುವರ್ಣ.

ಫ್ರಾನ್ಸಿನ ಅನಿಟಾ ಹೆರ್‌ ಎಂಬುವವರು ತಮ್ಮಲ್ಲಿ ನಾಟ್ಯಾಭ್ಯಾಸ ಮಾಡಿ ಇದೀಗ ಫ್ರಾನ್ಸ್‌ ದೇಶದಲ್ಲಿ ಯಕ್ಷಗಾನ ಕಲೆಯನ್ನು ಪಸರಿಸುವ ಕೆಲಸ ಮಾಡುತ್ತಿರುವುದನ್ನೂ ಅವರು ಸ್ಮರಿಸಿದರು.

ಕರ್ನಾಟಕದ ಕಲೆಯೊಂದು ಗಡಿಗಾಡಿ ಪ್ರದರ್ಶನಗೊಂಡು ಮನಸೂರೆಗೊಂಡಿರುವುದು ಹೆಮ್ಮೆಯೇ ಸರಿ.

‘ಚಕ್ರವ್ಯೂಹ’ ಯಕ್ಷಗಾನದ ದ ದೃಶ್ಯ

‘ಸಾರ್ಥಕತೆ ಮೂಡಿಸಿದ ಪ್ರಶಸ್ತಿ’

ಒಂದು ಕಾಲದಲ್ಲಿ ನಮ್ಮ ಸಮುದಾಯದವರಿಗೆ ಮೇಳದಲ್ಲಿ ಪಾತ್ರ ಮಾಡಲು ನಿಷೇಧವಿತ್ತು. ಒಮ್ಮೆ ಉಡುಪಿಯ ಗುಂಡಿಬೈಲಿನಲ್ಲಿ ಯಕ್ಷಗಾನವನ್ನು ಏರ್ಪಡಿಸಲಾಗಿತ್ತು. ನಾನು ಮಹಿಷಾಸುರನ ಪಾತ್ರ ಮಾಡಬೇಕೆಂದು ಸಂಘಟಕರು ಒತ್ತಾಯಿಸಿದರು. ನಾನು ಕೂಡ ಒಪ್ಪಿಕೊಂಡಿದ್ದೆ. ಆದರೆ ಯಕ್ಷಗಾನದ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಕೆಳಜಾತಿಯವರು ಪಾತ್ರ ಮಾಡಿದರೆ ನಾವು ಪಾತ್ರ ಮಾಡುವುದಿಲ್ಲ ಎಂದು ಕಲಾವಿದರೊಬ್ಬರು ಅವಮಾನ ಮಾಡಿದರು. ಅಂದು ಪಾತ್ರ ಮಾಡದೆ ಮರಳಿದೆ. ಇಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ಪ್ರತಿಷ್ಠಿತ ‘ಪಾರ್ಥಿಸುಬ್ಬ ಪ್ರಶಸ್ತಿ’ಗೆ ಪಾತ್ರನಾಗಿರುವುದು ಯಕ್ಷಗಾನದ ಜೊತೆ ಬದುಕಿದ ನನ್ನಲ್ಲಿ ಸಾರ್ಥಕತೆ ಮೂಡಿಸಿದೆ ಎಂದು ಸಂಜೀವ ಸುವರ್ಣ ಅವರು ಪ್ರಶಸ್ತಿಯ ಖುಷಿಯನ್ನೂ ಹಂಚಿಕೊಂಡರು.

ಮರಾಠಿ ಯಕ್ಷಗಾನ ರೂಪುಗೊಂಡಿದ್ದು ಹೀಗೆ...

ಮಹಾರಾಷ್ಟ್ರದ ಸಾವಂತ್‌ವಾಡಿಯ ಸಾಹಿತಿ ವಿಜಯ ಫಟರ್‌ಪೇಕರ್‌ ಅವರು ಶಿವರಾಮ ಕಾರಂತರ ರಂಗ ಪ್ರಯೋಗಗಳಿಗೆ ಮನಸೋತು ಮಹಾರಾಷ್ಟ್ರದ ದಶಾವತಾರ ಕಲೆಯಲ್ಲೂ ಅಂತಹ ಪ್ರಯೋಗಗಳನ್ನು ಮಾಡಲು ಪ್ರಯತ್ನಿಸಿದವರು. ಯಕ್ಷಗಾನವನ್ನು ಮರಾಠಿಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂಬ ಹಂಬಲ ಬಹಳ ಕಾಲದಿಂದ ಅವರಲ್ಲಿತ್ತು. ಆದರೆ ಮೇಳದ ಕಲಾವಿದರಿಗೆ ಮರಾಠಿ ಕಲಿಸುವುದು ಸಾಧ್ಯವಾಗದ ಮಾತು ಎಂಬುದು ಅವರಿಗೆ ಗೊತ್ತಿತ್ತು. ಯಕ್ಷಗಾನವನ್ನು ಮರಾಠಿಯಲ್ಲಿ ಪ್ರದರ್ಶಿಸುವಂತೆ ಅವರು ಕೋವಿಡ್‌ ಕಾಲದಲ್ಲಿ ನನ್ನಲ್ಲಿ ಕೇಳಿಕೊಂಡಿದ್ದರು. ಆದರೆ ಆಗ ನನ್ನ ಬಳಿ ಯಕ್ಷಗಾನ ಕಲಿಯುತ್ತಿದ್ದ ಕಲಾವಿದರಿಗೆ ಮರಾಠಿ ಭಾಷೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯವಾಗದೆ ಅದು ನನೆಗುದಿಗೆ ಬಿದ್ದಿತ್ತು. ಈಚೆಗೆ ವಿಜಯ ಅವರು ನಮ್ಮ ಮನೆಗೆ ಬಂದಿದ್ದಾಗ ನಮ್ಮಲ್ಲಿ ಯಕ್ಷಗಾನ ಕಲಿಯುತ್ತಿರುವ ಹೆಣ್ಣುಮಕ್ಕಳನ್ನು ನೋಡಿ, ಇವರಿಂದ ಮರಾಠಿ ಯಕ್ಷಗಾನ ಮಾಡಿಸಬಹುದಾ ಎಂದು ಮತ್ತೆ ಕೇಳಿದರು. ನಾನು ಅದಕ್ಕೆ ಒಪ್ಪಿಕೊಂಡೆ. ಹಾಡುಗಳನ್ನು, ಪ್ರಸಂಗವನ್ನು ಮರಾಠಿಗೆ ತರ್ಜುಮೆ ಮಾಡಿ ಅದನ್ನು ಕನ್ನಡದಲ್ಲಿ ಬರೆಸಿ ಕೊಟ್ಟಿದ್ದರು. ಅಲ್ಲದೆ ನಮ್ಮ ಕೇಂದ್ರದ ಮಕ್ಕಳ ಮರಾಠಿ ಉಚ್ಚಾರವನ್ನು ಸಾಕಷ್ಟು ತಿದ್ದಿ, ತೀಡಿ ಅವರನ್ನು ಪರಿಪಕ್ಷಗೊಳಿಸಿದ್ದರು. ನಾನು ನಾಟ್ಯಾಭ್ಯಾಸ ಮಾಡಿಸಿದೆ. ಹೀಗೆ ಮರಾಠಿ ಯಕ್ಷಗಾನ ರೂಪುಗೊಂಡಿತು ಎಂದು ಹೊಸ ಪ್ರಯೋಗಕ್ಕೆ ಒಡ್ಡಿಕೊಂಡ ಬಗೆಯನ್ನು ಸುವರ್ಣರು ವಿವರಿಸುತ್ತಾರೆ.

‘ಸಾರ್ಥಕತೆ ಮೂಡಿಸಿದ ಪ್ರಶಸ್ತಿ’

ಒಂದು ಕಾಲದಲ್ಲಿ ನಮ್ಮ ಸಮುದಾಯದವರಿಗೆ ಮೇಳದಲ್ಲಿ ಪಾತ್ರ ಮಾಡಲು ನಿಷೇಧವಿತ್ತು. ಒಮ್ಮೆ ಉಡುಪಿಯ ಗುಂಡಿಬೈಲಿನಲ್ಲಿ ಯಕ್ಷಗಾನವನ್ನು ಏರ್ಪಡಿಸಲಾಗಿತ್ತು. ನಾನು ಮಹಿಷಾಸುರನ ಪಾತ್ರ ಮಾಡಬೇಕೆಂದು ಸಂಘಟಕರು ಒತ್ತಾಯಿಸಿದರು. ನಾನು ಕೂಡ ಒಪ್ಪಿಕೊಂಡಿದ್ದೆ. ಆದರೆ ಯಕ್ಷಗಾನದ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಕೆಳಜಾತಿಯವರು ಪಾತ್ರ ಮಾಡಿದರೆ ನಾವು ಪಾತ್ರ ಮಾಡುವುದಿಲ್ಲ ಎಂದು ಕಲಾವಿದರೊಬ್ಬರು ಅವಮಾನ ಮಾಡಿದರು. ಅಂದು ಪಾತ್ರ ಮಾಡದೆ ಮರಳಿದೆ. ಇಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ 2023ನೇ ಸಾಲಿನ ಪ್ರತಿಷ್ಠಿತ ‘ಪಾರ್ಥಿಸುಬ್ಬ ಪ್ರಶಸ್ತಿ’ಗೆ ಪಾತ್ರನಾಗಿರುವುದು ಯಕ್ಷಗಾನದ ಜೊತೆ ಬದುಕಿದ ನನ್ನಲ್ಲಿ ಸಾರ್ಥಕತೆ ಮೂಡಿಸಿದೆ ಎಂದು ಸಂಜೀವ ಸುವರ್ಣ ಅವರು ಪ್ರಶಸ್ತಿಯ ಖುಷಿಯನ್ನೂ ಹಂಚಿಕೊಂಡರು.

ಮರಾಠಿ ಯಕ್ಷಗಾನ ರೂಪುಗೊಂಡಿದ್ದು ಹೀಗೆ...

ಮಹಾರಾಷ್ಟ್ರದ ಸಾವಂತ್‌ವಾಡಿಯ ಸಾಹಿತಿ ವಿಜಯ ಫಟರ್‌ಪೇಕರ್‌ ಅವರು ಶಿವರಾಮ ಕಾರಂತರ ರಂಗ ಪ್ರಯೋಗಗಳಿಗೆ ಮನಸೋತು ಮಹಾರಾಷ್ಟ್ರದ ದಶಾವತಾರ ಕಲೆಯಲ್ಲೂ ಅಂತಹ ಪ್ರಯೋಗಗಳನ್ನು ಮಾಡಲು ಪ್ರಯತ್ನಿಸಿದವರು. ಯಕ್ಷಗಾನವನ್ನು ಮರಾಠಿಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂಬ ಹಂಬಲ ಬಹಳ ಕಾಲದಿಂದ ಅವರಲ್ಲಿತ್ತು. ಆದರೆ ಮೇಳದ ಕಲಾವಿದರಿಗೆ ಮರಾಠಿ ಕಲಿಸುವುದು ಸಾಧ್ಯವಾಗದ ಮಾತು ಎಂಬುದು ಅವರಿಗೆ ಗೊತ್ತಿತ್ತು. ಯಕ್ಷಗಾನವನ್ನು ಮರಾಠಿಯಲ್ಲಿ ಪ್ರದರ್ಶಿಸುವಂತೆ ಅವರು ಕೋವಿಡ್‌ ಕಾಲದಲ್ಲಿ ನನ್ನಲ್ಲಿ ಕೇಳಿಕೊಂಡಿದ್ದರು. ಆದರೆ ಆಗ ನನ್ನ ಬಳಿ ಯಕ್ಷಗಾನ ಕಲಿಯುತ್ತಿದ್ದ ಕಲಾವಿದರಿಗೆ ಮರಾಠಿ ಭಾಷೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯವಾಗದೆ ಅದು ನನೆಗುದಿಗೆ ಬಿದ್ದಿತ್ತು. ಈಚೆಗೆ ವಿಜಯ ಅವರು ನಮ್ಮ ಮನೆಗೆ ಬಂದಿದ್ದಾಗ ನಮ್ಮಲ್ಲಿ ಯಕ್ಷಗಾನ ಕಲಿಯುತ್ತಿರುವ ಹೆಣ್ಣುಮಕ್ಕಳನ್ನು ನೋಡಿ ಇವರಿಂದ ಮರಾಠಿ ಯಕ್ಷಗಾನ ಮಾಡಿಸಬಹುದಾ ಎಂದು ಮತ್ತೆ ಕೇಳಿದರು. ನಾನು ಅದಕ್ಕೆ ಒಪ್ಪಿಕೊಂಡೆ. ಹಾಡುಗಳನ್ನು ಪ್ರಸಂಗವನ್ನು ಮರಾಠಿಗೆ ತರ್ಜುಮೆ ಮಾಡಿ ಅದನ್ನು ಕನ್ನಡದಲ್ಲಿ ಬರೆಸಿ ಕೊಟ್ಟಿದ್ದರು. ಅಲ್ಲದೆ ನಮ್ಮ ಕೇಂದ್ರದ ಮಕ್ಕಳ ಮರಾಠಿ ಉಚ್ಚಾರವನ್ನು ಸಾಕಷ್ಟು ತಿದ್ದಿ ತೀಡಿ ಅವರನ್ನು ಪರಿಪಕ್ಷಗೊಳಿಸಿದ್ದರು. ನಾನು ನಾಟ್ಯಾಭ್ಯಾಸ ಮಾಡಿಸಿದೆ. ಹೀಗೆ ಮರಾಠಿ ಯಕ್ಷಗಾನ ರೂಪುಗೊಂಡಿತು ಎಂದು ಹೊಸ ಪ್ರಯೋಗಕ್ಕೆ ಒಡ್ಡಿಕೊಂಡ ಬಗೆಯನ್ನು ಸುವರ್ಣರು ವಿವರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.